ಅರ್ಧ ಮಸ್ಸಾಲೆ ಇಲ್ಲಿ…;”ಸಿದ್ದಪ್ಪ’ ದೋಸೆಗೆ ಮುಗಿಬಿದ್ರಪ್ಪಾ…
Team Udayavani, Jul 14, 2018, 4:14 PM IST
ರುಚಿ ಶುಚಿ ತಿನಿಸು, ಊಟ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಬಿಸಿಬಿಸಿಯಾದ, ಗರಿಗರಿಯಾದ ದೋಸೆ ಎಂದರೆ ಎಲ್ಲರ ಬಾಯಿಯಲ್ಲೂ ನೀರು ಬರುತ್ತೆ. ಕಾರ್ಪೊರೇಶನ್ ಸರ್ಕಲ್‌ಗೆ ಸಮೀಪದ ಸಂಪಂಗಿರಾಮನಗರದಲ್ಲಿರುವ ಸಿದ್ಧಪ್ಪ ಹೋಟೆಲ್, ಅರ್ಧ ದೋಸೆ ಹೋಟೆಲ್ ಎಂದೇ ಎಲ್ಲರಿಗೂ ಚಿರಪರಿಚಿತ. ಕಾರ್ಪೊರೇಶನ್ ಸರ್ಕಲ್‌ನಲ್ಲಿ ನಿಂತು, ಇಲ್ಲಿ ಅರ್ಧ ದೋಸೆ ಹೋಟೆಲ್ ಎಲ್ಲಿದೆ ಎಂದು ಕೇಳಿದರೆ ಸಾಕು, ಯಾರು ಬೇಕಾದರೂ ತೋರಿಸುತ್ತಾರೆ. ಈ ಹೋಟೆಲ್ ಅಷ್ಟು ಫೇಮಸ್ಸು.
ಜನರ ಹಸಿವು ತಣಿಸಿ, ಮನವನ್ನು ಗೆದ್ದ ಈ ಹೋಟೆಲನ್ನು ಸುಮಾರು 34 ವರ್ಷಗಳಿಂದ ಬಿ. ಸಿದ್ಧಪ್ಪ ಅವರು ನಡೆಸಿಕೊಂಡು ಬಂದಿದ್ದಾರೆ. ಈಗ ಅವರ ಮಕ್ಕಳು ನೋಡಿಕೊಳ್ಳುತ್ತಿದ್ದಾರೆ. ಈಗಲೂ, ಸಿದ್ದಪ್ಪನವರೇ ಇಲ್ಲಿ ಕ್ಯಾಶಿಯರ್. ಇವರು ಆರಂಭಿಸಿದ ಈ ಅರ್ಧ ದೋಸೆ ಹೋಟೆಲ್ ಅಂದಿನಿಂದಲೂ ಇಂದಿಗೂ ಗ್ರಾಹಕರ ಪಾಲಿನ ಇಷ್ಟವಾದ ಹೋಟೆಲ್ ಆಗಿಯೇ ಉಳಿದಿದೆ. ಇಲ್ಲಿ ಖಾಲಿದೋಸೆ, ಅರ್ಧ ದೋಸೆ, ತುಪ್ಪದ ಖಾಲಿ ದೋಸೆ, ಇಡ್ಲಿ ಮಾತ್ರವಲ್ಲ, ರೈಸ್‌ಬಾತ್ ಕೂಡಾ ಸಿಗುತ್ತದೆ.
ಈ ಹೋಟೆಲ್ ಬೆಳಗ್ಗೆ 8.30 ರಿಂದ 12.00 ರವರೆಗೆ ಮಾತ್ರ ನಡೆಯುತ್ತದೆ. ವಾರದ ರಜಾದಿನ ಇಲ್ಲ. ಅರ್ಧ ದೋಸೆಗೆ 45 ರೂಪಾಯಿ. ಶನಿವಾರ ಮತ್ತು ಭಾನುವಾರ ಇಲ್ಲಿ ವಿಪರೀತ ರಶ್Ï ಇರುತ್ತದೆ.
ಮನೆಯ ಸದಸ್ಯರೇ ಅಡುಗೆ ಭಟ್ಟರು!
“ನಮ್ಮ ತಂದೆಗೆ ಈ ಹೋಟೆಲ್ಲೇ ಸರ್ವಸ್ವ. ಅದನ್ನು ಉಳಿಸಿಕೊಳ್ಳಬೇಕು ಎಂಬುದೇ ನಮ್ಮೆಲ್ಲರ ಗುರಿ. ನಾವು ಮನೆಯಲ್ಲಿ 14 ಮಂದಿ ಇದ್ದೇವೆ. ಹಾಗಾಗಿ, ಯಾವುದೇ ಕೆಲಸಗಾರರನ್ನು ತೆಗೆದುಕೊಳ್ಳದೇ ಎಲ್ಲಾ ಕೆಲಸವನ್ನೂ ನಾವೇ ಮಾಡುತ್ತೇವೆ. ವಿಶೇಷವೆಂದರೆ, 14 ಜನರೂ ದೋಸೆ ಹಾಕುವುದರಲ್ಲಿ ನಿಸ್ಸೀಮರು’ ಎಂದು ವಿಶ್ವನಾಥ್ ಅಪ್ಪಾಜಿ ಹೇಳುತ್ತಾರೆ.
ಅರ್ಧ ದೋಸೆ ನೀಡಲು ಕಾರಣ
ಮೊದಲು ಆರಂಭವಾದಾಗ ಹೋಟೆಲ್‌ನಲ್ಲಿ ಪೂರ್ತಿ ದೋಸೆಯನ್ನೇ ಕೊಡುತ್ತಿದ್ದರಂತೆ. ಆಗ ಜನರು ಅದನ್ನು ತಿನ್ನಲಾಗದೆ ಅರ್ಧ ದೋಸೆಯನ್ನಷ್ಟೇ ತಿಂದು ಇನ್ನರ್ಧ ದೋಸೆಯನ್ನು ಹಾಗೆಯೇ ಬಿಟ್ಟು ಹೋಗಿ ಬಿಡುತ್ತಿದ್ದರು. ಪರಿಣಾಮ, ಹೆಚ್ಚಿನ ಆಹಾರ ವೇಸ್ಟ್ ಆಗುತ್ತಿತ್ತು. ಆಹಾರ ಹಾಳಾಗುವುದನ್ನು ತಪ್ಪಿಸಬೇಕೆಂಬ ಉದ್ದೇಶದಿಂದ ಗ್ರಾಹಕರಿಗೆ ಅಂದಿನಿಂದಲೂ ಅರ್ಧ ದೋಸೆಯನ್ನು ನೀಡುತ್ತಾ ಬರಲಾಯಿತಂತೆ. ಈಗ ಅದು ಅರ್ಧ ದೋಸೆ ಹೋಟೆಲ್ ಎಂದೇ ಹೆಸರುವಾಸಿಯಾಗಿದೆ.
ಅರ್ಧ ದೋಸೆ ಅಂದ್ರೆ ಬಲು ಪ್ರೀತಿ
“ಸಿದ್ದಪ್ಪ ಹೋಟೆಲ್‌ನಲ್ಲಿ ಅರ್ಧ ದೋಸೆ ತುಂಬಾ ಟೇಸ್ಟಿ ಆಗಿರುತ್ತದೆ. ಯಾರೇ ದೋಸೆ ಹಾಕಿದರೂ ಅದರ ರುಚಿ ಒಂದೇ ತರಹದಲ್ಲಿರುತ್ತದೆ. ವೀಕೆಂಡ್‌ನಲ್ಲಿ ಒಮ್ಮೆಯಾದರೂ ಇಲ್ಲಿಗೆ ಬಂದು ಅರ್ಧ ದೋಸೆಯ ರುಚಿಯನ್ನು ನಾಲಿಗೆಗೆ ಮುಟ್ಟಿಸುತ್ತೇವೆ. ಇಲ್ಲಿಯ ದೋಸೆಯ ರುಚಿ ನನ್ನನ್ನು ಪ್ರತಿದಿನ ಈ ಕಡೆಗೆ ಒಂದು ಸಲವಾದರೂ ಸೆಳೆಯುತ್ತಿರುತ್ತದೆ’ ಎಂದು ದೋಸೆ ಪ್ರಿಯ ರಜತ್ ಹೇಳುತ್ತಾರೆ.
ಮೂರು ದಶಕಗಳ ಹಿನ್ನೆಲೆ
ಬೆಳಗ್ಗೆ ಮಾತ್ರ ತೆರೆದಿರುತ್ತೆ
ಅರ್ಧ ದೋಸೆಗೆ 45 ರುಪಾಯಿ
ಭರತ ದಂದೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.