ಮಕ್ಕಳ ಲೈಂಗಿಕ ಶೋಷಣೆ ಸಮಗ್ರ ಕಾನೂನು ಬೇಕು
Team Udayavani, Jul 10, 2018, 4:32 PM IST
ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸುವ ಸಲುವಾಗಿ ಕಠಿನ ಕಾನೂನು ರಚಿಸಲು ಮುಂದಾಗಿರುವ ಸರಕಾರದ ಕ್ರಮ ಸ್ವಾಗತಾರ್ಹ. ಪ್ರಸ್ತುತ ಇರುವ ಕಾಯಿದೆ ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡು ಅದರ ವೀಡಿಯೊ ಚಿತ್ರೀಕರಿಸುವುದು ಮತ್ತು ಮಾರಾಟ ಮಾಡುವುದನ್ನು ಮಾತ್ರ ನಿಷೇಧಿಸಿತ್ತು. ಆದರೆ ಮಕ್ಕಳ ಲೈಂಗಿಕ ಶೋಷಣೆ ಎನ್ನುವುದು ಅಂತಾರಾಷ್ಟ್ರೀಯ ಆಯಾಮವನ್ನು ಹೊಂದಿರುವ ಗಂಭೀರ ಸ್ವರೂಪದ ಸಮಸ್ಯೆಯಾಗಿದ್ದು, ಇದನ್ನು ನಿಭಾಯಿಸಲು ಸಮಗ್ರವಾದ ಕಾನೂನಿನ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಲು ಮುಂದಾಗಿದೆ. ಹೊಸ ಕಾನೂನಿನಲ್ಲಿ ಮಕ್ಕಳ ಪೋರ್ನೋಗ್ರಫಿ ವೀಡಿಯೊ ಇಟ್ಟುಕೊಳ್ಳುವುದು ಕೂಡಾ ಅಪರಾಧವಾಗಲಿದೆ ಹಾಗೂ ಈ ಕೃತ್ಯ ಎಸಗಿದವರಿಗೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅಂಶವನ್ನು ಸೇರ್ಪಡೆಗೊಳಿಸಲಾಗಿದೆ.
ಪ್ರಸ್ತುತ ದಂಡ ಸಂಹಿತೆಯ ಸೆಕ್ಷನ್ 292 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67 ಮಕ್ಕಳ ಪೋರ್ನೋಗ್ರಫಿಗೆ ಸಂಬಂಧಪಟ್ಟ ಅಪರಾಧಗಳಿಗೆ ಅನ್ವಯವಾಗುತ್ತದೆ. ಸೆಕ್ಷನ್ 292 ಅಸಭ್ಯ ವೀಡಿಯೊ, ಫೊಟೊ ಇತ್ಯಾದಿಗಳ ವಿನಿಮಯವನ್ನು ಅಪರಾಧವೆಂದು ಪರಿಗಣಿಸುತ್ತದೆ. ಅಂತೆಯೇ ಸೆಕ್ಷನ್ 67 ಇಂಥ ವೀಡಿಯೊ, ಫೊಟೊ ಮತ್ತಿತರ ಮಾಹಿತಿಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಪ್ರಕಟನೆ,ಹಂಚಿಕೆ ಇತ್ಯಾದಿಗಳನ್ನು ಮಾಡುವುದನ್ನು ಅಪರಾಧವೆಂದು ಹೇಳುತ್ತದೆ. ಇದರ ಜತೆಗೆ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ಸಂರಕ್ಷಿಸುವ ಕಾಯಿದೆಯಿದ್ದು, ಇದು ಕೂಡಾ ಮಕ್ಕಳ ಲೆಂಗಿಕ ಶೋಷಣೆಯನ್ನು ದಂಡನಾರ್ಹ ಅಪರಾಧವೆಂದು ಹೇಳುತ್ತದೆ. ಹೀಗೆ ನಮ್ಮಲ್ಲಿ ಈ ಪಿಡುಗಿಗೆ ಸಂಬಂಧಪಟ್ಟಂತೆ ಹಲವು ಕಾನೂನುಗಳಿದ್ದರೂ ಅದು ಸಮಗ್ರವಾಗಿಲ್ಲ. ಎಲ್ಲ ಕಾನೂನುಗಳು ಮಕ್ಕಳ ಲೈಂಗಿಕ ಶೋಷಣೆಯ ವೀಡಿಯೊ ಚಿತ್ರಿಕೆಗಳು ಅಥವಾ ಫೋಟೊಗಳು ಹಂಚಿಕೆಯಾಗುವುದನ್ನು ತಡೆಯಲು ಗಮನ ಕೇಂದ್ರೀಕರಿಸಿವೆಯೇ ಹೊರತು ಮಕ್ಕಳು ಈ ದುಷ್ಕರ್ಮಿಗಳ ಕೈಗೆ ಸಿಗದಂತೆ ಮಾಡುವತ್ತ ಗಮನ ಹರಿಸಿಲ್ಲ.
ಈ ಸಂದರ್ಭದಲ್ಲಿ ಕೆಲ ತಿಂಗಳ ಹಿಂದೆ ಉತ್ತರ ಪ್ರದೇಶದಲ್ಲಿ ಬಯಲಾಗಿರುವ ಬೃಹತ್ ಮಕ್ಕಳ ಪೋರ್ನೋಗ್ರಫಿ ಜಾಲದ ಪ್ರಕರಣವನ್ನು ನೆನಪಿಸಿಕೊಳ್ಳಬಹುದು. ವಾಟ್ಸಪ್ ಗ್ರೂಪ್ ಮೂಲಕ ಮಕ್ಕಳ ಲೈಂಗಿಕ ಶೋಷಣೆಯ ವೀಡಿಯೊ ಮತ್ತು ಫೋಟೊಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ಈ ಗ್ರೂಪಿನಲ್ಲಿ 40 ದೇಶಗಳ 250 ಸದಸ್ಯರಿದ್ದರು. ಅಮೆರಿಕ, ಚೀನ, ಬ್ರಝಿಲ್, ಕೆನ್ಯಾ, ನೈಜೀರಿಯಾ, ಮೆಕ್ಸಿಕೊ, ಪಾಕಿಸ್ಥಾನದಂಥ ದೇಶಗಳ ಜನರು ಸದಸ್ಯರಾಗಿದ್ದರು. ಪೊಲೀಸರು ಭಾರತದಲ್ಲಿ ಈ ಗ್ರೂಪನ್ನು ನಿಭಾಯಿಸುತ್ತಿದ್ದವರನ್ನೇನೊ ಸೆರೆ ಹಿಡಿದಿದ್ದಾರೆ.
ಉಳಿದವರ ಪತ್ತೆಗಾಗಿ ಸಿಬಿಐ ಮೂಲಕ ಇಂಟರ್‌ಪೋಲ್‌ಗೆ ಮನವಿ ಸಲ್ಲಿಸಲಾಗಿದೆ. ಅಲ್ಲಿಗೆ ಈ ಪ್ರಕರಣ ಸ್ಥಗಿತಗೊಂಡಿದೆ. ಹೇಗೆ ಮಕ್ಕಳ ಪೋರ್ನೋಗ್ರಫಿ ಜಾಲ ವಿಶ್ವವ್ಯಾಪಿಯಾಗಿ ವ್ಯಾಪಿಸಿಕೊಂಡಿದೆ ಎನ್ನುವುದನ್ನು ಈ ಪ್ರಕರಣದಿಂದ ಅರ್ಥ ಮಾಡಿಕೊಳ್ಳಬಹುದು. ಬಹುತೇಕ ಪ್ರಕರಣಗಳಲ್ಲಿ ವೀಡಿಯೊ ಚಿತ್ರಿಕೆ ಅಥವಾ ಫೊಟೋಗಳನ್ನು ವಿನಿಮಯಿಸಲು ಸಾಮಾಜಿಕ ಮಾಧ್ಯಮದ ಸರ್ವರ್ ಯಾವುದೋ ದೂರದ ದೇಶದಲ್ಲಿರುವುದರಿಂದ ಪ್ರಕರಣವನ್ನು ಬೇಧಿಸುವುದು ಸಾಧ್ಯವಾಗುವುದಿಲ್ಲ. ಹೊಸ ಕಾನೂನು ರಚಿಸುವಾಗ ಇಂಥ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಲೈಂಗಿಕ ಶೋಷಣೆ ಎನ್ನುವುದು ಹಿಂದಿನಿಂದಲೂ ಇತ್ತು. ಆದರೆ ಅಂತರ್‌ಜಾಲ ಸಂವಹನ ಮಾಧ್ಯಮಗಳ ಆವಿಷ್ಕಾರದ ಬಳಿಕ ಈ ಶೋಷಣೆ ವಿವಿಧ ಆಯಾಮಗಳನ್ನು ಪಡೆದುಕೊಂಡಿದೆ. ಇದನ್ನು ತಡೆಗಟ್ಟಲು ಬರೀ ರಾಷ್ಟ್ರೀಯ ಮಟ್ಟದಲ್ಲಿ ಕಾನೂನು ರಚಿಸಿದರೆ ಸಾಲದು.
ಸುಪ್ರೀಂ ಕೋರ್ಟ್ ಮಕ್ಕಳ ಲೈಂಗಿಕ ಶೋಷಣೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವುದು ಈ ನಿಟ್ಟಿನಲ್ಲಿ ನಿರೀಕ್ಷೆ ಹುಟ್ಟಿಸಿದ ನಡೆ. ಎರಡು ವರ್ಷದ ಹಿಂದೆಯೇ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದ ಬಳಿಕ ಸರಕಾರ ಲೈಂಗಿಕ ಸರಕುಗಳನ್ನು ಪ್ರಸಾರ ಮಾಡುವ ಸುಮಾರು 3500 ವೆಬ್‌ಸೈಟ್‌ಗಳನ್ನು ನಿಷೇಧಿಸಿತ್ತು. ಆದರೆ ಇದಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂಬ ನೆಲೆಯಲ್ಲಿ ವಿರೋಧ ವ್ಯಕ್ತವಾದ ಬಳಿಕ ಸರಕಾರ ಮೆತ್ತಗಾಗಿತ್ತು. ಆ ಬಳಿಕ ಈ ಪೈಕಿ ಬಹುತೇಕ ವೆಬ್‌ಸೈಟ್‌ಗಳು ವಾಪಸಾಗಿವೆ ಎನ್ನುತ್ತಿವೆ ವರದಿಗಳು. ಇದೇ ವೇಳೆ ಸರಕಾರ ಆನ್‌ಲೈನ್‌ನಲ್ಲಾಗುತ್ತಿರುವ ಮಕ್ಕಳ ಲೈಂಗಿಕ ಶೋಷಣೆಯನ್ನು ತಡೆಗಟ್ಟುವ ಸಲುವಾಗಿ ಶಿಫಾರಸುಗಳನ್ನು ಮಾಡುವ ಅಂತರ್ ಸಚಿವಾಲಯ ಸಮಿತಿಯನ್ನೂ ರಚಿಸಿತ್ತು. ಆದರೆ ಇವೆಲ್ಲ ತಕ್ಷಣದ ಪರಿಹಾರವಾಗಿದ್ದ ಕಾರಣ ಹೆಚ್ಚಿನ ಪರಿಣಾಮ ಬೀರಿಲ್ಲ. ಸರಕಾರದ ಪ್ರಯತ್ನದ ಹೊರತಾಗಿಯೂ ಪೋರ್ನ್ ವೆಬ್‌ಸೈಟ್‌ಗಳಲ್ಲಿ ಶೇ. 100 ಹೆಚ್ಚಳವಾಗಿದೆ ಎನ್ನುವ ವರದಿ ಈ ಸಮಸ್ಯೆ ಹೇಗೆ ತ್ವರಿತವಾಗಿ ಬೆಳೆಯುತ್ತಿದೆ ಎನ್ನುವುದನ್ನು ತಿಳಿಸುತ್ತದೆ. ಮಕ್ಕಳ ಲೈಂಗಿಕ ಶೋಷಣೆಯನ್ನು ತಡೆಗಟ್ಟಲು ಶಾಲೆಯಲ್ಲಿ, ಮನೆಯಲ್ಲಿ, ಸಮಾಜದಲ್ಲಿ ಈ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ಅಂತರ್ ಸಚಿವಾಲಯ ಸಮಿತಿ ಸಲಹೆ ಮಾಡಿತ್ತು. ಕಾನೂನು ರೂಪಿಸುವ ಜತೆಗೆ ಇಂಥ ಸಲಹೆಗಳು ಕೂಡಾ ಅನುಷ್ಠಾನ ಯೋಗ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.