ಸ್ಮಾರ್ಟ್ ನಗರಕ್ಕೆ ಪೂರಕವಾಗಿ ಬರಲಿ ಪಾರ್ಕಿಂಗ್ ಸೌಲಭ್ಯ
Team Udayavani, Jul 15, 2018, 3:00 PM IST
ಪ್ರಸ್ತುತ ಮಂಗಳೂರು ನಗರದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆಗಳಿಲ್ಲದೆ ರಸ್ತೆಗಳ ಬದಿಗಳೇ ಪಾರ್ಕಿಂಗ್ ತಾಣಗಳಾಗಿ ಪರಿವರ್ತಿತವಾಗಿವೆ. ವಾಹನಗಳನ್ನು ರಸ್ತೆಯ ಬದಿಯಲ್ಲೇ ಪಾರ್ಕಿಂಗ್ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಮೊದಲೇ ಸಂಚಾರ ದಟ್ಟನೆ ಹೆಚ್ಚುತ್ತಿರುವ ರಸ್ತೆಗಳಲ್ಲಿ ವಾಹನಗಳ ಅಡ್ಡಾದಿಡ್ಡಿ ನಿಲುಗಡೆ ಮಾಡುತ್ತಿರುವುದರಿಂದ ಸಂಚಾರ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಪೊಲೀಸರು ಎಷ್ಟೇ ಕಾರ್ಯಾಚರಣೆ ನಡೆಸಿದರೂ ಇದೊಂದು ತಾತ್ಕಾಲಿಕ ಪರಿಹಾರವಾಗುತ್ತದೆ. ಸಮಸ್ಯೆ ಮತ್ತೆ ಹಿಂದಿನಂತೆಯೇ ಮರುಕಳುಹಿಸುತ್ತದೆ.
ನಗರದ ಸ್ಥಿತಿ
ಮಂಗಳೂರು ನಗರದಲ್ಲಿ ಪ್ರಸ್ತುತ ಕೆಲವು ಕಡೆ ಪಾರ್ಕಿಂಗ್ ತಾಣಗಳನ್ನು ಗುರುತಿಸಿ ಪಾವತಿ ಪಾರ್ಕಿಂಗ್ ತಾಣಗಳಾಗಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಹೆಚ್ಚಿನವುಗಳು ಆನ್‌ಸ್ಟ್ರೀಟ್ (ರಸ್ತೆ ಬದಿ) ಪಾರ್ಕಿಂಗ್ ತಾಣಗಳಾಗಿವೆ. ಈ ಪಾರ್ಕಿಂಗ್ ವ್ಯವಸ್ಥೆಗಳು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಪ್ರಮುಖವಾಗಿ ಹಳೆ ಬಸ್ ನಿಲ್ದಾಣ, ಕ್ಲಾಕ್ ಟವರ್‌ನಿಂದ ಎ.ಬಿ. ಶೆಟ್ಟಿ ರಸ್ತೆಯಲ್ಲಿ ನೆಹರೂ ಮೈದಾನ್ ಬದಿಯ ರಸ್ತೆ , ವಿವಿ ಕಾಲೇಜು ಮುಂಭಾಗ, ಲಾಲ್‌ಭಾಗ್‌ನಿಂದ ಲೇಡಿಹಿಲ್ ವೃತ್ತದವರೆಗಿನ ರಸ್ತೆಯಲ್ಲಿ ಮಂಗಳಾ ಸ್ಟೇಡಿಯಂನಿಂದ ಬದಿಯ ರಸ್ತೆ, ಸ್ಟೇಟ್‌ಬ್ಯಾಂಕಿನ ಅಕ್ಕಪಕ್ಕದ ರಸ್ತೆಗಳು ಹೀಗೆ ಹಲವಾರು ಜಾಗದಲ್ಲಿ ಪಾರ್ಕಿಂಗ್ ಜಾಗಗಳನ್ನು ಗುರುತಿಸಿ ಬೋರ್ಡ್ ಹಾಕಲಾಗಿದೆ. ಇಲ್ಲಿ ಪಾರ್ಕಿಂಗ್ ಶುಲ್ಕ ವಸೂಲಾತಿ ಮಾಡಲು ಸಿಬಂದಿಯಿರುತ್ತಾರೆ. ಆದರೆ ಇದರ ನಿರ್ವಹಣೆ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಪಾರ್ಕಿಂಗ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
ಮಂಗಳೂರು ಕೇಂದ್ರ ಪ್ರದೇಶದ ಹಂಪನಕಟ್ಟೆಯ ಹಳೆ ಬಸ್ ನಿಲ್ದಾಣದಲ್ಲಿ ಬಹುಅಂತಸ್ತು ವಾಹನ ಪಾರ್ಕಿಂಗ್ ಸಂಕೀರ್ಣ ನಿರ್ಮಾಣ ಯೋಜನೆ ಕಳೆದ ಒಂದು ದಶಕಗಳಿಂದ ಪ್ರಸ್ತಾವನೆಯಲ್ಲಿದೆ. ಮುಡಾ-ಮಹಾನಗರ ಪಾಲಿಕೆಯ ನಡುವೆ ಅಲೆದಾಡುತ್ತಿದ್ದ ಈ ಯೋಜನೆಯನ್ನು ಈ ಸ್ಮಾರ್ಟ್ ನಗರ ಯೋಜನೆಯಲ್ಲಿ ಸೇರಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಹಂತಕ್ಕೆ ತಲುಪಿದೆ. ಇದು ಕಾರ್ಯಗತಗೊಂಡರೆ ಹಂಪನಕಟ್ಟೆ ಪ್ರದೇಶದಲ್ಲಿ ಪಾರ್ಕಿಂಗ್ ಸಮಸ್ಯೆ ಒಂದಷ್ಟು ಪರಿಹಾರ ಕಾಣಬಹುದು. ಈಗಾಗಲೇ ಸಾಕಷ್ಟು ಕಾಲಾವಕಾಶವನ್ನು ತೆಗೆದುಕೊಂಡಿರುವ ಈ ಯೋಜನೆಯ ಅನುಷ್ಠಾನಕ್ಕೆ ಇನ್ನು ಮೀನಮೇಷ ಎಣಿಸದೆ ಶೀಘ್ರ ಕಾರ್ಯರೂಪಕ್ಕೆ ತರಬೇಕಿದೆ.
ಇನ್ನಷ್ಟು ತಾಣಗಳು ರೂಪುಗೊಳ್ಳಲಿ
ಹಳೆ ಬಸ್‌ನಿಲ್ದಾಣ ಮಾದರಿಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಪಾರ್ಕಿಂಗ್ ತಾಣಗಳನ್ನು ಸ್ಥಾಪಿಸುವ ನಿಟ್ಟಿನಲ್ಲೂ ಕಾರ್ಯಯೋಜನೆ ರೂಪುಗೊಳ್ಳಬೇಕಾಗಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಮಹಾನಗರ ಪಾಲಿಕೆ ಅಧೀನದಲ್ಲಿರುವ ಸರಕಾರಿ ಜಾಗಗಳಲ್ಲಿ ಒಂದಷ್ಟು ಪ್ರದೇಶವನ್ನು ಪಾರ್ಕಿಂಗ್ ವ್ಯವಸ್ಥೆಗೆ ಮೀಸಲಿರಿಸುವುದು ಅವಶ್ಯವಾಗಿದೆ ಮತ್ತು ಖಾಸಗಿ ಸಹಭಾಗಿತ್ವವನ್ನು ಪಡೆದುಕೊಂಡು ಇಲ್ಲಿ ಬಹುಅಂತಸ್ತು ಪಾರ್ಕಿಂಗ್ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುವುದು ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಬಹುದು.
ಸ್ಮಾರ್ಟ್ ಪಾರ್ಕಿಂಗ್
ಪಾರ್ಕಿಂಗ್ ವ್ಯವಸ್ಥೆಯ ಸುಗಮ ನಿರ್ವಹಣೆಯ ನಿಟ್ಟಿನಲ್ಲಿ ಕೆಲವು ನಗರಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿವೆ. ಬೆಂಗಳೂರು ನಗರದಲ್ಲೂ ಬಿಬಿಎಂಪಿ ಕೂಡ ಈ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಆದ್ಯತೆ ನೀಡಿದೆ. ಸ್ಮಾರ್ಟ್ ಪಾರ್ಕಿಂಗ್ ಮಾದರಿಯಲ್ಲಿ ಮಹಾನಗರ ಪಾಲಿಕೆಯಿಂದ ಗುರುತಿಸಲಾಗಿರುವ ರಸ್ತೆ ಬದಿಯ ವಾಹನ ನಿಲುಗಡೆ ಸ್ಥಳದಲ್ಲಿ ಪಾರ್ಕಿಂಗ್ ಮೀಟರ್ ಎಂಬ ಅತ್ಯಾಧುನಿಕ ಯಂತ್ರ ಅಳವಡಿಸಲಾಗುತ್ತಿದೆ. ಪಾರ್ಕಿಂಗ್ ಪ್ರದೇಶದಲ್ಲಿ ಖಾಲಿಯಿರುವ ಜಾಗಕ್ಕೆ ವಾಹನ ಬಂದ ಕೂಡಲೇ ಸ್ವಯಂ ಚಾಲಿತವಾಗಿ ವಾಹನ ಬಂದಿದೆ ಎಂಬ ಮಾಹಿತಿ ನಿರ್ವಹಣೆ ಕೊಠಡಿಗೆ ಹೋಗುತ್ತದೆ. ಪಾರ್ಕಿಂಗ್ ವ್ಯವಸ್ಥೆಯ ಹತ್ತಿರವಿರುವ ಪಾರ್ಕಿಂಗ್ ಮೀಟರ್ ಒಳಗೆ ಹೋಗಿ ವಾಹನ ಮಾಲಕ ವಾಹನ ನಿಲುಗಡೆ ಮಾಡುವ ಅವಧಿಗೆ ತಕ್ಕಂತೆ ಹಣ ಪಾವತಿಸಬೇಕಾಗುತ್ತದೆ. ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಖಾಸಗಿ ಎಜೆನ್ಸಿಗಳಿಗೆ ಟೆಂಡರ್ ಮೂಲಕ ವಹಿಸಿ ಕೊಡಲಾಗುತ್ತದೆ. ಟೆಂಡರ್ ವಹಿಸಿಕೊಳ್ಳುವ ಎಜೆನ್ಸಿಗಳು ಅಗತ್ಯ ಉಪಕರಣಗಳು ವಾಹನ , ಸಿಸಿಟವಿ ಕೆಮರಾ, ಮ್ಯಾಗ್ನೆಟಿಕ್ ಆರ್ ಸೆನ್ಸಾರ್, ಸಹಾಯವಾಣಿಗಳನ್ನು ಸ್ಥಾಪಿಸಿ ಶುಲ್ಕ ಸಂಗ್ರಹ ಕಾರ್ಯ ಮಾಡುತ್ತದೆ.
ಸ್ಮಾರ್ಟ್ ಪಾರ್ಕಿಂಗ್‌ಗೆ ಪೂರಕವಾಗಿ ವಾಹನ ಸವಾರರಿಗೆ ನಿಲುಗಡೆ ಬಗ್ಗೆ ಮಾಹಿತಿ ಪಡೆಯಲು ಮೊಬೈಲ್ ಆ್ಯಪ್ ಸಹಾಯ ಮಾಡುತ್ತದೆ. ನಗರದ ಪ್ರಮುಖ ರಸ್ತೆಗಳ ಬದಿಗಳಲ್ಲಿ ಸ್ಮಾಟ್ ìಸ್ಕ್ರೀನ್ ಪೋಲ್ ಅಳವಡಿಸಲಾಗುತ್ತದೆ. ಈ ಪೋಲ್‌ಗಳಲ್ಲಿ ಮುಂದಿನ ಪಾರ್ಕಿಂಗ್ ಸ್ಥಳದ ವಿವರ, ಅಲ್ಲಿ ಎಷ್ಟು ವಾಹನಗಳಿಗೆ ನಿಲುಗಡೆಗೆ ಅವಕಾಶವಿದೆ ಎಂಬ ಮಾಹಿತಿ ಕ್ಷಣಕ್ಷಣಕ್ಕೆ ಲಭ್ಯವಾಗುತ್ತವೆ. ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯಲ್ಲಿ ವಾಹನ ಸವಾರರು ವಾಹನ ನಿಲುಗಡೆ ಶುಲ್ಕವನ್ನು ಪಾರ್ಕಿಂಗ್ ಅವಧಿಗೆ ಅನುಗುಣವಾಗಿ ಪಾವತಿಸಬೇಕಾಗುತ್ತದೆ. ಮೊದಲೇ ನಿಗದಿ ಪಡಿಸಿದ ಅವಧಿಯೊಳಗೆ ವಾಹನ ತೆಗೆಯದಿದ್ದರೆ, ವಾಹನ ತೆಗೆಯುವಂತೆ ಹಾಗೂ ಮುಂದಿನ ಅವಧಿಯ ಮೊತ್ತವನ್ನು ರಿಚಾರ್ಚ್ ಮಾಡುವಂತೆ ಮೊಬೈಲ್‌ಗೆ ಸಂದೇಶ ಬರುತ್ತದೆ. ನಿಗದಿತ ಅವಧಿಯ ಅನಂತರ ಶುಲ್ಕ ಪಾವತಿಸಿ ವಿಸ್ತರಣೆ ಮಾಡದಿದ್ದರೆ ಪೊಲೀಸರು ವಾಹನಗಳನ್ನು ಟೋಯಿಂಗ್ ಮಾಡುತ್ತಾರೆ. ಸ್ಮಾರ್ಟ್ ಪಾರ್ಕಿಂಗ್‌ನ್ನು ಪ್ರೀಮಿಯಂ, ವಾಣಿಜ್ಯ ಹಾಗೂ ಸಾಮಾನ್ಯ ಎಂದು ವರ್ಗಿಕರಿಸಲಾಗುತ್ತಿದೆ.
ಈ ಮಾದರಿಯಲ್ಲೆ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಮಂಗಳೂರು ನಗರದ ಸ್ವರೂಪಕ್ಕೆ ಅನುಗುಣವಾಗಿ ಕೆಲವೊಂದು ಬದಲಾವಣೆಗೊಂದಿಗೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪಾಲಿಕೆ ಈಗಿಂದಲೇ ಅಧ್ಯಯನ ನಡೆಸುವುದು ಅವಶ್ಯ.
ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯೂ ಒಳಗೊಂಡಿದೆ. ಹಳೆ ಬಸ್ ನಿಲ್ದಾಣದಲ್ಲಿ ಬಹು ಅಂತಸ್ತು ವಾಹನ ಪಾರ್ಕಿಂಗ್ ಸಂಕೀರ್ಣ ನಿರ್ಮಾಣ ಕುರಿತಂತೆ ಪೂರಕ ಪ್ರಕ್ರಿಯೆಗಳು ನಡೆಯುತ್ತಿವೆ. ಕೆಲವು ಕಡೆ ಆನ್‌ಸ್ಟ್ರೀಟ್ ಪಾರ್ಕಿಂಗ್ ತಾಣಗಳಿವೆ.
– ಮಹಮ್ಮದ್ ನಜೀರ್,
ಆಯುಕ್ತರು, ಮಹಾನಗರ ಪಾಲಿಕೆ
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.