ಗ್ರಾ.ಪಂ.ಗೆ ಶಿಫಾರಸು ಪತ್ರದ ಮಾಹಿತಿ ಇಲ್ಲ; ಆಕ್ರೋಶ
Team Udayavani, Jul 4, 2018, 2:15 AM IST
ಬೆಳ್ತಂಗಡಿ: ತೋಟಗಾರಿಕೆ ಇಲಾಖೆಯು ಕೃಷಿಕರಿಗೆ ತರಕಾರಿ ಬೀಜಗಳನ್ನು ವಿತರಿಸುತ್ತಿದ್ದು, ಬೆಳ್ತಂಗಡಿ ತಾಲೂಕಿನಲ್ಲಿ ಇದರ ಫಲಾನುಭವಿಗಳು ತಮ್ಮ ಗ್ರಾ.ಪಂ.ನಿಂದ ಶಿಫಾರಸು ಪತ್ರ ತರಲು ಸೂಚಿಸಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಕಳುಹಿಸಿದ ಅರ್ಜಿ ನಮೂನೆ ಕೆಲವೊಂದು ಗ್ರಾ.ಪಂ.ಗೆ ತಲುಪದೇ ಇರುವುದು ಕೃಷಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೃಷಿಕರನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಕೃಷಿಭಾಗ್ಯ ಯೋಜನೆಯಲ್ಲಿ ಕಳೆದ ಆರ್ಥಿಕ ವರ್ಷದ ಅಂತ್ಯದಲ್ಲಿ ತರಕಾರಿ ಬೀಜಗಳನ್ನು ವಿತರಿಸಿದೆ. ಕೃಷಿಕರು ಇದರ ಫಲಾನುಭವಿಗಳಾಗಬೇಕಾದರೆ ನಿರ್ದಿಷ್ಟ ದಾಖಲೆಗಳನ್ನು ಸಲ್ಲಿಸಿ ಉಚಿತವಾಗಿ ತರಕಾರಿ ಬೀಜಗಳನ್ನು ಪಡೆಯಬಹುದಾಗಿದೆ.
ಜಿಲ್ಲೆಯ ಇತರ 4 ತಾಲೂಕಿಗೆ ನೀಡಲಾದ ತರಕಾರಿ ಬೀಜ ಈಗಾಗಲೇ ಮುಗಿದಿದ್ದು, ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರ ಶೇ. 40ರಷ್ಟು ಬೀಜ ಇನ್ನೂ ಇದೆ. ಇಲಾಖೆಯ ಜಿಲ್ಲಾ ಉಪನಿರ್ದೇಶಕರನ್ನು ಕೇಳಿದರೆ ಕೃಷಿಕರು ದಾಖಲೆಯಾಗಿ ಆಧಾರ್ ಕಾರ್ಡ್, ಆರ್‌ಟಿಸಿ ಮಾತ್ರ ಸಾಕು ಎಂದರೆ, ಬೆಳ್ತಂಗಡಿಯ ಸಹಾಯಕ ನಿರ್ದೇಶಕರು ಗ್ರಾ.ಪಂ.ನ ಶಿಫಾರಸು ಪತ್ರ, ಬ್ಯಾಂಕ್ ಪಾಸ್ ಬುಕ್ ಪ್ರತಿ ಬೇಕು ಎನ್ನುತ್ತಿದ್ದಾರೆ.
ಕಾಲು ಎಕ್ರೆಗೆ 500 ರೂ.
ತೋಟಗಾರಿಕೆ ಇಲಾಖೆಯು ತರಕಾರಿ ಬೀಜಗಳನ್ನು ಉಚಿತವಾಗಿ ವಿತರಿಸುತ್ತಿದೆಯಾದರೂ ಕೃಷಿಕರ ಲಭ್ಯ ಜಮೀನಿನ ಆಧಾರದಲ್ಲಿ ನಿರ್ದಿಷ್ಟ ಮೌಲ್ಯದ ಬೀಜಗಳನ್ನೇ ವಿತರಿಸುತ್ತಿದೆ. ಅಂದರೆ ಕಾಲು ಎಕ್ರೆ ಜಮೀನಿಗೆ 500 ರೂ.ಗಳ ಬೀಜ ವಿತರಿಸಬಹುದಾಗಿದ್ದು, ಎಕ್ರೆಗೆ 2000 ರೂ.ಗಳ ಬೀಜ ವಿತರಿಸಲು ಅವಕಾಶವಿದೆ.
ಬೆಂಡೆಕಾಯಿ, ಹೀರೆಕಾಯಿ, ಸೌತೆ ಹಾಗೂ ಸೋರೆಕಾಯಿ ಹೀಗೆ ನಾಲ್ಕು ವಿಧಗಳ ತರಕಾರಿ ಬೀಜಗಳು ಇಲಾಖೆಯಲ್ಲಿ ಲಭ್ಯವಿವೆ. ಬೀಜಗಳನ್ನು ವಿತರಿಸಿ ಸ್ವಲ್ಪ ಸಮಯಗಳ ಬಳಿಕ ಇಲಾಖೆಯು ಕೃಷಿಕರ ಜಮೀನಿಗೆ ತೆರಳಿ ತರಕಾರಿ ಗಿಡಗಳ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇ-ಮೇಲ್ ಗೊಂದಲ!
ತಾಲೂಕು ತೋಟಗಾರಿಕೆ ಇಲಾಖೆಯಿಂದ ಪ್ರತಿ ಗ್ರಾ.ಪಂ.ಗಳಿಗೆ ಶಿಫಾರಸು ಪತ್ರಕ್ಕಾಗಿ ಅರ್ಜಿ ನಮೂನೆಯನ್ನು ಕಳುಹಿಸಲಾಗಿದೆ. ಆದರೆ ಕೆಲವೊಂದು ಗ್ರಾ.ಪಂ.ಗಳು ಇ-ಮೇಲ್ ವಿಳಾಸ ಬದಲಿಸಿವೆ. ಜತೆಗೆ ಹೊಸದಾಗಿ ಅಸ್ತಿತ್ವಕ್ಕೆ ಬಂದ ಗ್ರಾ. ಪಂ.ಗಳ ಇ-ಮೇಲ್ ವಿಳಾಸ ಸಿಗದೆ ಈ ರೀತಿ ತೊಂದರೆಯಾಗಿದೆ. ಇಲಾಖೆಯಿಂದ ಮಾರ್ಚ್ ಹಾಗೂ ಜೂನ್ ತಿಂಗಳಲ್ಲಿ ಎರಡೆರಡು ಬಾರಿ ಇ-ಮೇಲ್ ಕಳುಹಿಸಲಾಗಿದ್ದರೂ ಕೆಲವೊಂದು ಗ್ರಾ.ಪಂ.ಗೆ ಮಾಹಿತಿ ತಲುಪಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಪ್ರಸ್ತುತ ಕೃಷಿಕರು ತೋಟಗಾರಿಕೆ ಇಲಾಖೆಗೆ ಬಂದು ಶಿಫಾರಸು ಪತ್ರಕ್ಕಾಗಿ ಗ್ರಾ.ಪಂ.ಗೆ ತೆರಳಿದರೆ ನಮಗೆ ಮಾಹಿತಿಯೇ ಇಲ್ಲ ಎಂಬ ಉತ್ತರ ಸಿಗುತ್ತಿದೆ. ಈ ರೀತಿ ಇಲಾಖೆ – ಗ್ರಾ.ಪಂ.ಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಕೃಷಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯ ಟಾರ್ಗೆಟ್
ದ.ಕ. ಜಿಲ್ಲೆಯ ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕಿಗೆ ತಲಾ 6 ಲಕ್ಷ ರೂ., ಮಂಗಳೂರು ತಾಲೂಕಿಗೆ 3 ಲಕ್ಷ ರೂ. ಮೊತ್ತದ ತರಕಾರಿ ಬೀಜ ವಿತರಿಸಿದೆ. ಬೆಳ್ತಂಗಡಿ ತಾಲೂಕಿಗೆ ಮಾತ್ರ ಅತಿ ಹೆಚ್ಚು ಅಂದರೆ 9 ಲಕ್ಷ ರೂ.ಗಳ ತರಕಾರಿ ಬೀಜ ನೀಡಲಾಗಿದೆ. ಪ್ರಸ್ತುತ ಬೆಳ್ತಂಗಡಿ ತಾಲೂಕಿನಲ್ಲಿ ಶೇ. 40ರಷ್ಟು ಬೀಜ ವಿತರಣೆಗೆ ಬಾಕಿಯಿದೆ.
ಇ-ಮೇಲ್ ತೊಂದರೆ
ಪ್ರತಿ ಗ್ರಾ.ಪಂ.ಗೂ ಅರ್ಜಿ ನಮೂನೆಯನ್ನು ಇ-ಮೇಲ್ ಮಾಡಲಾಗಿದ್ದು, ಕೆಲವು ಗ್ರಾ.ಪಂ.ಗಳ ಇ-ಮೇಲ್ ವಿಳಾಸ ಬದಲಾವಣೆ, ಹೊಸ ಗ್ರಾ.ಪಂ.ಗಳ ವಿಳಾಸ ಸಿಗದೆ ಅರ್ಜಿ ನಮೂನೆ ತಲುಪದೇ ಇರ ಬಹುದು. ಅದರ ಕುರಿತು ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತದೆ. ನಿಗದಿತ ದಾಖಲೆಯಿಲ್ಲದೆ ತರಕಾರಿ ಬೀಜ ವಿತರಿಸುವಂತಿಲ್ಲ.
– ಶಿವಪ್ರಕಾಶ್, ಸಹಾಯಕ ನಿರ್ದೇಶಕರು (ಪ್ರಭಾರ) ತೋಟಗಾರಿಕೆ ಇಲಾಖೆ, ಬೆಳ್ತಂಗಡಿ
ಗ್ರಾ.ಪಂ.ನಲ್ಲಿ ಮಾಹಿತಿ ಇಲ್ಲ
ತೋಟಗಾರಿಕೆ ಇಲಾಖೆ ತರಕಾರಿ ಬೀಜಕ್ಕಾಗಿ ರೈತರನ್ನು ಅಲೆದಾಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಫಾರಸು ಪತ್ರಕ್ಕಾಗಿ ಗ್ರಾ.ಪಂ.ಗೆ ತೆರಳಿದರೆ ಮಾಹಿತಿ ಇಲ್ಲ ಎನ್ನುತ್ತಾರೆ. ತೆಕ್ಕಾರು ಗ್ರಾ.ಪಂ.ಗೆ ಇಲಾಖೆಯಿಂದ ಅರ್ಜಿ ನಮೂನೆ ಬಂದಿಲ್ಲ. ಅಧಿಕಾರಿಗಳು ರೈತರನ್ನು ಸತಾಯಿಸುವ ಕೆಲಸ ಮಾಡುತ್ತಾರೆ. ಜತೆಗೆ ಜನ ಪ್ರತಿನಿಧಿಗಳಿಗೂ ಮಾಹಿತಿ ನೀಡುತ್ತಿಲ್ಲ.
– ಮಂಜುನಾಥ್ ಸಾಲ್ಯಾನ್, ಮಾಜಿ ಸದಸ್ಯರು, ತಾ.ಪಂ., ಬೆಳ್ತಂಗಡಿ
— ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.