ಗ್ರಾಮೀಣ ಆಟೋಟದಲ್ಲಿ ಮಿಂದೆದ್ದ ಕೋಸ್ಟಲ್‌ವುಡ್ ಸ್ಟಾರ್ಸ್ !
Team Udayavani, Jul 23, 2018, 12:22 PM IST
ಜಪ್ಪಿನಮೊಗರು: ಒಂದೆಡೆ ಕೆಸರಿನಲ್ಲಿ ವಾಲಿಬಾಲ್ ಪಂದ್ಯಾಟ, ಇನ್ನೊಂದೆಡೆ ಓಟ, ಮತ್ತೂಂದೆಡೆ ಹಗ್ಗಜಗ್ಗಾಟ… ನಗರದ ಮಧ್ಯೆಯ ನಡೆದ ಈ ಎಲ್ಲ ಆಟಗಳನ್ನು ನೂರಾರು ಜನರು ನೋಡಿ ಖುಷಿಪಟ್ಟರು! ಕೋಸ್ಟಲ್‌ವುಡ್‌ನಲ್ಲಿ ಮಿಂಚಿದ ಕಲಾವಿದರು, ತಂತ್ರಜ್ಞರು ರವಿವಾರ ಅಪ್ಪಟ ಗ್ರಾಮೀಣ ಶೈಲಿಯಲ್ಲಿ ಕೆಸರು ಗದ್ದೆಯಲ್ಲಿ ಆಡಿ ಸಂಭ್ರಮಿಸಿದರು. ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ಆಶ್ರಯದಲ್ಲಿ ಜಪ್ಪಿನಮೊಗರಿನ ಜಯ-ವಿಜಯ ಜೋಡುಕರೆ ಕಂಬಳಗದ್ದೆಯಲ್ಲಿ ‘ತುಳುವೆರೆ ತುಲಿಪು’ ಕಾರ್ಯಕ್ರಮ ಆಯೋಜಿಸಲಾಯಿತು.
ವಿವಿಧ ರೀತಿಯ ಆಟ
ಬಾಯಿಯಲ್ಲಿ ಲಿಂಬೆ ಚಮಚ ಇಟ್ಟು ನಡೆಯುವುದು, ಬಕೆಟ್‌ಗೆ ನೀರು ತುಂಬಿಸುವುದು, ಗೋಣಿ ಚೀಲ ಓಟ, ನಾಣ್ಯ ಹುಡುಕುವುದು, ಕೆಸರಿನಲ್ಲಿ ಓಟ, ಚೆಂಡು ಪಾಸ್, ಹಗ್ಗ ಜಗ್ಗಾಟ, ಕೊಪ್ಪರಿಗೆ ಹುಡುಕುವುದು, ಜೋಡಿ ಎತ್ತಿನ ಓಟಗಳೊಂದಿಗೆ ಆಟೋಟಗಳು ರವಿವಾರ ಕಂಬಳಗದ್ದೆಯಲ್ಲಿ ಸಂಪನ್ನಗೊಂಡ ವು. ಒಕ್ಕೂಟದ ಅಧ್ಯಕ್ಷ ಪಮ್ಮಿ ಕೋಡಿಯಾಲಬೈಲ್, ನಟರಾದ ಅರ್ಜುನ್ ಕಾಪಿಕಾಡ್, ಪೃಥ್ವಿ ಅಂಬರ್, ಪ್ರತೀಕ್ ಶೆಟ್ಟಿ ಸಹಿತ ಬಹುತೇಕ ಎಲ್ಲ ಸ್ಟಾರ್‌ನಟರು ಪಾಲ್ಗೊಂಡರು. ದೇವದಾಸ್ ಕಾಪಿಕಾಡ್, ಶರ್ಮಿಳಾ ಡಿ. ಕಾಪಿಕಾಡ್, ಕಿಶೋರ್ ಡಿ. ಶೆಟ್ಟಿ, ಭೋಜರಾಜ್ ವಾಮಂಜೂರು ಮೊದಲಾದವರು ಭಾಗವಹಿಸಿದ್ದರು.
ಸಮಾರೋಪ
ಸಂಜೆ ನಡೆದ ಸಮಾರೋಪ ಸಮಾರಂಭ ದಲ್ಲಿ ತುಳುನಾಡಿನ ಸಾಧಕ ಕಲಾವಿದರನ್ನು ಸಮ್ಮಾನಿಸಲಾಯಿತು. ನಿರ್ಮಾಪಕರು, ನಿರ್ದೇಶಕರು, ಹಾಸ್ಯ ಕಲಾವಿದರು ನಟ ನಟಿಯರು, ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು.
ಉದ್ಘಾಟನ ಸಮಾರಂಭ
ಉದ್ಘಾಟನ ಕಾರ್ಯಕ್ರಮದಲ್ಲಿ ಮನಪಾ ಸದಸ್ಯ ಜೆ. ಸುರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಎನ್.ಜಿ. ನಾಗೇಶ್, ಜಯವಿಜಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಅನಿಲ್ ಶೆಟ್ಟಿ ಮನ್ಕುತೋಟ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಉದ್ಯಮಿ ಮಹಾಬಲ ಶೆಟ್ಟಿ ಜಪ್ಪಿನಮೊಗರು, ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಗೌರವ ಅಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಹಿಂದೂಯುವ ಸೇನೆ ಅಧ್ಯಕ್ಷ ಯಶೋಧರ ಚೌಟ, ಪ್ರಮುಖರಾದ ಶ್ಯಾಮ್‌ಪ್ರಸಾದ್ ಕಡೆಕಾರ್ ಅತಿಥಿಗಳಾಗಿದ್ದರು. ಕೋಸ್ಟಲ್‌ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಪಮ್ಮಿ ಕೊಡಿಯಾಲಬೈಲು, ಸ್ಥಾಪಕ ಅಧ್ಯಕ್ಷರಾದ ಅಶ್ವಿನಿ ಜಿ.ಕೋಟ್ಯಾನ್, ತುಳುವೆರೆ ತುಲಿಪು ಕಾರ್ಯಕ್ರಮದ ಅಧ್ಯಕ್ಷರಾದ ಮೋಹನ್‌ದಾಸ್ ರೈ, ಪ್ರಮುಖರಾದ ಶಾಂಭವಿ ಕೊಡಿಯಾಲಬೈಲು, ಧನ್‌ರಾಜ್, ರಾಜೇಶ್ ಸ್ಕೈಲಾರ್ಕ್, ಲೋಕೇಶ್ ಪೂಜಾರಿ, ಜೀತು ಕುಂದರ್ ಉಪಸ್ಥಿತರಿದ್ದರು. ಲಕ್ಷ್ಮೀಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
‘ತುಳುವೆರ್ ತಿನಸ್’
ಗ್ರಾಮೀಣ ಆಟೋಟ ಸ್ಪರ್ಧೆಯ ಜತೆ ಕಲಾವಿದರು ಕೆಸರಿನಲ್ಲಿ ಮೋಜು ಮಸ್ತಿ ಹಾಗೂ ಕೋಸ್ಟಲ್ ವುಡ್ ಅಭಿಮಾನಿಗಳಾಗಿ ‘ತುಳುವೆರ್ ತಿನಸ್’ ತುಳುನಾಡಿನ ಸಾಂಪ್ರದಾಯಿಕ ತಿಂಡಿಗಳ ಸ್ಪರ್ಧೆ ಕೂಡ ಆಯೋಜನೆಗೊಂಡಿತು. ‘ತುಳುವೆರ್ ತುಲಿಪು’ ಉದ್ಘಾಟನೆ ಅನಂತರ ವಿವಿಧ ಸ್ಪರ್ಧೆಗಳು ನಡೆದವು. ಮಧ್ಯಾಹ್ನ ತುಳುನಾಡಿನ ಸವಿರುಚಿಯಾದ ಗಂಜಿ ಹಾಗೂ ವಿವಿಧ ಬಗೆಯ ಚಟ್ನಿ ಮತ್ತು ಇನ್ನಿತರ ಪದಾರ್ಥಗಳು ಮನ ತಣಿಸಿದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.