ಶಿರಸಿಯ ಸಿಹಿ ಬಾವೀಕೈ ಪೇಡ
Team Udayavani, Jun 25, 2018, 12:13 PM IST
ಒಂದು ಊರಿನ ಹೆಸರಿನ ಮೂಲಕ ಇಂದು ಮನೆಮಾತದ ಸವಿ ಇದು. ಇಡೀ ಕುಟುಂಬದ ಆಸರೆಯ ಜೊತೆಗೆ ಹೈನುಗಾರಿಕೆಗೆ ಉತ್ತೇಜಿಸುವ ಕಾರ್ಯವನ್ನೂ ಮಾಡಿದೆ. ಬಾವೀಕೈ ಪೇಡ ಅಂದರೆ ಊರವರಿಗೂ, ಪರರಿಗೂ ಇಷ್ಟ. ಅದರಲ್ಲೂ ಕೇಸರಿ ಪೇಡಾಕ್ಕೇ ಗ್ರಾಹಕರು ಹೆಚ್ಚು.
ಗೋವಾ, ಮುಂಬೈ ಅಥವಾ ಹೊರ ರಾಜ್ಯಗಳಿಂದ ಉತ್ತರ ಕನ್ನಡದ ಪ್ರವಾಸಿ ತಾಣಗಳ ವೀಕ್ಷಣೆಗೆ, ಶಿರಸಿಗೆ ನಿರಂತರವಾಗಿ ಪ್ರವಾಸಿಗಳು ಬರುತ್ತಾರೆ. ಅಮೇರಿಕ, ಮಲೇಶಿಯಾ, ಕೆನಡಾ, ಅಬುದಾಬಿ, ಬೆಂಗಳೂರು, ಮಂಗಳೂರು, ಧಾರವಾಡ… ಹೀಗೆ ವಿವಿಧೆಡೆಯಿಂದ ಶಿರಸಿಗೆ ಬಂದವರೆಲ್ಲಾ ಕೇಳುವ ತಿನಿಸಿನ ಹೆಸರೇ – ಬಾವಿಕೈ ಪೇಡಾ !
ನಿಜ. ಒಂದು ಊರಿನ ಹೆಸರಿನ ಮೂಲಕ ಇಂದು ಮನೆಮಾತದ ಸವಿ ಇದು. ಇಡೀ ಕುಟುಂಬದ ಆಸರೆಯ ಜೊತೆಗೆ ಹೈನುಗಾರಿಕೆಗೆ ಉತ್ತೇಜಿಸುವ ಕಾರ್ಯವನ್ನೂ ಮಾಡಿದೆ. ಬಾವೀಕೈ ಪೇಡ ಅಂದರೆ ಊರವರಿಗೂ, ಪರರಿಗೂ ಇಷ್ಟ. ಅದರಲ್ಲೂ ಕೇಸರಿ ಪೇಡಾಕ್ಕೆ ಗ್ರಾಹಕರು ಹೆಚ್ಚು.
ಸುಮಾರು ನಾಲ್ಕು ದಶಕಗಳ ಹಿಂದಿನ ಮಾತು. ಶಿರಸಿ ತಾಲೂಕಿನ ಬಾವೀಕೈನ ಮಂಜುನಾಥ ಹೆಗಡೆ ಅವರ ಮನೆಯಲ್ಲಿ ದೊಡ್ಡ ಸೊರಟಿ ಎಮ್ಮೆಯ ಜೊತೆ ಜಾನುವಾರುಗಳ ದಂಡೇ ಇತ್ತು. ಮನೆಯಲ್ಲಿ ಎಷ್ಟು ಬಳಸಿದರೂ ಹಾಲು ಹಾಲು ಉಳಿಯುತ್ತಿತ್ತು. ಆದಿನಗಳಲ್ಲಿ ಇಂದಿನಂತೆ ಹಾಲು ಖರೀದಿಸುವ ಕೇಂದ್ರಗಳು ಇರಲಿಲ್ಲ. ಹೆಚ್ಚಾಗುವ ಹಾಲನ್ನು ಏನು ಮಾಡಬೇಕು ಎಂದು ಗೋಳಿ ರಾಜಾರಾಮ ಭಟ್ಟ ಅವರಲ್ಲಿ ಮಂಜುನಾಥ ಹೆಗಡೆ ಪ್ರಸ್ತಾಪಿಸಿದರು. ಖೋವಾ ಮಾಡಿ ಪೇಟೆಗೆ ಕೊಡಬಹುದಲ್ಲ ಎಂದು ಭಟ್ಟರು ಸಲಹೆ ಕೊಟ್ಟರು. ದಿನಕ್ಕೆ 25- 30 ಲೀಟರ್ ಹಾಲು ಹೆಚ್ಚಳ ಆಗುವಾಗ ಇವರಿಗೂ ಏನಾದರೂ ಮಾಡುವ ಹಾಗೂ ಆದಾಯ ಮಾಡಿಕೊಳ್ಳುವ ತುಡಿತ ಹೆಚ್ಚಿತು.
ಖೋವಾ ಮಾಡಿ ಪೇಟೆಗೆ ಒಯ್ದರೂ ಅಷ್ಟು ದೊಡ್ಡ ಪ್ರಮಾಣದ ಬೇಡಿಕೆ ಸಿಗಲಿಲ್ಲ. ಹಾಲು ಹಾಳಾಗದಂತೆ ಹಾಗೂ ಮಾಡಿದ ಉತ್ಪನ್ನ ಕೂಡ ಉಳಿಸಿಕೊಳ್ಳುವಂತೆ ಪೇಡ ಮಾಡಬೇಕಾದ ಅನಿವಾರ್ಯ ಹೆಚ್ಚಿತು. ಮನೆಗೆ ಬಂದವರೇ ಪತ್ನಿ ಭವಾನಿ ಹೆಗಡೆ ಅವರೊಂದಿಗೆ ಚರ್ಚೆ ಮಾಡಿದರು. ಮಕ್ಕಳೂ ಇವರ ನೆರವಿಗೆ ಬಂದರು. ಉತ್ತಮ ಗುಣಮಟ್ಟದಲ್ಲಿ ಸ್ವಾದಿಷ್ಟವಾಗಿ ಪೇಡಾ ಸಿದ್ಧಗೊಳಿಸಿ ಮಾರುಕಟ್ಟೆಗೆ ಕಳಿಸುವುದು ಅವರ ಆಲೋಚನೆ ಆಗಿತ್ತು. ವಾರ, ತಿಂಗಳುಗಳ ಕಾಲ ಶ್ರಮವಹಿಸಿ ಒಂದು ಹದ ಕಂಡುಕೊಂಡರು. ಈ ಸಿಹಿತಿಂಡಿಯೇ ಮುಂದೆ ಬಾವೀಕೈ ಪೇಡ ಅಂತ ಹೆಸರಾಯಿತು.
25 ಲೀಟರ್ ಹಾಲಿನಿಂದ ಮುಂಜಾನೆ ಸಿದ್ದಗೊಳಿಸಿ, ಸಂಜೆ ತುಡುಗುಣಿ ಬಸ್ಸಿನಲ್ಲಿ ಪೇಟೆಗೆ ಒಯ್ದು ಮಾರಾಟ ಮಾಡಿದರು. ಅಂದು ಅಂಗಡಿ ಅಂಗಡಿ ಅಲೆದು ಪೇಡಾ ಬೇಕಾ ಎಂದು ಕೇಳುತ್ತಿದ್ದರು ಹೆಗಡೆ. ಆದರೆ ಇಂದು ಅಂಗಡಿಯವರೇ ಪೇಡ ಕೊಡಿ ಎನ್ನುವಷ್ಟು ಜನಪ್ರೀತಿ ಗಳಿಸಿದೆ. ಏಲಕ್ಕಿ ಪೇಡ, ಕೇಸರಿ ಪೇಡ ಇವರ ವೆರೈಟಿ. ಕೊಬ್ಬರಿ ಪೇಡ ಕೂಡ ಮಾಡುತ್ತಿದ್ದ ಕಾಲವೂ ಇತ್ತು. ಕೇಸರಿ, ಸಕ್ಕರೆ, ಹಾಲು ಬಳಸಿ ತಯಾರಿಸುವ ಪೇಡಾ ತಿಂದರೆ ಮತ್ತೆ ತಿನ್ನಿಸಿ ಕೊಳ್ಳುವ ರುಚಿಯಿದೆ. ಕೇಸರಿ ಪೇಡ ಕೆ.ಜಿಗೆ 320 ರೂ., ಏಲಕ್ಕಿ ಪೇಡಾ 280 ರೂ. ಇದೆ. ಮಕ್ಕಳ ಫಲಿತಾಂಶ, ಲಕ್ಷಿ$¾à ಪೂಜೆಗಳು ಬಂದರೆ ಬೇಡಿಕೆ ದ್ವಿಗುಣ. ಮೊದಲಿನ ಗುಣಮಟ್ಟವನ್ನೇ ಇಂದು ಮಂಜುನಾಥ ಹೆಗಡೆ ಅವರ ಮಗ ಬಾಲಚಂದ್ರ ಹೆಗಡೆ ಕಾಯ್ದು ಕೊಂಡಿದ್ದಾರೆ. ಈಗ ಯಂತ್ರವನ್ನೂ ಖರೀದಿ ಮಾಡಿರುವುರಿಂದ ಮನೆಯಲ್ಲೇ ಸಿದ್ದಗೊಳಿಸುತ್ತಾರೆ. ಬಾಲಚಂದ್ರ ಅವರ ಪತ್ನಿ ಗಂಗಾಬಾಯಿ, ಮಕ್ಕಳೂ ಸಹಕಾರ ನೀಡುತ್ತಾರೆ.
ಪೇಡಾಕ್ಕೆ ವಿಪರೀತ ಬೇಡಿಕೆ ಇದ್ದರೂ ಶ್ರಮಿಕರ ಹಾಗೂ ಸಮಯದ ಕೊರತೆಯಿಂದ ಮಾಡಲಾಗುವುದಿಲ್ಲ. ನಾವೇ ತಯಾರಿಸಿ ಗ್ರಾಹಕರಿಗೆ ತಲುಪಿಸುವ ಕೆಲಸವನ್ನೂ ಮಾಡಬೇಕು ಇದೂ ಸಮಸ್ಯೆ ಎನ್ನುತ್ತಾರೆ ಬಾಲಚಂದ್ರ ಹೆಗಡೆ. ಸ್ಥಳೀಯ ಹಾಲು ಮಾರಾಟ ಕೇಂದ್ರದಿಂದಲೂ ಹಾಲು ಖರೀದಿಸಿ ತಂದು ಪೇಡಾ ಸಿದ್ದಗೊಳಿಸುತ್ತಾರೆ. ಇಡೀ ಊರಿಗೂ ಒಂದು ಹೆಮ್ಮೆ ಮೂಡಿಸಿದ್ದಾರೆ.
– ರಾಘವೇಂದ್ರ ಬೆಟ್ಟಕೊಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.