ಸರ್ವಂ ಹಲಸು ಮಯಂ
Team Udayavani, Jul 8, 2018, 6:00 AM IST
ಮಳೆಗಾಲ ಪ್ರಾರಂಭವಾಗುವುದಕ್ಕೆ ಕೆಲವು ದಿನ ಮೊದಲು ಅಮ್ಮ ನನಗೆಂದು ಹಲಸಿನ ಹಣ್ಣು, ಮಾವಿನಹಣ್ಣುಗಳನ್ನು ಕಳುಹಿಸಿಕೊಟ್ಟಿದ್ದರು. “”ಅಜ್ಜಿಗೆ ಫೋನ್ ಮಾಡು, ಥ್ಯಾಂಕ್ಸ್ ಹೇಳ್ತೇವೆ” ಮಕ್ಕಳು ಹಟ ಹಿಡಿದು ಆಗಲೇ ಫೋನ್ ಮಾಡಿಸಿದರು. “”ಅಜ್ಜೀ, ಹಲಸಿನಹಣ್ಣು ಕೊಟ್ಟದ್ದಕ್ಕೆ ಥ್ಯಾಂಕ್ಸ್…” ಮೂವರೂ ಒಕ್ಕೊರಳಲ್ಲಿ ಹೇಳಿದರು. ಹಣ್ಣು ಕತ್ತರಿಸದೇ ನನ್ನನ್ನು ನಿಲ್ಲಲು, ಕೂರಲು ಬಿಡದ ಕಾರಣ ಅದನ್ನು ಕತ್ತರಿಸಿ ಸೊಳೆ ಬಿಡಿಸತೊಡಗಿದೆ. ನಾನು ಸೊಳೆ ತೆಗೆದು ಹಾಕುತ್ತಿದ್ದಂತೆಯೇ ಅದು ಖಾಲಿಯಾಗುತ್ತಿತ್ತು. ಸ್ವಲ್ಪ ಹೊತ್ತಿನ ಬಳಿಕ ಹೊಟ್ಟೆ ತುಂಬಿರಬೇಕು. “”ಅಮ್ಮಾ, ಚಕ್ಕ ಕೇಕ್ ಮಾಡಿಕೊಡು…” ಎಂಬ ಹೊಸರಾಗ ಶುರು ಮಾಡಿದರು. ಮಲಯಾಳದಲ್ಲಿ ಚಕ್ಕ ಅಂದರೆ ಹಲಸಿನ ಹಣ್ಣು. ಹಲಸಿನ ಹಣ್ಣಿನ ಗಟ್ಟಿ ಅಥವಾ ಕೊಟ್ಟಿಗೆ ಎಂದು ಹೇಳುವ ತಿನಿಸಿಗೆ ಅವರು “ಚಕ್ಕ ಕೇಕ್’ ಎಂಬ ಹೆಸರಿಟ್ಟಿದ್ದರು. ಎಲೆಯೊಳಗೆ ಹಲಸಿನಹಣ್ಣು ಮಿಶ್ರಿತ ಹಿಟ್ಟನ್ನು ಹಾಕಿ ಮಡಚಿ ಬೇಯಿಸುವ ಬದಲು ಸುಲಭಕ್ಕೆಂದು ನಾನು ಪ್ಲೇಟಲ್ಲಿ ಹಿಟ್ಟನ್ನು ಹೊಯ್ದು ಬೇಯಿಸುತ್ತಿದ್ದೆ. ನಂತರ ಕೇಕಿನಂತೆ ತುಂಡುಮಾಡಿ ಕೊಡುತ್ತಿದ್ದೆ. ಈಗಲೂ ಅದನ್ನೇ ಮಾಡಿಕೊಟ್ಟೆ. ಖುಷಿಯಿಂದ ತಿಂದರು. ಮರುದಿನ ಹಲಸಿನ ಬೀಜಗಳನ್ನು ಸಿಪ್ಪೆ ತೆಗೆದು ಕರಿಮೆಣಸು, ಬೆಳ್ಳುಳ್ಳಿ ಹಾಕಿ ಮಲಯಾಳಿಗಳು ಮಾಡುವ ಪಲ್ಯ ಮಾಡಿಕೊಟ್ಟೆ. ಅದು ಕೂಡ ಮಕ್ಕಳಿಗೆ ಇಷ್ಟವಾಯಿತು. ಸಂಜೆ ಅಮ್ಮ ಕಟ್ಟಿಕೊಟ್ಟಿದ್ದ ಹಲಸಿನ ಚಿಪ್ಸನ್ನು ಚಹಾದೊಂದಿಗೆ ಕೊಟ್ಟೆ.ಅದನ್ನೂ ತಿಂದಾಗ ಮಕ್ಕಳು ಹಲಸಿನ ಸೀಸನನ್ನು ಪೂರ್ತಿ ಎಂಜಾಯ್ ಮಾಡಿದಂತಾಯ್ತು. ಹಲಸಿನ ವಿಶ್ವರೂಪವನ್ನು ನೋಡಿ, ಸವಿದು ಮಕ್ಕಳು ಖುಷಿಪಟ್ಟಾಗ ನನ್ನ ಮನಸ್ಸು ನನ್ನ ಬಾಲ್ಯದ ಹಲಸಿನ ಸೀಸನ್‌ಗೆ ಲಗ್ಗೆಯಿಟ್ಟಿತು.
ಹಣ್ಣಾಗುವ ಕಾಲದಲ್ಲಷ್ಟೇ ಅಲ್ಲ, ಸಾರ್ವಕಾಲಿಕವಾಗಿ ಹಲಸಿನೊಂದಿಗೆ ನಮ್ಮ ಸಂಬಂಧವಿತ್ತು. ಒಂದು ಪುಟ್ಟ ಮಡಕೆಯಲ್ಲಿ ಮೊಸರಿಟ್ಟುಕೊಂಡು ಕಡೆಗೋಲಿನಿಂದ ಕಡೆಯಲು ಪ್ರಾರಂಭಿಸುವಾಗ ಅಮ್ಮ ನನ್ನನ್ನು ಒಂದು ಚಂದದ, ಹಣ್ಣಾದ ಹಲಸಿನ ಎಲೆ ತೆಗೆದುಕೊಂಡು ಬರಲು ಹೇಳುತ್ತಿದ್ದರು. ಅತ್ಯಂತ ಚಂದದ ಎಲೆ ಹುಡುಕಿ ತಂದು ಕೊಟ್ಟಾಗ ಅಮ್ಮ ಮೊಸರಿನ ಮಡಕೆಯಲ್ಲಿ ತೇಲುವ ಬೆಣ್ಣೆಯನ್ನು ಅದರಿಂದ ತೆಗೆದು ಇನ್ನೊಂದು ಪಾತ್ರೆಗೆ ಹಾಕುತ್ತಿದ್ದರು. ಎಲೆಗಂಟಿದ ಬೆಣ್ಣೆಯ ಜೊತೆ ಅಮ್ಮ ನೀಡುವ ಬೋನಸ್ ಬೆಣ್ಣೆಯನ್ನೂ ಆ ಎಲೆಯಲ್ಲೇ ಪಡೆದು, ಒಂದು ಗ್ಲಾಸ್ ಮಜ್ಜಿಗೆಯನ್ನೂ ತೆಗೆದುಕೊಂಡು ಈ ಎಲೆಯಿಂದ ಮಜ್ಜಿಗೆ ತೆಗೆದು ಕುಡಿಯುವ ಸಾಹಸ ಮಾಡುತ್ತಿದ್ದೆ. ನನ್ನ ಅಜ್ಜಿಯೆಲ್ಲ ಹಿಂದಿನಕಾಲದಲ್ಲಿ ಗಂಜಿ ಕುಡಿಯುವಾಗ ಸ್ಪೂನಿನ ಬದಲು ಹಲಸಿನ ಎಲೆಯನ್ನು ಬಳಸುತ್ತಿದ್ದರಂತೆ. ಆಡುಗಳನ್ನು ಸಾಕುವವರಿಗೆ ಹಲಸಿನ ಎಲೆ ಕಂಡರೆ ಸಾಕು, ಒಂದೆರಡು ಸಣ್ಣ ಗೆಲ್ಲುಗಳನ್ನು ಮುರಿದು ಕೊಂಡುಹೋಗುತ್ತಾರೆ. ಆಡುಗಳಿಗೆ ಅದು ಅತ್ಯಂತ ಪ್ರಿಯ ಆಹಾರ.
ಹಲಸಿನ ಮರದಲ್ಲಿ ಸಣ್ಣ ಕಾಯಿಗಳು ಮೂಡುವಾಗಲೇ ನಾವು, “ಗುಜ್ಜೆ ಪಲ್ಯ ಮಾಡಲು ಹಲಸಿನಕಾಯಿ ಎಷ್ಟು ದೊಡ್ಡದಾಗಬೇಕು?’ ಎಂದು ಆಗಾಗ ಕೇಳುತ್ತಿ¨ªೆವು. ಗುಜ್ಜೆ ಎಂದರೆ ಹಲಸಿನಕಾಯಿ. ಗುಜ್ಜೆ ಪಲ್ಯ ಮಾಡಿಕೊಟ್ಟಾಗ ಸ್ವಲ್ಪ ಹೆಚ್ಚೇ ಊಟಮಾಡುತ್ತಿದ್ದೆವು. ಪಲ್ಯದ ಹಂತಕ್ಕಿಂತ ಸ್ವಲ್ಪ ಹೆಚ್ಚು ಬೆಳೆದ, ಆದರೆ ತೀರಾ ಹೆಚ್ಚಾಗಿ ಬಲಿಯದ ಹಲಸಿನಕಾಯಿಯನ್ನು ಕೊಯ್ದು ತಂದು ಕತ್ತರಿಸಿ ಅದರ ಸೊಳೆ ಬಿಡಿಸಿ, ಬೀಜ ಬೇರ್ಪಡಿಸಿ,ಸೊಳೆಯನ್ನು ಸಪೂರಕ್ಕೆ ಹೆಚ್ಚಿ ಚಿಪ್ಸ್ ಮಾಡಲು ಅಮ್ಮ ಅಣಿಯಾಗುತ್ತಿದ್ದರು. ನಮ್ಮ ದಂಡು ಸಹಾಯಕ್ಕೆಂದು ಜೊತೆಗಿರುತ್ತಿತ್ತು. ಆಗ ತಾನೇ ಕರಿದ, ರುಚಿಯಾದ ಬಿಸಿಬಿಸಿ ಚಿಪ್ಸನ್ನು ಒಲೆಯ ಮುಂದೆ ಕುಳಿತು ತಿನ್ನುತ್ತಿದ್ದೆವು. ನಮ್ಮ ಮನೆಯಲ್ಲಿ ಊರಕೋಳಿಯನ್ನು ಸಾಕುತ್ತಿದ್ದೆವು. ಅಪ್ಪ ಅಮ್ಮನಲ್ಲಿ, “ಇವತ್ತು ಕೋಳಿ ಪದಾರ್ಥ ಮಾಡುವಾ. ಹಲಸಿನಕಾಯಿ ಬೇಯಿಸು’ ಎನ್ನುತ್ತಿದ್ದರು. ಮಲಯಾಳಿಗಳು ಹಲಸಿನ ಸೊಳೆಯನ್ನು ಸಣ್ಣಗೆ ಹೆಚ್ಚಿ ಹಬೆಯಲ್ಲಿ ಬೇಯಿಸಿ, ಹಸಿಮಸಾಲೆ ಅರೆದು ಸೇರಿಸಿ ಅದಕ್ಕೆಂದೇ ಇರುವ ಕೋಲಿನಿಂದ ಮಿಶ್ರಮಾಡಿ ಒಂದು ತಿನಿಸನ್ನು ತಯಾರಿಸುತ್ತಾರೆ.
ಇದಕ್ಕೆ ಕೋಳಿಸಾರು ಅಥವಾ ಹಸಿ ಮೀನಿನ ಸಾರು ಇದ್ದರೆ ಬಹಳ ರುಚಿಯಾಗಿರುತ್ತದೆ. ಗ್ಯಾಸ್ ಒಲೆಯಿಲ್ಲದ ಆ ಕಾಲದಲ್ಲಿ ಕಟ್ಟಿಗೆ ಒಲೆಯಲ್ಲಿ ಇವನ್ನೆಲ್ಲ ತಯಾರಿಸುವಾಗ ಅಮ್ಮನಿಗೆ ಖಂಡಿತ ಸುಸ್ತಾಗಿದ್ದಿರಬಹುದು. ಆದರೆ, ನಮಗೆ ಅದ್ಯಾವುದರ ಪರಿವೆಯೇ ಆಗ ಇರಲಿಲ್ಲ. ತಿನ್ನಲಿಕ್ಕಾಗಿ ನಾವು ರೆಡಿಯಿರುತ್ತಿದ್ದೆವು. ಸಣ್ಣಪುಟ್ಟ ಸಹಾಯಗಳನ್ನೆಲ್ಲ ನಾವು ಖುಷಿಯಿಂದ ಮಾಡುತ್ತಿದ್ದೆವು.
ಹಲಸಿನ ಸೀಸನ್ನಿನಲ್ಲಿ ಉಳಿದ ಮಲಯಾಳಿಗಳ ಮನೆಗಳಂತೆ ನಮ್ಮಲ್ಲೂ ಎಲ್ಲವೂ ಹಲಸುಮಯ. ಹಲಸಿನ ಬೀಜದ ಪಲ್ಯ, ಹಲಸಿನ ಬೀಜ ಹಾಗೂ ನುಗ್ಗೆ ಸೊಪ್ಪು ಸೇರಿದ ಪಲ್ಯ, ಹಲಸಿನ ಸೊಳೆ ಹಾಗೂ ಅಲಸಂಡೆ ಬೀಜ ಹಾಕಿದ ಸಾಂಬಾರು, ಹಲಸಿನ ಬೀಜ, ಮಾವಿನಕಾಯಿ ಇತ್ಯಾದಿ ಹಾಕಿದ ಸಾಂಬಾರು, ಯಾವುದೇ ತರಕಾರಿ ಸಾಂಬಾರಿಗೆ ನಾಲ್ಕೈದು ಹಲಸಿನ ಬೀಜಗಳ ಸೇರ್ಪಡೆ, ಒಣ ಮರಗೆಣಸು ಬೇಯಿಸಿದ್ದರ ಜೊತೆ ಹಲಸಿನ ಬೀಜ, ಅಂತೂ ಹಲಸಿಲ್ಲದ ದಿನವೇ ಅಪರೂಪ ಅನಿಸಿಬಿಡುತ್ತಿತ್ತು. ಹಲಸಿನಕಾಯಿ ಹಣ್ಣಾಗಲು ಪ್ರಾರಂಭವಾಗುವ ದಿನಗಳಲ್ಲಿ ಇನ್ನೂ ಅರೆ ಹಣ್ಣಾಗಿರುವುದನ್ನೇ ಅತ್ಯಾಸೆಯಿಂದ ಹೆಚಿÌ ತಿನ್ನಲು ಪ್ರಾರಂಭಿಸುತ್ತಿದ್ದೆವು. ಆಗ ಅದರ ಹುಳಿಮಿಶ್ರಿತ ಸಿಹಿ ರುಚಿಗೆ ಮಾರುಹೋಗಿ ಹಣ್ಣಾಗುವ ಮೊದಲೇ ಅದು ಖಾಲಿಯಾಗುತ್ತಿತ್ತು. ಹಲಸಿನ ಕಾಯಿಯಿಂದ ಹಪ್ಪಳ ತಯಾರಿಸಿ ಬಿಸಿಲಿನಲ್ಲಿ ಒಣಗಿಸಿ ಮಳೆಗಾಲಕ್ಕೆಂದು ಭದ್ರವಾಗಿ ಕಟ್ಟಿ ಇಡುತ್ತಿದ್ದೆವು. ಹಲಸಿನ ಹಣ್ಣಿನ ಬೀಜಗಳನ್ನೆಲ್ಲ ತಂಪಾದ ಕಡೆ ಸಂಗ್ರಹಿಸಿಡುತ್ತಿದ್ದೆವು. ಮಳೆಗಾಲದಲ್ಲಿ ಶಾಲೆಯಿಂದ ಹೊರಟು ಪೂರ್ತಿ ಒದ್ದೆಯಾಗಿ ಚಳಿಯಿಂದ ನಡುಗುತ್ತ ಮನೆ ತಲುಪಿದ ನಾವು ಒಲೆಯ ಮುಂದೆ ಚಳಿಕಾಯಿಸಲು ಕುಳಿತಾಗ ಕೆಲವು ಹಲಸಿನ ಬೀಜಗಳನ್ನು ಸುಟ್ಟು ತಿನ್ನುತ್ತಿದ್ದೆವು. ಒಮ್ಮೊಮ್ಮೆ ಅಮ್ಮ ದೊಡ್ಡ ಪಾತ್ರೆಯಲ್ಲಿ ತುಂಬಾ ಹಲಸಿನ ಬೀಜ ಹಾಕಿ ಹುರಿದುಕೊಡುತ್ತಿದ್ದರು. ಅದನ್ನು ತಿನ್ನುತ್ತಾ ಜಗಲಿಯಲ್ಲಿ ಕುಳಿತು ಮಳೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದೆವು. ನಮ್ಮ ಮನೆಗೆ ಬರುತ್ತಿದ್ದ ಕೆಲಸದ ಹೆಂಗಸು ಅಮ್ಮನಿಗೆ ಹಲಸಿನ ಕಾಯಿಯಿಂದ ಉಪ್ಪಿನ ಸೊಳೆ ಹಾಕಿಡುವುದನ್ನು ಹಾಗೂ ಸಾಂತಣಿ (ಹಲಸಿನ ಬೀಜ ಬೇಯಿಸಿ ಒಣಗಿಸುವುದು) ಮಾಡುವುದನ್ನು ಹೇಳಿಕೊಟ್ಟರು. ಹಾಗಾಗಿ ನಮ್ಮ ಹಲಸಿನ ಭಕ್ಷ್ಯ ವೈವಿಧ್ಯಕ್ಕೆ ಹೊಸ ಸೇರ್ಪಡೆಗಳಾದವು.
ನಮ್ಮ ಜಮೀನಿನಲ್ಲಿ ಹಲವು ಹಲಸಿನ ಮರಗಳಿದ್ದುದರಿಂದ ಅಪ್ಪ ಹಲಸಿನ ಕಾಯಿಗಳನ್ನು ವ್ಯಾಪಾರಿಗಳಿಗೆ ಮಾರುತ್ತಿದ್ದರು. ಅವರು ಬಂದಾಗ ನಮ್ಮ ಇಷ್ಟದ ಕೆಲವು ಮರಗಳ ಹಣ್ಣುಗಳನ್ನು ಕೀಳದಂತೆ ನಾವು ಅವರ ಹಿಂದೆಯೇ ಇರುತ್ತಿ¨ªೆವು. ಹಲಸಿನ ಸೀಸನ್ನಿನಲ್ಲಿ ಹಲಸಿನ ಫಲಾನುಭವಿಗಳು ನಾವು ಮಾತ್ರ ಆಗಿರಲಿಲ್ಲ. ನಮ್ಮ ಮನೆಯ ದನಗಳಿಗೂ ಆಡುಗಳಿಗೂ ಹಲಸಿನ ಕಾಯಿ ಇಷ್ಟವಿತ್ತು. ನಾವು ಸೊಳೆ ತೆಗೆದ ಮೇಲೆ ಉಳಿದ ಸಿಪ್ಪೆಯ ಭಾಗವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನೀಡಿದರೆ ದನ ಖುಷಿಯಿಂದ ತಿನ್ನುತ್ತಿತ್ತು. ದನದ ಹಾಲು ಕರೆಯಲು ಹೋಗುವಾಗ ಒಂದು ಹಲಸಿನಕಾಯಿ ಕತ್ತರಿಸಿ ಮುಂದಿಟ್ಟರೆ ಹಾಲು ಕರೆಯುವುದು ಸುಲಭವಾಗುತ್ತಿತ್ತು. ಹಲಸಿನ ಬೀಜವನ್ನು ಆವರಿಸಿರುವ ಮೃದು ಸಿಪ್ಪೆ ಆಡುಗಳು ಹಾಗೂ ಕೋಳಿಗಳಿಗೆ ಪ್ರಿಯವೆನಿಸಿತ್ತು. ಹಳ್ಳಿಯಲ್ಲಿ ಮಾವು ಹಲಸುಗಳ ಮಧ್ಯೆ ಬೆಳೆದ ನಾನು ಪಟ್ಟಣ ಸೇರಿದೆ. ಈಗ ಹಲಸಿನಕಾಲ ಬಂದರೂ ಹಣ್ಣೆಂಬುದು ನನ್ನ ಪಾಲಿಗೆ ಮರೀಚಿಕೆಯಾಗಿದೆ. ಆದರೆ, ಹಲಸು ತಿನ್ನುವ ಚಪಲವೆಲ್ಲಿ ಕಡಿಮೆಯಾದೀತು? ತವರು ಮನೆಯಿಂದ ಹಲಸನ್ನು ತಂದು ಸ್ವಾಹಾ ಮಾಡುತ್ತೇನೆ. ಅಲ್ಲಲ್ಲಿ ಹಲಸಿನ ಮೇಳ ನಡೆಯುವ ಸುದ್ದಿ ಕೇಳುವಾಗ ಒಮ್ಮೆ ಅಲ್ಲಿಗೆ ಭೇಟಿಕೊಡುವ ಮನಸ್ಸಾಗುತ್ತದೆ. ಆದರೆ, ಅಲ್ಲಿಗೆ ಹೋಗಲು ಕೆಲಸದೊತ್ತಡದ ಅಡಚಣೆ. ಅಂತೂ ಹಲಸಿನ ಹಣ್ಣಿನ ಕನವರಿಕೆಯಲ್ಲಿ ಮತ್ತೂಂದು ಹಲಸಿನ ಸೀಸನ್ ಕಳೆದುಹೋಗುತ್ತಿದೆ. ಮುಂದಿನ ಬಾರಿ ಅಮ್ಮನ ಮನೆಗೆ ಹೋಗುವಾಗ ಅಮ್ಮ ಹಲಸಿನ ಹಪ್ಪಳ ಕಟ್ಟಿಕೊಡುತ್ತಾರಲ್ಲ ಎಂಬ ನೆಮ್ಮದಿಯಲ್ಲಿ ನಾನು ಮತ್ತು ಮಕ್ಕಳು ಕಾಯುತ್ತಿದ್ದೇವೆ. ಅಂದಹಾಗೆ ಹಲಸಿನ ಸೀಸನ್ನಿಗೆ ವಿದಾಯ ಹೇಳಲು ಇನ್ನೂ ನಾವು ಮಾನಸಿಕವಾಗಿ ಸಿದ್ಧರಾಗಿಲ್ಲ.
ಜೆಸ್ಸಿ ಪಿ. ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bajpe: ಹೆಜ್ಜೇನು ಕಡಿತದಿಂದ ದಿನಪತ್ರಿಕೆ ವಿತರಕ ಸಾವು
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Adani ವಿದ್ಯುತ್ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್ ರೆಡ್ಡಿ
Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ
IFFI 2024; ಟಾಕ್ಸಿಕ್ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್ ಮಸ್ಸೆಗೆ ವಾರ್ಷಿಕ ಪುರಸ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.