ತಮಿಳುನಾಡಿಗೆ 30.24 ಟಿಎಂಸಿ
Team Udayavani, Jul 3, 2018, 6:00 AM IST
ಬೆಂಗಳೂರು: ತಮಿಳುನಾಡಿಗೆ ಜುಲೈ ತಿಂಗಳಲ್ಲಿ ಕರ್ನಾ ಟಕ ಬಿಡಬೇಕಿರುವ ಕಾವೇರಿ ನೀರಿನಲ್ಲಿ 1ಟಿಎಂಸಿ ಕಡಿತವಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಪ್ರತಿ ವರ್ಷ ಕಾವೇರಿ ನದಿಯಿಂದ ಕರ್ನಾಟಕ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕಿದೆ. ಪ್ರಸಕ್ತ ತಿಂಗಳಲ್ಲಿ 31.24 ಟಿಎಂಸಿ ನೀರು ಬಿಡಬೇಕಿತ್ತು. ಆದರೆ ಜೂನ್ ತಿಂಗಳಲ್ಲಿ ತಮಿಳುನಾಡಿಗೆ ರಾಜ್ಯದಿಂದ ಒಂದು ಟಿಎಂಸಿ ನೀರು ಹೆಚ್ಚುವರಿಯಾಗಿ ಹರಿದಿರುವುದರಿಂದ ಅದನ್ನು ಕಳೆದು ಈ ತಿಂಗಳು 30.24 ಟಿಎಂಸಿ ನೀರು ಹರಿಬಿಟ್ಟರೆ ಸಾಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿರ್ಧಾರ ಕೈಗೊಂಡಿದೆ. ಈ ಮೂಲಕ 34 ಟಿಎಂಸಿ ನೀರು ಬೇಕೆಂದು ಸಭೆಯಲ್ಲಿ ಬೇಡಿಕೆ ಸಲ್ಲಿಸಿದ್ದ ತಮಿಳುನಾಡಿಗೆ ಹಿನ್ನಡೆ ಯಾಗಿದೆ.
ದೆಹಲಿಯ ಕೇಂದ್ರ ಜಲ ಆಯೋಗದ ಕಚೇರಿಯಲ್ಲಿ ಸೋಮವಾರ ಆಯೋಗದ ಮುಖ್ಯಸ್ಥ ಮತ್ತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಎಸ್.ಮಸೂದ್ ಹುಸೈನ್ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಮೊದಲ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಕರ್ನಾಟಕದ ಸದಸ್ಯರಾಗಿ ಪಾಲ್ಗೊಂಡಿದ್ದರು.
ಸಭೆ ಬಳಿಕ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಮಸೂದ್ ಹುಸೈನ್,ಪ್ರಾಧಿಕಾರದ ಮೊದಲ ಸಭೆ ಸುಸೂತ್ರ ಮತ್ತು ಸೌಹಾರ್ದಯುತವಾಗಿ ನಡೆದಿದ್ದು, ಕ್ರಿಯಾಯೋಜನೆ ಬಗ್ಗೆ ಚರ್ಚಿಸಲಾಗಿದೆ. ಅಲ್ಲದೆ, ಸಿಬ್ಬಂದಿ ಹಾಗೂ ಕಚೇರಿ ನಿರ್ಮಾಣ ಕುರಿತು ಮಾತುಕತೆ ನಡೆದಿದೆ. ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳ ಒಳ ಹರಿವು, ಹೊರ ಹರಿವು ಕುರಿತು ಮಾಹಿತಿ ಪಡೆಯಲಾಗಿದೆ ಎಂದರು.
ಈ ಬಾರಿ ಮುಂಗಾರು ಸಾಮಾನ್ಯಕ್ಕಿಂತ ಹೆಚ್ಚಿದೆ. ಇದನ್ನು ಆಧರಿಸಿ ಕರ್ನಾಟಕದಿಂದ ಈ ವರ್ಷ ತಮಿಳುನಾಡಿಗೆ ನೀರು ಹರಿಸಬೇಕಾಗಿರುವುದರಿಂದ ಎಷ್ಟು ನೀರು ಹರಿಸಬೇಕು ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ. ಇದರ ಜತೆಗೆ ತಮಿಳುನಾಡು ರಾಜ್ಯದಿಂದ ಪುದುಚೇರಿಗೆ 7 ಟಿಎಂಸಿ ನೀರು ಬಿಡಬೇಕು ಎಂದೂ ಪ್ರಾಧಿಕಾರ ಸೂಚನೆ ನೀಡಿದೆ ಎಂದು ಹೇಳಿದರು.
ಈ ಮಧ್ಯೆ ನೀರು ಹಂಚಿಕೆ ವೇಳೆ ರಾಜ್ಯಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಸಲುವಾಗು ಕಾವೇರಿ ಕೊಳ್ಳದ ರಾಜ್ಯಗಳ ನೀರಿನ ಪರಿಸ್ಥಿತಿ (ಅಂತರ್ಜಲ ಪ್ರಮಾಣ ಸೇರಿ) ತಿಳಿದುಕೊಳ್ಳಲು ಸಂವಹನ ಜಾಲವೊಂದನ್ನು ಅಭಿವೃದ್ಧಿಪಡಿಸುವಂತೆ ಕೇಂದ್ರ ಜಲ ಆಯೋಗವನ್ನು ಕೋರಲು ಹಾಗೂ ಪ್ರಾಧಿಕಾರಕ್ಕೆ ಸ್ವಂತ ಕಚೇರಿ, ಬಜೆಟ್ ನಿಗದಿಪಡಿಸುವ ಬಗ್ಗೆಯೂ ಜಲ ಆಯೋಗವನ್ನು ಮನವಿ ಮಾಡಿಕೊಳ್ಳಲಾಗುವುದು ಎಂದರು.
ಇದಲ್ಲದೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಕಾರ್ಯಚಟುವಟಿಕೆ ಹಾಗೂ ನಿಯಮಾವಳಿ ರೂಪಿಸುವುದು, ಕಾವೇರಿ ನದಿಯ ಎಂಟು ಜಲಾಶಯಗಳ ನಿರ್ವಹಣೆ, ಪ್ರಾಧಿಕಾರದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ನಿಯೋಜನೆ, ಸಿಬ್ಬಂದಿಯ ಸೇವಾ ನಿಯಮಗಳು ರೂಪಿಸುವುದು, ಕಾರ್ಯನಿರ್ವಹಣೆಗೆ ಅಗತ್ಯವಿರುವ ಹಣಕಾಸಿನ ಕ್ರೋಡಿಕರಣ, ಕಾವೇರಿ ನೀರು ನಿಯಂತ್ರಣ ಸಮಿತಿಗೆ ನಿರ್ದೇಶನ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ.
ಪ್ರಸ್ತುತ ಮಂಡ್ಯದ ಕೃಷ್ಣರಾಜ ಸಾಗರ ಜಲಾಶಯದಲ್ಲಿ 30 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯದ ನೀರಿನ ಮಟ್ಟ 110 ಅಡಿಯ ಸನಿಹ ಬಂದಿದ್ದು, ಸೋಮವಾರ 108.7 ಅಡಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 73.35 ಅಡಿ ನೀರಿತ್ತು.
ಮಾರ್ಗಸೂಚಿಗೆ ಆಕ್ಷೇಪ
ಕಾವೇರಿ ಕೊಳ್ಳದಲ್ಲಿರುವ ಕರ್ನಾಟಕದ ಜಲಾಶಯಗಳ ನೀರಿನ ಮಟ್ಟವನ್ನು ಪ್ರತಿ 10 ದಿನಕ್ಕೊಮ್ಮೆ ಅಳತೆ ಮಾಡಿ ತಮಿಳುನಾಡಿಗೆ ನೀರು ಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳುವುದು ಮತ್ತು ಕಾವೇರಿ ಕೊಳ್ಳ ವ್ಯಾಪ್ತಿಯಲ್ಲಿ ರೈತರು ಯಾವ ಬೆಳೆ ತೆಗೆಯಬೇಕು ಎಂಬುದನ್ನು ಪ್ರಾಧಿಕಾರ ನಿರ್ಧರಿಸುತ್ತದೆ ಎಂಬ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಗಳ ಬಗ್ಗೆ ಕರ್ನಾಟಕ ಸೋಮವಾರ ಅಧಿಕೃತವಾಗಿ ತನ್ನ ಆಕ್ಷೇಪ ವ್ಯಕ್ತಪಡಿಸಿದೆ.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಕುರಿತ ಗೆಜೆಟ್ ಅಧಿಸೂಚನೆಯಲ್ಲಿ ಇರುವ ಮಾರ್ಗಸೂಚಿಗಳ ಪೈಕಿ ಈ ಎರಡು ಅಂಶಗಳ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇತ್ತೀಚೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಇದರಿಂದ ಆಗುವ ಅನ್ಯಾಯದ ಬಗ್ಗೆ ಗಮನ ಸೆಳೆದಿದ್ದರು.
ಇದೀಗ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸದಸ್ಯ ಹಾಗೂ ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಸಿ ರಾಕೇಶ್ ಸಿಂಗ್ ಅವರು ಪ್ರಾಧಿಕಾರದ ಮಾರ್ಗಸೂಚಿ ಕುರಿತಂತೆ ಸರ್ಕಾರದ ನಿಲುವನ್ನು ಸೋಮವಾರ ನಡೆದ ಪ್ರಾಧಿಕಾರದ ಮೊದಲ ಸಭೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರ್ವ ಪಕ್ಷ ಸಭೆಗೆ ಡಿಎಂಕೆ ಆಗ್ರಹ
ಚೆನ್ನೈ: ಕಾವೇರಿ ಪ್ರಾಧಿಕಾರ ರಚನೆ ಪ್ರಶ್ನಿಸಿ ಕರ್ನಾಟಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ, ಕೂಡಲೇ ಸರ್ಕಾರ ಸರ್ವಪಕ್ಷ ಸಭೆ ಕರೆದು, ತಮಿಳುನಾಡು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿ, ರಾಜ್ಯಕ್ಕೆ ದಕ್ಕಬೇಕಾದ ನೀರನ್ನು ಪಡೆಯಬೇಕು. ಎಂದು ಸೋಮವಾರ ತ.ನಾಡು ಸರ್ಕಾರವನ್ನು ಡಿಎಂಕೆ ಆಗ್ರಹಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪಳನಿಸ್ವಾಮಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣಾ ಸಮಿತಿಯ ಕಾರ್ಯನಿರ್ವಹಣೆಯ ಬಗ್ಗೆ ಎಲ್ಲ ವಿವರಗಳು ಗೊತ್ತಾದ ಬಳಿಕ, ಸರ್ವಪಕ್ಷ ಸಭೆ ಕರೆಯುತ್ತೇವೆ. ಅಗತ್ಯಬಿದ್ದರೆ, ಸೂಕ್ತ ಕ್ರಮವನ್ನೂ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
10 ರೊಳಗೆ ಕಾವೇರಿ ಭಾಗದ ಶಾಸಕರ ಸಭೆ:ಡಿಕೆಶಿ
ಬೆಂಗಳೂರು: ಕಾವೇರಿ ಕೊಳ್ಳದ ರೈತರ ಹಿತ ಕಾಯಲು ಜು.10ರೊಳಗಾಗಿ ಆ ಭಾಗದ ಶಾಸಕರು ಮತ್ತು ಸಚಿವರ ಸಭೆ ಕರೆದು ಚರ್ಚಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆದಿದ್ದು, ರಾಜ್ಯದ ರೈತರ ಹಿತ ಕಾಪಾಡಲು ಕಾವೇರಿ ಪಾಧಿಕಾರದ ಸಭೆಯಲ್ಲಿ ರಾಜ್ಯಕ್ಕೆ ಸಿಗಬೇಕಾದ ನ್ಯಾಯದ ಕುರಿತು ನಮ್ಮ ವಾದ ಮಂಡಿಸಲಾಗುವುದು. ಜುಲೈ 5ರಂದು ಪ್ರಾಧಿಕಾರದ ಸಮಿತಿ ಸಭೆ ನಡೆಯಲಿದೆ. ತಮಿಳುನಾಡು ಭಾಗದ ಸಮಸ್ಯೆ ಮತ್ತು ರಾಜ್ಯದ ರೈತರ ಅನುಕೂಲ ನೋಡಿಕೊಂಡು ಕ್ರಮ ತೆಗೆದುಕೊಳ್ಳಲಾಗುವುದು. ಜು.6 ರಿಂದ 10 ರೊಳಗೆ ಕಾವೇರಿ ಭಾಗದ ಜನ ಪ್ರತಿನಿಧಿಗಳ ಸಭೆ ನಡೆಸಿ, ಕಾವೇರಿ ಕೊಳ್ಳದ ರೈತರ ಬೇಡಿಕೆಗೆ ತಕ್ಕಂತೆ ನೀರು ಬಿಡುವ ವಿಚಾರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಪಾಲ್ಗೊಳ್ಳುವ ರಾಜ್ಯದ ಪ್ರತಿನಿಧಿಗಳಿಗೆ ಯಾವ ರೀತಿಯ ಮಾಹಿತಿ ನೀಡಿದ್ದಾರೆ ಎನ್ನುವುದು ಗೊತ್ತಿಲ್ಲ. ಕಾವೇರಿ ವಿಷಯದಲ್ಲಿ ಹೆಚ್ಚು ಎಚ್ಚರದಿಂದ ಇರಬೇಕು. ಪ್ರಾಧಿಕಾರದ ಸಭೆಯಲ್ಲಿ ಪಾಲ್ಗೊಳ್ಳುವ ಸದಸ್ಯರಿಗೆ ಮಾಹಿತಿ ನೀಡಲು ತಾಂತ್ರಿಕ ಸಲಹಾ ಸಮಿತಿ ನೇಮಕ ಮಾಡಿ ಪ್ರತಿದಿನ ಮಾಹಿತಿ ನೀಡುವ ವ್ಯವಸ್ಥೆಯಾಗಬೇಕು.
– ಬಸವರಾಜ ಬೊಮ್ಮಾಯಿ, ಮಾಜಿ ಜಲಸಂಪನ್ಮೂಲ ಸಚಿವ.
ಕಾವೇರಿ ಅಂತಾರಾಜ್ಯ ನದಿಯಾಗಿರುವುದರಿಂದ ಈ ನದಿಯ ನೀರನ್ನು ನಾಲ್ಕು ರಾಜ್ಯಗಳಿಗೆ ಹಂಚಬೇಕು. ಎಷ್ಟು ನೀರು ಹಂಚ ಬೇಕು ಎನ್ನುವುದನ್ನು ಪ್ರಾಧಿಕಾರ ತೀರ್ಮಾನ ಮಾಡಿದೆ. ನೀರು ಹಂಚಿಕೆಗಾಗಿಯೇ ಪ್ರಾಧಿಕಾರ ರಚ ನೆಯಾಗಿದೆ. ಇದು ರಾಜಕಾರಣಿಗಳ ಪ್ರಾಧಿಕಾರವಲ್ಲ. ಇದು ನಾಲ್ಕು ರಾಜ್ಯದ ತಜ್ಞ ಇಂಜಿನಿಯರ್ ಗಳನ್ನೊಳ ಗೊಂಡಿದೆ. ನಮ್ಮ ರಾಜ್ಯದ ಪ್ರತಿ ನಿಧಿಗಳು ಒಪ್ಪಿಗೆ ನೀಡಿದ್ದರೆ ನಮ್ಮಲ್ಲಿ ನೀರಿದೆ ಎಂದರ್ಥ.
– ಜಿ.ಮಾದೇಗೌಡ,ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.