ಉಡುಪಿ ಜಿಲ್ಲೆ: ಮನೆಗಳು ಜಲಾವೃತ, ಹಲವರ ರಕ್ಷಣೆ
Team Udayavani, Jul 8, 2018, 6:00 AM IST
ಹಿರಿಯಡ್ಕ ಬಜೆ ಡ್ಯಾಮ್: ಕೃಷಿ ಭೂಮಿಗೆ ಹಾನಿ
ಹೆಬ್ರಿ: ಭಾರಿ ಪ್ರಮಾಣದ ಮಳೆಯಿಂದ ಹಿರಿಯಡಕ ಬಜೆ ಡ್ಯಾಮ್ ಸುತ್ತಮುತ್ತಲಿನ ಪ್ರದೇಶದ ಸುಮಾರು 50ಕ್ಕೂ ಮಿಕ್ಕಿ ಕುಟುಂಬಗಳ ಕೃಷಿ ಭೂಮಿ ಜಲಾವೃತಗೊಂಡು ಅಪಾರ ನಷ್ಟ ಸಂಭವಿಸಿದೆ.
ಬಜೆ ಅಣೆಕಟ್ಟಿನ ಸುತ್ತಮುತ್ತಲಿನ ಮಟ್ಟಿಬೈಲು, ತಂಗಾಣ, ಪುತ್ತಿಗೆ, ಮೂಡುತಂಗಾಣ ಕಲ್ಕುಡ ಸ್ಥಾನದ ಸಮೀಪದ ಕೃಷಿ ಭೂಮಿ, ಅಡಿಕೆ, ತೆಂಗು ತೋಟಗಳಿಗೆ ನುಗ್ಗಿ ಸಂಪೂರ್ಣ ಜಲಾವೃತಗೊಂಡಿದೆ.
ಪ್ರತಿ ಮಳೆಗಾಲದಲ್ಲಿ ಬಜೆ ಅಣಿಕಟ್ಟಿನ ಸಮಸ್ಯೆ ಇದ್ದು ಈ ಬಗ್ಗೆ ಹಲವು ಬಾರಿ ಗ್ರಾಮ ಸಭೆಗಳಲ್ಲಿ ಚರ್ಚಿಸಿ ಜಿಲ್ಲಾಡಳಿತದ ಗಮನಕ್ಕೆ ತಂದಿತ್ತು ಅಲ್ಲದೆ ಒಂದು ತಿಂಗಳ ಹಿಂದೆ ಉಡುಪಿಗೆ ಆಗಮಿಸಿದ ದೇಶ್‌ಪಾಂಡೆ ಅವರಿಗೆ ಕೂಡ ಮನವಿ ಸಲ್ಲಿಸಿದ್ದು ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ಬಜೆ ಅಣೆಕಟ್ಟು ಎದುರಿನ ಡ್ಯಾಮ್‌ನ ಕೆಲವೊಂದು ಗೇಟ್‌ಗಳು ತೆರೆಯದೆ ಇರುವ ಕಾರಣ ಈ ಭಾಗದ ಕೃಷಿಭೂಮಿಗೆ ನೀರು ನುಗ್ಗಿ ಕೃಷಿಕರ ಬೆಳೆ ನಾಶದೊಂದಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.
ಜನಪ್ರತಿನಿಧಿಗಳ ಭೇಟಿ
ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ , ಜಿಲ್ಲಾ ರೈತ ಸಂಘದ ವಕ್ತಾರ ವಿಕಾಶ್ ಹೆಗ್ಡೆ ಭೆೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಡುಬಿದ್ರಿ ಸುತ್ತಮುತ್ತ ನೆರೆ, ಜನಜೀವನ ಅಸ್ತವ್ಯಸ್ತ
ಪಡುಬಿದ್ರಿ: ಪುನರ್ವಸು ಮಳೆಯ ಅಬ್ಬರದಿಂದಾಗಿ ಪಡುಬಿದ್ರಿ ಸುತ್ತಮುತ್ತ ನೆರೆ ಹಾವಳಿಯಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ನೀರು ಹರಿವ ತೋಡುಗಳನ್ನು ಆಯಾಯ ಪ್ರದೇಶಗಳಲ್ಲಿನ ಮನೆಯವರು ಮುಚ್ಚಿರುವುದು ಅಥವಾ ಮೆಗಾ ಯೋಜನೆಯಾಗಿರುವ ಯುಪಿಸಿಎಲ್ ಪೈಪ್‌ಲೈನ್ ರಸ್ತೆಗೆ ಸಣ್ಣ ಸಣ್ಣ ತೂಬುಗಳನ್ನು ಅಳವಡಿ ಸಿರುವುದು ನೆರೆ ನೀರಿನ ಪ್ರಮಾದಕ್ಕೆ ಕಾರಣವೆನಿಸಿವೆ.
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಗಳಲ್ಲಿ ಮಳೆ ನೀರು ತುಂಬಿ ಭಕ್ತರಿಗೆ ತೊಂದರೆಯುಂಟಾಗಿದೆ.
ಪಲಿಮಾರು ಮನೆ ಮಂದಿಯ ಸ್ಥಳಾಂತರ
ಪಲಿಮಾರು ರೈಲ್ವೆ ನಿಲ್ದಾಣ ಸಮೀಪ, ಉಚ್ಚಿಲ ಇಂದಿರಾನಗರ ಬಳಿ ಕೆಲ ಮನೆಗಳು ಜಲಾವೃತವಾಗಿದ್ದು ಈ ಮನೆಗಳವರನ್ನು ಸ್ಥಳಾಂತರಿಸಲಾಗಿದೆ.
ಉಚ್ಚಿಲ ಕಟ್ಟಿಂಗೇರಿಯಲ್ಲಿ ತೋಡು ಹೂಳೆತ್ತದೆ ಕೃತಕ ನೆರೆ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಸುಮಾರು 25ಕ್ಕೂ ಅಧಿಕ ಮನೆಗಳ ಜನರು ತೊಂದರೆ ಅನುಭವಿಸಿದ್ದಾರೆ. ನೆರೆಯಿಂದಾಗಿ ಇಲ್ಲಿನ ನಿವಾಸಿ ಅಯಿಷಾ ಎಂಬವರು ರಾತ್ರಿಯೇ ಮನೆ ಬಿಟ್ಟು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಉಚ್ಚಿಲ ಮಡಾ ಗ್ರಾಮದ ಪೊಲ್ಯ ನಿವಾಸಿ ಸಫಿಯಾ ಅವರ ಮನೆಯ ಬಾವಿ ಸಂಪೂರ್ಣ ಕುಸಿದಿದೆ.
ರಸ್ತೆಗಳ ಸಂಪರ್ಕ ಕಡಿತ
ತೆಂಕ ಗ್ರಾಮದ ಜ್ಯೋತಿ ಶೆಟ್ಟಿ ಎಂಬವರ ಮನೆಯ ಸುತ್ತಮುತ್ತ ನೆರೆ ನೀರು ಆವರಿಸಿದ್ದು ಆ ಕುಟುಂಬವನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ತೆಂಕ ಮಸೀದಿ ಬಳಿಯ ಮಹಮ್ಮದ್ ಗೌಸ್ ಸಾಹೇಬರ ಮನೆಯ ಗೋಡೆ ಕುಸಿದಿದೆ. ಪೂಲ – ಪೂಂದಾಡು ರಸ್ತೆ ಸಂಪರ್ಕ ಕಡಿದು ಹೋಗಿದೆ. ಎರ್ಮಾಳು ಅದಮಾರು ರಸ್ತೆಯನ್ನೂ ಜನ, ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ.
ಎಲ್ಲೂರು ಗ್ರಾ.ಪಂ. ವ್ಯಾಪ್ತಿಯ ಕೆಮುಂಡೇಲುವಿನಲ್ಲಿ ಲೋಕೋಪಯೋಗಿ ಇಲಾಖೆಯ ಅಸಮರ್ಪಕ ರಸ್ತೆ ಕಾಮಗಾರಿ ಯಿಂದ ಜಯಲಕ್ಷ್ಮೀ ಶಂಕರ ರಾವ್ ಅವರ ಮನೆ ಸುತ್ತ ಕೃತಕ ನೆರೆಯಿಂದ ಅನಾಹುತ ಉಂಟಾಗಿದೆ.
ಪಡುಬಿದ್ರಿಯ ಬೆರಂದಿಕೆರ ಬಳಿ ಹೊಟೇಲ್ ತ್ಯಾಜ್ಯ ನೀರು ಮಳೆ ನೀರಿನೊಂದಿಗೆ ಸೇರಿ ರಸ್ತೆಯಲ್ಲಿ ಹರಿದು ಪಾದಚಾರಿಗಳು ಸಂಕಷ್ಟಪಡ ಬೇಕಾಯಿತು. ಸುಜ್ಲಾನ್ ಯೋಜನಾ ಪ್ರದೇಶದ ಒಳಭಾಗದ ಮಳೆ ನೀರು ಅಬ್ಬೇಡಿ ಬಾಬು ದೇವಾಡಿಗ ಮನೆ ಎದುರಿರುವ ಮೊರಿಯಲ್ಲಿ ರಭಸವಾಗಿ ಹರಿಯುತ್ತಿರುವುದರಿಂದ ಸಂಪರ್ಕ ರಸ್ತೆ ಕಡಿತಗೊಳ್ಳುವ ಭೀತಿಯಿದೆ. ಸುಜ್ಲಾನ್ ಪುನರ್ವಸತಿ ಕಾಲನಿ ಬಳಿಯಿರುವ ಕೆರೆ ತುಂಬಿ ಅಪಾಯದ ಮಟ್ಟ ತಲುಪಿದೆ.
ಪಲಿಮಾರು ಗ್ರಾ.ಪಂ. ವ್ಯಾಪ್ತಿಯ ನಂದಿಕೂರು ರೈಲ್ವೇ ನಿಲ್ದಾಣಕ್ಕೆ ತೆರಳುವ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಇಲ್ಲಿ ಕೆಲ ಮನೆಗಳಿಗೆ ನೆರೆಯಿಂದ ತೊಂದರೆಯಾಗಿದೆ. ಶಾಂಭವಿ ನದಿ ಉಕ್ಕಿ ಹರಿದ ಪರಿಣಾಮ ಅವರಾಲು ಕೊಡಂಚಲ ಇಂದಿರಾ ಆಚಾರ್ಯ ಹಾಗೂ ಗೋಪಾಲ ಆಚಾರ್ಯ ಮನೆ ಜಲಾವೃತವಾಗಿದೆ. ಸಂಕಷ್ಟಕ್ಕೀಡಾದ ಗ್ರಾಮಸ್ಥರನ್ನು ಸ್ಥಳಾಂತರಿಸ ಲಾಗಿದೆ. ಎಂದು ಗ್ರಾ. ಪಂ ಅಧ್ಯಕ್ಷ ಜಿತೇಂದ್ರ ಪುಟಾರ್ದೋ ತಿಳಿಸಿದ್ದಾರೆ. ಅವರಾಲು ಪ್ರದೇಶದಲ್ಲಿ ಹೆಜಮಾಡಿ ಸಂಪರ್ಕ ಕಲ್ಪಿಸಲು ಶಾಂಭವಿ ನದಿ ಬದಿ ನಿರ್ಮಿಸಿದ ರಸ್ತೆ ಜಲಾವೃತವಾಗಿದೆ. ಶಾಂಭವಿ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಪಲಿಮಾರು 8 ಮನೆಗಳ ಸುಮಾರು 30 ಜನರನ್ನು, ದನಕರುಗಳನ್ನು ಸ್ಥಳಾಂತರಿಸಲಾಗಿದೆ.
ಶಿರ್ವ: ಉಕ್ಕಿ ಹರಿದ ಪಾಪನಾಶಿನಿ ನದಿ
ಶಿರ್ವ: ಶನಿವಾರ ಸುರಿದ ಮಹಾ ಮಳೆಗೆ ಶಿರ್ವ ಪಾಪನಾಶಿನಿ ನದಿಯು ಉಕ್ಕಿ ಹರಿಯುತ್ತಿದ್ದು ಎಲ್ಲೆಡೆ ಕೃಷಿಭೂಮಿ ಮತ್ತು ತೋಟಗಳಿಗೆ ನೀರು ನುಗ್ಗಿದೆ. ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಹಲವೆಡೆ ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ಸಂಪರ್ಕವೂ ಕಡಿತಗೊಂಡಿದೆ. ಸೂಡ ದೇವಸ್ಥಾನದ ಬಳಿ, ಮದ್ಮಲ್‌ಬೈಲ್, ಬಲ್ಲಾಡಿಕರೆ, ಶಿರ್ವ ನಡಿಬೆಟ್ಟು, ಪಂಜಿಮಾರು ಸೋದೆ ಮಠದ ಬಳಿ, ಪಡುಬೆಳ್ಳೆ ದೇವಸ್ಥಾನದ ಬಳಿ, ಕಟ್ಟಿಂಗೇರಿ ಪರಿಸರದಲ್ಲಿ ನೆರೆ ನೀರು ಮನೆಗಳಿಗೆ ನುಗ್ಗಿದೆ.
ಶಿರ್ವ ಮಾರಿಗುಡಿ -ಪಳ್ಳಿ ಸಂಪರ್ಕರಸ್ತೆ, ಪಂಜಿಮಾರು ಸೋದೆ ಮಠದ ಬಳಿ, ಪಡುಬೆಳ್ಳೆ-ಪಾಜಕ- ಕುಂಜಾರುಗಿರಿ ರಸ್ತೆ, ಮೂಡುಬೆಳ್ಳೆ-ಪಡುಬೆಳ್ಳೆ ರಸ್ತೆಗಳ ಮೇಲೆ ನೆರೆ ನೀರು ಹರಿದು ಸಂಪರ್ಕ ಕಡಿತಗೊಂಡಿದೆ.