ಕಾರ್ಕಳ: ತಗ್ಗು ಪ್ರದೇಶಗಳು ಜಲಾವೃತ
Team Udayavani, Jul 8, 2018, 6:45 AM IST
ಕಾರ್ಕಳ: ಕಾರ್ಕಳ ತಾಲೂಕಿನಾದ್ಯಂತ ಕಳೆದೆರಡು ದಿನ ಗಳಿಂದ ಭಾರೀ ಮಳೆಯಾಗುತ್ತಿದ್ದು, ಕೆಲವು ಭಾಗದಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಶುಕ್ರವಾರ ಸಂಜೆಯಿಂದ ಪ್ರಾರಂಭ ಗೊಂಡ ಮಳೆ ಶನಿವಾರ ಬೆಳಿಗ್ಗೆಯ ವರೆಗೂ ನಿರಂತರವಾಗಿ ಸುರಿದಿದೆ. ಪರಿಣಾಮ ಕೆಲವು ಕಡೆ ಕೃಷಿ ಭೂಮಿಗೆ ನೀರು ನುಗ್ಗಿದ್ದು, ಹಾನಿ ಸಂಭವಿಸಿದೆ. ಮುಂಡ್ಲಿ ಡ್ಯಾಂ ಸಮೀಪದಲ್ಲಿ ಸ್ವರ್ಣ ನದಿ ಉಕ್ಕಿ ಹರಿಯುತ್ತಿದ್ದು, ಕೆಲವು ಕೃಷಿ ತೋಟಗಳು ಜಲಾವೃತಗೊಂಡಿವೆ.
ಪಶ್ಚಿಮ ಘಟ್ಟದ ತಪ್ಪಲು ಭಾಗದಳಲ್ಲಿ ಶುಕ್ರವಾರ ರಾತ್ರಿಯಿಡೀ ಮಳೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಶನಿವಾರ ನದಿ, ತೊರೆಗಳು ತುಂಬಿ ಹರಿಯುತ್ತಿತ್ತು. ಹೊಸ್ಮಾರು, ಬಜಗೋಳಿ, ಮಾಳ, ಬೆಳ್ಮಣ್, ಅಜೆಕಾರು ಭಾಗಗಳಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕೃಷಿ ಭೂಮಿಗೆ ನೀರು ನುಗ್ಗುವಂತಾಗಿದೆ. ಜತೆಗೆ ಕಾರ್ಕಳ ನಗರ ರಸ್ತೆ ಸೇರಿದಂತೆ ಹೆದ್ದಾರಿಗಳಲ್ಲೂ ಅಲ್ಲಲ್ಲಿ ಕೃತಕ ನೆರೆ ನೀರು ಹರಿಯುವಂತಾಗಿದೆ.
ಪರಿಸ್ಥಿತಿ ನೋಡಿ ಶಾಲೆಗಳಿಗೆ ರಜೆ…
ರಾತ್ರಿಯಿಡೀ ಸುರಿದ ಮಳೆಯ ಕಾರಣದಿಂದಾಗಿ ಶನಿವಾರ ಸ್ಥಳೀಯ ಪರಿಸ್ಥಿತಿ ನೋಡಿಕೊಂಡು ಶಾಲೆಗಳಿಗೆ ರಜೆ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ಲ ಶಾಲೆಗಳಿಗೆ ಸಂದೇಶ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ನಗರ ಭಾಗದ ಕೆಲವು ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಕೆಲವು ಶಾಲೆಗಳಲ್ಲಿ ಎಂದಿನಂತೆ ತರಗತಿ ನಡೆಸಲಾಗಿದೆ.ಮುಂಡ್ಲಿಯಲ್ಲಿ ನೆರೆ ನೀರು ಕೃಷಿ ಭೂಮಿಗೆ ಬಿದ್ದಿರುವುದು