ಹೂಡಿಕೆ ಸೆಳೆಯಲು ಹೊಸ ನೀತಿ
Team Udayavani, Jul 24, 2018, 11:54 AM IST
ಬೆಂಗಳೂರು: ಎರಡನೇ ಹಂತದ “ನಮ್ಮ ಮೆಟ್ರೋ’ ಯೋಜನೆಯಲ್ಲಿ ಹೂಡಿಕೆ ಮಾಡಲು ಕಾರ್ಪೊರೇಟ್ ಕಂಪನಿಗಳನ್ನು ಆಕರ್ಷಿಸಲು ಮುಂದಾಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್), ಈ ಸಂಬಂಧ ಪ್ರತ್ಯೇಕ ನೀತಿ ಜಾರಿಗೆ ತರಲು ನಿರ್ಧರಿಸಿದೆ.
ಮೆಟ್ರೋ ಮಾರ್ಗದುದ್ದಕ್ಕೂ ಬರುವ ಕಾರ್ಪೊರೇಟ್ ಕಂಪನಿಗಳನ್ನು ಬಂಡವಾಳ ಹೂಡಿಕೆಗೆ ಆಕರ್ಷಿಸುವುದು ಇದರ ಮುಖ್ಯ ಉದ್ದೇಶ. ಇದಕ್ಕಾಗಿ ಪೂರಕ ವಾತಾವರಣ ಕಲ್ಪಿಸುವುದು. ಆ ಮೂಲಕ ಜನರಿಗೆ ಸೇವೆ ಜತೆಗೆ ಆರ್ಥಿಕ ಹೊರೆ ತಗ್ಗಿಸಲು ಈ ನೀತಿ ನೆರವಾಗಲಿದೆ. ಈಗಾಗಲೇ ಇದು ರೂಪುಗೊಂಡಿದ್ದು, ಶೀಘ್ರದಲ್ಲೇ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಬಿಎಂಆರ್‌ಸಿ ಉನ್ನತಾಧಿಕಾರ ಸಮಿತಿ ಮುಂದೆ ಬರಲಿದೆ.
ಕಂಪನಿಗೊಂದು ನಿಲ್ದಾಣ ಸಾಧ್ಯವೇ?: ಈಗಾಗಲೇ ಎಂಬಸಿ ಗ್ರೂಪ್, ಇಂಟೆಲ್, ಇನ್ಫೋಸಿಸ್ ಜತೆ ಒಡಂಬಡಿಕೆಗೆ ಬಿಎಂಆರ್‌ಸಿಎಲ್ ಸಹಿ ಹಾಕಿದೆ. ಬಯೋಕಾನ್ ಸೇರಿ ಹಲವು ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರಿಸಿವೆ. ಆದರೆ, ಬಹುತೇಕ ಕಂಪನಿಗಳು ಒಂದಕ್ಕೊಂದು ಹೊಂದಿಕೊಂಡಂತಿವೆ. ಹೀಗಿರುವಾಗ, ಕಂಪನಿಗೊಂದು ನಿಲ್ದಾಣ ಸಾಧ್ಯವಿಲ್ಲ.
ಹಾಗಾಗಿ ನಿಲ್ದಾಣಗಳ ಮೇಲೆ ನಾಮಫಲಕ, ಸಂಪರ್ಕ ಸೇತುವೆ, ನಿಲ್ದಾಣದಲ್ಲಿ ಆ ಕಂಪನಿಗಾಗಿ ಜಾಗ ಮೀಸಲಿಡುವುದು ಸೇರಿದಂತೆ ಹಲವು ಅವಕಾಶಗಳನ್ನು ಕಲ್ಪಿಸಲು ನೀತಿ ರೂಪಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಕಂಪನಿಗಳಿಗೆ ಮೆಟ್ರೋ ಯೋಜನೆಯಲ್ಲಿ ಹೂಡಿಕೆ ಮಾಡಲು ಹಲವು ಆಯ್ಕೆಗಳನ್ನು ನೀಡಲಾಗುವುದು. ಸಂಪೂರ್ಣ ನಿಲ್ದಾಣ ನಿರ್ಮಾಣಕ್ಕೆ ಹಣ ಹೂಡಿಕೆ ಮಾಡಬಹುದು. ಇದಲ್ಲದೆ ಯಾವುದಾದರೂ ಮೆಟ್ರೋ ನಿಲ್ದಾಣಕ್ಕೆ ಕಂಪನಿಯ ಹೆಸರು ಇಡುವುದು
ಅಥವಾ ನಿಲ್ದಾಣದಿಂದ ಕಂಪನಿ ಪ್ರವೇಶ ದ್ವಾರದವರೆಗೆ ಸಂಪರ್ಕ ಕಲ್ಪಿಸುವುದು ಅಥವಾ ಆ ನಿಲ್ದಾಣದಲ್ಲಿ ವಾಣಿಜ್ಯ ಉದ್ದೇಶಕ್ಕೆ ಬೇಕಾದಷ್ಟು ಜಾಗ ನೀಡುವುದು ಅಥವಾ ಈ ಮೂರೂ ಸೌಲಭ್ಯಗಳನ್ನು ನೀಡಲು ನೀತಿಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಬಿಎಂಆರ್‌ಸಿ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
1,100 ಕೋಟಿ ರೂ. ನಿರೀಕ್ಷೆ: ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅಡಿ ಇನ್ಫೋಸಿಸ್ ಮಾದರಿಯಲ್ಲಿ ಇಡೀ ನಿಲ್ದಾಣವನ್ನು ನಿರ್ಮಿಸಬಹುದು. ಇದು ಸಾಧ್ಯವಾಗದಿದ್ದರೆ, ಮೊದಲ ಹಂತದಲ್ಲಿರುವ ಮಂತ್ರಿಸ್ಕ್ವೇರ್ ಮಾದರಿಯಲ್ಲಿ ಮೆಟ್ರೋ ನಿಲ್ದಾಣದ ಸುತ್ತ ಆಸ್ತಿ ಅಭಿವೃದ್ಧಿಗೆ ಅವಕಾಶ ನೀಡಲಾಗುವುದು. ಈ ಮಾದರಿಯಲ್ಲಿ ಒಟ್ಟಾರೆ 1,100 ಕೋಟಿ ಬಂಡವಾಳ ನಿರೀಕ್ಷಿಸಲಾಗಿದೆ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇs… ಮಾಹಿತಿ ನೀಡಿದ್ದಾರೆ.
ಮೆಟ್ರೋ ಎರಡನೇ ಹಂತದ ಯೋಜನೆಗೆ “ಇನ್ನೋವೇಟಿವ್ ಫೈನಾನ್ಸ್’ ಎದುರು ನೋಡುತ್ತಿದ್ದೇವೆ. ಇದರಲ್ಲಿ ಮೆಟ್ರೋ ಮಾರ್ಗದುದ್ದಕ್ಕೂ ತಲೆಯೆತ್ತುವ ಹೊಸ ಬಡಾವಣೆಗಳ ಮೇಲೆ ಮೆಟ್ರೋ ಸೆಸ್ ಹೇರಿಕೆ, ಪ್ರೀಮಿಯಂ ಫ್ಲೋರ್ ಸ್ಪೇಸ್ ಇಂಡೆಕ್ಸ್ (ಪಿಎಂಎಫ್ಎಸ್‌ಐ), ಜಾಹೀರಾತು, ಲೀಸ್ ಮತ್ತಿತ್ತರ ಅವಕಾಶಗಳಿವೆ.
ಇದಕ್ಕೆ ಪೂರಕವಾಗಿ ಕಾರ್ಪೊರೇಟ್ ಕಂಪನಿಗಳಿಂದ ಬಂಡವಾಳ ಆಕರ್ಷಿಸಲು ಪ್ರತ್ಯೇಕ ನೀತಿ ಅಸ್ತಿತ್ವಕ್ಕೆ ಬರಲಿದೆ. ಇದರಿಂದ ಪ್ರತಿ ಒಡಂಬಡಿಕೆಗೂ ಸರ್ಕಾರದ ಬಳಿ ಹೋಗದೆ, ಉನ್ನತಾಧಿಕಾರ ಸಮಿತಿಯಲ್ಲೇ ತೀರ್ಮಾನ ಕೈಗೊಳ್ಳಬಹುದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಮಾಡಿಕೊಂಡ ಒಪ್ಪಂದಗಳು
-ಕಾಡುಬೀಸನಹಳ್ಳಿ ನಿಲ್ದಾಣ ನಿರ್ಮಾಣಕ್ಕಾಗಿ ಎಂಬಸಿ ಗ್ರೂಪ್‌ನಿಂದ 100 ಕೋಟಿ ರೂ.
-ಬೆಳ್ಳಂದೂರು ನಿಲ್ದಾಣ ನಿರ್ಮಾಣಕ್ಕೆ ಇಂಟೆಲ್‌ನಿಂದ 100 ಕೋಟಿ ರೂ.
-ಕೋನಪ್ಪನ ಅಗ್ರಹಾರ ನಿಲ್ದಾಣ ನಿರ್ಮಾಣಕ್ಕೆ ಇನ್ಫೋಸಿಸ್‌ನಿಂದ 200 ಕೋಟಿ ರೂ.
ಎಲ್ಲೆಲ್ಲಿ ಅವಕಾಶ?: 2 ಮತ್ತು 2ಎ ಸೇರಿ ಒಟ್ಟಾರೆ 89 ಕಿ.ಮೀ. ಉದ್ದ ಮೆಟ್ರೋ ಹಾದುಹೋಗಲಿದೆ. ಇದರಲ್ಲಿ ನಾಲ್ಕು ವಿಸ್ತರಿಸಿದ ಹಾಗೂ ಮೂರು ಪ್ರತ್ಯೇಕ ಮಾರ್ಗಗಳು ಬರಲಿವೆ. ಆದರೆ, ಪ್ರಸ್ತುತ “2ಎ’ನಲ್ಲಿ ಬರುವ ಹೊರವರ್ತುಲ ರಸ್ತೆ ಕೆ.ಆರ್.ಪುರ-ಸಿಲ್ಕ್ಬೋರ್ಡ್ ಜಂಕ್ಷನ್ ನಡುವಿನ 17 ಕಿ.ಮೀ. ಮಾರ್ಗದಲ್ಲಿ ಮಾತ್ರ ಸದ್ಯಕ್ಕೆ ಹೂಡಿಕೆಗೆ ಅವಕಾಶ ಇದೆ.
ಉಳಿದ 72 ಕಿ.ಮೀ. ಮಾರ್ಗ ನಿರ್ಮಾಣಕ್ಕೆ ಶೇ. 50ರಷ್ಟು ಅನುದಾನ ಕೇಂದ್ರ ಸರ್ಕಾರದಿಂದ ದೊರೆಯಲಿದ್ದು, ಮಿಕ್ಕ ಹಣವನ್ನು ರಾಜ್ಯ ಸರ್ಕಾರ ಮತ್ತು ಸಾಲದ ಮೂಲಕ ಕ್ರೋಢೀಕರಿಸಲಾಗುತ್ತದೆ. ಇನ್ನು ಪ್ರಸ್ತಾವಿತ ಕೆ.ಆರ್.ಪುರ-ಹೆಬ್ಟಾಳ ನಡುವೆ ಮೆಟ್ರೋ ಮಾರ್ಗ ನಿರ್ಮಿಸುವ ಆಲೋಚನೆ ಇದ್ದು, ಅಲ್ಲಿ ಮಾನ್ಯತಾ ಟೆಕ್‌ಪಾರ್ಕ್, ನಾಗವಾರ ಬರುವುದರಿಂದ ಹೂಡಿಕೆಗೆ ವಿಪುಲ ಅವಕಾಶಗಳಿವೆ. ಅಲ್ಲಿ ಈ ಉದ್ದೇಶಿತ ನೀತಿ ನೆರವಿಗೆ ಬರಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.