ಆಧಾರ್ ಆಧಾರವಾಗಿದ್ದರೂ ಉಂಟು ಅಷ್ಟಿಷ್ಟು ಸಮಸ್ಯೆ
Team Udayavani, Jul 16, 2018, 6:00 AM IST
ಇನ್ನೂ ಒಂದು ಸಮಸ್ಯೆ ಇದೆ. ಆಧಾರ್ ಕಾರ್ಡ್‌ನಲ್ಲಿ ನಮೂದಾಗಿರುವ ಜನ್ಮದಿನಾಂಕದ ದಾಖಲೆಯನ್ನು ಸರ್ಕಾರದ ವ್ಯವಸ್ಥೆಯೇ ಒಪ್ಪಿಕೊಳ್ಳುತ್ತಿಲ್ಲ. ಇದಕ್ಕೆ ಪ್ರತ್ಯೇಕ ದೃಢೀಕರಣವನ್ನು ಕೊಡಬೇಕಾಗುತ್ತಿದೆ. ಬಹುಶಃ ಆಧಾರ್ ಕಾರ್ಡ್ ಮಾಡಿಸುವಾಗ ಒಮ್ಮೆ ಜನ್ಮ ದಿನಾಂಕದ ದೃಢೀಕರಣ ಪಡೆದು ಆಧಾರ್ ಮಾಡಿಸಿಬಿಟ್ಟಿದ್ದರೆ ಮತ್ತೆ ಜನ ಪದೇ ಪದೇ ಈ ದಾಖಲೆಯನ್ನು ಅರಸಿ ಹೋಗಬೇಕಾಗುತ್ತಿರಲಿಲ್ಲ. ಇಂಥದೊಂದು ಮಾದರಿಯನ್ನು ಸರ್ಕಾರ ಆದಷ್ಟು ಶೀಘ್ರವಾಗಿ ಮಾಡಬೇಕಾಗಿದೆ.
ಭಾರತದ ಜನತೆಯ ವಿಶಿಷ್ಟ ಸಂಖ್ಯೆಯಾಗಿ ಆಧಾರ್ ಹಲವು ಪವಾಡಗಳನ್ನು ಮಾಡಬಲ್ಲದು. ಹಿಂದೆ ಒಂದು ಮೊಬೈಲ್ ಸಿಮ್ ಬೇಕಿದ್ದರೆ, ನಮ್ಮ ಫೋಟೊ, ಮೂರ್‍ನಾಲ್ಕು ಪುಟಗಳ ಅರ್ಜಿ ಫಾರಂ ಭರ್ತಿ, ನಮ್ಮ ಹೆಸರು, ವಿಳಾಸದ ದೃಢೀಕರಣದ ನಕಲು ಮುಂತಾದ ಹತ್ತು ಹಲವು ದಾಖಲೆಗಳನ್ನು ಪ್ರಸ್ತುತಪಡಿಸಬೇಕಿತ್ತು. ಅದೇ ಈಗ, ಸಿಮ್ ಬೇಕಾದ ವ್ಯಕ್ತಿ ತನ್ನ ಆಧಾರ್ ಸಂಖ್ಯೆಯನ್ನಷ್ಟೇ ಹೇಳಿದರೆ ಸಾಕು. ಅದರ ಆಧಾರದಲ್ಲಿ ಸಿಮ್ ಬಯಸುವವನ ಬಯೋಮೆಟ್ರಿಕ್ ತೆಗೆಯಲಾಗುತ್ತದೆ. ಅವೆರಡೂ ಹೊಂದಿಕೊಂಡಿತು ಎಂತಾದರೆ ಆ ಕ್ಷಣದಲ್ಲಿ ಕೈಗೆ ಸಿಮ್ ಲಭಿಸುತ್ತದೆ.
10 ದಿನಕ್ಕೆ ಪಾಸ್‌ಪೋರ್ಟ್, 24 ಘಂಟೆಗೆ ಪ್ಯಾನ್?
ಬಹುಶಃ ಒಂದು ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವುದರಿಂದ ಆಗುವ ಲಾಭಗಳತ್ತ ನೋಡುವುದಾದರೆ ಆಧಾರ್ ಅತ್ಯುತ್ತಮ ಆಯ್ಕೆ. ಒಂದು ವಿಶ್ಲೇಷಣೆಯ ಪ್ರಕಾರ, ಆದಾಯ ತೆರಿಗೆ ಸಲ್ಲಿಕೆಯ ಕ್ರಮದಲ್ಲಿ ಆಧಾರ್ ಹಾಗೂ ಪಾನ್ ನಂಬರ್ ಜೋಡಿಸಿರುವುದರಿಂದ ರಿಟರ್ನ್ ಸಲೀಸು. ಐಟಿಆರ್ ಸಿದ್ಧಪಡಿಸಿ ಮೊಬೈಲ್ ಒಟಿಪಿ ಮೂಲಕ ಸಲ್ಲಿಕೆಯನ್ನು ದೃಢಪಡಿಸಿದರೆ ಸಾಕು. ಅಷ್ಟೇಕೆ, ಆಧಾರ್ ಲಿಂಕ್ ಮೂಲಕ ಕೇವಲ ಹತ್ತು ದಿನಕ್ಕೆ ಪಾಸ್‌ಪೋರ್ಟ್ ಪಡೆಯಬಹುದು ಎಂದು ಹೇಳಲಾಗುತ್ತದೆ. ಪಾಸ್‌ಪೋರ್ಟ್‌ನ ಆನ್‌ಲೈನ್ ಅರ್ಜಿಗೆ ಆಧಾರ್ ಕಾರ್ಡ್‌ನ ಪ್ರತಿಯನ್ನು ಲಗತ್ತಿಸಿದರೆ ಮೂರೇ ದಿನಕ್ಕೆ ಪಾಸ್‌ಪೋರ್ಟ್ ಕಚೇರಿಯಿಂದ ಸಂದರ್ಶನಕ್ಕೆ ಕರೆ ಬರುತ್ತದೆ. ಮುಂದಿನ ಏಳು ದಿನಗಳಲ್ಲಿ ಪಾಸ್‌ಪೋರ್ಟ್ ಕೈ ಸೇರುತ್ತದೆ!
ಅರೆರೆ, ಇದೆಲ್ಲಾ ಹೇಳಿದಷ್ಟು ಸುಲಭ ಅಲ್ಲ ಎಂಬ ಅಡ್ಡಮಾತಾಡಬಹುದು. ಇಂದು ಆಧಾರ್ ಆಧಾರಿತ ಇ ಪ್ಯಾನ್ ಕಾರ್ಡ್ ಸೌಲಭ್ಯ ಅತ್ಯಂತ ಸರಳವಾಗಿದೆ. ಆಧಾರ್ ಕಾರ್ಡ್‌ನ್ನು ಎದುರಿಗಿಟ್ಟುಕೊಂಡು ವಿವರಗಳನ್ನು https://www1.incometaxindiaefiling.gov.in/e-FilingGS/Services/ePAN.html?lang=eng ಮೂಲಕ ತುಂಬಬೇಕು. ಅಧಿಕೃತ ಮೊಬೈಲ್‌ಗೆ ಬರುವ ಒಟಿಪಿ ದೃಢೀಕರಣ ವ್ಯವಸ್ಥೆ. ಅರ್ಜಿಯನ್ನು ತುಂಬಿಸುವ ಮುನ್ನವೇ ಅರ್ಜಿದಾರರ ಸ್ಪಷ್ಟ ಸಹಿಯ ಫೋಟೋವನ್ನು ಜೆಪಿಜಿ ಮಾದರಿಯಲ್ಲಿ ತೆಗೆದಿರಿಸಿಕೊಳ್ಳಬೇಕು.
ಆ ಫೋಟೋ ಕೇವಲ 10 ಕೆಬಿಗಿಂತ ಕಡಿಮೆ ಗಾತ್ರವನ್ನು ಹೊಂದಿರಬೇಕು ಎಂಬ ಎರಡು ಅಂಶಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ದಾಖಲೆಯನ್ನು ಮುಟ್ಟಿಸಿದ 24ರಿಂದ 48 ಘಂಟೆಗಳಲ್ಲಿ ಯಾವುದೇ ಶುಲ್ಕವಿಲ್ಲದೆ ಇ-ಪ್ಯಾನ್ ಸಾಫ್ಟ್ ಪ್ರತಿ ನಮಗೆ ಲಭ್ಯ. ಇದು ನಮ್ಮ ಎಲ್ಲ ಮುಂದಿನ ವ್ಯವಹಾರಕ್ಕೆ ಸಾಕು. ಈ ಪ್ಯಾನ್‌ನ ಗ್ರಾಹಕರಿಗೆ ಉಚಿತವಾಗಿ ಮುಂದಿನ ದಿನಗಳಲ್ಲಿ ಪ್ಯಾನ್‌ಕಾರ್ಡ್ ಕಳುಹಿಸಿಕೊಡಲಾಗುತ್ತದೆ ಎಂಬ ಮಾಹಿತಿ ಇದೆ. ಆದರೆ ಅದು ನಿಜವೇ ಎಂಬುದು ಈವರೆಗೂ ದೃಢಪಟ್ಟಿಲ್ಲ. ಆದರೆ ಈ ವ್ಯವಸ್ಥೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದಂತೂ ನಿಜ, ತೆರಿಗೆ ಇಲಾಖೆ ಸದ್ಯಕ್ಕೆ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. 18 ವರ್ಷ ದಾಟಿದವರಿಗೆ ಮಾತ್ರ ಇ-ಪ್ಯಾನ್ ಲಭ್ಯ. ಇಲಾಖೆಗೆ, ದೇಶದ ನಾಗರಿಕರಿಂದ ಸಿಕ್ಕ ಅಪರಿಮಿತ ಬೆಂಬಲದಿಂದ ಉತ್ತೇಜಿತವಾಗಿರುವ ತೆರಿಗೆ ಇಲಾಖೆ ಹತ್ತಿರದ ದಿನಾಂಕದಿಂದಲೇ ಇದನ್ನು ತನ್ನ ಖಾಯಂ ಸೌಕರ್ಯವಾಗಿಸುವ ಭರವಸೆ ಇತ್ತಿದೆ.
ನಿವೃತ್ತರಿಗೂ ಇದುವೇ ಆಧಾರ!
ನಿವೃತ್ತಿ ವೇತನ ಪಡೆಯುವ ಹಿರಿಯ ನಾಗರಿಕರಿಗೆ ತಾವು ಬದುಕಿದ್ದೇವೆ ಎಂದು ಹೇಳಿಕೊಳ್ಳಲು ಲೈಫ್ ಸರ್ಟಿಫಿಕೇಟ್‌ನ್ನು ಪಿಂಚಣಿ ಪಡೆಯುವ ಬ್ಯಾಂಕ್‌ಗೆ ವರ್ಷಕ್ಕೊಮ್ಮೆ ಸಲ್ಲಿಸಬೇಕು. ಈಗ ಆಧಾರ್ ಮೂಲಕ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯಲು ಸಾಧ್ಯ. https://jeevanpramaan.gov.in/# ಗೆ ತೆರಳಿ ಜೀವನ್ ಪ್ರಮಾಣ್ ಎಂಬ ಸಾಪ್ಟ್ವೇರ್‌ಅನ್ನು ಪಿಸಿ ಅಥವಾ ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇನ್‌ಸ್ಟಾಲ್ ಮಾಡಿ ದೃಢೀಕರಿಸಿಕೊಳ್ಳಬೇಕು. ನಂತರ ಡಿಜಿಟಲ್ ಲೈಫ್ ಸರ್ಟಿಫಿಕೇಟ್‌ನ್ನು ಮನೆಯಲ್ಲಿಯೇ ಕುಳಿತು ಪಡೆಯಲು ಸಾಧ್ಯ. ಇದೇ ರೀತಿ ಸಬ್ಸಿಡಿ ಪಡೆಯಲು, ರಾಷ್ಟ್ರೀಯ ಉಳಿತಾಯ ಯೋಜನೆಯ ಬಡ್ಡಿ ಪಡೆಯಲು ಆಧಾರ್ ಅನುಸರಣೀಯ ವ್ಯವಸ್ಥೆ.
ಆಧಾರ್ ಬಂದ ನಂತರದ ದಿನಗಳಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಅರ್ಜಿ ನಮೂನೆಯನ್ನು ಇನ್ನಷ್ಟು ಸರಳಗೊಳಿಸಬಹುದಿತ್ತು. ಈಗಾಗಲೇ ಬ್ಯಾಂಕ್‌ಗಳು ಕೆವೈಸಿ ಮಾಹಿತಿಯನ್ನು ಆಧಾರ್ ಲಿಂಕ್‌ನಿಂದಲೇ ಪಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ವಿಳಾಸ ದೃಢೀಕರಣ, ಪಾನ್ ಕಾರ್ಡ್ ನಕಲು ಮೊದಲಾದ ದಾಖಲೆಗಳು ಅವಶ್ಯ ಎನ್ನಿಸುವುದೇ ಇಲ್ಲ. ಆದರೆ ನಮ್ಮ ವ್ಯವಸ್ಥೆ ಒಂದೇಟಿಗೆ ಸರಳವಾಗುವುದನ್ನು ಒಪ್ಪುವುದಿಲ್ಲ. ಒಂದೇ ಅರ್ಜಿಯಲ್ಲಿ ಹೆಚ್ಚು ಮಾದರಿಯ ಅರ್ಜಿದಾರರಿಗೆ ಅನುಕೂಲ ಮಾಡಿಕೊಡುವ ಚಿಂತನೆ ಅರ್ಜಿಗಳನ್ನು ಸಂಕೀರ್ಣಗೊಳಿಸುತ್ತದೆ.
ಕಂಪಿಸುವ ಆಧಾರಕ್ಕೆ ಆಸರೆ!
ಆಧಾರ್ ಕಾರ್ಡ ಮಾಡಿಸುವ ಸಂದರ್ಭದಲ್ಲಿ ಹಿಂದೊಮ್ಮೆ ಆಗಿರುವ ತಪ್ಪುಗಳನ್ನು ಆನ್‌ಲೈನ್‌ನಲ್ಲಿ ಸರಿಪಡಿಸುವ ಅವಕಾಶವಂತೂ ಇದೆ. ಈ ಬಗ್ಗೆ ಈ ಹಿಂದೆಯೇ ಇದೇ ಅಂಕಣದಲ್ಲಿ ಹೇಳಲಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಲಿಂಗ, ವಿಳಾಸ, ಹೆಸರಿನಲ್ಲಿರುವ ಸ್ಪೆಲ್ಲಿಂಗ್ ತಪ್ಪು, ವಯಸ್ಸು, ಇ ಮೇಲ್ ಐಡಿ, ಮೊಬೈಲ್ ನಂಬರ್ ಮಾರ್ಪಾಡು ಮೊದಲಾದವುಗಳನ್ನು ಮಾಡಲು ಆನ್‌ಲೈನ್‌ನಲ್ಲಿ https://ssup.uidai.gov.in/web/guest/ssup-home ಇಣುಕಬೇಕು. ಒಂದು ಕುಟುಂಬಕ್ಕೆ ಒಂದೇ ಮೊಬೈಲ್ ನಂಬರ್ ಕೊಡಬಹುದು. ಆಧಾರ್ ಮಾಡಿಸುವಾಗ ಮೊಬೈಲ್ ನಂಬರ್ ಕೊಡದಿದ್ದರೆ, ತಪ್ಪಾದ ಮೊಬೈಲ್ ನಂಬರ್ ಕೊಟ್ಟಿದ್ದರೆ ಆನ್‌ಲೈನ್‌ನಲ್ಲಿ ಮಾರ್ಪಾಡು ಅಸಾಧ್ಯ. ಆಗ ಆಧಾರ್ ನೋಂದಣಿ ಮಾಡುವ ಸರ್ಕಾರದ ಅಧಿಕೃತ ಕೇಂದ್ರ, ಬ್ಯಾಂಕ್ ಅಥವಾ ಆಧಾರ್ ಪರಿಷ್ಕರಣ ಕೇಂದ್ರಕ್ಕೆ ತೆರಳಿಯೇ ಬದಲಾವಣೆ ಮಾಡಿಸಬೇಕು. ಇದಕ್ಕೆ ಆ ಕೇಂದ್ರದವರು 25ರಿಂದ 50 ರೂ. ಶುಲ್ಕ ವಿಧಿಸುವುದು ಕಾನೂನುಬದ್ಧ. ಆನ್‌ಲೈನ್ ಮಾರ್ಪಾಡಿಗೆ ಬೇಕಾದ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಈಗೀಗ ಆಧಾರ್ ನೋಂದಣಿಗೆ ಖಾಸಗಿ ಏಜೆನ್ಸಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಆಧಾರ್ ಕಾರ್ಡ್ ಕಳೆದುಹೋದಲ್ಲಿಯೂ ತಲೆಬಿಸಿ ಬೇಡ, http://www.eaadharcard.co.in/aadhaar-card-download/ ವೆಬ್ ಮೂಲಕ ಇ ಆಧಾರ್ ಕಾರ್ಡ್‌ನ್ನು ಪಡೆಯಬಹುದು.
ಇನ್ನೂ ಒಂದು ಸಮಸ್ಯೆ ಇದೆ. ಆಧಾರ್ ಕಾರ್ಡ್‌ನಲ್ಲಿ ನಮೂದಾಗಿರುವ ಜನ್ಮದಿನಾಂಕದ ದಾಖಲೆಯನ್ನು ಸರ್ಕಾರದ ವ್ಯವಸ್ಥೆಯೇ ಒಪ್ಪಿಕೊಳ್ಳುತ್ತಿಲ್ಲ. ಇದಕ್ಕೆ ಪ್ರತ್ಯೇಕ ದೃಢೀಕರಣವನ್ನು ಕೊಡಬೇಕಾಗುತ್ತಿದೆ. ಬಹುಶಃ ಆಧಾರ್ ಕಾರ್ಡ್ ಮಾಡಿಸುವಾಗ ಒಮ್ಮೆ ಜನ್ಮ ದಿನಾಂಕದ ದೃಢೀಕರಣ ಪಡೆದು ಆಧಾರ್ ಮಾಡಿಸಿಬಿಟ್ಟಿದ್ದರೆ ಮತ್ತೆ ಜನ ಪದೇ ಪದೇ ಈ ದಾಖಲೆಯನ್ನು ಅರಸಿ ಹೋಗಬೇಕಾಗುತ್ತಿರಲಿಲ್ಲ. ಇಂಥದೊಂದು ಮಾದರಿಯನ್ನು ಸರ್ಕಾರ ಆದಷ್ಟು ಶೀಘ್ರವಾಗಿ ಮಾಡಬೇಕಾಗಿದೆ.
ಇದೊಂದು ರೀತಿ ಜಾಗತೀಕರಣದಂತೆ. ಗ್ಯಾಟ್ ಬೇಡ ಎನ್ನುವಂತಿಲ್ಲ. ಅಂತೆಯೇ, ಇನ್ನು ಮುಂದೆ ಆಧಾರ್ ಬೇಡ ಎನ್ನುವುದು ನ್ಯಾಯಾಲಯಗಳ ಆದೇಶ, ಸರ್ಕಾರದ ಕಡ್ಡಾಯವಲ್ಲ ಎಂಬ ಸಬೂಬುಗಳ ನಡುವೆಯೂ ಸಾಧ್ಯವಾಗುತ್ತಿಲ್ಲ. ಎರಡು ಜವಾಬ್ದಾರಿಗಳನ್ನು ಸರ್ಕಾರ ನಿರ್ವಹಿಸಿದರೆ ಸಾಕು, ಆಧಾರ್‌ಗಾಗಿ ನಾವು ನೀವು ಕೊಟ್ಟ ಡೇಟಾ ಯಾವತ್ತೂ ದುರ್ಬಳಕೆಯಾಗದಂತೆ ನೋಡಿಕೊಂಡರೆ ನಾಗರಿಕ ಸಂತೃಪ್ತ. ಹಾಗೆಯೇ, ಆಧಾರ್ ತಿದ್ದುಪಡಿ ವಿಚಾರದಲ್ಲಿ ಜನರಿಗೆ ಸುಲಭವಾಗಿ ಕೆಲಸವಾಗುವಂತಹ ಒಂದು ಶಾಶ್ವತ ವ್ಯವಸ್ಥೆ ಆಗಬೇಕು.
ಅಧಿಕಾರಿಗಳ ಆಟ ನಾಗರಿಕರ ಪರದಾಟ
ಆವತ್ತು ಆಧಾರ್ ಕಾರ್ಡ್ ಮಾಡಿಸುವುದಕ್ಕೆ ಸರ್ಕಾರ ಹಾಗೂ ಅದರ ಸಹಯೋಗಿ ವ್ಯವಸ್ಥೆಗಳು ಮಾಡಿದ ಗಡಿಬಿಡಿ ಮತ್ತೂಮ್ಮೆ ನಾಗರಿಕರನ್ನು ಸಂಕಷ್ಟಕ್ಕೀಡು ಮಾಡಿದೆ. ಅಂದು ಉದ್ದನೆಯ ಕ್ಯೂನಲ್ಲಿ ನಿಂತು ಆಧಾರ್ ಮಾಡಿಸುವ ಸಂದರ್ಭದಲ್ಲಿ ಡಾಟಾ ದಾಖಲಿಸುವವರು ಮಾಡಿದ ತಪ್ಪುಗಳು ಈಗ ಜನರಿಗೆ ಶಾಪವಾಗಿದೆ. ಒಬ್ಬ ನಾಗರಿಕ ತನ್ನ ಹುಟ್ಟಿದ ದಿನಾಂಕವನ್ನು ಸ್ಪಷ್ಟವಾಗಿ ಹೇಳಲು ತಡವರಿಸಿದ ಸಂದರ್ಭದಲ್ಲಿ ಕೇವಲ ಇಸವಿಯನ್ನು ಕೇಳಿ, ಅವರ ಜನ್ಮದಿನಾಂಕ ಹಾಗೂ ತಿಂಗಳನ್ನು ಜನವರಿ ಒಂದು ಎಂದು ನಮೂದಿಸಿಬಿಟ್ಟಿದ್ದಾರೆ. ಅಧಿಕೃತ ಮೊಬೈಲ್ ನಂಬರ್‌ಗಳನ್ನು ದಾಖಲಿಸುವಲ್ಲಿ ಕೂಡ ತಾಳ್ಮೆಯಿಂದ ಕೇಳಿ ಸರಿಯಾಗಿ ನಮೂದಿಸಲಾಗಿಲ್ಲ. ಇದು ಇವತ್ತು ಜನರಿಗೆ ಪಾನ್ ಜೊತೆ ಲಿಂಕ್ ಮಾಡುವಲ್ಲಿ, ಬ್ಯಾಂಕ್ ಅಕೌಂಟ್ ತೆರೆಯುವಲ್ಲಿ ದೊಡ್ಡ ಸಮಸ್ಯೆಯಾಗಿದೆ. ಒಬ್ಟಾಕೆಯನ್ನು ಆಧಾರ್‌ನಲ್ಲಿ ಪುರುಷ ಎಂದು ಗುರುತಿಸಿದ್ದರಿಂದ ಬ್ಯಾಂಕ್ ಖಾತೆ ತೆರೆಯುವಾಗ ಆಕೆಯನ್ನು “ಪುರುಷ’ ಮಾಡಿದ್ದರಿಂದಷ್ಟೇ ಖಾತೆ ತೆರೆಯಲು ಸಾಧ್ಯವಾದ ಉದಾಹರಣೆಯೂ ಇದೆ.
ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.