ಜಿಲ್ಲೆಗೆ ದೊರೆಯಲಿಲ್ಲ ಕುಮಾರ ಕಟಾಕ್ಷ !
Team Udayavani, Jul 6, 2018, 4:37 PM IST
ಹುಬ್ಬಳ್ಳಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ ಆಯವ್ಯಯ ಹುಬ್ಬಳ್ಳಿ-ಧಾರವಾಡಕ್ಕೆ ನಿರಾಸೆ ಮೂಡಿಸಿದೆ. ಮೂಲಸೌಕರ್ಯಗಳಿಗೆ ಒತ್ತು, ಪಾಲಿಕೆಗೆ ಬರಬೇಕಾದ ಬಾಕಿ ಮೊತ್ತದ ಬಗ್ಗೆ ಯಾವುದೇ ಚಕಾರವಿಲ್ಲವಾಗಿದೆ. ರೈತರ ಬೆಳೆ ಸಾಲ ಮನ್ನಾದ ಬಗ್ಗೆ ಆಯವ್ಯಯದಲ್ಲಿ ಘೋಷಣೆ ಸಹಜವಾಗಿಯೇ ಜಿಲ್ಲೆಯ ರೈತ ಸಮುದಾಯದಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ. ಆದರೆ, ಇತರೆ ಅಭಿವೃದ್ಧಿ ಹಾಗೂ ಸೌಲಭ್ಯಗಳ ಬಗ್ಗೆ ಒತ್ತು ನೀಡದಿರುವ ಅಸಮಾಧಾನ ಇದೆ.
ರಾಜ್ಯದ ಎರಡನೇ ದೊಡ್ಡ ಮಹಾನಗರ ಪಾಲಿಕೆಯನ್ನು ಹೊಂದಿರುವ ಧಾರವಾಡ ಜಿಲ್ಲೆಗೆ ವಿವಿಧ ಅಭಿವೃದ್ಧಿ ಯೋಜನೆ ಬೇಡಿಕೆಗಳಿಗೆ ಸ್ಪಂದನೆ ಜತೆಗೆ, ವಿಶೇಷ ಅನುದಾನ ಸೌಲಭ್ಯ ದೊರೆಯುವ ವಿಶ್ವಾಸವಿತ್ತಾದರೂ, ಆಯವ್ಯಯ ಅಂತಹ ಯಾವುದೇ ಸೌಲಭ್ಯ ನೀಡಿಲ್ಲ. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಉತ್ಪನ್ನಗಳ ನಿರ್ವಾತ ದಾಸ್ತಾನು ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿದ್ದು, ಅದಕ್ಕೆ 3 ಕೋಟಿ ರೂ. ಅನುದಾನ ಘೋಷಣೆ ಬಿಟ್ಟರೆ ಬೇರೆ ರೀತಿಯ ಅಭಿವೃದ್ಧಿ ಸೌಲಭ್ಯ ಇಲ್ಲವಾಗಿದೆ. ರಾಜ್ಯದ ಐದು ಮಹಾನಗರ ಪಾಲಿಕೆಯಲ್ಲಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡ ನಿರ್ಮಾಣ ಮಾಡುವುದಾಗಿ ಆಯವ್ಯಯದಲ್ಲಿ ಪ್ರಸ್ತಾಪಿಸಿದ್ದು, ಈ ಯೋಜನೆ ಈಗಾಗಲೇ ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಕಾರ್ಯಗತಕ್ಕೆ ಮುಂದಾಗಿದೆ.
ಕಿಮ್ಸ್‌ಗೆ ದೊರೆಯದ ಪ್ಯಾಕೇಜ್: ಉತ್ತರ ಕರ್ನಾಟಕದ ಪಾಲಿಗೆ ದೊಡ್ಡ ಆಸ್ಪತ್ರೆಯಾಗಿರುವ ಕಿಮ್ಸ್‌ನ ಮೂಲಸೌಕರ್ಯ ಇನ್ನಿತರ ಅಭಿವೃದ್ಧಿಗೆ ವಿಶೇಷ ಅನುದಾನ ನಿರೀಕ್ಷೆ ಹುಸಿಯಾಗಿದೆ. ಅದೇ ರೀತಿ ಉತ್ತರ ಕರ್ನಾಟಕದ ಏಕೈಕ ಸರಕಾರಿ ಮಾನಸಿಕ ಆರೋಗ್ಯ ಆಸ್ಪತ್ರೆ ಡಿಮ್ಹಾನ್ಸ್ ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ಇಲ್ಲವಾಗಿದೆ.
ಹುಬ್ಬಳ್ಳಿಯ ಚನ್ನಮ್ಮ ವೃತ್ತ ಹಾಗೂ ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣ ಬಗ್ಗೆ ಚಕಾರ ಇಲ್ಲವಾಗಿದ್ದು, ಮಹಾನಗರ ಪಾಲಿಕೆಗೆ ಬರಬೇಕಾದ ಸುಮಾರು 129 ಕೋಟಿ ರೂ. ಪಿಂಚಣಿ ಬಾಕಿ ಮೊತ್ತದ ಬಗ್ಗೆ ಏನಾದರೂ ಪ್ರಸ್ತಾಪವಾಗಬಹುದೆಂಬ ನಿರೀಕ್ಷೆಗೂ ಸ್ಪಂದನೆ ಇಲ್ಲವಾಗಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ರಸ್ತೆಗಳ ಸುಧಾರಣೆ ಹಾಗೂ ಪರ್ಯಾಯ ವ್ಯವಸ್ಥೆಗೆ ಯಾವುದೇ ಕ್ರಮ ಇಲ್ಲವಾಗಿದೆ. ಸುಗಮ ಸಂಚಾರ ನಿಟ್ಟಿನಲ್ಲಿ ಪೊಲೀಸರು ವಿವಿಧ ಸೌಲಭ್ಯಗಳ ಜತೆಗೆ, ಹು-ಧಾ ಟ್ರ್ಯಾಕ್ ಮಾರ್ಗದ ಯೋಜನೆ ರೂಪಿಸಿದ್ದು, ಐದು ವರ್ಷದ ಈ ಯೋಜನೆಗೆ ಆಯವ್ಯಯದಲ್ಲಿ ಅನುದಾನ ನೀಡಿಲ್ಲ. ಅದೇ ರೀತಿ ಅವಳಿನಗರ ಬೆಳೆಯುತ್ತಿರುವುದರಿಂದ ಕಾನೂನು-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎರಡು ಹೆಚ್ಚುವರಿ ಪೊಲೀಸ್ ಠಾಣೆಯ ಬೇಡಿಕೆಯೂ ಇತ್ತು.
ಅವಳಿ ನಗರ ವ್ಯಾಪ್ತಿಯ ಬೇಲೂರು, ಗಾಮನಗಟ್ಟಿ, ಗೋಕುಲ, ತಾರಿಹಾಳ, ಲಕಮನಹಳ್ಳಿ ಇನ್ನಿತರ ಕೈಗಾರಿಕಾ ವಲಯಗಳು ವಿವಿಧ ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿದ್ದು, ಉದ್ಯಮಾಕರ್ಷಣೆಗೆ ತೊಡಕಾಗುತ್ತಿದೆ. ಕೈಗಾರಿಕಾ ವಲಯಗಳ ಮೂಲಸೌಕರ್ಯಕ್ಕೆ ಒತ್ತು ನೀಡಬೇಕು, ಹೆಚ್ಚಿನ ಅನುದಾನ ನೀಡಿ ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆಗೆ ಆಯವ್ಯಯದಲ್ಲಿ ಯಾವುದೇ ಕ್ರಮ ಇಲ್ಲ.
ಜಿಲ್ಲೆಯಲ್ಲಿ ಅನೇಕ ಗ್ರಾಮಗಳಿಗೆ ಚಳಿಗಾಲದಲ್ಲೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಸ್ಥಿತಿ ಇದೆ. ಬೇಸಿಗೆ ಬಂದರೆ ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗುತ್ತದೆ. ಜಿಲ್ಲೆಯಲ್ಲಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನೇಕ ಕಡೆ ತ್ರಿಶಂಕು ಸ್ಥಿತಿಯಲ್ಲಿದ್ದು, ಇನ್ನೂ ಕೆಲವು ಕಡೆ ಯೋಜನೆಯ ನಿರೀಕ್ಷೆಗೆ ಸ್ಪಂದನೆ ಇಲ್ಲವಾಗಿದೆ. ಯೋಜನೆ ಅನುಷ್ಠಾನಕ್ಕೆ ಪ್ರೋತ್ಸಾಹ ನಿಟ್ಟಿನಲ್ಲಿ ಆಯವ್ಯಯದಲ್ಲಿ ಕ್ರಮ ಇಲ್ಲವಾಗಿದೆ.
ವಾಯವ್ಯ ಸಾರಿಗೆ ಸಂಸ್ಥೆ ವಿವಿಧ ಕಾರಣಗಳಿಂದ ಆರ್ಥಿಕ ಸಮಸ್ಯೆಗೆ ಸಿಲುಕಿ ನಲುಗುತ್ತಿದ್ದು, ಇದರ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್ ಬೇಡಿಕೆ ಇದೆಯಾದರೂ, ಆಯವ್ಯಯದಲ್ಲಿ ಪ್ಯಾಕೇಜ್‌ನ ಪ್ರಸ್ತಾಪ ಇಲ್ಲವಾಗಿದೆ. ಅದೇ ರೀತಿ ಸಂಸ್ಥೆ ನಷ್ಟದಿಂದ ಹೊರಬರುವ ನಿಟ್ಟಿನಲ್ಲಿ ಮೋಟಾರು ವಾಹನ ತೆರಿಗೆಯಿಂದ ವಿನಾಯ್ತಿ ನೀಡಬೇಕೆಂಬ ಬೇಡಿಕೆಗೂ ಮನ್ನಣೆ ಸಿಕ್ಕಿಲ್ಲ.
ಹುಬ್ಬಳ್ಳಿ ಹೊರವಲಯದ ಅಂಚಟಗೇರಿ ಬಳಿ ಉದ್ದೇಶಿತ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಜಾಗ ಗುರುತಿಸಿ ಆರೇಳು ವರ್ಷವಾಗಿದ್ದರೂ ಅನುದಾನ ಕೊರತೆಯಿಂದ ನಿರ್ಮಾಣ ಕಾರ್ಯ ಸಾಧ್ಯವಾಗಿಲ್ಲ. ಈ ಆಯವ್ಯಯದಲ್ಲಾದರೂ ಅನುದಾನ ದೊರೆಯಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಒಟ್ಟಾರೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿರುವ ಆಯವ್ಯಯ ಧಾರವಾಡ ಜಿಲ್ಲೆಗೆ ನಿರಾಶಾದಾಯಕವಾಗಿದೆ ಎಂಬುದು ಅನೇಕರ ಅನಿಸಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.