ತಂತ್ರಜ್ಞಾನಕ್ಕೆ ಭಾಷೆಯೇ ಸಂಸ್ಕೃತಿ
Team Udayavani, Jul 9, 2018, 4:36 AM IST
ಭಾಷೆ ಹಿಂದೊಮ್ಮೆ ಸಂಸ್ಕೃತಿಯ ಜೊತೆ ತನ್ನ ಸಂಬಂಧವನ್ನು ಹೊಂದಿತ್ತು. ಆ ಸಂಸ್ಕೃತಿಗೂ ಭಾಷೆಗೂ, ಭಾಷೆ ಬೆಳೆಯುವ ಹಾಗೂ ಹೊಸ ಹೊಸ ಮಜಲುಗಳಿಗೆ ತೆರೆದುಕೊಳ್ಳುವ ಸಾಧ್ಯತೆಗೂ ನೇರ ಸಂಬಂಧವಿತ್ತು. ಈಗಲೂ ಇದೆ. ಆದರೆ ಈಗ ಇದಕ್ಕಿಂತ ಹೆಚ್ಚಾಗಿ ತಂತ್ರಜ್ಞಾನಕ್ಕೆ ಭಾಷೆ ತೆರೆದುಕೊಂಡಿದೆ ಅಥವಾ ತಂತ್ರಜ್ಞಾನ ಭಾಷೆಗಳಿಗೆ ತನ್ನನ್ನು ತೆರೆದುಕೊಂಡಿದೆ ಎಂದೂ ಹೇಳಬಹುದು. ಗೂಗಲ್‌ನಂಥ ಬೃಹತ್ ಡೇಟಾ ಕಂಪನಿಗಳಿಗೆ ಇನ್ನೂ ಇಂಟರ್‌ನೆಟ್ ಬಗ್ಗೆ ಗೊತ್ತಿಲ್ಲದ ಜನರನ್ನು ತಲುಪಬೇಕಿದೆ. ಅಲ್ಲಿನ ಜನರನ್ನು ತಲುಪಲು ಇಂಗ್ಲಿಷ್ ಪರಕೀಯ. ಪ್ರಾಂತೀಯ ಭಾಷೆಯೇ ಆಗಬೇಕು.
“”ಹಳ್ಳಿಗಳಲ್ಲಿ ಸರಕಾರಿ ಕನ್ನಡ ಶಾಲೆಗಳು ಅಳಿವಿನಂಚಿನಲ್ಲಿವೆ. ಕನ್ನಡ ಶಾಲೆಗೆ ಮಕ್ಕಳು ಬರುತ್ತಿಲ್ಲ. ಜನರಿಗೆ ಇಂಗ್ಲಿಷ್ ಮೋಹ. ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ಕನ್ನಡ ಶಾಲೆಗಳನ್ನು ಮುಚ್ಚುತ್ತೇವೆ” ಎಂದು ಸರಕಾರ ಹೇಳುತ್ತಿದೆ. ಅದು ಅಲ್ಲಿನ ವಾಸ್ತವ. ಆದರೆ ಮಗ್ಗಲು ಬದಲಿಸಿ ತಂತ್ರಜ್ಞಾನ ಕಂಪನಿಗಳನ್ನು ಕೇಳಿದರೆ “”ಇಲ್ಲ… ಇಲ್ಲ… ವರ್ಷದಿಂದ ವರ್ಷಕ್ಕೆ ಭಾರತೀಯ ಭಾಷೆಯಲ್ಲಿ ನಮ್ಮ ಪ್ರಾಡಕ್ಟ್ ಬಳಸುವ ಜನರು ಹೆಚ್ಚುತ್ತಿದ್ದಾರೆ. ಹೀಗಾಗಿ ನಾವು ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲೂ ನಮ್ಮ ಉತ್ಪನ್ನವನ್ನು ಕೊಡುತ್ತಿದ್ದೇವೆ” ಎನ್ನುತ್ತಾರೆ! ಇದೂ ಇಲ್ಲಿನ ವಾಸ್ತವವೇ! ಯಾಕೆಂದರೆ 2016ರಲ್ಲೇ ದೇಶದಲ್ಲಿ ಇಂಗ್ಲಿಷ್ ಹೊರತಾದ ಭಾರತೀಯ ಭಾಷೆಯಲ್ಲಿ ಇಂಟರ್‌ನೆಟ್ ಬಳಸಿದವರ ಸಂಖ್ಯೆ ಇಂಗ್ಲಿಷ್‌ನಲ್ಲಿ ಬಳಸುವವರಿಗಿಂತ ಹೆಚ್ಚಾಗಿದೆ. ಭಾಷೆ ಹಿಂದೊಮ್ಮೆ ಸಂಸ್ಕೃತಿಯ ಜೊತೆ ತನ್ನ ಸಂಬಂಧವನ್ನು ಹೊಂದಿತ್ತು. ಆ ಸಂಸ್ಕೃತಿಗೂ ಭಾಷೆಗೂ, ಭಾಷೆ ಬೆಳೆಯುವ ಹಾಗೂ ಹೊಸ ಹೊಸ ಮಜಲುಗಳಿಗೆ ತೆರೆದುಕೊಳ್ಳುವ ಸಾಧ್ಯತೆಗೂ ನೇರ ಸಂಬಂಧವಿತ್ತು. ಈಗಲೂ ಇದೆ. ಆದರೆ ಈಗ ಇದಕ್ಕಿಂತ ಹೆಚ್ಚಾಗಿ ತಂತ್ರಜ್ಞಾನಕ್ಕೆ ಭಾಷೆ ತೆರೆದುಕೊಂಡಿದೆ ಅಥವಾ ತಂತ್ರಜ್ಞಾನ ಭಾಷೆಗಳಿಗೆ ತನ್ನನ್ನು ತೆರೆದುಕೊಂಡಿದೆ ಎಂದೂ ಹೇಳಬಹುದು.
ಗೂಗಲ್‌ನಂಥ ಬೃಹತ್ ಡೇಟಾ ಕಂಪನಿಗಳಿಗೆ ಇನ್ನೂ ಇಂಟರ್‌ನೆಟ್ ಬಗ್ಗೆ ಗೊತ್ತಿಲ್ಲದ ಜನರನ್ನು ತಲುಪಬೇಕಿದೆ. ಅಲ್ಲಿನ ಜನರಿಗೆ ಇಂಗ್ಲಿಷ್ ಪರಕೀಯ. ಕರ್ನಾಟಕದಲ್ಲಾದರೆ ಕನ್ನಡ ಅಥವಾ ಇತರ ಭಾಗಗಳಲ್ಲಾದರೆ ಪ್ರಾಂತೀಯ ಭಾಷೆಯೇ ಅವರಿಗೆ ಆಗಬೇಕು. ತಾಲೂಕು ಕೇಂದ್ರದಿಂದ 10-15 ಕಿ.ಮೀ ದೂರದಲ್ಲಿ ಇರುವ ಹಳ್ಳಿಗೆ ನೆಟ್‌ವರ್ಕ್ ಸೌಲಭ್ಯವಿದ್ದು, ಗೂಗಲ್ ಮಾಡುವುದನ್ನು ಕಲಿಸಬೇಕಿದ್ದರೆ ಇಂಗ್ಲಿಷನ್ನು ಹೇಳಿಕೊಡುವುದು ಅಸಾಧ್ಯದ ಮಾತು. ಹೀಗಾಗಿ ಅವರಿಗೆ ಕನ್ನಡದಲ್ಲಿ ಅಥವಾ ಅವರ ಮಾತೃಭಾಷೆಯಲ್ಲೇ ಇಂಟರ್‌ನೆಟ್ ಬಳಕೆಗೆ ಪ್ರೋತ್ಸಾಹಿಸುವುದು ಅತ್ಯಂತ ಸುಲಭ ಮತ್ತು ಉಪಯುಕ್ತವೂ ಹೌದು.
ಈ ತಂತ್ರವನ್ನು ತಂತ್ರಜ್ಞಾನ ಕಂಪನಿಗಳು ಸರಿಯಾಗಿಯೇ ಕಂಡುಕೊಂಡಿವೆ. ಇನ್ನೊಂದೆಡೆ ಸರ್ಕಾರದ ಕೆಲವು ಕ್ರಮಗಳೂ ಇದಕ್ಕೆ ಪೂರಕವಾಗಿವೆ. ಭಾರತಕ್ಕೆ ಕಾಲಿಡುವ ಎಲ್ಲ ಮೊಬೈಲ್ ಕಂಪನಿಗಳೂ ತಮ್ಮ ಮೊಬೈಲ್ ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಾಂತೀಯ ಭಾಷೆಗಳಲ್ಲಿ ಸಾಫ್ಟ್ವೇರ್‌ಗಳು ಹಾಗೂ ಸೇವೆಯನ್ನು ಒದಗಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಇದರಿಂದಾಗಿ ಜನರು ಬಳಸುತ್ತಾರೋ ಬಿಡುತ್ತಾರೋ, ಮೊಬೈಲ್‌ಗಳಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳು ಇರಲೇಬೇಕು. ನಗರದ ಜನರು ತಂತ್ರಜ್ಞಾನವನ್ನು ಕನ್ನಡದಲ್ಲಿ ಬಳಸುವವರ ಸಂಖ್ಯೆ ಕಡಿಮೆ ಇದ್ದೀತು. ಆದರೆ ತಾಲೂಕು ಪ್ರದೇಶಗಳಿಗೆ ಹೋದಲ್ಲಿ ಮಧ್ಯವಯಸ್ಕರು ಇಂದಿಗೂ ತಮ್ಮ ಮೊಬೈಲ್‌ಗಳನ್ನು ಕನ್ನಡಕ್ಕೆ ಸೆಟ್ ಮಾಡಿಕೊಂಡಿರುತ್ತಾರೆ. ಕನ್ನಡದಲ್ಲೇ ಕಾಂಟಾಕ್ಟ್ಗಳನ್ನೂ ಸೇವ್ ಮಾಡಿಕೊಳ್ಳುವವರ ಸಂಖ್ಯೆ ದೊಡ್ಡದಿದೆ.
ಇನ್ನು ನಗರಗಳಲ್ಲಿ ಕನ್ನಡದಲ್ಲಿ ಮೊಬೈಲ್ ಸೆಟ್ಟಿಂಗ್‌ಗಳನ್ನು ಬದಲಿಸಿಕೊಳ್ಳುವವರ ಸಂಖ್ಯೆ ಕಡಿಮೆ ಇದ್ದೀತು. ಎಟಿಎಂನಲ್ಲಿ ಹಣ ತೆಗೆಯಲು ಕನ್ನಡವನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆಯೂ ಕಡಿಮೆ ಇರಬಹುದು. ಆದರೆ ಈ ಪೈಕಿ ಬಹುತೇಕರು ಫೇಸ್‌ಬುಕ್‌ನಲ್ಲಿ ಅಥವಾ ಟ್ವಿಟರ್‌ನಲ್ಲಿ ಕನ್ನಡದಲ್ಲೇ ಬರೆಯುತ್ತಾರೆ. ಕನ್ನಡದಲ್ಲೇ ತಮ್ಮ ಪ್ರವಾಸದ ಫೋಟೋಗೆ ಶೀರ್ಷಿಕೆ ಕೊಡುತ್ತಾರೆ. ಇದು ಭಾಷೆಯೊಂದು ತಂತ್ರಜ್ಞಾನವನ್ನು ಆವರಿಸಿಕೊಳ್ಳುವ ರೀತಿ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡೇ ತಂತ್ರಜ್ಞಾನ ಕಂಪನಿಗಳು ಮುಂದಡಿಯಿಡುತ್ತಿದೆ. ಇತ್ತೀಚೆಗಷ್ಟೇ ಗೂಗಲ್ 1 ಶತಕೋಟಿ ಬಳಕೆದಾರರನ್ನು ವಿಶ್ವಾದ್ಯಂತ ತಲುಪಲು ಯೋಜಿಸಿದೆ. ಇದಕ್ಕೆ ಗೂಗಲ್ ಮೊದಲು ಮಾಡುತ್ತಿರುವ ಕೆಲಸವೇ ಗೂಗಲ್‌ನ ಪ್ರತಿಯೊಂದು ಅಪ್ಲಿಕೇಶನ್‌ಗಳನ್ನೂ ಪ್ರಾಂತೀಯ ಭಾಷೆಗಳಿಗೆ ಪರಿವರ್ತಿಸುವುದು. ಈ ಕಾರ್ಯವಂತೂ ಈಗ ಭರದಿಂದ ಸಾಗಿದೆ. ಇನ್ನೊಂದೆಡೆ ಫೇಸ್‌ಬುಕ್‌ನಂತಹ ಜನಪ್ರಿಯ ಸಾಮಾಜಿಕ ತಾಣಗಳು ಕನ್ನಡ ಹಾಗೂ ಪ್ರಾಂತೀಯ ಭಾಷೆಯ ಕೀಬೋರ್ಡ್ ಗಳನ್ನು ಅಳವಡಿಸಿಕೊಂಡಿವೆ. ಇನ್ನು ಪ್ರಾಂತೀಯ ಭಾಷೆಗಳಿಗೆ ನೋ ನೋ ಎನ್ನುತ್ತಿದ್ದ ಆ್ಯಪಲ್ ಕೂಡ ತನ್ನ ಐಫೋನ್‌ಗಳಲ್ಲಿ ಕನ್ನಡ ಕೀಬೋರ್ಡ್ ಅಳವಡಿಸಿದೆ. ಮ್ಯಾಕ್ ಒಎಸ್‌ನಲ್ಲಿ ಸದ್ಯ ಕನ್ನಡ ಬರೆಯುವುದಿರಲಿ, ಓದುವುದೂ ಕಷ್ಟ ಎಂಬಂತಿದೆ. ಮುಂದಿನ ಆವೃತ್ತಿಗಳಲ್ಲಿ ಈ ಸಮಸ್ಯೆಗಳನ್ನೆಲ್ಲ ಸರಿಪಡಿಸಲು ಈಗಾಗಲೇ ಪ್ರಯೋಗವನ್ನೂ ಆ್ಯಪಲ್ ನಡೆಸಿದೆ. ಹೀಗಾಗಿ ಮೊದಲ ಹಂತದಲ್ಲಿ ಮ್ಯಾಕ್ ಒಎಸ್‌ನಲ್ಲಿ ಕನ್ನಡವನ್ನು ಕಿರಿಕಿರಿ ಇಲ್ಲದೆ, ರೆಂಡರಿಂಗ್ ಸಮಸ್ಯೆಯಿಲ್ಲದೆ ಓದಬಹುದು. ಮುಂದೆ ಸುಲಭದಲ್ಲಿ ಬರೆಯುವ ಮತ್ತು ಎಲ್ಲರಿಗೂ ಅನುಕೂಲವಾಗುವ ಕೀಬೋರ್ಡ್‌ಗಳನ್ನೂ ಆಪರೇಟಿಂಗ್ ಸಿಸ್ಟಂನಲ್ಲಿ ಅಳವಡಿಸಬಹುದು.
ಸಾಮಾನ್ಯವಾಗಿ 28-30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈಗಾಗಲೇ ಇಂಟರ್‌ನೆಟ್‌ಗೆ ಅಡಿಕ್ಟ್ ಆಗಿದ್ದಾರೆ. ಅವರು ಇಂಗ್ಲೀಷನಲ್ಲಿ ಓದಿಕೊಂಡು, ಮಾತೃಭಾಷೆಯಲ್ಲಿ ಅಥವಾ ಇಂಗ್ಲೀಷಿನಲ್ಲಿ ಬರೆದುಕೊಂಡು ಇಂಟರ್‌ನೆಟ್ ಬಳಸುತ್ತಿದ್ದಾರೆ. ಆದರೆ 40 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಗ್ರಾಮೀಣ ಭಾಗದ ಜನರು ಇನ್ನೂ ಇಂಟರ್‌ನೆಟ್‌ಗೆ ತಮ್ಮನ್ನು ಒಡ್ಡಿಕೊಂಡಿಲ್ಲ. ಅವರಿಗೆ ಇಂಟರ್‌ನೆಟ್ ಎಂಬುದು ಇನ್ನೂ ಕಗ್ಗಂಟು. ಅವರಿಗೆ ಈ ಗಂಟು ಬಿಡಿಸಲು ಅವರ ಭಾಷೆಯಲ್ಲೇ ವಿವರಿಸಬೇಕು. ಇಂಗ್ಲೀಷಲ್ಲಿ ಹೇಳಿದರೆ ಗಂಟು ಇನ್ನೂ ಸಿಕ್ಕಾಗುತ್ತದೆ. ಇದೇ ಕಾರಣಕ್ಕೆ ಕಂಪನಿಗಳು ಅವರದೇ ಭಾಷೆಯಲ್ಲಿ ಬಳಿ ಬರುತ್ತಿವೆ.
ಕಳೆದ 5 ವರ್ಷಗಳಲ್ಲಿ ಇಂಟರ್‌ನೆಟ್ ಹೆಚ್ಚು ಹೆಚ್ಚು ಜನರಿಗೆ ಕೈಗೆಟಕುವಂತಾಗುತ್ತಿದ್ದರೆ, ಮೊಬೈಲ್ ಸೇವೆ ಪೂರೈಕೆ ಕಂಪನಿಗಳು ಹಾಗೂ ಸ್ಮಾರ್ಟ್‌ಫೋನ್ ತಯಾರಿಕೆ ಕಂಪನಿಗಳು ಕನ್ನಡ ಸೇರಿದಂತೆ ಪ್ರಾಂತೀಯ ಭಾಷೆಯಲ್ಲಿ ಸೇವೆಯನ್ನು ಒದಗಿಸುವುದಕ್ಕೆ ಅನುವಾದಕರನ್ನು ನೇಮಿಸಿಕೊಳ್ಳುತ್ತಿವೆ. ಬಹುತೇಕ ಎಲ್ಲ ಕಂಪನಿಗಳಲ್ಲೂ ಈಗ ಅನುವಾದಕರಿದ್ದಾರೆ. ಅಷ್ಟೇ ಅಲ್ಲ, ಒಂದೊಂದು ಕಂಪನಿಯೂ ಕನಿಷ್ಠ ಮೂರ್‍ನಾಲ್ಕು ಮಂದಿಗಾದರೂ ಅನುವಾದದ ಹೊರಗುತ್ತಿಗೆ ನೀಡುತ್ತಿವೆ. ಇನ್ನೊಂದೆಡೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೂಡ ಪ್ರಾಂತೀಯ ಭಾಷೆಗೆ ಆದ್ಯತೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ಅಪ್ಲಿಕೇಶನ್ ಕೂಡ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎಂಬ ಬಟ್ಟೆ ತೊಟ್ಟೇ ಮಾರುಕಟ್ಟೆಗಿಳಿಯುವಷ್ಟು ಅಗಾಧ ಸಾಧ್ಯತೆಯನ್ನು ಹೊಂದಿರುವ ಈ ಸಮಯದಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳನ್ನು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಪ್ಲಿಕೇಶನ್‌ಗಳಲ್ಲೂ ಅಳವಡಿಸುವ ಕಾರ್ಯ ನಡೆಯುತ್ತಿದೆ. ಕಮಾಂಡ್‌ಗಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಕನ್ನಡದಲ್ಲಿ ಔಟ್‌ಪುಟ್ ನೀಡುವ ಸೌಲಭ್ಯಗಳಿಗಾಗಿ ಹಲವು ಚಾಟ್ ಬೋಟ್ ಕಂಪನಿಗಳು ಕನ್ನಡ ಭಾಷೆ ತಿಳಿದಿರುವವರಿಗೆ ಕೆಲಸ ಕೊಟ್ಟಿವೆ. ಇದರ ಜೊತೆಗೇ ನ್ಯೂರಲ್ ಮಶಿನ್ ಅನುವಾದ ಕೂಡ ಅಭಿವೃದ್ಧಿಯಾಗುತ್ತಿದೆ. ಗೂಗಲ್ ಸೇರಿದಂತೆ ಹಲವು ಕಂಪನಿಗಳು ತಮ್ಮದೇ ನ್ಯೂರಲ್ ಮಶಿನ್ ಅಭಿವೃದ್ಧಿಪಡಿಸುತ್ತಿದ್ದು, ಇವು ಇಂಗ್ಲಿಷ್‌ನಿಂದ ಡೈಲಾಗ್‌ಗಳ ಅನುವಾದವನ್ನು ಇನ್ನಷ್ಟು ಸ್ಪಷ್ಟ ಹಾಗೂ ತಪ್ಪಿಲ್ಲದಂತೆ ಮಾಡಲು ಪ್ರಯತ್ನಿಸುತ್ತಿವೆ. ಸದ್ಯದ ಯಾಂತ್ರಿಕ ಅನುವಾದ ಅತ್ಯಂತ ಕ್ಲೀಷೆ ಎಂಬಂತಹ ಸ್ಥಿತಿಯಲ್ಲಿದ್ದು, ಗೂಗಲ್ ಟ್ರಾನ್ಸ್‌ಲೇಟ್ ಹೆಸರು ಹೇಳಲೇ ಮುಜುಗರ ಪಡುವಂತಿದೆ. ಇದು ನಿಧಾನಕ್ಕೆ ಅಭಿವೃದ್ಧಿಯಾಗುತ್ತಿದೆ. ಹಿಂದಿಗಿಂತ ತುಂಬ ಸುಧಾರಣೆ ನ್ಯೂರಲ್ ಮಶಿನ್‌ನಿಂದ ಆಗಿದೆ.
ಆದರೆ ಇದೆಲ್ಲ ನಡೆಯುತ್ತಿರುವುದು ಓದುವ ಮತ್ತು ಬಳಸುವ ಹಂತದಲ್ಲಿಯೇ ಹೊರತು ಬರೆಯುವ ಹಂತದಲ್ಲಲ್ಲ. ಅಂದರೆ ಕನ್ನಡ ಬರೆಯಲು ಹೊಸ ಸಾಫ್ಟ್ವೇರ್‌ಗಳು, ಕೀಬೋರ್ಡ್‌ಗಳು ಉಚಿತವಾಗಿ ಜನರಿಗೆ ಸಿಗುತ್ತಿಲ್ಲ. ಅಷ್ಟೇ ಅಲ್ಲ, ಹಳೆಯ ಕೀಬೋರ್ಡ್ ಗಳು, ಇಂಜಿನ್‌ಗಳನ್ನಾದರೂ ಹೊಸ ವ್ಯವಸ್ಥೆಗೆ ಅಭಿವೃದ್ಧಿ ಪಡಿಸುತ್ತಿಲ್ಲ. ಕನ್ನಡ ಗಣಕ ಪರಿಷತ್ ಅಭಿವೃದ್ಧಿಪಡಿಸಿದ ಉಚಿತ ಸಾಫ್ಟ್ವೇರ್ ನುಡಿ ಇನ್ನೂ ತೊದಲುತ್ತಲೇ ಇದೆ. ಆರಂಭದ ಆವೃತ್ತಿಗಳನ್ನು ಜನರು ವ್ಯಾಪಕವಾಗಿ ಬಳಸುತ್ತಿದ್ದರು. ಆಗಿನದು 32 ಬಿಟ್ ವಿಂಡೋಸ್ ಕಾಲ. 32 ಬಿಟ್ ವಿಂಡೋಸ್‌ಗಳನ್ನು ಜನರು ನಿಧಾನಕ್ಕೆ ಕೈಬಿಟ್ಟು 64 ಬಿಟ್‌ಗೆ ಬದಲಾದಾಗ ನುಡಿ ಅಭಿವೃದ್ಧಿಯಾಗಲಿಲ್ಲ. ಇಂದಿಗೂ 32 ಬಿಟ್ ಸಾಫ್ಟ್ವೇರ್‌ಗಳಲ್ಲಿ ನುಡಿ ಸರಿಯಾಗಿ ಕೆಲಸ ಮಾಡದು.
ಇನ್ನು ಆ್ಯಪಲ್‌ನ ಮ್ಯಾಕ್ ಒಎಸ್ ಕಥೆಯನ್ನಂತೂ ಕೇಳುವುದೇ ಬೇಡ. ಅಲ್ಲಿ ನುಡಿ ಇನ್‌ಸ್ಟಾಲ್ ಆಗದು. ಅದರ ಯೂನಿಕೋಡ್ ಹೊರತಾದ ಫಾಂಟ್‌ಗಳನ್ನು ಬಳಸಿ ಓದಲೂ ಆಗದು. ಕನ್ನಡ ಯೂನಿಕೋಡ್ ಶಿಷ್ಟಾಚಾರಕ್ಕೆ ಬದಲಾದರೂ ಇಂದಿಗೂ ಪಬ್ಲಿಶಿಂಗ್ ಉದ್ಯಮ ನುಡಿ ಹಾಗೂ ಇತರ ಯೂನಿಕೋಡ್ ಹೊರತಾದ ಫಾಂಟ್ ಶೈಲಿಗೇ ಬದ್ಧವಾಗಿವೆ. ಇದಕ್ಕೆ ಡಿಸೈನಿಂಗ್ ಸಾಫ್ಟ್ವೇರ್‌ಗಳು ಯೂನಿಕೋಡ್ ಅನ್ನು ಬೆಂಬಲಿಸದೇ ಇರುವುದು ಒಂದು ಕಾರಣವಾದರೆ, ಯೂನಿಕೋಡ್‌ನಲ್ಲಿ ಆಕರ್ಷಕ ವಿನ್ಯಾಸದ ಫಾಂಟ್‌ಗಳು ಇಲ್ಲ ಎಂಬುದೂ ಇನ್ನೊಂದು ಕಾರಣ. ಅಚ್ಚರಿಯ ಸಂಗತಿಯೆಂದರೆ ಇಂದಿಗೂ ನುಡಿ ವಿಂಡೋಸ್ 64 ಬಿಟ್ ಆವೃತ್ತಿಯಲ್ಲಿ ಹಾಗೂ ಮ್ಯಾಕ್ ಆಪರೇಟಿಂಗ್ ಸಿಸ್ಟಂನಲ್ಲಿ ಲಭ್ಯವಿಲ್ಲ. ಇವು ಪ್ರಾಥಮಿಕ ಅಗತ್ಯಗಳಾಗಿದ್ದವು. ಇವೆಲ್ಲ ಲಭ್ಯವಿಲ್ಲದೆಯೂ ಕನ್ನಡ ಬಳಕೆಯ ಬಗ್ಗೆ ಹಾಗೂ ಕನ್ನಡದ ಪ್ರೀತಿಯಿರುವ ಜನರೇ ಕೀಬೋರ್ಡ್ ಗಳಿಗೆ ಕೈ ಹೊಂದಿಸಿಕೊಂಡು ಬಳಸುತ್ತಿದ್ದಾರೆ. 2016ರಲ್ಲಿ ಗೂಗಲ್ ನಡೆಸಿದ ಸಮೀಕ್ಷೆಯೊಂದರಲ್ಲಿ 23.7 ಕೋಟಿ ಭಾರತೀಯರು ಇಂಗ್ಲಿಷ್ ಬಿಟ್ಟು ತಮ್ಮ ಪ್ರಾಂತೀಯ ಭಾಷೆಗಳಲ್ಲೇ ಇಂಟರ್‌ನೆಟ್ ಬಳಸುತ್ತಿದ್ದಾರೆ ಎಂದು ಕಂಡುಕೊಂಡಿತ್ತು. ಆಗ ಇಂಗ್ಲಿಷ್ ಬಳಸುತ್ತಿರುವವರ ಸಂಖ್ಯೆ 17.1 ಕೋಟಿ ಇತ್ತು. ಅಂದರೆ ಇಂಗ್ಲಿಷ್‌ಗಿಂತ ಪ್ರಾಂತೀಯ ಭಾಷೆ ಬಳಸುವವರ ಸಂಖ್ಯೆಯೇ ಹೆಚ್ಚಿತ್ತು. ಇದೇಕಾರಣಕ್ಕೆ ತಂತ್ರಜ್ಞಾನ ಕಂಪನಿಗಳು ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯಲು ಇಂಗ್ಲಿಷ್ ಅಗತ್ಯವಿಲ್ಲ ಎಂದು ನಿರ್ಧರಿಸಿದ್ದು. ಅಂದಿನಿಂದಲೂ ಕನ್ನಡ ಸೇರಿದಂತೆ ಪ್ರಾಂತೀಯ ಭಾಷೆಯೇ ತಂತ್ರಜ್ಞಾನದಲ್ಲಿ ಮೆರೆಯುತ್ತಿದೆ.
*ಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.