ವೆಚ್ಚದ ವಿವರಕ್ಕಾಗಿ ಗ್ರಾಮ ಪಂಚಾಯಿತಿ ಸದಸ್ಯರ ಧರಣಿ
Team Udayavani, Jul 3, 2018, 12:51 PM IST
ಬಸವಕಲ್ಯಾಣ: ಹುಲಸೂರು ಗ್ರಾಮ ಪಂಚಾಯತ್‌ನ 14ನೇ ಹಣಕಾಸು ಯೋಜನೆಯಡಿ ಕೈಗೊಳ್ಳಲಾದ ಖರ್ಚು-ವೆಚ್ಚದ ಮಾಹಿತಿ ನೀಡಬೇಕು. ಅಕ್ರಮ ವ್ಯವಹಾರ ನಡೆಸುತ್ತಿರುವ ಪಿಡಿಒ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಗ್ರಾಪಂ ಸದಸ್ಯರು ಕಚೇರಿ ಎದುರು ಕೆಲ ಕಾಲ ಧರಣಿ ನಡೆಸಿದರು.
ಗ್ರಾಪಂ 18 ಜನ ಸದಸ್ಯರು ಬೆಳಗ್ಗೆ ಕಚೇರಿಗೆ ಆಗಮಿಸಿ, ಜಿಪಂ ಸಿಇಒ ಅವರು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದು ಧರಣಿ ಆರಂಭಿಸಿದರು. 14ನೇ ಹಣಕಾಸು ಯೋಜನೆಯಡಿ ಗ್ರಾಪಂಗೆ ಬಂದ 40 ಲಕ್ಷ ರೂ. ಅನುದಾನದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿಲ್ಲ. ಇದರಲ್ಲಿ ಅಕ್ರಮ
ವ್ಯವಹಾರ ನಡೆಸಲಾಗಿದೆ. ಸಿಬ್ಬಂದಿಗಳ ವೇತನಕ್ಕಾಗಿ ಬರುವ ಅನುದಾನವನ್ನೂ ಸಹ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ಖರ್ಚು-ವೆಚ್ಚದ ಬಗ್ಗೆ ಮಾಹಿತಿ ನೀಡಬೇಕು ಎಂದು ಅನೇಕ ಬಾರಿ ಮನವಿ ಮಾಡಿದರೂ ಮಾಹಿತಿ ನೀಡುತ್ತಿಲ್ಲ.
ಲೆಕ್ಕ ಕೇಳಲು ನಿವ್ಯಾರು ಎಂದು ಸದಸ್ಯರಿಗೆ ಪಿಡಿಒ ಮರು ಪ್ರಶ್ನೆ ಮಾಡುತಿದ್ದಾರೆ ಎಂದು ಆರೋಪಿಸಿದರು. ಗ್ರಾಮದ ಅಭಿವೃದ್ಧಿಗಾಗಿ ಜನ ನಮ್ಮ ಮೇಲೆ ವಿಶ್ವಾಸವಿಟ್ಟು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಆದರೆ ಪಿಡಿಒ ಅವರು ಸದಸ್ಯರ ಮಾತಿಗೆ ಯಾವುದೇ ಬೆಲೆ ನೀಡುತ್ತಿಲ್ಲ. ಕೂಡಲೇ ಇವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು. ಖರ್ಚು-ವೆಚ್ಚದ ಬಗ್ಗೆ ಸದಸ್ಯರಿಗೆ ವಿವರಣೆ ನೀಡಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಭೇಟಿನೀಡಿದ ತಾಪಂ ಇಒ ವಿಜಯಕುಮಾರ ಮಡ್ಡೆ, ಧರಣಿನಿರತರೊಂದಿಗೆ ಚರ್ಚಿಸಿದರು. ಜು.7ರಂದು ಸಾಮಾನ್ಯ ಸಭೆ ಕರೆದು ಲೆಕ್ಕ ಕೊಡುವುದಾಗಿ ಭರವಸೆ ನೀಡಿದ ನಂತರ ಧರಣಿ ಕೈಬಿಡಲಾಯಿತು. ಗ್ರಾಪಂ ಸದಸ್ಯರಾದ ವಿವೇಕಾನಂದ
ಚಳಕಾಪುರೆ, ವಿದ್ಯಾಸಾಗರ ಬನ್ಸೂಡೆ, ಜಗನ್ನಾಥ ಹಳಂಬ್ರೆ, ದಿಲೀಪ ರಂಗರಾವ್ ಜಾಧವ, ದೇವಿದಾಸ ಪವಾರ್, ಗುಲಾಮ ಮಹೇಬುಬಸಾಬ್, ಸಂಜು ವಗ್ಗೆ, ಎಜಾಜ್ ಅಜಿಮೋದಿನ್, ಖಾಯಾಮೋದಿನ್ ದಾವಲಜಿ, ಮೀರಾಬಾಯಿ ರಣಜಿತ್, ಶಕುಂತಲಾ ಗೌಂಡಗಾವೆ, ಕಲ್ಪನಾ ಸಂಜು ಮಾಳದೆ, ಸುರೇಖಾ ನಾಮದೇವ್ ವಾಗಮಾರೆ, ಝರಣಮ್ಮಾ ಶಿವಾಜಿ, ಸುನಿತಾ ವಗ್ಗೆ, ಸೈಜಾದಾಬೇಗಂ ಮಕ್ಕದುಮ್,
ಶಾಲುಬಾಯಿ ಧನಾಜಿ, ನಸಿಮಾಬೇಗಂ ಸಲಾಮೋದಿನ್ ಧರಣಿಯಲ್ಲಿ ಪಾಲ್ಗೊಂಡಿದ್ದರು. ಸಿಪಿಐ ಅಲಿಸಾಬ್, ಪಿಎಸ್‌ಐ ಸುನೀಲಕುಮಾರ ಅವರು ಭದ್ರತೆ ಕಲ್ಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.