ಕೆರೆ ಹೂಳೆತ್ತದ್ದರಿಂದ ನಿವಾಸಿಗಳಿಗೆ ನೆರೆ ಭೀತಿ
Team Udayavani, Jun 24, 2018, 6:00 AM IST
ಕುಂದಾಪುರ: ಪುರಸಭೆಯ ವಾರ್ಡ್ ಸಂಖ್ಯೆ 6 ರ ಮೀನು ಮಾರುಕಟ್ಟೆ ವಾರ್ಡ್‌ನ ಸಸಿಹಿತ್ಲು ವಠಾರದಲ್ಲಿರುವ ಕೆರೆಯ ಹೂಳನ್ನು ಹಲವು ವರ್ಷಗಳಿಂದ ಎತ್ತದೇ ಇರುವುದರಿಂದ ಈ ಪರಿಸರದಲ್ಲಿ ನೆರೆ ಭೀತಿ ಆವರಿಸಿದೆ.
ಕೆರೆಯ ಹೂಳೆತ್ತಲು ವಾರ್ಡಿನ ನಾಗರಿಕರು ಮನವಿ ಮಾಡಿದರೂ, ಪುರಸಭೆ ಮಾತ್ರ ಯಾವುದೇ ಗಮನವೇ ಕೊಟ್ಟಿಲ್ಲ. ಒಂದು ಬಾರಿ ಹೂಳೆತ್ತುವ ಸಂಬಂಧ ಪುರಸಭೆ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದರೂ, ಆ ಪ್ರಯತ್ನ ಅರ್ಧದಲ್ಲೇ ನಿಂತು ಹೋಯಿತು.
20 ವರ್ಷದಿಂದ ಹೂಳೆತ್ತಿಲ್ಲ
ಕಳೆದ 20 ವರ್ಷಗಳಿಂದ ಈ ಕೆರೆಯ ಹೂಳೆತ್ತಿಲ್ಲ. ಕೆರೆಯ ಹೂಳೆತ್ತಿದಲ್ಲಿ ಈ ಭಾಗದ ಬಾವಿಗಳ ಅಂತರ್ಜಲ ಮಟ್ಟವಾದರೂ ಏರಿಕೆಯಾಗುತ್ತಿತ್ತು ಎನ್ನುವುದು ಇಲ್ಲಿನವರ ಅಭಿಪ್ರಾಯ.
ಸರಿಯಾದ ರಸ್ತೆಯೇ ಇಲ್ಲ
ಮೀನು ಮಾರುಕಟ್ಟೆ ಬಳಿಯಿಂದ ಸಸಿಹಿತ್ಲು ವಠಾರದವರೆಗೆ ರಸ್ತೆಯಿದ್ದು, ಆದರೆ ಅಲ್ಲಿಂದ ಮುಂದೆ ಸರಿಯಾದ ರಸ್ತೆ ಇಲ್ಲ. ಇದರಿಂದ ಮುಂದಿನ ಮನೆಗಳ ಸಂಪರ್ಕಕ್ಕೆ ಸಮಸ್ಯೆಯಾಗಿದೆ.
ಚರಂಡಿಯೂ ಇಲ್ಲ
ಮೀನು ಮಾರುಕಟ್ಟೆಯ ಕೊಳಚೆ ನೀರೆಲ್ಲ ಹರಿದು ಹೋಗುವ ಚರಂಡಿ ಕೇವಲ ಅರ್ಧದದವರೆಗೆ ಮಾತ್ರವಿದೆ. ಆದ್ದರಿಂದ ಇಲ್ಲಿ ಮಲಿನ ನೀರು ರಸ್ತೆಯಲ್ಲೇ ಹರಿದುಹೋಗುವಂತಾಗಿದೆ. ಇದರಿಂದ ನಡೆದಾಡುವುದೂ ಕಷ್ಟಕರವಾಗಿದೆ.
ಅನುದಾನವಿಲ್ಲ
ಕೆರೆಯ ಅಭಿವೃದ್ಧಿಗೆ ಯೋಜನೆ ಸಿದ್ದಪಡಿಸಿ, ಪಕ್ಕದಲ್ಲೇ ಗಾರ್ಡನ್ ಕೂಡ ಮಾಡುವ ಕರಡನ್ನು ಸಿದ್ದಪಡಿಸಿ ಸುಮಾರು 28 ಲಕ್ಷ ರೂ. ಅನುದಾನಕ್ಕಾಗಿ ಎಲ್ಲ ಕಡೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಆಡಳಿತದಿಂದ ಸಕರಾತ್ಮಕ ಸ್ಪಂದನೆ ಸಿಗದೇ ಕೆರೆಯ ಅಭಿವೃದ್ಧಿಯಾಗಿಲ್ಲ. ರಸ್ತೆ ವಿಸ್ತರಣೆಗೂ ಸಿಗುವ 3 ಲಕ್ಷ ರೂ. ಅನುದಾನ ಸಾಕಾಗುತ್ತಿಲ್ಲ.
– ಶ್ರೀಧರ ಶೇರೆಗಾರ್, ಸ್ಥಳೀಯ ವಾರ್ಡ್ ಸದಸ್ಯರು
ಕೆರೆಯ ಹೂಳೆತ್ತಿಲ್ಲ
ಇಲ್ಲಿ ಸರಿಯಾದ ಚರಂಡಿಯೇ ಇಲ್ಲ. ಇದರಿಂದ ನೀರೆಲ್ಲ ರಸ್ತೆಯಲ್ಲಿಯೇ ಹರಿಯುತ್ತಿದೆ. ಅದಕ್ಕಿಂತಲೂ ಕೊಳಚೆ ನೀರೆಲ್ಲ ಹರಿಯುವುದರಿಂದ ನಡೆದಾಡುವ ರಸ್ತೆಯೂ ಗಲೀಜಾಗಿದೆ. ಈ ಕೆರೆಯ ಹೂಳೆತ್ತಿಲ್ಲ. ಅದರ ಸುತ್ತ ಪೊದೆ, ಗಿಡ- ಗಂಟಿಗಳು ಬೆಳೆದಿರುವುದರಿಂದ ಈಗ ಇಲ್ಲಿ ಕೆರೆ ಇದೆಯೆಂಬುದೇ ಗೊತ್ತಾಗುವುದಿಲ್ಲ. ಅಪಾಯಗಳು ಸಂಭವಿಸುವ ಮುನ್ನ ಆಡಳಿತ ಎಚ್ಚೆತ್ತುಕೊಳ್ಳಬೇಕು.
– ಉಮೇಶ, ಸಸಿಹಿತ್ಲು ನಿವಾಸಿ
ನಿತ್ಯ ಸಂಕಷ್ಟ
ಸಸಿಹಿತ್ಲು ವಠಾದಲ್ಲಿ ಸರಿಯಾದ ರಸ್ತೆಯೇ ಇಲ್ಲ. ಇರುವ ರಸ್ತೆಗಳೂ ಸಂಪೂರ್ಣ ಕೆಟ್ಟುಹೋಗಿದ್ದು, ಇದರಿಂದ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದೇವೆ. ಈ ಕುರಿತಂತೆ ಪುರಸಭೆ ಇನ್ನಾದರೂ ಗಂಭೀರವಾಗಿ ಪರಿಗಣಿಸಲಿ.
– ಸಬಿತಾ, ಸ್ಥಳೀಯರು
ಮನೆಗಳಿಗೆ ತೊಂದರೆ
ಪ್ರತೀ ವರ್ಷ ಮಳೆಗಾಲದಲ್ಲಿ ಕೆರೆಯ ನೀರು ನಿಲ್ಲುವುದರಿಂದ ಈ ಭಾಗದ ಮನೆಗಳಿಗೆ ತೊಂದರೆಯಾಗುತ್ತಿದೆ. ಚರಂಡಿಗಳಲ್ಲಿ ಕಸ ತುಂಬಿದ್ದು, ಕೆಲವು ಕಡೆಗಳಲ್ಲಿ ಮಾತ್ರ ಚರಂಡಿಗಳನ್ನು ಸ್ವತ್ಛ ಮಾಡಿದ್ದಾರೆ.
– ಸುಧಾಕರ, ಸ್ಥಳೀಯರು
ರಸ್ತೆ ಸರಿಯಿಲ್ಲ
ವಾರ್ಡಿನಲ್ಲಿ ಮೋರಿಯೂ ಇಲ್ಲದ ಕಾರಣ ನೀರು ರಸ್ತೆ ಯಲ್ಲಿಯೇ ಹರಿಯುತ್ತದೆ. ಇದರಿಂದಾಗಿ ಹಲವೆಡೆ ರಸ್ತೆ ಗಳೂ ಸರಿ ಇಲ್ಲ. ಸಸಿಹಿತ್ಲು ಕೆರೆಯ ಹೂಳೆತ್ತುವಿಕೆ ಹಾಗೂ ರಸ್ತೆ ವಿಸ್ತರಣೆಯನ್ನು ಮಾಡಿಕೊಡಲಿ.
– ಸುರೇಶ, ಸ್ಥಳೀಯರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.