ತ್ರೋಬಾಲ್‌ನಲ್ಲಿ ಬೆಳಗಿದ ಜ್ಯೋತಿ
Team Udayavani, Jul 19, 2018, 6:00 AM IST
ಕಟಪಾಡಿ: ಬಾಂಗ್ಲಾದೇಶದ ಢಾಕಾದಲ್ಲಿ ನಡೆದ 3 ರಾಷ್ಟ್ರಗಳ ಅಂತಾರಾಷ್ಟ್ರೀಯ ಮಟ್ಟದ ಮಹಿಳಾ ತ್ರೋಬಾಲ್ ಚಾಂಪಿಯನ್ ಶಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಉಡುಪಿ ಜಿಲ್ಲೆಯ ಬೆಳಪು ಗ್ರಾಮದ ಜ್ಯೋತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈಕೆ ಸಣ್ಣ ಮಟ್ಟದ ಕ್ಯಾಂಟೀನ್ ನಡೆಸುವಾತನ ಪುತ್ರಿ ಎಂಬುದು ವಿಶೇಷ.
ಭಾರತ ತಂಡ ಎದುರಾಳಿ ಬಾಂಗ್ಲಾ ಎದುರಿನ ಫೈನಲ್ ಸೆಣಸಾಟದಲ್ಲಿ 25-23, 25-19 ಅಂತರದಿಂದ ಗೆದ್ದು ಪ್ರಶಸ್ತಿಯೊಂದಿಗೆ ಚಿನ್ನದ ಪದಕ ದಿಂದ ಸಿಂಗಾರಗೊಂಡಿತ್ತು. ಜ್ಯೋತಿ ಆರಂಭದಿದಿಂಲೇ ಆಕ್ರಮಣಕಾರಿ ಆಟ ದಿಂದ ಗಮನ ಸೆಳೆದರು.
ಜು. 13 ಮತ್ತು 14ರಂದು ನಡೆದ ಅಂತಾರಾಷ್ಟ್ರೀಯ ತ್ರೋಬಾಲ್ ಟೂರ್ನಿಯಲ್ಲಿ ಭಾರತ, ಬಾಂಗ್ಲಾದೇಶ, ನೇಪಾಲ ತಂಡಗಳು ಪಾಲ್ಗೊಂಡಿದ್ದವು. ಪುರುಷರ ವಿಭಾಗದಲ್ಲಿ ಮನ್‌ಪ್ರೀತ್‌ಸಿಂಗ್ ನಾಯಕತ್ವದ ಭಾರತ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.
ಸಾಫ್ಟ್ಬಾಲ್, ಲಿಫ್ಟಿಂಗ್‌ನಲ್ಲೂ ಸೈ
ಮಹಿಳಾ ತಂಡದ ನಾಯಕಿ ಗಾನಾ, ಉಪ ನಾಯಕಿ ಮಯೂರಾ ಸಹಿತ ಆಂಧ್ರಪ್ರದೇಶ, ಹರಿಯಾಣ, ಕರ್ನಾಟಕ, ಛತ್ತೀಸ್‌ಗಢದ ಕ್ರೀಡಾಳುಗಳು ಭಾರತ ತಂಡದಲ್ಲಿದ್ದು, ಕರ್ನಾಟಕದಿಂದ ಉಡುಪಿ ಜಿಲ್ಲೆಯ ಜ್ಯೋತಿ ತನ್ನ ಸಾಧನೆಗಳ ಮೂಲಕ ಭಾರತ ತಂಡದಲ್ಲಿ ಸ್ಥಾನ ಸಂಪಾದಿಸಿದ್ದರು.
ಬೆಂಗಳೂರಿನ ಖಾಸಗಿ ಸಂಸ್ಥೆ ಯೊಂದರಲ್ಲಿ ಉದ್ಯೋಗಿಯಾಗಿರುವ ಜ್ಯೋತಿ ಕಾರ್ಪೊರೇಟ್ ವಲಯದ ತ್ರೋಬಾಲ್ ಚಾಂಪಿಯನ್ ಶಿಪ್‌ನಲ್ಲಿ ಆಡುತ್ತಿದ್ದು, ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದರು. ವಿದ್ಯಾರ್ಥಿ ಆಗಿದ್ದಾಗಲೇ ದಾಂಡೇಲಿ, ಅಮೃತಸರ, ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ತ್ರೋಬಾಲ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದ ಜ್ಯೋತಿ, ಸಾಫ್ಟ್‌ಬಾಲ್ ಆಟಗಾರ್ತಿ ಯಾಗಿಯೂ ಕೈಚಳಕ ತೋರುತ್ತಿ ದ್ದಾರೆ. ವೇಟ್‌ಲಿಫ್ಟಿಂಗ್‌ನಲ್ಲೂ ಪ್ರಶಸ್ತಿ ಗಳಿಸಿದ್ದಾಗಿ ಹರ್ಷ ವ್ಯಕ್ತ ಪಡಿಸುತ್ತಾರೆ.
ಕಳತ್ತೂರು ಪಿ.ಕೆ.ಎಸ್. ಶಾಲೆಯ ಸೀತಾರಾಮ ಶೆಟ್ಟಿ ಈಕೆಯ ಉತ್ತಮ ಕೋಚ್ ಆಗಿದ್ದು, ತಂದೆ ಬೆಳಪುವಿನಲ್ಲಿ ಕ್ಯಾಂಟೀನ್ ನಡೆಸುವ ರವೀಂದ್ರ, ತಾಯಿ ಸುಗಂಧಿ ನಾಯ್ಕ ಅವರ ನಿರಂತರ ಪ್ರೋತ್ಸಾಹದಿಂದ ಸಾಧನೆಯ ಮಟ್ಟಕ್ಕೇರುವಲ್ಲಿ ಮಾರ್ಗದರ್ಶಕ ರಾಗಿದ್ದರು. ಮಂಗಳೂರು ವಿವಿ, ಆಳ್ವಾಸ್ ತಂಡಗಳಲ್ಲೂ ಕ್ರೀಡಾಸಾಧನೆ ಮೆರೆದಿದ್ದರು.
ಶಾಲಾ ದಿನಗಳಲ್ಲಿ ಕಂಡ ಕನಸು ನನಸಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ಹೆಮ್ಮೆ ಅನಿಸುತ್ತಿದೆ. ಈ ಪಂದ್ಯಾಟಕ್ಕೆ 10 ದಿನ ತರಬೇತಿ ನೀಡಿದ್ದ ಆಕಿಬ್ ಅವರ ತಂತ್ರಗಾರಿಕೆಯಿಂದ ಭಾರತ ತಂಡದ ಗೆಲುವು ಸಾಧ್ಯವಾಯಿತು.
ಜ್ಯೋತಿ, ಅಂತಾರಾಷ್ಟ್ರೀಯ ಮಟ್ಟದ ತ್ರೋಬಾಲ್‌ಆಟಗಾರ್ತಿ, ಬೆಳಪು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.