ಹಸಿರುಮಯ ಐಐಟಿ ನಮ್ಮಲ್ಲಿ ಮಾತ್ರ
Team Udayavani, Jun 26, 2018, 6:00 AM IST
ಧಾರವಾಡ: ರಸ್ತೆಗಳ ಅಗಲೀಕರಣ, ದೈತ್ಯ ಕಟ್ಟಡಗಳ ನಿರ್ಮಾಣ, ಅಣೆಕಟ್ಟು, ಕಾಲುವೆಗಳ ನಿರ್ಮಾಣವೂ ಸೇರಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದರೂ ಮೊದಲು ಬಲಿಯಾಗುವುದು ಗಿಡಮರಗಳು. ಆದರೆ ರಾಜ್ಯದಲ್ಲಿ ಸ್ಥಾಪನೆಯಾಗಿರುವ ಮೊದಲ ಐಐಟಿ ಎಂಬ ಹೆಗ್ಗಳಿಕೆ ಪಡೆದಿರುವ ಧಾರವಾಡ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಕಟ್ಟಡಗಳ ನಿರ್ಮಾಣಕ್ಕೆ ಒಂದೇ ಒಂದು ಗಿಡವನ್ನೂ ಬಲಿ ಕೊಡದಂತೆ ನೀಲನಕ್ಷೆ ಸಿದ್ಧಗೊಂಡಿದೆ.
ಜು.1ಕ್ಕೆ ಎರಡು ವರ್ಷಗಳನ್ನು ಪೂರೈಸಲಿರುವ ಧಾರವಾಡ ಐಐಟಿಗೆ ಈಗಾಗಲೇ 470 ಎಕರೆ ಭೂಮಿ ನೀಡಲಾಗಿದೆ. ಈ ಪೈಕಿ 250 ಎಕರೆಯಲ್ಲಿ ಮಾತ್ರ ಐಐಟಿ ಕಟ್ಟಡಗಳು, ಆಟದ ಮೈದಾನ, ಉಪನ್ಯಾಸಕರ ವಸತಿ ಗೃಹಗಳು, ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಎಲ್ಲಾ ಬಗೆಯ ಕಟ್ಟಡಗಳು ತಲೆ ಎತ್ತಲಿವೆ. ಧಾರವಾಡ ಐಐಟಿ ಆವರಣದಲ್ಲಿ 4,800ಕ್ಕೂ ಹೆಚ್ಚು ಮರಗಳಿದ್ದು, ಈ ಪೈಕಿ ಒಂದೇ ಒಂದು ಗಿಡವನ್ನೂ ಕತ್ತರಿಸದಂತೆ ಕ್ಯಾಂಪಸ್ ನಿರ್ಮಿಸಲು ಐಐಟಿ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.
ಐಐಟಿ ಕಟ್ಟಡಕ್ಕೆ ಭೂಮಿ ಪರೀಕ್ಷೆಗೆ 2018ರ ಮೇ 22ರಂದು ಧಾರವಾಡ ಮತ್ತು ಬೆಂಗಳೂರು ಮೂಲದ ಎರಡು ಕಂಪನಿಗಳಿಗೆ ಟೆಂಡರ್ ನೀಡಲಾಗಿತ್ತು. ಈ ಎರಡೂ ಕಂಪನಿಗಳು ಭೂಮಿ ಪರೀಕ್ಷೆ ಮಾಡಿದ್ದು ಎಲ್ಲೆಲ್ಲಿ ಯಾವ ಕಟ್ಟಡಗಳನ್ನು ಕಟ್ಟುವುದು ಸೂಕ್ತ ಎಂಬ ವರದಿ ನೀಡಿವೆ. ಇನ್ನು ಒಂದು ತಿಂಗಳಲ್ಲಿ ಡಿಪಿಆರ್ (ವಿಸ್ತೃತ ಯೋಜನಾ ವರದಿ)ಸಿದ್ಧಗೊಳ್ಳಲಿದ್ದು, ಐಐಟಿ ಕಟ್ಟಡ ಕಾಮಗಾರಿಗಳು ಆರಂಭಗೊಳ್ಳಲಿವೆ. ಇದು ದೇಶದಲ್ಲಿಯೇ ಹಸಿರು ಕ್ಯಾಂಪಸ್ ಹೊಂದಿದ ಐಐಟಿಯಾಗಲಿದೆ ಎಂದು ಐಐಟಿ ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ಗಿಡಗಳಿಗೆ ಭರಪೂರ ಪರಿಹಾರ:
ಧಾರವಾಡ ಐಐಟಿ ಸ್ಥಾಪನೆಗೆ ಕೆಐಎಡಿಬಿ ಮೂಲಕ ಭೂಸ್ವಾಧೀನ ಪಡೆಸಿಕೊಂಡ ಭೂಮಿಗೆ ಪ್ರತಿ ಎಕರೆಗೆ 26 ಲಕ್ಷ ರೂ.ವರೆಗೂ ಪರಿಹಾರ ನೀಡಲಾಗಿದೆ. ಈ ಭೂಮಿಯಲ್ಲಿ ರೈತರೇ ಬೆಳೆಸಿದ 2,100ಕ್ಕೂ ಹೆಚ್ಚು ಉತ್ತಮ ಫಲ ಕೊಡುವ ಆಲ್ಫಾನ್ಸೋ ಮಾವಿನ ಮರಗಳಿವೆ. ಇವು ಇನ್ನೂ 25 ವರ್ಷಗಳವರೆಗೆ ಉತ್ತಮ ಫಲ ಕೊಡುವ ಶಕ್ತಿ ಹೊಂದಿವೆ. ಇವುಗಳನ್ನು ಬೆಳೆಸಲು ರೈತರು ಸಾಕಷ್ಟು ಕಷ್ಟಪಟ್ಟಿದ್ದರಿಂದ ಗಿಡಗಳ ಪರಿಹಾರ ಪ್ರತ್ಯೇಕವಾಗಿ ನೀಡುವಂತೆ ಆಗ್ರಹಿಸಿದ್ದರು.
ಸರ್ಕಾರ ಮತ್ತು ಐಐಟಿ ಮೊದಲು ಇದಕ್ಕೆ ಒಪ್ಪಿರಲಿಲ್ಲ. ರೈತರ ಆಗ್ರಹ ಹೆಚ್ಚಾದಂತೆ ಕೊನೆಗೂ ಜಿಲ್ಲಾಡಳಿತ ರೈತರ ಮನವಿಗೆ ಮಣಿದು ಪ್ರತಿ ಮಾವಿನ ಗಿಡಕ್ಕೆ 25 ಸಾವಿರ ರೂ., ಹುಣಸೆ ಗಿಡಕ್ಕೆ 40 ಸಾವಿರ ರೂ., ನೇರಳೆ ಮರಕ್ಕೆ 10 ಸಾವಿರ ರೂ., ಬಲಿತ ತೇಗದ ಮರಗಳಿಗೆ 16 ಸಾವಿರ ರೂ. ಪರಿಹಾರ ನೀಡುತ್ತಿದೆ. ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ ಎನ್ನುವ ಕೂಗು ಚಿಕ್ಕಮಲ್ಲಿಗವಾಡದ ಕೆಲವು ರೈತರಿಂದ ಕೇಳಿ ಬಂದಿದೆ. ಇಷ್ಟು ಬೆಲೆ ತೆತ್ತು ಪಡೆದ ಮರಗಳನ್ನು ಕಡಿದು ಹಾಕಿದರೆ, ಹಣ ಮತ್ತು ಹಸಿರು ಪರಿಸರ ನಾಶವಾಗುತ್ತದೆ. ಹೀಗಾಗಿ ಈ ಎಲ್ಲ ಮರಗಳನ್ನು ಸಂರಕ್ಷಿಸಿಕೊಂಡೇ ಐಐಟಿ ಕ್ಯಾಂಪಸ್ ನಿರ್ಮಿಸಲು ಮುಂದಾಗಿದ್ದಾರೆ.
ಸೌರಶಕ್ತಿ ಚಾಲಿತ ವಾಹನ:
ಐಐಟಿ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ತರಗತಿ ಕಟ್ಟಡ, ಹಾಸ್ಟೇಲ್, ಉಪಹಾರ ಗೃಹ, ಈಜುಕೊಳ, ಆಟದ ಮೈದಾನ ಎಲ್ಲದರ ಮಧ್ಯೆಯೂ ಸರಿ ಸಾಧಾರಣವಾಗಿ 1 ಕಿಮೀನಷ್ಟು ಅಂತರವಿದೆ. ಹೀಗಾಗಿ ಇಲ್ಲಿ ಸುತ್ತಾಡಲು ವಾಹನಗಳ ಅಗತ್ಯವಿದೆ. ವಾಯು, ಶಬ್ದ ಮಾಲಿನ್ಯದ ತೊಂದರೆಯಾಗುತ್ತದೆ. ಇದನ್ನು ತಡೆಯಲು ಐಐಟಿ ಅಧಿಕಾರಿಗಳು ಸೌರಶಕ್ತಿ ಮತ್ತು ವಿದ್ಯುತ್ ಬ್ಯಾಟರಿ ಆಧಾರಿತ ವಾಹನಗಳನ್ನು ಬಳಸಿಕೊಳ್ಳಲು ಯೋಜಿಸಿದ್ದಾರೆ.
ಐಐಟಿ ಗ್ಲೋಬಲ್ ಟೆಂಡರ್:
ಎಂತಹ ಕಟ್ಟಡಗಳು ಬೇಕು ಎಂಬುದನ್ನು ನಿರ್ಧಾರ ಮಾಡಿ ಐಐಟಿ ಬೋರ್ಡ್‌ನಲ್ಲಿ ಒಪ್ಪಿಗೆ ಪಡೆಯುತ್ತಾರೆ. ಇದರ ನಿರ್ಮಾಣಕ್ಕೆ ಜಾಗತಿಕ ಕಂಪನಿಗಳಿಂದ ಟೆಂಡರ್ ಕರೆಯಲು ಐಐಟಿ ನಿರ್ಧರಿಸಿದೆ. ಇದಕ್ಕೆ ಧಾರವಾಡ ಜಿಲ್ಲಾಡಳಿತವೂ ಸಮ್ಮತಿಸಿದೆ. ಕ್ಯಾಂಪಸ್‌ಗೆ ಕಾಂಪೌಂಡ್ ನಿರ್ಮಾಣ ಕಳೆದ ಒಂದು ವರ್ಷದಿಂದ ಜೋರಾಗಿ ಸಾಗಿದೆ. ಆವರಣ ಕಾಮಗಾರಿ ಮುಗಿಯುವ ಮುಂಚೆಯೇ ಪ್ರಧಾನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲು ಐಐಟಿ ಅಧಿಕಾರಿಗಳು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಐಐಟಿ ತರಗತಿಗಳು ಇಲ್ಲಿನ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ವಾಲಿ¾ ಕಟ್ಟಡದಲ್ಲಿ ನಡೆಯತ್ತಿವೆ. ಪ್ರತಿ ವರ್ಷ 120 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದು, ಸದ್ಯಕ್ಕೆ ಎರಡು ವರ್ಷದಲ್ಲಿ ಒಟ್ಟು 240 ವಿದ್ಯಾರ್ಥಿಗಳಿದ್ದಾರೆ.
ಧಾರವಾಡ ಐಐಟಿ ನೀಲನಕ್ಷೆ ಸಜ್ಜಾಗಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ಒಂದು ತಿಂಗಳಲ್ಲಿ ಸಿದ್ಧಗೊಳ್ಳಬಹುದು. ರೈತರು ಭೂಮಿಯ ಜೊತೆಗೆ ತಾವು ಬೆಳೆಸಿದ ಮಾವು, ಹುಣಸೆ ಸೇರಿ ಇತರೆ ಮರಗಳಿಗೂ ಪರಿಹಾರ ಕೇಳಿದ್ದರು. ಪರಿಹಾರ ಕೊಡಲು ಆದೇಶಿಸಿದ್ದೇನೆ.
– ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾಧಿಕಾರಿ, ಧಾರವಾಡ
– ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.