ಯಕ್ಷ ರಂಗದ ಹಾಸ್ಯ ದಿಗ್ಗಜ ಕುಂಜಾಲು ರಾಮಕೃಷ್ಣ !
Team Udayavani, Jun 24, 2018, 4:35 PM IST
ಯಕ್ಷಗಾನ ರಂಗದಲ್ಲಿ ಅನೇಕ ದಿಗ್ಗಜರು ತಮ್ಮ ಕಲಾಯಾನ ಮುಗಿಸಿ ತೆರಳಿದ್ದು ಅವರನ್ನು ಸರಿಗಟ್ಟುವ ಇನ್ನೋರ್ವ ಕಲಾವಿದ ಸೃಷ್ಟಿಯಾಗಿಲ್ಲ ಎನ್ನುವ ಮಾತು ಹಲವು ಮರೆಯಾದ ಮೇರು ಕಲಾವಿದರಿಗೆ ಅನ್ವಯವಾಗುತ್ತದೆ. ಅಂತಹ ದಿಗ್ಗಜರ ಪೈಕಿ ಬಡಗುತಿಟ್ಟಿನ ಪ್ರಖ್ಯಾತ ಸಂಪ್ರದಾಯಿಕ ಹಾಸ್ಯಗಾರ ಕುಂಜಾಲು ರಾಮಕೃಷ್ಣ ನಾಯಕ್ ಅವರ ಹೆಸರೂ ಒಂದು.
ಯಕ್ಷಗಾನದ ಕರ್ಮಭೂಮಿ ಬ್ರಹ್ಮಾವರ ಸಮೀಪದ ಕುಂಜಾಲಿನಲ್ಲಿ ಪದ್ಮನಾಭ ನಾಯಕ್ ಮತ್ತು ಶಾರಾದಾ ಅವರ ಪುತ್ರನಾಗಿ 1945 ರಲ್ಲಿ ಜನಿಸಿದ ರಾಮಕೃಷ್ಣ ಅವರು 7 ನೇ ತರಗತಿಯ ವರೆಗೆ ವ್ಯಾಸಂಗ ಮಾಡಿ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದರು.
ಸಮೀಪದ ಯಕ್ಷಗಾನ ಭಾಗವತ, ಗುರು ಗೋರ್ಪಾಡಿ ವಿಟ್ಠಲ್ ಪಾಟೀಲ್ ಅವರ ಹೂವಿನ ಕೋಲಿನ ತಂಡದ ಹುಡುಗನಾಗಿ ಅರ್ಥ ಹೇಳಿ ಅಪಾರ ಜನರ ಪ್ರಶಂಸೆಗೆ ಪಾತ್ರರಾಗುವ ಮೂಲಕ ಯಕ್ಷರಂಗದ ಯಾತ್ರೆ ಆರಂಭಿಸಿದ ಅವರು ಬಳಿಕ ದಿಗ್ಗಜ ಮದ್ದಳೆ ವಾದಕ ಬೇಳಂಜೆ ತಿಮ್ಮಪ್ಪ ನಾಯಕ್ ಅವರಿಂದ ತಾಳ , ತಮ್ಮದೇ ಸಮಾಜದ ಹಿರಿಯ ಗುರುವಾಗಿದ್ದ ಮಟಪಾಡಿ ವೀರಭದ್ರ ನಾಯಕ್ ಅವರ ಗರಡಿಯಲ್ಲಿ ಹೆಜ್ಜೆಗಾರಿಕೆಯಲ್ಲಿ ಪಳಗಿದರು. ರಾಮಕೃಷ್ಣರು ಓರ್ವ ಪರಿಪೂರ್ಣ ಹಾಸ್ಯಗಾರನಾಗಿ ಹೊರ ಹೊಮ್ಮಲು ಕಾರಣವಾಗಿದ್ದು ಮೇರು ಹಾಸ್ಯಗಾರ ಹಾಲಾಡಿ ಕೊರಗಪ್ಪ (ಕೊರ್ಗು) ಅವರು.
ಮಂದಾರ್ತಿ ಮೇಳ, ಅಮೃತೇಶ್ವರಿ ಮೇಳ, ಮಾರಣಕಟ್ಟೆ,ಕೊಲ್ಲೂರು , ಶಿರಸಿ ಮೇಳ ,ಇಡಗುಂಜಿ ಮೇಳ , ಸಾಲಿಗ್ರಾಮ ಮೇಳ ಗಳಲ್ಲಿ ಒಟ್ಟು 40 ವರ್ಷಗಳ ಸುಧೀರ್ಘ ತಿರುಗಾಟ ಮಾಡಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.
ಡಾ.ಶಿವರಾಮ ಕಾರಂತರ ಗಮನ ಸೆಳೆದಿದ್ದ ರಾಮಕೃಷ್ಣ ನಾಯಕ್ ಅವರು ಬ್ಯಾಲೆ ತಂಡದೊಂದಿಗೆ ಹಾಂಕಾಂಗ್ ಪ್ರವಾಸವನ್ನೂ ಮಾಡಿ ವಿದೇಶದಲ್ಲೂ ತನ್ನ ಪ್ರತಿಭೆ ಮೆರೆದಿದ್ದಾರೆ.
ಇಡಗುಂಜಿ ಮೇಳದಲ್ಲಿ ಕೆರೆಮನೆ ದಿಗ್ಗಜ ಕಲಾವಿದರಾದ ಮಹಾಬಲ ಹೆಗಡೆ, ಶಂಭು ಹೆಗಡೆ ಅವರ ಒಡನಾಟವೂ ರಾಮಕೃಷ್ಣ ಅವರಿಗೆ ಉತ್ತರ ಕನ್ನಡದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಲು ಸಾಧ್ಯವಾಯಿತು.
ಬೇಡರ ಕಣ್ಣಪ್ಪ ಪ್ರಸಂಗದ ಕಾಶಿಮಾಣಿ ಪಾತ್ರ ಅವರಿಗೆ ಇನ್ನಿಲ್ಲದ ಖ್ಯಾತಿ ತಂದು ಕೊಟ್ಟಿತು.ಅವರು ಮುಗ್ಧ ಬ್ರಾಹ್ಮಣ ಮಾಣಿಯ ಪಾತ್ರದ ಚಿತ್ರಣ ಅದ್ಭುತವಾಗಿತ್ತು ಮತ್ತು ಅದನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎನ್ನುವುದು ಹಲವು ಹಿರಿಯ ಯಕ್ಷಗಾನ ಅಭಿಮಾನಿಗಳ ಅಭಿಪ್ರಾಯ. ದಿಗ್ಗಜ ವಾಗ್ಮಿಗಳಾದ ಶೇಣಿ ಗೋಪಾಲಕೃಷ್ಣ ಭಟ್ ಅವರ ಕೈಲಾಸ ಶಾಸ್ತ್ರೀ ಪಾತ್ರಕ್ಕೆ ರಾಮಕೃಷ್ಣ ಅವರ ಮಾಣಿ ಅಪಾರ ಜನ ಮೆಚ್ಚುಗೆ ಗೆ ಪಾತ್ರವಾಗಿದ್ದು ಇಂದಿಗೂ ಹಲವು ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ.
ಮಾತೃಭಾಷೆ ಮೋಡಿ!
ಶಿರಸಿ ಮೇಳದಲ್ಲಿನ ಅಂದಿನ ಜನಪ್ರಿಯ ಪ್ರಸಂಗವಾದ ಭಾಗ್ಯ ಭಾರತಿಯಲ್ಲಿ ರಾಮಕೃಷ್ಣ ಮತ್ತು ದಿವಂಗತ ತೆಕ್ಕಟ್ಟೆ ಆನಂದ ಮಾಸ್ಟರ್ ಅವರ ಮರ್ತಪ್ಪ ಚರ್ಡಪ್ಪ ಜೋಡಿ ಗಲ್ಲಾ ಪೆಟ್ಟಿಗೆ ಸೂರೆಗೈದಿದ್ದು, ಅಮೋಘ ಜೋಡಿ ಎನಿಸಿಕೊಂಡು ಮಾತೃಭಾಷೆಯಾದ ಕೊಂಕಣಿಯ ಸಂಭಾಷಣೆಯಲ್ಲಿ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲಿಸಿದ್ದನ್ನು ಇಂದಿಗೂ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.
ರಾಮಕೃಷ್ಣ ಅವರ ಹರಿಶ್ಚಂದ್ರ ಪ್ರಸಂಗದ ನಕ್ಷತ್ರಿಕ, ಶೂರ್ಪನಖಾ ವಿವಾಹದ ವಿದ್ಯುಜ್ಜೀವ , ಬೇಹಿನ ಚರ, ವೃದ್ಧ ಬ್ರಾಹ್ಮಣ, ಸುಕನ್ಯಾ ಪರಿಣಯ ವಿಢೂರಥ, ಪ್ರಹ್ಲಾದ ಚರಿತ್ರೆಯ ದಡ್ಡ , ವನಪಾಲಕಿ, ದಮಯಯಂತಿಯ ಬಾಹುಕ, ಕಂದರ ಪಾತ್ರಗಳು ಬೇರೆ ಹಾಸ್ಯಗಾರರಿಂದ ಸರಿಗಟ್ಟಲು ಅಸಾಧ್ಯ ಎನಿಸುವಷ್ಟು ಪ್ರಸಿದ್ಧವಾಗಿದ್ದವು.
ಕುಂಜಾಲು ರಾಮಕೃಷ್ಣ ಅವರ ಅಭಿನಯದ ಕೆಲವು ಪಾತ್ರಗಳ ವಿಡಿಯೋಗಳು ಚಿತ್ರಣಗೊಂಡಿದ್ದು ಯೂ ಟ್ಯೂಬ್‌ನಲ್ಲೂ ಲಭ್ಯವಿದೆ.
ಹಾಸ್ಯ ಚರ್ಕವರ್ತಿ ಬಿರುದು ಪಡೆದ ರಾಮಕೃಷ್ಣ ಅವರು ತನ್ನ ಸಾಧನೆಗೆ ತಕ್ಕುದಾಗಿ ನೂರಾರು ಸನ್ಮಾನಗಳನ್ನು ಪಡೆದು 2011 ರಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.
ಜೀವಿತದ ಕೊನೆಯಲ್ಲಿ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅವರು 2014 ರ ಜೂನ್ 13 ರಂದು ಸ್ವಗೃಹದಲ್ಲಿ ಇಹಲೋಕದ ಯಾತ್ರೆ ಮುಗಿಸಿದರು.
ವಿಷ್ಣುದಾಸ್ ಗೋರ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.