ಜುಗಾರಿ ಕ್ರಾಸ್‌ನಲ್ಲಿ ವೈರಮುಡಿ ಉತ್ಸವ
Team Udayavani, Jul 13, 2018, 10:59 AM IST
ಇಂದು ಶಿವರಾಜಕುಮಾರ್ ಅವರ 56ನೇ ಹುಟ್ಟುಹಬ್ಬ. ಒಂದು ದಿನ ಮುಂಚೆಯೇ ಹುಟ್ಟುಹಬ್ಬದ ಸಂಭ್ರಮ ಜೋರಾಗಿದ್ದು, ಬರೀ ಅಭಿಮಾನಿ ವಲಯದಲ್ಲಷ್ಟೇ ಅಲ್ಲ, ಚಿತ್ರರಂಗದವರು ಸಹ ಟ್ವಿಟರ್ ಮೂಲಕ ಶಿವರಾಜಕುಮಾರ್ ಅವರ 56ನೇ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಅದೇ ತರಹ ಈ ವರ್ಷ ಸಹ ಶಿವರಾಜಕುಮಾರ್ ಅವರ ಹುಟ್ಟುಹಬ್ಬಕ್ಕೆ ಹಲವು ಹೊಸ ಚಿತ್ರಗಳ ಘೋಷಣೆಯಾಗಿವೆ.
ಶಿವರಾಜಕುಮಾರ್ ಅವರೊಂದಿಗೆ ಚಿತ್ರ ಮಾಡುವುದಾಗಿ ಈ ಹಿಂದೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರು ಹೇಳಿಕೊಂಡಿದ್ದರು. ಆ ಚಿತ್ರಕ್ಕೆ ಈಗ “ವೈರಮುಡಿ’ ಎಂದು ನಾಮಕರಣ ಮಾಡಿದ್ದು, ಶಿವರಾಜಕುಮಾರ್ ಹುಟ್ಟುಹಬ್ಬದ ದಿನದಂದೇ ಶೀರ್ಷಿಕೆ ಬಿಡುಗಡೆ ಮಾಡಲಾಗುತ್ತಿದೆ. ಇದೊಂದು ಪಕ್ಕಾ ಆ್ಯಕ್ಷನ್ ಚಿತ್ರವಾಗಿದ್ದು, ಆರಂಭದಿಂದ ಅಂತ್ಯದವರೆಗೆ ಮಾಸ್ ಅಂಶಗಳೇ ತುಂಬಿಕೊಂಡಿರುವ ಚಿತ್ರ ಎಂಬುದು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರ ಮಾತು.
ಈ ಚಿತ್ರವನ್ನು “ಬೆತ್ತನಗೆರೆ’ ಚಿತ್ರ ನಿರ್ಮಿಸಿದ್ದ ಸ್ವಾಮಿ ಅವರು ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಶೀರ್ಷಿಕೆ ಪಕ್ಕಾ ಮಾಡಿರುವ ಚಿತ್ರತಂಡ, ಇಷ್ಟರಲ್ಲೇ ತಂತ್ರಜ್ಞರ ಆಯ್ಕೆ ನಡೆಯಲಿದೆ. ಇನ್ನು, ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಪೂರ್ಣಚಂದ್ರ ತೇಜಸ್ವಿ ವಿರಚಿತ “ಜುಗಾರಿ ಕ್ರಾಸ್’ ಕಾದಂಬರಿಯನ್ನು ಚಿತ್ರ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಆ ಚಿತ್ರದಲ್ಲೂ ಶಿವರಾಜಕುಮಾರ್ ಅವರು ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಹಿಂದೆ ಕೋಡ್ಲು ರಾಮಕೃಷ್ಣ ಅವರು “ಜುಗಾರಿ ಕ್ರಾಸ್’ ಚಿತ್ರ ಮಾಡುವುದಕ್ಕೆ ಹೊರಟಾಗ, ಆ ಚಿತ್ರದಲ್ಲಿ ಶಿವರಾಜಕುಮಾರ್ ಮತ್ತು ಸೌಂದರ್ಯ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಈಗ ಚಿತ್ರವು ಕೋಡ್ಲು ಅವರಿಂದ ನಾಗಾಭರಣ ಅವರಿಗೆ ಪಾಸ್ ಆಗಿದ್ದು, ಈ ಚಿತ್ರದಲ್ಲೂ ಶಿವರಾಜಕುಮಾರ್ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ದ್ವಾರಕೀಶ್ ನಿರ್ಮಾಣದ ಚಿತ್ರವೊಂದರಲ್ಲಿ ನಟಿಸುವುದಾಗಿ ಖುದ್ದು ಶಿವರಾಜಕುಮಾರ್ ಅವರು ಹೇಳಿಕೊಂಡಿದ್ದರು.
ಇತ್ತೀಚೆಗೆ “ಅಮ್ಮಾ ಐ ಲವ್ ಯೂ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ಅವರು, “ದ್ವಾರಕೀಶ್ ಅವರ ಸಂಸ್ಥೆಯ ಚಿತ್ರವೊಂದರಲ್ಲಿ ನಟಿಸಬೇಕು ಎಂಬ ಪ್ರಯತ್ನ ಕೆಲವು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ, ಕಾರಣಾಂತರಗಳಿಂದ ಅದು ಮುಂದಕ್ಕೆ ಹೋಗುತ್ತಿದೆ. ಮುಂದಿನ ವರ್ಷ (2019) ಅವರ ನಿರ್ಮಾಣದ ಚಿತ್ರದಲ್ಲಿ ನಟಿಸುವುದು ಗ್ಯಾರಂಟಿ’ ಎಂದು ಹೇಳಿದ್ದರು.
ಈಗ ಬಂದಿರುವ ಸುದ್ದಿಯ ಪ್ರಕಾರ, ಈ ಚಿತ್ರವನ್ನು ಪಿ. ವಾಸು ಅವರು ನಿರ್ದೇಶಿಸಲಿದ್ದು, ಚಿತ್ರ ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ. ಈಗಾಗಲೇ ಶಿವರಾಜಕುಮಾರ್ ಅವರು “ದ್ರೋಣ’ ಜೊತೆಗೆ ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು, ಆ ಚಿತ್ರ ಮುಂದಿನ ತಿಂಗಳು ಪ್ರಾರಂಭವಾಗುವ ಸಾಧ್ಯತೆ ಇದೆ. ಈ ಮಧ್ಯೆ ಕನಕಪುರ ಶ್ರೀನಿವಾಸ್ ನಿರ್ಮಾಣದ “ಯಾರ್ ಆದ್ರೆ ನನಗೇನು?’ ಮತ್ತು “ಕನ್ವರ್ ಲಾಲ್’ ಚಿತ್ರಗಳಲ್ಲೂ ಅವರು ನಟಿಸುತ್ತಾರೆ ಎಂಬ ಸುದ್ದಿ ಇದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.