ಶೀರೂರು ಶ್ರೀಗಳ ದಿಢೀರ್ ನಿಧನ: ಪೊಲೀಸ್ ತನಿಖೆಗೆ ಚಾಲನೆ
Team Udayavani, Jul 20, 2018, 10:03 AM IST
ಉಡುಪಿ: ತಮ್ಮ ಸೋದರನ ಸಾವು ಅಸಹಜವಾದುದು ಎಂದು ಶೀರೂರು ಶ್ರೀ ಲಕ್ಷ್ಮೀವರ ತೀರ್ಥರ ಸೋದರ ಹಾಗೂ ಮಠದ ದಿವಾನ ಲಾತವ್ಯ ಆಚಾರ್ಯ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬೆನ್ನಲ್ಲೇ ಪೊಲೀಸರ ತನಿಖೆಯೂ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಶೀರೂರು ಮೂಲ ಮಠ ವ್ಯಾಪ್ತಿಯ ಹಿರಿಯಡಕ ಠಾಣೆಯಲ್ಲಿ ಪೊಲೀಸರು ಅಸ್ವಾಭಾವಿಕ ಮರಣ ಪ್ರಕರಣವನ್ನು ದಾಖಲಿಸಿದ್ದಾರೆ.
“ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಯಾನೆ ಹರೀಶ್ ಆಚಾರ್ಯ (ಪೂರ್ವಾಶ್ರಮದ ಹೆಸರು) ಜು.16ರಂದು ಮಧ್ಯಾಹ್ನ 1.30ಕ್ಕೆ ಶಿರೂರು ಗ್ರಾಮದ ಮೂಲ ಮಠ ದಲ್ಲಿ ಆಹಾರ ಸೇವಿಸಿದ ಅನಂತರ ಅಸ್ವಸ್ಥಗೊಂಡರು. ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಜು. 19ರಂದು ಅಸ್ತಂಗತರಾಗಿದ್ದಾರೆ. ಈ ಮರಣದಲ್ಲಿ ಸಂಶಯವಿದೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ. ಕಲಂ 174(ಸಿ) ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿದೆ.
ಸುದೀರ್ಘ ಮರಣೋತ್ತರ ಪರೀಕ್ಷೆ
ಶೀರೂರು ಶ್ರೀಗಳ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ 11 ಗಂಟೆಗೆ ತರಲಾಯಿತು. ಆದರೆ ಪರೀಕ್ಷೆ ಪೂರ್ಣಗೊಂಡಿದ್ದು ಅಪರಾಹ್ನ 3.45ಕ್ಕೆ. ಬೇರೆ ಎರಡು ಮರಣೋತ್ತರ ಪರೀಕ್ಷೆ ಇದ್ದುದರಿಂದ ಮತ್ತು ಮರಣೋತ್ತರಕ್ಕೆ ಪೂರ್ವದಲ್ಲಿ ಪ್ರಕರಣ ದಾಖಲು ಹಾಗೂ ಇತರ ಹಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿ ಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಶ್ರೀಗಳ ಶರೀರದ ಮರಣೋತ್ತರ ಪರೀಕ್ಷೆ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಆರಂಭವಾಯಿತು. ಈ ಸಂದರ್ಭದಲ್ಲಿ ಶವಾಗಾರದ ಎದುರು ನೂರಾರು ಮಂದಿ ನೆರೆದಿದ್ದರು.
ತನಿಖೆಗೆ ಚಾಲನೆ
ದೂರು ದಾಖಲಾದ ಹಿನ್ನೆಲೆಯಲ್ಲಿ ಉಡುಪಿ ರಥಬೀದಿಯಲ್ಲಿರುವ ಶೀರೂರು ಮಠ ಹಾಗೂ ಶೀರೂರಿನಲ್ಲಿರುವ ಮೂಲ ಮಠಗಳಿಗೆ ಜು.18ರ ಬೆಳಗ್ಗೆಯಿಂದಲೇ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈಗಾಗಲೇ ಪೊಲೀಸರು ತನಿಖೆ ಆರಂಭಿಸಿದ್ದು, ಐಜಿಪಿ ಅರುಣ್ ಚಕ್ರವರ್ತಿ ಅವರು ಮೂಲಮಠಕ್ಕೆ ಭೇಟಿ ನೀಡಿದ್ದಾರೆ.
“ತನಿಖೆ ದೃಷ್ಟಿಯಿಂದ ಶೀರೂರು ಮೂಲ ಮಠದ ಅಡುಗೆ ಕೋಣೆ ಮತ್ತು ಶ್ರೀಗಳ ಕೋಣೆಯನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಇನ್ನೂ ಹೆಚ್ಚಿನ ಸ್ಥಳಗಳನ್ನು ವಶಕ್ಕೆ ಪಡೆದುಕೊಳ್ಳುವ ಕುರಿತು ನಿರ್ಧಾರ ತಳೆಯಲಾಗುವುದು’ ಎಂದು ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ “ಉದಯವಾಣಿ’ಗೆ ತಿಳಿಸಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಶೀರೂರು ಮಠ ಜು. 21 ರವರೆಗೆ ಪೊಲೀಸರ ವಶದಲ್ಲಿರಲಿವೆ.
ಶ್ರೀಗಳ ದೇಹದಲ್ಲಿ ಶಂಕಿತ ವಿಷಕಾರಿ ಅಂಶ ಪತ್ತೆ : ವೈದ್ಯರ ಹೇಳಿಕೆ
ಉಡುಪಿ: ಶೀರೂರು ಶ್ರೀಗಳ ದೇಹದಲ್ಲಿ ಶಂಕಿತ ವಿಷಕಾರಿ ಅಂಶಗಳು ಪತ್ತೆಯಾಗಿವೆ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ. ಗುರುವಾರ ಶ್ರೀಗಳ ದೇಹವನ್ನು ಕಸ್ತೂರ್ಬಾ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗಕ್ಕೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಶೀರೂರು ಶ್ರೀಗಳು ಜು.18ರಂದು ಮುಂಜಾವ 1.05ಕ್ಕೆ ಗಂಭೀರ ಸ್ಥಿತಿಯಲ್ಲಿ ಕೆಎಂಸಿ ಆಸ್ಪತ್ರೆಯ ತೀವ್ರನಿಗಾ ವಿಭಾಗಕ್ಕೆ ದಾಖಲಾಗಿದ್ದರು. ಇದಕ್ಕೂ ಮೊದಲು ಉಡುಪಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಕೆಎಂಸಿಗೆ ದಾಖಲಾಗುವಾಗ ಅವರಿಗೆ ಉಸಿರಾಟದ ತೀವ್ರ ತೊಂದರೆಯಿತ್ತು. ರಕ್ತದೊತ್ತಡ ಭಾರೀ ಕಡಿಮೆ ಇತ್ತು. ಹೊಟ್ಟೆಯೊಳಗೆ ರಕ್ತಸ್ರಾವವಾಗಿತ್ತು. ಈ ಹಿಂದೆ ಅವರಿಗೆ ವಾಂತಿಭೇದಿ ಕೂಡ ಆಗಿತ್ತು. ಕೆಎಂಸಿ ತಜ್ಞ ವೈದ್ಯರು ಎಲ್ಲ ರೀತಿಯ ತಪಾಸಣೆಗಳನ್ನು ನಡೆಸಿದರು. ವೆಂಟಿಲೇಟರ್ ಸಹಾಯದೊಂದಿಗೆ ಚಿಕಿತ್ಸೆ ಮುಂದುವರಿಸಲಾಯಿತು. ರಕ್ತ ನೀಡಲಾಯಿತು. ಡಯಾಲಿಸಿಸ್ ಕೂಡ ನಡೆಸಲಾಯಿತು. ಆದರೆ ಫಲ ನೀಡಲಿಲ್ಲ. ದೇಹದ ಎಲ್ಲ ಅಂಗಗಳು ವಿಫಲವಾದವು. ತೀವ್ರ ರಕ್ತಸ್ರಾವವಾಗಿ ಶ್ರೀಗಳು ಜು.19ರ ಬೆಳಗ್ಗೆ 8.30ಕ್ಕೆ ಅಸ್ತಂಗತರಾದರು. ಅವರ ದೇಹದಲ್ಲಿ ಶಂಕಿತ ವಿಷಕಾರಿ ಅಂಶಗಳಿದ್ದವು. ಈ ಬಗ್ಗೆ ಮುಂದಿನ ಕ್ರಮಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ಹೇಳಿದರು. “ಫುಡ್ ಪಾಯ್ಸನ್ ಇರಬಹುದೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ| ಅವಿನಾಶ್ ಶೆಟ್ಟಿ, “ರಕ್ತದಲ್ಲಿ ಶಂಕಿತ ವಿಷಕಾರಿ ಅಂಶಗಳು ಪತ್ತೆಯಾಗಿರುವುದರಿಂದ ಪೋಸ್ಟ್‌ಮಾರ್ಟಂ ಮಾಡಬೇಕಿದೆ. ಆ ಬಳಿಕ ಹೆಚ್ಚಿನ ಮಾಹಿತಿ ದೊರೆಯಲಿದೆ’ ಎಂದು ಚಿಕಿತ್ಸಾ ತಂಡದಲ್ಲಿದ್ದ ತಜ್ಞವೈದ್ಯ ಡಾ| ಶಿವಶಂಕರ್ ಭಟ್ ತಿಳಿಸಿದರು.
ತೆರೆದ ವಾಹನದಲ್ಲಿ ಮೆರವಣಿಗೆ
ಮರಣೋತ್ತರ ಪರೀಕ್ಷೆ ಬಳಿಕ ಶ್ರೀಗಳ ದೇಹವನ್ನು ಬುಟ್ಟಿ ಪಲ್ಲಕಿಯೊಳಗೆ ಕುಳ್ಳಿರಿಸಿ ಅಲಂಕೃತ ತೆರೆದ ಜೀಪಿನಲ್ಲಿ ಮೆರವಣಿಗೆಯ ಮೂಲಕ ರಥಬೀದಿಗೆ ಕರೆತರಲಾಯಿತು. ಸುಮಾರು 5 ಕಿ.ಮೀ. ಸಾಗಿದ ಮೆರವಣಿಗೆ ಹಾದಿಯುದ್ದಕ್ಕೂ ಜನ ಕಾದು ನಿಂತು ವೀಕ್ಷಿಸಿದರು. ಹಲವರು ತುಳಸಿ ಮಾಲೆಗಳನ್ನು ಅರ್ಪಿಸಿದರು. ಮಳೆ ಬಿಡುವು ಕೊಟ್ಟಿದ್ದರಿಂದ ತೊಂದರೆಯಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru; ಟ್ಯಾಂಕರ್ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ
ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.