ಮಹಾಪೌರರ ವೇದಿಕೆಗೆ ಮತ್ತೆ ಮರುಜೀವ
Team Udayavani, Jul 1, 2018, 6:00 AM IST
ಹುಬ್ಬಳ್ಳಿ: ಸ್ಥಳೀಯ ಸರಕಾರಗಳಿಗೆ ಸಂವಿಧಾನ ಬದ್ಧ 74ನೇ ಕಲಂ ತಿದ್ದುಪಡಿ ಯಥಾವತ್ ಅನುಷ್ಠಾನ, ಮಹಾಪೌರರ ನೇರ ಆಯ್ಕೆ, ಅಧಿಕಾರಾವಧಿ ಹೆಚ್ಚಳ ಇನ್ನಿತರ ಬೇಡಿಕೆಗಳ ಬಗ್ಗೆ ಸರಕಾರಕ್ಕೆ ಒತ್ತಡ ತರಲು, ದಶಕದ ಬಳಿಕ ಕರ್ನಾಟಕ ಮಹಾಪೌರರ ವೇದಿಕೆಗೆ ಜೀವ ತುಂಬುವ ಯತ್ನ ನಡೆದಿದೆ.
ರಾಜ್ಯದಲ್ಲಿ 1996-97ರಲ್ಲಿ ಮೊದಲ ಬಾರಿಗೆ ಕರ್ನಾಟಕ ಮಹಾಪೌರರ ವೇದಿಕೆ ಅಸ್ತಿತ್ವಕ್ಕೆ ಬಂದಿತ್ತು. ಇದಕ್ಕೆ ಹುಬ್ಬಳ್ಳಿ ಮಹತ್ವದ ವೇದಿಕೆಯಾಗಿತ್ತು. ಮಹಾಪೌರರ ವೇದಿಕೆಯಿಂದ ಅಂದಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ನಂತರದಲ್ಲಿ ವೇದಿಕೆ ನಿಷ್ಕ್ರಿಯಗೊಂಡಿತ್ತಾದರೂ, ಇದೀಗ ಅದಕ್ಕೆ ಮತ್ತೆ ಚೇತನ ತುಂಬುವ ಯತ್ನ ಹುಬ್ಬಳ್ಳಿಯಿಂದಲೇ ನಡೆದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತು ಪಡಿಸಿ ರಾಜ್ಯದಲ್ಲಿ ಪ್ರಸ್ತುತ 10 ಮಹಾನಗರ ಪಾಲಿಕೆಗಳಿದ್ದು, ಹತ್ತು ಜನ ಮಹಾಪೌರರು, ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ವೇದಿಕೆಯಡಿ ಸಂಘಟಿತ ಧ್ವನಿ ಮೊಳಗಿಸಲು ಮುಂದಾಗಿದ್ದಾರೆ.
97ರಲ್ಲಿ ಮೊಳಗಿತ್ತು ಧ್ವನಿ:
1996-97ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾಪೌರರಾಗಿದ್ದ ಡಾ| ಪಾಂಡುರಂಗ ಪಾಟೀಲ ಅವರು ಕರ್ನಾಟಕ ಮಹಾಪೌರರ ವೇದಿಕೆ ಹುಟ್ಟು ಹಾಕಿದ್ದರು. ಮಹಾಪೌರರ ವೇದಿಕೆಯಿಂದ ಅಂದಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರ ಭೇಟಿಗೆ ಸಮಯ ಕೇಳಿದಾಗ ಬೆಳಗಿನ ಜಾವ 5ಕ್ಕೆ ಆಗಮಿಸುವಂತೆ ತಿಳಿಸಿದ್ದರು.
ಅದರಂತೆ ಎಲ್ಲ ಮಹಾಪೌರರು ಬೆಳಗಿನ ಜಾವ ದೇವೇಗೌಡರ ನಿವಾಸದಲ್ಲಿ ಭೇಟಿಯಾಗಿದ್ದರು. ಮುಖ್ಯವಾಗಿ ಸಂವಿಧಾನದ 74ನೇ ಕಲಂ ತಿದ್ದುಪಡಿ ಯಥಾವತ್ ಜಾರಿ, ಮಹಾಪೌರರ ನೇರ ನೇಮಕ, ಪಶ್ಚಿಮ ಬಂಗಾಲ ಮಾದರಿಯಲ್ಲಿ ಮೇಯರ್ ಕೌನ್ಸಿಲ್ ರಚನೆ ವ್ಯವಸ್ಥೆ ಸೇರಿ ಸುಮಾರು 9-10 ಅಂಶಗಳ ಬೇಡಿಕೆಯ ಮನವಿ ಸಲ್ಲಿಸಲಾಗಿತ್ತು. ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ದೇವೇಗೌಡರು, ಸರಕಾರದಿಂದ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿದ್ದರು.
ಮಹಾಪೌರರ ಅಧಿಕಾರಾವಧಿ 12 ತಿಂಗಳು ಇರುವುದರಿಂದಾಗಿ ಅದೇ ವರ್ಷದಲ್ಲಿ ಡಾ| ಪಾಂಡುರಂಗ ಪಾಟೀಲ ಅಧಿಕಾರಾವಧಿ ಮುಗಿದಿತ್ತು. ನಂತರದಲ್ಲಿ ಮಹಾಪೌರರ ವೇದಿಕೆ ನಿಸ್ತೇಜ ಸ್ಥಿತಿಗೆ ತಲುಪಿತ್ತು. ಇದೀಗ ಹು.ಧಾ.ಮಹಾನಗರ ಪಾಲಿಕೆ ಮಹಾಪೌರ ಸುಧೀರ ಸರಾಫ್ ಅವರು ವೇದಿಕೆಗೆ ಮರುಜೀವ ನೀಡುವ ಯತ್ನಕ್ಕೆ ಮುಂದಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಮಹಾಪೌರರ ಸಮಾವೇಶದಲ್ಲಿ ಮೈಸೂರು, ಕಲಬುರಗಿ, ವಿಜಯಪುರ, ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾಪೌರರು ಭಾಗಿಯಾಗಿದ್ದರು. ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಮಂಗಳೂರು ಹಾಗೂ ತುಮಕೂರು ಮಹಾಪೌರರು ಅನ್ಯ ಕಾರ್ಯಗಳ ಹಿನ್ನೆಲೆಯಲ್ಲಿ ಪಾಲ್ಗೊಂಡಿರಲಿಲ್ಲ.
ಸಿಎಂ ಭೇಟಿಗೆ ನಿರ್ಧಾರ:
ಇದೀಗ ಎರಡನೇ ಬಾರಿಗೆ ವೇದಿಕೆಯಿಂದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ರಾಜ್ಯದ ಮುಂಗಡ ಪತ್ರ ಮಂಡನೆ ನಂತರ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲೇ ಮುಖ್ಯಮಂತ್ರಿ ಭೇಟಿಗೆ ವೇದಿಕೆ ನಿರ್ಧರಿಸಿದೆ. ಮುಖ್ಯವಾಗಿ 74ನೇ ಕಲಂ ತಿದ್ದುಪಡಿ ಅನುಷ್ಠಾನ, ಪಾಲಿಕೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿ, ಮಹಾಪೌರರ ಅವಧಿ 5 ವರ್ಷ ಮಾಡದಿದ್ದರೂ ಕನಿಷ್ಠ 20 ತಿಂಗಳಿಗಾದರೂ ಹೆಚ್ಚಿಸುವುದು ಸೇರಿ ವಿವಿಧ ಬೇಡಿಕೆಗಳ ಸಲ್ಲಿಕೆಗೆ ನಿರ್ಧರಿಸಲಾಗಿದೆ.
ಎಲ್ಲ ಮಹಾಪೌರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹುಬ್ಬಳ್ಳಿಯಲ್ಲಿ ಶನಿವಾರದ ಸಭೆಯ ವಿಷಯ ಹಾಗೂ ಸಿಎಂಗೆ ಸಲ್ಲಿಸುವ ಮನವಿ ಪತ್ರವನ್ನು ಎಲ್ಲ ಮಹಾಪೌರರಿಗೆ ಸಲ್ಲಿಸಿ ಏನಾದರೂ ಸೇರ್ಪಡೆ, ಬದಲಾವಣೆಗೆ ತಿಳಿಸಲಾಗುವುದು. ಎಲ್ಲರೂ ಸೇರಿ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು.
– ಸುಧೀರ ಸರಾಫ್, ಮಹಾಪೌರ, ಹು.ಧಾ.ಪಾಲಿಕೆ.
ನನ್ನ ಅಧಿಕಾರಾವಧಿಯ ಮಧ್ಯಭಾಗದಲ್ಲಿ ಕರ್ನಾಟಕ ಮಹಾಪೌರರ ವೇದಿಕೆ ಅಸ್ತಿತ್ವಕ್ಕೆ ಬಂದಿತ್ತು. ಅಂದು ಎಲ್ಲ ಮಹಾಪೌರರು ಸ್ಪಂದಿಸಿದ್ದರು. ಮುಖ್ಯಮಂತ್ರಿಯವರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನನ್ನ ಅಧಿಕಾರಾವಧಿ ಬಳಿಕ ವೇದಿಕೆ ಮುಂದುವರಿಕೆ ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಮರುಜೀವ ಪಡೆಯುತ್ತಿರುವುದು ಸಂತಸ ತಂದಿದೆ.
-ಡಾ| ಪಾಂಡುರಂಗ ಪಾಟೀಲ, ಮಾಜಿ ಮಹಾಪೌರ, ಹು.ಧಾ.ಪಾಲಿಕೆ.
– ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.