ಪ್ರೀತಿಯೂ, ಬೆಂಕಿಯಂತೆ ಹೆಚ್ಚು ಕಾಲ ಅಡಗಿರಲಾರದು!


Team Udayavani, Jun 24, 2018, 6:00 AM IST

ss-6.jpg

ಕವಿತೆಗೆ ವಸ್ತು ಯಾವುದು? ಯಾವುದೂ. ಎಲ್ಲವೂ ಕವಿತೆಗೆ ವಸ್ತುಗಳೇ ಎನ್ನುವ ಮಾತು ಬೇರೆ. ತಾನು ಇನ್ನು ಮುಂದೆ ಕವಿತೆ ಬರೆಯಲಾರೆ; ತನ್ನ ಮನಸ್ಸಿನ ಸೃಜನಶಕ್ತಿಯೇ ಬತ್ತಿಹೋದಂತೆ ಇದೆ; ತಾನೀಗ ರಿಕ್ತ, ಮನಸ್ಸು ವ್ಯಾವಹಾರಿಕವಾಗಿ ಮಾತ್ರ ಕೆಲಸ ಮಾಡುತ್ತಿದೆಯಲ್ಲದೆ ಆಳವಾದ ಒಳನೋಟದಿಂದ ಕೆಲಸ ಮಾಡಲು ಅದೇಕೋ ನಿರಾಕರಿಸುತ್ತಿದೆ- ಎನ್ನುವ ದುಃಸ್ಥಿತಿ ಕೂಡ ಕವಿತೆಗೆ ವಸ್ತುವಾಗಬಲ್ಲುದು! ಗೋಪಾಲಕೃಷ್ಣ ಅಡಿಗರ “ಕೂಪಮಂಡೂಕ’ ಎನ್ನುವ ಕವಿತೆ ಈ ದುಃಸ್ಥಿತಿಯನ್ನೇ ವಸ್ತುವಾಗಿ ನಿರ್ವಹಿಸಿ ಶ್ರೇಷ್ಠ ಕವಿತೆಯಾಗಿ ಬಿಟ್ಟಿದೆ. ಯಾವುದೇ ಕ್ಷೇತ್ರದಲ್ಲಿ ಹೊಸಹಾದಿ ತುಳಿದು ತಮ್ಮನ್ನೇ ಮತ್ತೆ ಹೊಸದಾಗಿಸಿಕೊಳ್ಳಬೇಕೆನ್ನುವವರಿಗೆ ಹೀಗೆ ತಾನು ಅಂತರಂಗದ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬ ಆತಂಕ ಹೆಚ್ಚಾಗಿ ಕಾಡುವುದು. ಅಥವಾ ತಮ್ಮ ಭಾವಶಕ್ತಿಯನ್ನೇ ನೆಚ್ಚಿಕೊಂಡಿರುವ ಕವಿ-ಕಲಾವಿದರಿಗೆ ಹಾಗೆ ಕಾಳಜಿಯಿಂದ ನೆಚ್ಚಿಕೊಂಡಿರುವುದರಿಂದಲೇ ಅದರ ಕುರಿತಾದ ಆತಂಕ ಕಾಡುವುದು. ಕಾಳಜಿಯು ಆತಂಕದ ಇನ್ನೊಂದು ರೂಪವೇ. ಅಡಿಗರಲ್ಲಿಯೇ ಈ ರೀತಿಯ ಅನೇಕ ಕವಿತೆಗಳಿವೆ; ಮೊದಲಿನಿಂದಲೂ ಇವೆ. ಒಡೆದು ಬಿದ್ದ ಕೊಳಲು ನಾನು ನಾದ ಬರದು ನನ್ನಲಿ; ಕಿವಿಯನೇಕೆ ತೆರೆಯುತಿರುವೆ, ಎದೆಯೊಳೇನ ಬಯಸುತಿರುವೆ? ದೊರೆಯದೇನೂ ನನ್ನಲಿ- ಇಂಥವು, ಇಲ್ಲ ಇಲ್ಲ ಏನೊಂದನು ಮಾಡಲಿಲ್ಲ ಇವನು, ತರಗೆಲೆಗಳು ಅಲೆಯುತಿಹವು ಗಾಳಿಯಲ್ಲಿ ಅತ್ತಇತ್ತ, ತೊರೆಯ ಮೇಲೆ ಕಸವು ಕಡ್ಡಿ ಮರದ ತುಂಡು ಕೊಳೆಯು ನೊರೆ, ತೇಲುತಿಹವು ತೇಲುತಿಹವು- ಇಂಥವು. ನವ್ಯಕವಿಗಳಾದ ಅಡಿಗರೆಂದೇನು? ಹಿಂದಿನ ನವೋದಯ ಕವಿಗಳೂ ಮಧುರಚೆನ್ನ; ಬೇಂದ್ರೆ; ಕುವೆಂಪು ಅಂಥವರೂ ಹೀಗೆ ಬಳಲಿದವರೇ. ಬಳಲಿ ಸರಸ್ವತಿಯ ಕೃಪೆಯನ್ನು ಬೇಡಿದವರೇ. ಮಧುರಚೆನ್ನರು 

ನಿನ್ನ ಹಾಡಿನ ಕೊಡೆಯ ನೆರಳಲ್ಲಿ ಬೆಳೆದು
ನನ್ನಿಗರೆದೀ ವಸುಂಧರೆಯಿಂದು ಮುಳಿದು
ಹುಡಿಯೆದ್ದು ಹಾರುವಳು ಪುಡಿಯಾಗಿ. ಕಾಯ್ದು
ಹಿಡಿದದ್ದಿ ನಾದರಸದಲಿ ನಾದು ನಾದು- ಎಂದು ಮೌನಕೋಗಿಲೆಗೆ ಎನ್ನುವ ತಮ್ಮ ಕವಿತೆಯಲ್ಲಿ ವಿಷಮ ಸನ್ನಿವೇಶದಲ್ಲಿ ಸೃಷ್ಟಿಶೀಲತೆಗಾಗಿ ಬೇಡುವರು. ಅವರ “ದೇವತಾಪೃಥಿವಿ’ಯ ಪಲ್ಲವಿಯಾಗಿರುವ ಏಳಮ್ಮಾ ಮಲಗಿರುವ ತಾಯಿ ಪೃಥಿವೀ ಎನ್ನುವ ಆರ್ತಕರೆ ಒಳಗಿನ ಅರಳುವಿಕೆಗಾಗಿ ಹಂಬಲಿಸುವ ಕರೆಯೇ ಆಗಿದೆ. ಅಡಿಗರ “ಕೂಪ ಮಂಡೂಕ’ಕ್ಕೂ ಈ ಇತರ ಕವಿತೆಗಳಿಗೂ ಇರುವ ವ್ಯತ್ಯಾಸವೆಂದೆ- ಅಡಿಗರ ಕವಿತೆ ಸೃಷ್ಟಿಶೀಲ ಮನೋಧರ್ಮದ ಅರಳುವಿಕೆಯ ನಿರೀಕ್ಷಿತ ಚಿತ್ರಣವನ್ನು ಮುಂದಿಡುವುದಕ್ಕಿಂತ ಹೆಚ್ಚಾಗಿ ತನ್ನ ಈಗಿರುವ ಸ್ಥಿತಿಯಲ್ಲೇ ತಾನು ಮುಳುಗುವುದೊಂದೇ ತನ್ನ ಮುಂದಿರುವ ದಾರಿ ಎಂದು ಅದರಲ್ಲೇ ನಿರ್ಭರವಾಗಿರುವುದು. ಪರಿಹಾರ ಹುಡುಕುವ ಪಲಾಯನೋಪಾಯಗಳಿಗಿಂತ, ತನ್ನ ಅವಸ್ಥೆಯನ್ನು ಆಳವಾಗಿ ಅನುಭವಿಸುವುದಷ್ಟೆ ಕವಿಗೆ ಸಾಧ್ಯ. Stay with the problem ಎಂದಂತೆ. ಇದೇ ಅಡಿಗರ ಕೂಪ ಮಂಡೂಕದ ನವ್ಯತೆ ಎನ್ನಬಹುದು.

ಏನೆಂದ ಹಾಗಾಯಿತು? ಕವಿತೆಗೆ ವಿರುದ್ಧವಾದ ಸ್ಥಿತಿಯೇ ಇಲ್ಲ-ಇರಲಾರದು ಎಂದಂತಾಯಿತು. ತನ್ನ ಸೃಷ್ಟಿಶಕ್ತಿ ಇಂಗಿಹೋಗುತ್ತಿದೆ ಎಂಬ ಭಾವವೇ ಆಳವಾಗಿ ತೋಡಿಕೊಂಡಾಗ, ಆ ತೋಡಿಕೊಳ್ಳುವ ಪ್ರಕ್ರಿಯೆಯಲ್ಲಿಯೇ ಮತ್ತೆ ಮನಸ್ಸು ಸೃಜನಾತ್ಮಕವಾಗಿ ಅರಳಿಕೊಳ್ಳಬಹುದು ಎಂದಾಯಿತು. ತನ್ನ ವಿರೋಧದಲ್ಲಿಯೇ ತನ್ನ ನೆಲೆಯನ್ನು ಕವಿತೆ ಕಂಡುಕೊಳ್ಳಬಲ್ಲುದು ಎಂದಾಯಿತು. ನಿರಂಕುಶಾಃ ಕವಯಃ ಎಂದು ಹಿಂದಿನವರ ಮಾತು. ಕವಿಗಳು ನಿಯಂತ್ರಣಕ್ಕೆ ಒಳಗಾಗುವವರಲ್ಲವಂತೆ. ನಿರಂಕುಶಂ ಕಾವ್ಯಂ- ಎನ್ನಬೇಕು! ತನ್ನ ಬೂದಿಯಿಂದಲೇ ತಾನೆದ್ದು ಬರಬಹುದು- ಕವಿತೆ! ಅದನ್ನು ಯಾರೂ ತಡೆಯುವಂತಿಲ್ಲ ! ಏಕೆಂದರೆ, ತನ್ನನ್ನು ತಾನು ಪುನರ್ನವ ಮಾಡಿಕೊಳ್ಳುವ ಬಗೆ ಕವಿತೆಗೆ ಹುಟ್ಟಿನಿಂದಲೇ ಗೊತ್ತಿರಬೇಕು. ಪ್ರಾಯಃ ತಾನು ಮೊದಲ ಬಾರಿಗೆ ಸೃಷ್ಟಿಯಾಗುತ್ತಿರುವಾಗಲೇ ತನ್ನ ತಾನು ಪುನರ್ನವ ಮಾಡಿಕೊಳ್ಳುತ್ತಿದ್ದೇನೆಂದೇ ಕವಿತೆಗೆ ಗೊತ್ತಾಯಿತೆ? ಶಿವನ ಹಣೆಗಣ್ಣಿಗೆ ಸುಟ್ಟು ಬೂದಿಯಾದ “ಕಾಮ’, ಉತ್ತರ ಕ್ಷಣದ ರತಿ ವಿಲಾಪದಲ್ಲಿ ಇನ್ನೊಂದು ಬಗೆಯಲ್ಲಿ ಜೀವಂತನಿದ್ದ! ಕಾಮನನ್ನು ಸುಟ್ಟ ಬೆಂಕಿಯೇ ರತಿಯಲ್ಲಿ ವಿಲಾಪವನ್ನೂ ಸೃಷ್ಟಿಸಿತು. ವಿಲಾಪವೂ ವ್ಯಕ್ತಿತ್ವವನ್ನು ಕಟ್ಟಬಹುದು! ವಿಲಾಪವು ಕವಿತೆಯೇ ಅಲ್ಲವೆ? ಹೆಣ್ಣು ಕ್ರೌಂಚದ ವಿಲಾಪವನ್ನು ಕೇಳಿಯೇ ವಾಲ್ಮೀಕಿಯಲ್ಲಿ ರಸೋದಯವಾದದ್ದಲ್ಲವೆ? ಅಲ್ಲದೆ ಸುಡಲ್ಪಡುವುದೂ ಒಂದು ಸೃಷ್ಟಿಕ್ರಿಯೆಯೇ. ಕಾಮವೂ ಬೆಂಕಿಯೇ, ಎಂಥ ಅಚ್ಚರಿ!

ಹೀಗೆ ಆಳದಲ್ಲಿ ಸಹಸ್ರ ತಂತ್ರೀ ನಿಸ್ವನದಂತೆ- ಎಲ್ಲವೂ ಒಂದರೊಡನೊಂದು ಬೆರೆತಿದ್ದು ಯಾವೊಂದು ತಂತಿಯನ್ನೆ ಆದರೂ ಆಳದಲ್ಲಿ ಮಿಡಿಯುವುದು ಸಾಧ್ಯವಾದರೆ ಈ ತರಂಗಕ್ಕೆ ಉಳಿದ ತಂತಿಗಳೂ ಸ್ಪಂದಿಸುವುದನ್ನು ತಿಳಿಯಬಹುದು. ಪುನರ್ನವಕ್ಕೆ ಬೇಕಾದ ರೀತಿಯಲ್ಲಿಯೇ ಪ್ರಕೃತಿ ಆಂತರಿಕವಾಗಿ ಸಜ್ಜುಗೊಂಡಿದೆ ಎನ್ನಬಹುದು! ಆದರೆ ಭಾವವನ್ನು ಆಳದಲ್ಲಿ ಮೀಟಬೇಕಾದರೆ ಘಟನೆಗಳು ಈ ವಾಸ್ತವ ಲೋಕದಲ್ಲಿ ಎರಡು ಬಾರಿ ಸಂಭವಿಸಬೇಕು ಎಂದು ತೋರುತ್ತದೆ. ಮೊದಲ ಬಾರಿಗೆ ಅಲ್ಲ-ಅದೇ ಘಟನೆ-ಇನ್ನೊಮ್ಮೆ ಸಂಭವಿಸಬೇಕು! ಇನ್ನೊಮ್ಮೆ ಎನ್ನುವುದು ಪ್ರಕೃತಿಯ ಗುಟ್ಟಾದ ನುಡಿಗಟ್ಟು. ತನ್ನ ರಹಸ್ಯವನ್ನು ಪ್ರಕೃತಿ ಮೊದಲ ಸಲ ತಿಳಿಸುವುದಿಲ್ಲ. ಅದಕ್ಕಾಗಿಯೇ ಪುನರ್ಜನ್ಮ; ಹೊಸಹುಟ್ಟು ; ಪುನರ್ನವ ಎಂಬೆಲ್ಲ ಮಾತುಗಳು ಹುಟ್ಟಿಕೊಂಡವು. ಕಳೆದ ವಾರದ ಅಂಕಣದಲ್ಲಿ Edwin muir ಬರೆದ ಈ ಕುದುರೆಗಳು ಎಂಬ ಕವಿತೆಯ ಬಗ್ಗೆ ಬರೆದಿದ್ದೆ. ಕ್ಷಮಿಸಿ, ಆ ಕುದುರೆಗಳ ಬಗ್ಗೆ ಮಾತು ಸ್ವಲ್ಪ ಮುಂದುವರೆಸುವೆ. ಕುದುರೆಗಳು ಮರಳಿ ಬಂದವು ಮನುಷ್ಯರತ್ತ. ಬಂದ ಹೊತ್ತಾದರೂ ಎಂಥದು? ಯುದ್ಧ ನಡೆದು ಮನಸ್ಸು ತ್ರಸ್ತವಾಗಿ, ಖನ್ನವಾಗಿ, ವಿಜ್ಞಾನ-ತಂತ್ರಜ್ಞಾನಗಳ ಕುರಿತೇ ಒಂದು ಬಗೆಯ ಜಿಹಾಸೆ ಉಂಟಾಗಿ, ಟ್ರ್ಯಾಕ್ಟರ್‌ಗಳನ್ನು ಮೂಲೆಗುಂಪಾಗಿಸಿ, ಹೊಲಗಳಲ್ಲಿ ಎತ್ತುಗಳ ಉಳುಮೆ ಪ್ರಾರಂಭಿಸಬೇಕೆಂದಿದ್ದಾಗ, ನಾಗರಿಕತೆಯೇ ಬದಲಾಗುತ್ತಿರುವ ಸಂಜೆಯಲ್ಲಿ ಮತ್ತೆ ಬಂದುವಂತೆ ಆ ಕುದುರೆಗಳು! ಟ್ರ್ಯಾಕ್ಟರ್‌ ಬಂದ ಮೇಲೆ ಅದುವರೆಗೆ ಉಳುಮೆಗೆ, ವಾಹನವಾಗಿ ಮತ್ತು ಎಲ್ಲ ಬಗೆಯ ದುಡಿತಕ್ಕೆ ಬಳಸುತ್ತಿದ್ದ ಈ ಕುದುರೆಗಳನ್ನು ಹೊರೆ ಎಂದು ಭಾವಿಸಿ ಮಾರಿಬಿಟ್ಟಿದ್ದರು. ಈಗ ಹೀಗಾಗಿದೆ! ಅದಕ್ಕೆಂದೇ ಕುದುರೆಗಳು ಮರಳಿ ಬಂದು ನಿಂತಿವೆ. ತಮ್ಮನ್ನು ಕೈಬಿಟ್ಟ ಮನುಷ್ಯರ ಸೇವೆಗೆ ಇನ್ನೊಮ್ಮೆ ಸಿದ್ಧವೆಂಬಂತೆ! ಕುದುರೆಗಳ ಈ ನಡೆ; ನಿಲುವು; ಪುನರಾಗಮನ, ಹಿಂದಿನದನ್ನು ಗಣಿಸದೆ ಮನುಷ್ಯರ ಸೇವಗೆ ತಮ್ಮನ್ನು ಒಪ್ಪಿಸಿಕೊಂಡ ರೀತಿ- ನಮ್ಮೆದೆಯನ್ನು ಕೊರೆಯುತ್ತಿದೆ ಎನ್ನುತ್ತಾನೆ ಕವಿ ಎಲಿಯಟ್‌.

ಈ ಉಲ್ಲೋಲ ಕಲ್ಲೋಲವೆಲ್ಲವೂ ಕುದುರೆಗಳು ಇನ್ನೊಮ್ಮೆ ಸೇವೆಗೆ ಸಿದ್ಧವಾಗಿ ಬಂದಾಗ! ಮೊದಲ ಸಲವೇ ಅವು ಸೇವೆಗೆ ಒದಗಿಬಂದುದರ ಮಹಣ್ತೀ ಈಗ ತಿಳಿಯಿತು. ಏನು ಮಹಣ್ತೀವೆಂದರೆ- ಪ್ರಕೃತಿ, ಮನುಷ್ಯರ ಬಳಕೆಗೆ ಒದಗಿಬರುವುದು, ಮನುಷ್ಯ-ಪ್ರಕೃತಿಯ ಭಾಗವೇ ಆಗಿರುವುದರಿಂದ. ಪ್ರಕೃತಿಯ ಶಿಶುವೇ ಆಗಿರುವುದರಿಂದ ಮನುಷ್ಯರಿಗೆ ಒದಗದೆ ಪ್ರಕೃತಿಗೆ ತನ್ನಲ್ಲಿಯೇ ನಿರಾಳವಿಲ್ಲ. ಅದೊಂದು ಕೃಪೆ. ಅನುಗ್ರಹ. ವಾತ್ಸಲ್ಯ. ಆದರೆ, ಇದು ಮನುಷ್ಯರಿಗೆ ತಿಳಿಯುವುದು ಮಾತ್ರ- ನಡೆದುದೆಲ್ಲವನ್ನೂ ಇನ್ನೊಮ್ಮೆ ನೋಡಿದಾಗ ಮಾತ್ರ!

ಸೃಷ್ಟಿಕ್ರಿಯೆಯಲ್ಲಿಯೇ ಇನ್ನೊಮ್ಮೆ ; ಇನ್ನೊಂದು ಬಗೆ ಎಂಬ ಹೊಳಹು ಇದೆ. “ಸೃಷ್ಟಿ’ ಎಂದಾಗ ಇದ್ದುದೇ ಸೃಷ್ಟಿಯಾಗುವುದಲ್ಲವೆ? ಒಂದು ರೂಪದಲ್ಲಿ ಮೊದಲೇ ಇರುವುದು ಇನ್ನೊಂದು ರೂಪದಲ್ಲಿ ಕಾಣಿಸಿಕೊಳ್ಳುವುದು ಅಲ್ಲವೆ? ತಾಯಿ-ತಂದೆಯರ ಮೈ-ಮನಗಳಲ್ಲಿ ಒಂದು ರೂಪದಲ್ಲಿ ಇದ್ದುದೇ ಬೆರೆತು ಇನ್ನೊಂದು ರೂಪದಲ್ಲಿ ಶಿಶುವಾಗಿ ಕಾಣಿಸಿಕೊಳ್ಳುವುದು. ಬೀಜದಲ್ಲಿ ಅಡಗಿರುವುದೇ ಮರವಾಗಿ ಕಾಣಿಸಿಕೊಳ್ಳುವುದು. ಆದುದರಿಂದಲೇ “ಇನ್ನೊಮ್ಮೆ’ ಎನ್ನುವುದು ಸೃಷ್ಟಿಕ್ರಿಯೆಯಲ್ಲಿಯೇ ಅಡಗಿರುವ ನುಡಿಗಟ್ಟು.

ಇನ್ನೊಮ್ಮೆ ಎಂದಾಗ ವಿಳಂಬ ಕಾಲ. ಒಂದು ಬಿಡುವು. ಗ್ಯಾಪ್‌. ಇದು “ಕಲೆ’ಯ ಬಿಡುವು. ಅದುವರೆಗೆ ಕಾಣದೆ ಇದ್ದುದೆಲ್ಲ ಗೋಚರವಾಗುವ ಬಿಡುವು. ವಿಳಂಬ ಕಾಲದ ಸಂಗೀತವೇ ನಿಜವಾದ ಸಂಗೀತ. ಇಡಿಯ ಸನ್ನಿವೇಶವು ಇನ್ನೊಮ್ಮೆ ರಚನೆಯಾಗುವಾಗ ಕಲಾವಿದರ ಮನಸ್ಸಿಗೆ ಸೃಷ್ಟಿಕರ್ತನ ಮನಸ್ಸಿನ ಹೊಳಹು ಸಿಗುತ್ತಿರಬಹುದು!

ದಾಸರಪದ ನೆನಪಾಗುತ್ತದೆ. ಹೂವ ತರುವರ ಮನೆಗೆ ಹುಲ್ಲ ತರುವ-ಅವ್ವ ಲಕುಮೀರಮಣ ಇವಗಿಲ್ಲ ಗರುವ ಎಂಬ ಹಾಡು. ಹೂವಾದರೂ ಏಕೆ ತರಬೇಕು? ಏಕೆಂದರೆ ತಾನು ತೃಣಸಮಾನನೆನ್ನುವಂತೆ ಹುಲ್ಲು ತರುವವರ, ಗರುವವೇ ಇಲ್ಲದವರ ಸಂವೇದನೆ ಅರ್ಥವಾಗುವುದು ಹೂವು ತರುವ ಸಂವೇದನೆ ಇದ್ದವರಿಗೆ ಮಾತ್ರ. ಇದು ಇನ್ನೊಮ್ಮೆ ತಮ್ಮನ್ನೇ ತಾವು ನೋಡಿಕೊಳ್ಳುವಂತೆ ಮಾಡುತ್ತದೆ! ಕುದುರೆಗಳು ಬಂದು ನಿಂತಾಗ ಉಂಟಾದ ಭಾವೋದ್ವೇಗದಂತೆ.

ಅಷ್ಟೇಕೆ? ನಮ್ಮ ವಿಖ್ಯಾತವಾದ “ಗೋವಿನ ಹಾಡ’ನ್ನು ನೋಡಿ. ಇನ್ನೊಮ್ಮೆ ನೋಡಿ. ಹುಲಿಗೆ, ಮರಳಿ ಬರುತ್ತೇನೆ ಎಂದು ಮಾತು ಕೊಟ್ಟು , ಹಟ್ಟಿಗೆ ಬಂದು ಸಂಸಾರದ ಎಲ್ಲ ಬಂಧಗಳನ್ನೂ ಕಳಚಿ, ಮತ್ತೆ ಹುಲಿಯ ಮುಂದೆ ಇನ್ನೊಮ್ಮೆ ಬಂದು ನಿಂತು ಗುಂಡಿಗೆಯ ಬಿಸಿರಕ್ತವಿದೆ-ಕೋ ಎಂದಾಗ ಹುಲಿಯ ಗುಂಡಿಗೆ ಹಾರಿತು! ಕನ್ನಡದ ಎಂಥ ಚಿರಂಜೀವಿಯಾದ ಹಾಡು! ಎಲ್ಲ ಚಮತ್ಕಾರಗಳೂ ನಡೆಯುವುದು-ಇನ್ನೊಮ್ಮೆ ನಡೆದಾಗ.

ಪಿಯರೆ ಚಾರ್ಡಿನ್‌ ಮಾತು- ಮರೆಯಲಾಗದ ಮಾತು. Pierre Teilhard dchardin- ಓರ್ವ ವಿಜ್ಞಾನಿ ಮತ್ತು ಸಂತನಂತೆ ಬದುಕಿದ ಪಾದ್ರಿ. ಅವನ ಮಾತು ಇದು:  Some day after we have mastered the winds the tide and gravity, we shall harness for God the energies of love. Then for the second time in the history of the world man will have discovered fire  ಪ್ರಕೃತಿಯ ಶಕ್ತಿಗಳನ್ನೆಲ್ಲ ಪಳಗಿಸಿದ ಮೇಲೊಂದು ದಿನ ನಾವು ಪ್ರೇಮದ ಶಕ್ತಿಯನ್ನು ಬಳಸುವೆವು. ಆಗ ಇತಿಹಾಸದಲ್ಲಿ ಮನುಷ್ಯ ಎರಡನೆಯ ಸಲ ಬೆಂಕಿಯನ್ನು ಕಂಡುಹಿಡಿದಂತೆ ಆಗುವುದು - ಎಲ್ಲವನ್ನೂ ಇನ್ನೊಮ್ಮೆ ಕಂಡುಕೊಳ್ಳುವ ಅಗತ್ಯವನ್ನು ಹೇಳುತ್ತಿದ್ದಾನೆ-ಚಾರ್ಡಿನ್‌. ಬೆಂಕಿಯನ್ನೂ ಕೂಡ. ಆದರೆ, ಅದನ್ನು ಕಂಡುಕೊಳ್ಳುವುದು ನಮ್ಮೊಳಗೇ ಇರುವ “ಪ್ರೇಮ’ದಲ್ಲಿ ! ಇನ್ನೊಮ್ಮೆ ಕಂಡಾಗ ಬೆಂಕಿಯನ್ನೂ ಪ್ರೀತಿಸಲಾಗುತ್ತದೆ. ಪ್ರೀತಿಯೂ, ಬೆಂಕಿಯಂತೆ ಹೆಚ್ಚು ಕಾಲ ಮನುಷ್ಯರಿಗೆ ತಿಳಿಯದೆ ತಾನು ಅಡಗಿರಲಾರದು.

ವಿರಹವಿಲ್ಲದೆ ಮಿಲನದ ಅನುಭವಾಗದು. ಇದು ಏನು ವಿಚಿತ್ರ. ಆದರೆ, ವಿರಹವು ಸಂಭವಿಸಬೇಕಾದರೆ, ಮೊದಲು ಮಿಲನದ ಅನುಭವವಾಗಿರಬೇಕಲ್ಲ? ಎಂದರೆ- ವಿರಹವು ಉಂಟಾದಾಗಲೇ ಮಿಲನದ ಆಪ್ತತೆ ಅನುಭವಕ್ಕೆ ಬರುವುದು. ಇದ್ದುದು ಕಳೆದುಹೋದಾಗಲೇ ಅದರ ಬೆಲೆ ತಿಳಿಯುವುದು. ಇದು ಮನುಷ್ಯ ಜೀವದ ಪಾಡು. ಈ ಪಾಡನ್ನು ಬೇಂದ್ರೆಯವು- ಚಿರ ವಿರಹಿ ಪೂರ್ವವದು ಪಡೆದಂತೆ ಎಂಬೊಂದು ಬೆಡಗಿನ ಸಾಲಿನಲ್ಲಿ ಹೇಳಿದ್ದರು. ಅಡಿಗರ ಚಿಂತಾಮಣಿಯಲ್ಲಿ ಕಂಡ ಮುಖ ಕವಿತೆಯಲ್ಲಿ ಈ ಬೆಡಗಿನ ಇನ್ನೊಂದು ಮುಖ ಕಾಣುತ್ತದೆ. ಸಭಾಮಧ್ಯದಲ್ಲಿ ಪರಮಾಪ್ತ ಮುಖವೊಂದು ಕಾಣಿಸುತ್ತದೆ. ಕಂಡಾಗ; ತಾನು ಇದನ್ನೇ ಹುಡುಕುತ್ತಿದ್ದುದೇನು ಎಂಬಂಥ ಭಾವ ಮೂಡುತ್ತದೆ. ತನ್ನದೇ ಸ್ತ್ರೀ ಮುಖವಿದು ಎಂಬ ಆತ್ಮೀಯಭಾವ ಉಂಟಾಗುತ್ತದೆ. ಅಕಸ್ಮತ್ತಾಗಿ ತನ್ನ ಇನ್ನೊಂದರ್ಧ ಎಲ್ಲಾದರೂ ಕ್ಷಣಾರ್ಧ ಸಿಕ್ಕಿದವನೆ ಕೃತಾರ್ಥ ಎನಿಸುತ್ತದೆ. ಆದರೆ ಕೃತಾರ್ಥನಿಗೂ ವಿರಹ ತಪ್ಪಿದ್ದಲ್ಲ. ಇವು ಕವಿತೆಯ ಕೊನೆಯ ಸಾಲುಗಳು.

ಮತ್ತೆ ಯಾವಾಗ ಮರುಭೇಟಿ? ಕಣ್ಣು ಕಣ್ಣುಗಳ ಸಮ್ಮಿಲನ?
ಮೌನದ ನಿಗೂಢ ಗಂಭೀರ ಸಂವಾದದ ಚಟಾಕಿ?
ಆತ್ಮೀಯ ದೀವಿಗೆ ಮತ್ತೆ ಬರಬಲ್ಲೆನೇ ಏಳು ಕಡಲುಗಳ ದಾಟಿ?
ಬಂದರೂ ಕೂಡ ದೊರೆವುದೆ ಹೇಳು ಈ ಇಂಥ ಸರಿಸಾಟಿ?
ವಿರಹದ ಪ್ರಾರಂಭವಿದು. ಮುಖವನ್ನು ನೋಡುತ್ತಿರುವಂತೆಯೇ ತನ್ನ ವಿರಹವನ್ನೂ ಅದು ಉಂಟುಮಾಡುತ್ತಿದೆ! ಈ ಅನುಭವವನ್ನೇ “ಚಿರವಿರಹ’ ಎಂದು ಬೇಂದ್ರೆ ಕರೆದದ್ದು. ಅಂದರೆ “ಒಮ್ಮೆ’ಯಲ್ಲಿಯೇ “ಇನ್ನೊಮ್ಮೆ’ ಬೆರೆತುಕೊಂಡಿದೆ. ಮೊದಲ ಬಾರಿ ನೋಡಿದಾಗಲೇ “ಇನ್ನೊಮ್ಮೆ’ ನೋಡಿದಂತೆ ನೋಡಲು ಸಾಧ್ಯವಾಗುವುದಾದರೆ ನೋಟವು ಕೃತಾರ್ಥವಾಗುತ್ತದೆ. ಕವಿತೆಗೆ ಈ ಸವಾಲನ್ನು ಎದುರಿಸದೆ ವಿಧಿಯಿಲ್ಲ.

ಲಕ್ಷ್ಮೀಶ ತೋಳ್ಪಾಡಿ

ಟಾಪ್ ನ್ಯೂಸ್

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.