ಆಷಾಢಸ್ಯ ಪ್ರಥಮ ದಿವಸೇ…
Team Udayavani, Jul 8, 2018, 6:00 AM IST
ಆಗಸದಲ್ಲಿ ಮೋಡಗಳು ಆವರಿಸಿದಾಗಲೆಲ್ಲ ಮೇಘದೂತ ಕಾವ್ಯ ನೆನಪಾಗುತ್ತದೆ, ಕವಿ ಕಾಳಿದಾಸ ನೆನಪಾಗುತ್ತಾನೆ. ಯಕ್ಷನೊಬ್ಬ ತನ್ನ ಪ್ರಿಯೆಗೆ ಮುಗಿಲಿನ ಮೂಲಕ ಸಂದೇಶವನ್ನು ಕಳುಹಿಸುವುದರ ಮೂಲಕ ವಿರಹವೇದನೆಯನ್ನು ಮರೆಯಲು ಪ್ರಯತ್ನಿಸಿದ ಕಥಾವಸ್ತು ಯಾರನ್ನೂ ಪುಳಕಗೊಳಿಸುವಂತಿದೆ !
ಅವನೊಬ್ಬ ಯಕ್ಷ. ಧನಪತಿ ಕುಬೇರನ ಸೇವಕ. ಆತನಿಗೊಬ್ಬಳು ಹೃದಯದ ರಾಣಿ. ಒಬ್ಬರನ್ನೊಬ್ಬರು ಎಂದೂ ಬಿಟ್ಟಗಲದ ಪ್ರೀತಿ. ಯಕ್ಷಲೋಕದ ಸ್ವೆ„ರ ಪ್ರೀತಿ-ಪ್ರೇಮ-ಕಾಮಕ್ಕಿಂತ ತೀರಾ ಭಿನ್ನ ಈ ಜೋಡಿ. ಇವರದ್ದು ಶುದ್ಧ- ಶಾಶ್ವತ ಪ್ರೀತಿ. ಕುಬೇರನ ಮನೆಗೆ ಪೂಜೆಗಾಗಿ ಪ್ರತಿದಿನ ಹೊಚ್ಚ ಹೊಸ ಹೂವುಗಳನ್ನು ತಂದುಕೊಡುವ ಕಾಯಕ ಯಕ್ಷನದು. ಮನದನ್ನೆಯ ಪ್ರೀತಿಯ ಸೆಳೆತದಲ್ಲಿ ಅಂದು ಕರ್ತವ್ಯ ಮರೆತ. ಅದು ಅಲಕ್ಷಿಸಬಹುದಾದ ಅಥವಾ ಎಚ್ಚರಿಕೆ ಕೊಟ್ಟು ಕ್ಷಮಿಸಬಹುದಾದ ಪ್ರಮಾದ. ಆದರೆ, ಪ್ರಭುಚಿತ್ತ ಎತ್ತ ಹೊರಳುವುದೋ ಅತ್ತ ಶಿಕ್ಷೆ ತಾನೆ? ಸಾಮಾನ್ಯವಾಗಿ ಶಾಪಕ್ಕೆ ಮರುಚಿಂತನೆಯಿಲ್ಲ. ಶಾಪಗ್ರಸ್ತರಿಗೆ ಚಿಂತೆಯಿಂದ ಮುಕ್ತಿ ಇಲ್ಲ.
ಬಾಯಿಂದ ಶಬ್ದ ಹೊರಬಂತೆಂದರೆ ಮುಗಿಯಿತು. ಶಬ್ದಕ್ಕೆ ಅಷ್ಟು ಶಕ್ತಿ. ವಕ್ತವಿನಲ್ಲಿ ಆ ಶಕ್ತಿ ಇರಬೇಕಷ್ಟೆ. ಏನು ಶಿಕ್ಷೆ? ದಿವಿಯಲ್ಲಿದ್ದವರನ್ನು ಬುವಿಗೆ ಎಸೆಯುವುದು. ಕಷ್ಟವೆಂದರೆ ಏನು ಎಂಬುದೇ ಗೊತ್ತಿಲ್ಲದವರಿಗೆ ಕಷ್ಟ ಪಡುವಂತೆ ಮಾಡುವುದು. ಮಾನಸಿಕವಾಗಿ ಪೀಡಿಸುವುದು. ಇಷ್ಟವಸ್ತುವನ್ನು ಪರಸ್ಪರ ಬೇರ್ಪಡಿಸುವುದು. ಒಟ್ಟಿನಲ್ಲಿ ನೆಮ್ಮದಿ-ಸುಖ ಕಸಿಯುವುದು. ಹೀಗೆ ಶಾಪಕ್ಕೆ ನಾನಾಮುಖ. ಯಕ್ಷನ ಪಾಡೂ ಹಾಗೆಯೇ ಆಯಿತು. ನೀನು ಯಾವ ಕಾರಣಕ್ಕಾಗಿ ಪ್ರಮಾದ ಎಸಗಿದೆಯೋ ಅದೇ ಕಾರಣಕ್ಕೆ ಒಂದು ವರ್ಷ ಪ್ರಿಯತಮೆಯ ಸನಿಹದಿಂದ ದೂರವಾಗಬೇಕು. ಕುಬೇರ ಯಕ್ಷನ ಮಹಿಮೆ ಕಸಿದ. ಶಾಪೇನಾಸ್ತಂಗಮಿತ ಮಹಿಮಾ! ಯಕ್ಷ ಕುಸಿದ. ಮತ್ತೆ ಮತ್ತೆ ಬೇಡಿದ. ಸ್ವಾಮಿಯ ಮನ ಕರಗಲಿಲ್ಲ. ಎರಡು ಜೀವ-ಒಂದು ಹೃದಯ ಎಂಬಂತಿದ್ದ ಯಕ್ಷ-ಯಕ್ಷಿಯರ ಹೃದಯವನ್ನು ಕತ್ತರಿಸಿ ಬೇರ್ಪಡಿಸಿದ. ವರ್ಷಾಂತ್ಯಕ್ಕೆ ಶಾಪಾಂತ್ಯ.
ಯಕ್ಷ ಆ ಲೋಕ ಬಿಟ್ಟು ಈ ಲೋಕಕ್ಕೆ ಬಂದ.
ನಮ್ಮ ಸಂವೇದನಶೀಲ ಕವಿ ಕಾಳಿದಾಸನ ಕಾವ್ಯಲಹರಿಗೆ ಒಂದು ಘಟನೆ ಬೇಕಿತ್ತು. ಭಾವಗಂಗೆ ಹರಿಯಲು ಒಂದು ಸಣ್ಣ ಎಡೆ ಬೇಕಿತ್ತು. ಭಾವದೆಳೆ ಮೀಟಿ ಅದರಿಂದ ಕಾವ್ಯಕುಸುಮ ಅರಳಲು ನೆಪ ಬೇಕಿತ್ತು. ವಾಲ್ಮೀಕಿಯ ಶೋಕ ಶ್ಲೋಕವಾಗಲಿಲ್ಲವೆ, ಅಂತೆ. ಯಕ್ಷನ ಹೃದಯ ಕಾಳಿದಾಸನಿಗೆ ವರ್ಗವಾಯಿತು.
ಕಶ್ಚಿತ್ ಕಾಂತಾವಿರಹಗುರುಣಾ… ಶುರುವಾಯಿತು ಕಾವ್ಯ… ಅಚ್ಚರಿಯೆಂದರೆ ಘಟನೆಯನ್ನು ಕವಿ ಹೇಳುವುದು ಬೆರಳೆಣಿಕೆಯ ಶಬ್ದಗಳಲ್ಲಿ. ಒಬ್ಬ ಯಕ್ಷ ಇದ್ದ. ಆತ ಕರ್ತವ್ಯಚ್ಯುತನಾದ. ಹಾಗಾಗಿ ಪ್ರಭುವಿನಿಂದ ಶಪಿತನಾದ. ಕಾಂತೆಯಿಂದ ಒಂದು ವರ್ಷ ದೂರ ಇರಬೇಕಾಗಿ ಬಂತು. ರಾಮಗಿರಿಯಲ್ಲಿ ಆಶ್ರಮ ಕಟ್ಟಿಕೊಂಡು ವಾಸ ಪ್ರಾರಂಭಿಸಿದ…ಹೀಗೆ.
ಯಕ್ಷ ಯಾರು, ಅವನ ಕೆಲಸ ಏನಾಗಿತ್ತು? ಏನು ತಪ್ಪು ಮಾಡಿದ? ಯಾವ ವಿವರಗಳನ್ನೂ ಕವಿಕೊಡುವುದಿಲ್ಲ. ವ್ಯಾಖ್ಯಾನಕಾರರು ಕಲ್ಪನೆಯಲ್ಲಿ ವಿವಿಧವಾಗಿ ವಿಸ್ತರಿಸಿಕೊಂಡಿ¨ªಾರೆ. ಆ ಮಾತು ಬೇರೆ.
ಎಲ್ಲ ರಸಗಳೂ ರುಚಿಯೇ; ಆದರೆ ಶೃಂಗಾರಕ್ಕೆ ಮನಸ್ಸನ್ನು ಮುದಗೊಳಿಸುವ, ಅನಿರ್ವಚನೀಯ ಸುಖನೀಡುವ ವಿಶೇಷಗುಣವಿದೆ. ಶೃಂಗಾರಃ- ಶುಚಿಃ- ಉಜ್ವಲಃ ! ಅದು ಸಂಭೋಗ ಶೃಂಗಾರದಲ್ಲಿ ಒಂದು ವಿಧ, ವಿಪ್ರಲಂಬದಲ್ಲಿ ಮತ್ತೂಂದು ವಿಧ. ಒಂದು ಮಧುರವಾದರೆ ಮತ್ತೂಂದು ಮಧುರಯಾತನೆ.
ಕವಿಗೆ ಕಥೆ ಮುಖ್ಯವಲ್ಲ. ಅವನ ವ್ಯಥೆ, ಅವನೊಳಗೆ ಮಡುಗಟ್ಟಿದ ಭಾವಗಳು ಮುಖ್ಯ. ಅದೇ ವಿಪ್ರಲಂಬ ಶೃಂಗಾರದ ಪರಮೋಚ್ಚ ಭಾವಗೀತವಾಗಿ ವರಕವಿಯಿಂದ ಹೊರಹೊಮ್ಮಿದ ಮೇಘದೂತ.
ಯಕ್ಷನಿಗೆ ಕಾಂತಾವಿಯೋಗದ ಆ ಒಂದೊಂದು ಕ್ಷಣವೂ ಒಂದೊಂದು ಯುಗವಾಯಿತು. ಅಂತೂ ಎಂಟು ತಿಂಗಳು ಸರಿಯಿತು.
ಆಷಾಢದ ಪ್ರಥಮ ದಿನ ಪ್ರಾರಂಭವಾಗಿದೆ. ಮೇಘಗಳು ಭೂಮ್ಯಾಕಾಶವನ್ನು ಒಂದು ಮಾಡಿವೆ. ಮೇಘಾಚ್ಛಾದಿತ ದಿನವನ್ನು ಕವಿಗಳು ದುರ್ದಿನ ಎಂದಿದ್ದಾರೆ. ಆದರೆ, ಯಕ್ಷನಿಗೆ ವರ್ಷಪೂರ್ತಿ ದುರ್ದಿನ. ಹೃದಯ ಅಲ್ಲೊಲ-ಕಲ್ಲೊಲ.
ರಾಮಗಿರಿಯ ಪರ್ಣಕುಟೀರದ ಮುಂದಿನ ಕಲ್ಲುಬಂಡೆಯ ಮೇಲೆ ಯಕ್ಷ ಕುಳಿತಿದ್ದಾನೆ. ಚಿತ್ರದಲ್ಲಾದರೂ ಪ್ರಿಯತಮೆಯನ್ನು ನೋಡಿ ಸಮಾಧಾನಪಡೋಣವೆಂದು ಬಣ್ಣದ ಕಲ್ಲಿನಿಂದ ಅವಳ ಚಿತ್ರ ಬರೆಯಲು ತೊಡಗುತ್ತಾನೆ. ಕಣ್ಣೀರು ಒತ್ತರಿಸಿ ಬಂದು ಚಿತ್ರ ಅಳಿಸಿಹೋಗುತ್ತಿದೆ. “ಅಯ್ಯೋ ದೌರ್ಭಾಗ್ಯವೇ, ಈ ವಿಧಿಗೆ ನನ್ನ ಮೇಲೇಕಿಷ್ಟು ಕೋಪ?’ ಯಕ್ಷ ಹಲುಬುತ್ತಾನೆ.
ಮೇಘ ಬಂತು ಮೇಘ ದಡಕ್ಕೆಂದು ಮೇಘವೊಂದು ಬಂದು ದೊಡ್ಡ ಬಂಡೆಗೆ ಡಿಕ್ಕಿ ಹೊಡೆದಿದೆ. ಅದೊಂದು ರುದ್ರ ರಮಣೀಯ ದೃಶ್ಯ. ದೊಡ್ಡ ಆನೆಯೊಂದು ಕ್ರೀಡೆಯಾಡುವ ಪರಿಯಂತೆ ಕಂಡಿತು. ಅಲ್ಲೊಂದು ಚಲನಶೀಲ ವ್ಯಕ್ತಿತ್ವ ಗೋಚರವಾಯಿತು. ದಿವ್ಯಲೋಕದ ವ್ಯಕ್ತಿಯೊಬ್ಬ ಆಕಾಶದಲ್ಲಿ ಸಂಚರಿಸಿ ತನ್ನ ಭಾವನೆಗಳಿಗೆ ಧ್ವನಿಯಾಗುವಂತೆ ಕಂಡಿತು. ಯಕ್ಷನದೂ ದಿವಿಯ ಮೂಲವಲ್ಲವೆ?
ಹೊಗೆ, ಬೆಳಕು, ನೀರು, ಗಾಳಿ ಇವುಗಳ ಸಮ್ಮಿಲನ ಮೋಡ. ಇದು ಯಾವ ಸಂದೇಶ ಒಯ್ಯಲು ಸಾಧ್ಯ? ಇದು ವಿಜ್ಞಾನ ಕೇಳುವ, ಅಥವಾ ತರ್ಕಸಮ್ಮತ ಪ್ರಶ್ನೆ. ಆದರೆ, ವಿರಹದ ಪರಾಕಾಷ್ಠೆ ತಲುಪಿದ ಕಾಮಾರ್ತನಿಗೆ ಚೇತನಾಚೇತನದ ಪರಿಜ್ಞಾನಗಳಾದರೂ ಎಲ್ಲಿಂದ? ಕವಿ ಸಮರ್ಥನೆ ಕೊಡುತ್ತಾನೆ… ಕಾಮಾರ್ತಾ ಹಿ ಪ್ರಕೃತಿಕೃಪಣಾ ಚೇತನಾಚೇತನೇಷು…
ತುರ್ತಾಗಿ ನಲ್ಲೆಗೆ ಸಂದೇಶ ತಲುಪಿಸುವ ದೂತ ಸಿಕ್ಕಿದನೆಂಬ ಸಂತಸ ಯಕ್ಷನಿಗೆ. ಬೊಗಸೆ ತುಂಬ ಹೊಚ್ಚಹೊಸ ಕುಟಜ ಕುಸುಮ ಅಥವಾ ಗಿರಿಮಲ್ಲಿಗೆಗಳನ್ನು ಮೇಘದೆಡೆಗೆ ಎರಚಿದ. ಸುಪ್ರೀತನಾಗಿ ಪ್ರೀತಿವಚನಗಳ ಸ್ವಾಗತ ಹೇಳಿದ, ಪ್ರಾರ್ಥಿಸಿದ. “”ಹೇ ಜಲದ, ನಿನ್ನದು ಪುಷ್ಕರ-ಆವರ್ತಕಗಳೆಂಬ ಶ್ರೇಷ್ಠ ಮೋಡಗಳ ವಂಶ. ನೀನು ಕಾಮರೂಪಿ, ತಪ್ತರಿಗೆ ತಂಪು ಕೊಡುವವ. ನನ್ನಂಥ ನತದೃಷ್ಟ ಮತ್ತೂಬ್ಬ ಇರಲಾರ. ನಿನ್ನಂಥ ಪರೋಪಕಾರಿ ಬೇರೆ ಇಲ್ಲ. ನನ್ನ ಕಾಂತೆ ದೂರದ ಅಲಕೆಯಲ್ಲಿ, ನಾನು ಇಲ್ಲಿ. ಅವಳ ಕಥೆ ಏನಾಗಿದೆಯೋ ಗೊತ್ತಿಲ್ಲ. ನನ್ನ ಮೇಲಿನ ಆಶಾಬಂಧ ಅವಳನ್ನು ಉಳಿಸಿರುತ್ತದೆ. ಅವಳು ಹೇಗೋ ಜೀವಹಿಡಿದುಕೊಂಡಿದ್ದಾಳೆ. ನನ್ನ ಸಂದೇಶ ತಲುಪದಿದ್ದರೆ ಅವಳು ಬದುಕುಳಿಯಳು.
ನನ್ನ ಸ್ಥಿತಿ ನೋಡು, ಕ್ಷೇಮಸಮಾಚಾರಗಳ ವಿನಿಮಯಕ್ಕೆ ದಾರಿಯಿಲ್ಲ. ನೀನೇ ದಾರಿ ತೋರಿಸಬೇಕು. ನೀನೇ ನನ್ನ ಆಪ್ತಮಿತ್ರ. ನನ್ನ ನಲ್ಲೆಗೊಂದು ಸಂದೇಶ ತಲುಪಿಸಿಕೊಡಬೇಕು. ಉತ್ಕಂಠಿತನಾಗಿ ಗೋಗರೆದ ಯಕ್ಷ… ಸಂದೇಶಂ ಮೇ ಹರ ಧನಪತಿ ಕ್ರೋಧವಿಶ್ಲೇಷಿತಸ್ಯ|”
ಯಕ್ಷನ ಹೃದಯವೇ ಮಾತಾಯಿತು. ಮೇಘರಾಜನ ಹೃದಯಕ್ಕೆ ತಾಗಿತು.
“” ನೋಡು ಗೆಳೆಯ, ಗರ್ಭಧರಿಸಿದ ಖುಷಿಯಲ್ಲಿ ಬೆಳ್ಳಕ್ಕಿಗಳು ಬಾನಂಗಳದಲ್ಲಿ ತೋರಣಕಟ್ಟಿವೆ. ಎಡಗಡೆ ಎಡೆಯೊಂದರಿಂದ ಚಾತಕದ ಕೂಜನ ಕೇಳುತ್ತಿದೆ. ಬಾಯಲ್ಲಿ ಕಮಲದ ಸೀಳುಗಳ ಪಾಥೇಯ ಅಥವಾ ಬುತ್ತಿ ಕಚ್ಚಿಕೊಂಡ ಹಂಸಗಳು ಮಾನಸ ಸರೋವರದವರೆಗೂ ನಿನ್ನ ಜತೆಗಿರುತ್ತವೆ. ಮಂದಾನಿಲ ನಿನ್ನನ್ನು ಮೆಲ್ಲನೆ ನೂಕುತ್ತಿದೆ. ನನ್ನೂರು ಕೈಲಾಸದ ಆಚೆ ಇರುವ ಅಲಕಾನಗರಿ. ಅಲ್ಲಿಗೆ ಹೊರಡಲು ಇದೇ ಶುಭಮುಹೂರ್ತ” ಯಕ್ಷ ಅಲಕೆಯ ಮಾರ್ಗ ಹೇಳಿದ.
ರಾಮಗಿರಿಯಿಂದ ಕೈಲಾಸದವರೆಗೆ ಪ್ರಕೃತಿ ಸಹಜ, ಪ್ರಕೃತಿ ರಮ್ಯ ಕ್ರಿಯೆಗಳನ್ನೇ ಕವಿ ತನಗೆ ಬೇಕಾದಂತೆ ಬಗ್ಗಿಸಿಕೊಳ್ಳುತ್ತಾನೆ. ಕಾವ್ಯದುದ್ದಕ್ಕೂ ಇಂಥದೇ ಸಂಚಾರಿಭಾವ. ನಿಪುಣ ಕಲಾವಿದನ ಚಮತ್ಕಾರ. ಮಾರ್ಗದಲ್ಲಿ ಸಿಗುವ ಎಲ್ಲ ವಿಶೇಷತೆಗಳನ್ನೂ, ಸ್ಥಳಮಹಿಮೆಯನ್ನೂ ಹೇಳಿದ. ಭೌಗೋಳಿಕ ಚಿತ್ರವನ್ನು ಕವಿ ಕಾವ್ಯದಲ್ಲಿ ಕೆತ್ತಿದ. ಚರಿತ್ರೆಯನ್ನು ಕಾವ್ಯದಲ್ಲಿ ಕಟ್ಟಿದ.
ಅದೇಕೋ ಉಜ್ಜಯಿನಿ ಬಗ್ಗೆ ಹೆಚ್ಚು ಒಲವು ಕವಿಗೆ. ನೇರಮಾರ್ಗದಲ್ಲಿ ಉಜ್ಜಯಿನಿ ಸಿಗದಿದ್ದರೂ (ವಕ್ರಃ ಪಂಥಾ) ನೀನು ಅಲ್ಲಿಗೆ ಹೋಗಲೇಬೇಕೆಂದು ಆಗ್ರಹಿಸುತ್ತಾನೆ. ಅಲ್ಲಿಯ ಸೊಬಗನ್ನು ಸವಿಯಲೇ ಬೇಕು. ಮಹಾಕಾಳೇಶ್ವರನನ್ನು ನಮಿಸಲೇ ಬೇಕು. ಕಾಳಿದಾಸ ಶಿವ-ಶಿವೆಯರ ಪ್ರೇಮಪುತ್ರನಲ್ಲವೇ? “”ಶಿಪ್ರಾನದಿಯ ಮೇಲೆ ತೇಲಿ ಬರುವ ಗಾಳಿಯಿಂದ ಮುದಗೊಳ್ಳಬೇಕು. ರಾಜಸೌಧಗಳಲ್ಲಿ ಸಾಕಿರುವ ಮಯೂರಗಳಿಂದ ನೃತ್ಯ ಮಾಡಿಸಿ ಆನಂದಪಡಬೇಕು” ಎನ್ನುತ್ತಾನೆ.
ಸ್ವರ್ಗಕ್ಕೆ ಹೋದ ಪುಣ್ಯಶಾಲಿಗಳು ತಮ್ಮ ಪುಣ್ಯ ಇನ್ನು ಸ್ವಲ್ಪ ಉಳಿದಿರುವಾಗಲೇ ಸ್ವರ್ಗದ ಒಂದು ಭಾಗವನ್ನು ಕಿತ್ತು ತಂದು ಭೂಲೋಕದಲ್ಲಿ ಸ್ಥಾಪಿಸಿದರು. ಅದೇ ಉಜ್ಜಯಿನಿ. ಅದನ್ನು ಕಣ್ಣುತುಂಬಿಕೊಳ್ಳದಿದ್ದರೆ ಕಣ್ಣಿದ್ದೂ ವ್ಯರ್ಥ ! ಆತ್ಮವಂಚನೆ ಮಾಡಿಕೊಂಡಂತೆ.
ವಿರಹಿಯ ವ್ಯಥೆಯಾದ್ದರಿಂದ ಭಾವಕ್ಕೆ ಶೃಂಗಾರದ ಮೆರುಗು. ಉತ್ಪ್ರೇಕ್ಷೆ, ರೂಪಕ, ಅರ್ಥಾಂತರ ನ್ಯಾಸಾಲಂಕಾರಗಳಿಂದ ಪದ್ಯಗಳಿಗೆ ಅಲಂಕಾರ. ದಾರಿಯುದ್ದಕ್ಕೂ ನಗರಗಳಲ್ಲಿ ಸುಂದರಿಯರು ನಿನ್ನತ್ತ ಕುಡಿಗಣ್ಣೋಟ ಬೀರುವರು. ಅವರಿಗೆ ಒಯ್ನಾರ ಗೊತ್ತು, ಬೆಡಗು-ಬಿನ್ನಾಣ ಥಳುಕು-ಬಳುಕು ಗೊತ್ತು. ಪ್ರೇಕ್ಷಿಷ್ಯಂತೇ ಪಥಿಕವನಿತಾ ಉದ್ಗƒಹೀತಾಲಕಾಂತಾ ಃ ಪರಿಚಿತ ಭ್ರೂಲತಾವಿಭ್ರಣಾಂ…
ಆದರೆ, ಗ್ರಾಮೀಣ ಹೆಣ್ಣುಮಕ್ಕಳಿಗೆ ಕಣ್ಣುಹೊಡೆಯುವುದು, ಥಳುಕು ಗೊತ್ತಿಲ್ಲ. ನಮ್ಮ ಹಳ್ಳಿಯ ಹೆಣ್ಣುಮಕ್ಕಳ ಸಹಜತೆಗೆ ಕವಿಯ ವಕೀಲಿ. ಭ್ರೂವಿಲಾಸಾನಭಿಜ್ಞೆ„, ಪ್ರೀತಿಸ್ನಿಗೆœ„ಃ ಜನಪದವಧೂಲೋಚನೈಃಪೀಯಮಾನಃ ಇತ್ಯಾದಿ ಮಾತನಾಡುತ್ತಾನೆ.
ಉಚಿತವಾದ ರಸಾಸ್ವಾದ, ಸೌಂದರ್ಯಾರಾಧನೆ ತಪ್ಪಿಲ್ಲ ಎಂದೂ ಕವಿಯ ಅಭಿಪ್ರಾಯ.
“”ನನ್ನೂರಿಗೆ ತಲುಪುತ್ತೀಯಾ, ಆದರೆ ನಮ್ಮ ಮನೆ ಗೊತ್ತಾಗಬೇಕಲ್ಲ. ಆ ದೊಡ್ಡ ನಗರದಲ್ಲಿ ನಮ್ಮ ಮನೆ ಹುಡುಕ ಬೇಕಲ್ಲ…”ಯಕ್ಷ ಮೊದಲು ಅಲಕಾನಗರದ ಅದ್ಭುತ, ರಮ್ಯ ಚಿತ್ರ ಕೊಡುತ್ತಾನೆ. ಜತೆಗೆ ತನ್ನ ಮನೆಯ ವಿಳಾಸ, ತನ್ನ ಹುಡುಗಿಯ ಸುಂದರ ಚಿತ್ರಣ ಕೊಡುತ್ತಾನೆ.
“”ಕುಬೇರನ ಅರಮನೆಯ ಉತ್ತರಕ್ಕೆ ನನ್ನ ಮನೆ. ಮನೆಯ ಮುಂದೆ ಕಮಾನು, ಪಕ್ಕದಲ್ಲಿ ಬಾವಿ, ಅದರ ಪಕ್ಕ ಕ್ರೀಡಾಶೈಲ. ಚಿನ್ನದ ಬಾಳೆಗಿಡಗಳು. ಅಲ್ಲೊಂದು ಅಶೋಕವೃಕ್ಷ. ಕೇಸರವೃಕ್ಷ. ನನ್ನ ನಲ್ಲೆ ಸಾಕಿದ ನವಿಲು. ಚಪ್ಪಾಳೆ ತಟ್ಟಿ ಅದನ್ನು ಕುಣಿಸುವ ಪರಿ. ಮನೆಯ ಎರಡು ಕಡೆ ಶಂಖನಿಧಿ-ಪದ್ಮನಿಧಿಯ ಮಾದರಿ…” ಯಕ್ಷ ವಿವರಿಸಿದ.
“”ನನ್ನವಳು ಹೇಗಿದ್ದಾಳೆ ಗೊತ್ತೆ? ತೆಳು ಮೈ. ಬಹು ಸುಂದರಿ. ದಾಳಿಂಬೆ ಬೀಜಗಳನ್ನು ಜೋಡಿಸಿದಂತೆ ಹಲ್ಲು ಸಾಲು. ತೊಂಡೆ ಹಣ್ಣಿನಂಥ ತುಟಿ. ಬೆದರಿದ ಚಿಗರೆಯ ಕಣ್ಣು. ಆಳನಾಭಿ, ಕೃಶ ನಡು. ಮಂದಗಮನೆ. ಬಹುಶಃ ಬ್ರಹ್ಮ ಮಾಡಿದ ಸ್ತ್ರೀಸೃಷ್ಟಿಯಲ್ಲಿ ನನ್ನವಳೇ ಮೊದಲಿಗಳಾಗಿರಬೇಕು. ಸೃಷ್ಟಿರಾದ್ಯೆàವ ಧಾತುಃ ”
“”ಈಗ ಕಾಂತನಿಲ್ಲದ ಕಾರಣ ಅವಳು ಕಾಂತಿಹೀನೆ. ದೀನಾವಸ್ಥೆಯ ತುತ್ತತುದಿ ತಲುಪಿಬಿಟ್ಟಿರುತ್ತಾಳೆ. ನನ್ನ ಕುರಿತು ಕವನ ಕಟ್ಟುತ್ತಿರಬಹುದು. ವೀಣೆ ನುಡಿಸುತ್ತ ಗೀತೆ ಹಾಡಲು ಪ್ರಯತ್ನಿಸುತ್ತಾಳೆ. ಕಣ್ಣೀರು ಒತ್ತರಿಸಿ ಬರುತ್ತೆ. ವೀಣೆಯ ತಂತಿ ಒ¨ªೆಯಾಗುತ್ತದೆ. ಒರೆಸಿ ಮತ್ತೆ ಹಾಡಬೇಕೆನ್ನುವಷ್ಟರಲ್ಲಿ ಹಾಡು ಮರೆತು ಹೋಗುತ್ತೆ”
“”ಇಲ್ಲವೇ ಶಾಪದ ಅವಧಿಯಲ್ಲಿ ಕಳೆದ ದಿನಗಳೆಷ್ಟು, ಉಳಿದ ದಿನಗಳೆಷ್ಟು? ಹೂವಿನ ದಳಗಳನ್ನಿಟ್ಟುಕೊಂಡು ಕೂಡಿ, ಕಳೆಯುವ ಲೆಕ್ಕದಲ್ಲಿ ತೊಡಗಿರಬಹುದು. ನನ್ನ ಚಿತ್ರ ಬರೆಯುತ್ತಿರಬಹುದು. ಒಟ್ಟಿನಲ್ಲಿ ನೀನು ನಾನು ಹೇಳಿದ ಅಭಿಜ್ಞಾನಗಳಿಂದ ಅಥವಾ ಗುರುತುಗಳಿಂದ ಅವಳನ್ನು ಗುರುತಿಸು. ತನ್ನ ಪ್ರಿಯೆಯನ್ನು ಸಂಧಿಸಿದಾಗ, ಅವಳೇನಾದರೂ ನಿದ್ರಿಸುತ್ತಿದ್ದರೆ ದಯವಿಟ್ಟು ನಿದ್ರಾಭಂಗ ಮಾಡಬೇಡ. ಏಕೆಂದರೆ, ಕನಸಿನಲ್ಲಾದರೂ ಅವಳು ನನ್ನನ್ನು ಹೊಂದಿದ ಸುಖವನ್ನನುಭವಿಸಲಿ” ಓದುಗನ ಚಿತ್ತದಲ್ಲಿ ಭಾವಗಳ ಚಿತ್ತಾರ.
ನನ್ನ ನುಡಿಯಲ್ಲಿ ಅವಳ ಕುಶಲ ಕೇಳು, ಅವಳಿಗೆ ನನ್ನ ಕುಶಲ ಹೇಳು. ಎಲ್ಲ ಪರಿಸ್ಥಿತಿಯನ್ನು ವಿವರಿಸು. ನಾಲ್ಕು ತಿಂಗಳಲ್ಲಿ ನಮ್ಮ ಪಾಲಿನ ಶುಭದಿನಗಳು ಖಂಡಿತ ಮತ್ತೆ ಬರುತ್ತವೆಯೆಂಬ ಭರವಸೆಯನ್ನು ಕೊಡು. ಪತಿವ್ರತೆಯಾದ ಸೀತಾಮಾತೆ ಪವನಸುತನನ್ನು ಗುರುತಿಸಿ ಗೌರವಿಸಿದಂತೆ ನಿನ್ನನ್ನು ಗೌರವಿಸುತ್ತಾಳೆ.
ಅವಳಿಂದ ಪ್ರತಿಸಂದೇಶ ತಂದು ತಲುಪಿಸಿ ನನಗೂ ತಂಪು ನೀಡು. ಆಮೇಲೆ ಇಷ್ಟ ಬಂದ ಕಡೆ ಹೊರಡು. ನನಗುಂಟಾದಂತೆ, ನಿನ್ನ ಪ್ರಿಯೆ ಮಿಂಚಿನೊಂದಿಗೆ ನಿನಗೆಂದೂ ವಿಯೋಗ ಉಂಟಾಗದಿರಲಿ.
ಮೇಘದೂತಕ್ಕೆ ಮೇಘದೂತವೇ ಸಾಟಿ. ಕಾಳಿದಾಸನಿಗೆ ಕಾಳಿದಾಸನೇ ಸಾಟಿ.
ಭಾಸ್ಕರ ಭಟ್ಟ ನಾಗಮಂಗಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.