ಪೌರಕಾರ್ಮಿಕರಿಗೆ 7ರೊಳಗೆ ವೇತನ
Team Udayavani, Jul 11, 2018, 12:02 PM IST
ಬೆಂಗಳೂರು: ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪೌರಕಾರ್ಮಿಕರಿಗೆ ಪ್ರತಿ ತಿಂಗಳು 7ನೇ ತಾರೀಖೀನೊಳಗೆ ವೇತನ ಪಾವತಿಸಲು ಕ್ರಮಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಆದೇಶಿಸಿದ್ದಾರೆ.
ಪಾಲಿಕೆಯಿಂದ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆಯುಕ್ತರು, ನಿಗದಿತ ಅವಧಿಯಲ್ಲಿ ಕಾರ್ಮಿಕರಿಗೆ ವೇತನ ಪಾವತಿಸದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿತ್ಯ ಪೌರಕಾರ್ಮಿಕರಿಂದ ಪಡೆಯಲಾಗುವ ಬಯೋಮೆಟ್ರಿಕ್ ಹಾಜರಾತಿ ಮಾಹಿತಿಯನ್ನು ಪ್ರತಿ ತಿಂಗಳ 1ನೇ ತಾರೀಖೀನೊಳಗೆ ಬಿಬಿಎಂಪಿಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಜತೆಗೆ ಬಯೋಮೆಟ್ರಿಕ್ ಮಾಹಿತಿಯ ಅನುಸಾರವಾಗಿ ಪೌರಕಾರ್ಮಿಕರಿಗೆ ಪ್ರತಿ ತಿಂಗಳು 7ನೇ ತಾರೀಖೀನೊಳಗೆ ವೇತನ ನೀಡಬೇಕು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.
ಇದರೊಂದಿಗೆ ಒಂದು ವರ್ಷ ಮೇಲ್ಪಟ್ಟು ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಇಎಸ್‌ಐ, ಪಿಎಫ್ ಮತ್ತು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ ಬಯೋಮೆಟ್ರಿಕ್ ಪಡೆದು ಅವರಿಗೆ ವೇತನ ಪಾವತಿಸುವಂತೆ ತಿಳಿಸಿದ್ದಾರೆ. ಪಾಲಿಕೆಯ ಕೇಂದ್ರ ಕಚೇರಿಯಿಂದ ಹಣ ಬಿಡುಗಡೆಗೊಳಿಸಿದರೂ, ಗುತ್ತಿಗೆ ಪೌರಕಾರ್ಮಿಕರಿಗೆ ವೇತನ ಬಿಡುಗಡೆಗೊಳಿಸಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಬಾಕಿಯಿದ್ದ 27 ಕೋಟಿ ರೂ. ಬಿಡುಗಡೆ: ಪಾಲಿಕೆಯಿಂದ ಗುತ್ತಿಗೆ ಪೌರಕಾರ್ಮಿಕರಿಗೆ ಕಳೆದ ಐದು ತಿಂಗಳಿನಿಂದ ಬಾಕಿಯಿದ್ದ 27 ಕೋಟಿ ರೂ. ವೇತನವನ್ನು ವಲಯ ಮಟ್ಟದ ಅಧಿಕಾರಿಗಳ ಖಾತೆಗೆ ಪಾವತಿಸಿರುವುದಾಗಿ ಮುಖ್ಯ ಲೆಕ್ಕಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ. ಅದರಂತೆ ಜನವರಿಂದ ಮೇ ತಿಂಗಳ ವರೆಗೆ ವೇತನ ಜೂನ್ ತಿಂಗಳಿಗೆ ಪಾವತಿಯಾಗುವಂತೆ ಒಟ್ಟು ವೇತನವನ್ನು ಬಿಡುಗಡೆಗೊಳಿಸಿರುವುದಾಗಿ ತಿಳಿಸಿದ್ದಾರೆ.
ಮ್ಯಾಪಿಂಗ್ ವ್ಯವಸ್ಥೆ ಮಾಡಿ: ಪೌರಕಾರ್ಮಿಕರು ಯಾವ ಬ್ಲಾಕ್‌ನಲ್ಲಿ ಕೆಲಸ ಮಾಡಬೇಕು ಹಾಗೂ ಆಟೋಗಳು ಸಂಚರಿಸಬೇಕಾದ ಬ್ಲಾಕ್‌ಗಳ ಸಂಪೂರ್ಣ ಮಾಹಿತಿಯುಳ್ಳ ಮ್ಯಾಪಿಂಗ್ ವ್ಯವಸ್ಥೆಯನ್ನು ಎರಡು ದಿನಗಳಲ್ಲಿ ಸಿದ್ಧಪಡಿಸುವಂತೆ ಹಾಗೂ ಬಿನ್ ಟ್ರಿಪ್ಪರ್ ಆ್ಯಪ್ ಹಾಗೂ ಘನತ್ಯಾಜ್ಯ ನಿರ್ವಹಣೆ ವಿಭಾಗದ ಆ್ಯಪ್‌ಗೆ ವರದಿ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ಕೊಲೆ ಮಾಡಿದೆ: ಬಿಜೆಪಿ ಆರೋಪ: ವೇತನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸುಬ್ರಹ್ಮಣ್ಯ ಸಾವಿಗೆ ಸಮ್ಮಿಶ್ರ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿ ಬಿಜೆಪಿ ಪಾಲಿಕೆ ಸದಸ್ಯರು ಮಂಗಳವಾರ ಪಾಲಿಕೆಯ ಪಶ್ಚಿಮ ವಲಯ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.
ಬಿಬಿಎಂಪಿ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿ ಹತ್ತಾರು ಗುತ್ತಿಗೆ ಪೌರಕಾರ್ಮಿಕರು ಹಾಗೂ ಬಿಜೆಪಿ ಪಾಲಿಕೆ ಸದಸ್ಯರು ಕಾಂಗ್ರೆಸ್-ಜೆಡಿಎಸ್ ವಿರುದ್ಧ ಘೋಷಣೆ ಕೂಗಿದರು. ಸಂಸದ ಪಿ.ಮೋಹನ್ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಉಕ್ಕಿನ ಸೇತುವೆ ನಿರ್ಮಾಣ ಮಾಡಲು ಸಾವಿರಾರು ಕೋಟಿ ರೂ. ಇದೆ. ಆದರೆ, ಬಡ ಪೌರಕಾರ್ಮಿಕರಿಗೆ ತಿಂಗಳ ವೇತನ ನೀಡಲು ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ಧಾಳಿ ನಡೆಸಿದರು.
ಪಾಲಿಕೆಯ ವಿಪಕ್ಷ ನಾಯಕ ಪದ್ಮನಾಭರೆಡ್ಡಿ, ಪೌರಕಾರ್ಮಿಕ ಸುಬ್ರಮಣ್ಯ ಅವರದ್ದು ಆತ್ಮಹತ್ಯೆಯಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಮಾಡಿರುವ ಕೊಲೆಯಾಗಿದ್ದು, ಕೂಡಲೇ ಮೇಯರ್ ಸಂಪತ್‌ರಾಜ್ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿ ಪೌರಕಾರ್ಮಿಕರನ್ನು ಸಮಾಧಾನಪಡಿಸಿದ ಜಂಟಿ ಆಯುಕ್ತ ಬಸವರಾಜು ಅವರು, ಬಯೋ ಮೆಟ್ರಿಕ್‌ನಲ್ಲಿ ಹೆಸರು ನೋಂದಾಣಿಯಾಗಿರುವ ಕಾರ್ಮಿಕರಿಗೆ ಸಂಜೆ ವೇಳೆಗೆ ವೇತನ ಬಿಡುಗಡೆಗೊಳಿಸುವ ಭರವಸೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.