ಮೇರೆ ಪಾಸ್ ಕೋ”ಮಾ’ ಹೈ!
Team Udayavani, Jul 25, 2018, 6:00 AM IST
“ಅಮ್ಮಾ, ಅಮ್ಮಾ ಇಲ್ನೋಡು’… ಎಂದು ಸೆರಗು ಜಗ್ಗುವಂತೆ ಮಗು ಅಮ್ಮನನ್ನು ಕೂಗುತ್ತದೆ. ತಕ್ಷಣ ತಿರುಗಿ ನೋಡುವ ಸ್ಥಿತಿಯಲ್ಲಿ ಅಮ್ಮನಿಲ್ಲ. ಕಂದಾ ಎನ್ನುತ್ತಾ ಕೈ ಚಾಚುವ ಶಕ್ತಿಯಿಲ್ಲ ಆಕೆಗೆ. ಆದರೂ, ಮಗುವಿನ ಅಳು ಆಕೆಯಲ್ಲಿ ಕಣ್ಣೀರು ತರಿಸುತ್ತದೆ. ದೇಹ ನಿಶ್ಚೇಶ್ಚಿತವಾಗಿದ್ದರೂ ಮಗುವಿಗಾಗಿ ಹೃದಯ ಮಿಡಿಯುತ್ತದೆ. ತಾಯಿ- ಮಗುವಿನ ಸಂಬಂಧ ಅಷ್ಟು ದೈವಿಕವಾದದ್ದು. ಸಾವಿನಂಚಿನಲ್ಲಿರುವ ತಾಯನ್ನು ಬದುಕಿಸುವ ಶಕ್ತಿ, ಮಗುವಿನ ಒಂದು ಸ್ಪರ್ಶಕ್ಕಿದೆ ಎಂಬುದನ್ನು ವೈದ್ಯಲೋಕವೂ ಅಚ್ಚರಿಯಿಂದಲೇ ಒಪ್ಪಿಕೊಳ್ಳುವಂಥ ಘಟನೆಗಳು ನಡೆದಿವೆ…
“ಅಮ್ಮಾ… ಅಮ್ಮಾ…’- ಇದಕ್ಕಿಂತ ಸುಂದರವಾದ ಕರೆಯನ್ನು ಈ ಭೂಮಿ ಮೇಲಿನ ಯಾರ ಕಿವಿ- ಹೃದಯಗಳಿಗೂ ಇಳಿದಿಲ್ಲ. ಆ ಮಮತೆಯ ಮುದ್ದಾದ ಪದದಲ್ಲಿ ಮಾಂತ್ರಿಕತೆಯ ಮಿಂಚಿನ ಸಂಚಾರವಿದೆ. ತಾಯಿಯ ಮನಸ್ಸು- ದೇಹ ಎಷ್ಟೇ ಮುದುಡಿದ್ದರೂ, ಎಂಥದ್ದೇ ನೋವಿನಲ್ಲಿ ಉಡುಗಿ ಹೋಗಿದ್ದರೂ ಕರುಳಕುಡಿಯ ಈ ಕರೆಗೆ ದೇಹ ಚುರುಕಾಗಿ ಸ್ಪಂದಿಸುತ್ತದೆ. “ಅಮ್ಮಾ…’ ಎನ್ನುವ ಆದ್ರì ದನಿ, ತಾಯಿ ಮನಸ್ಸೆಂಬುದು ಕೋಮಾದಲ್ಲಿದ್ದರೂ ಜೀವತಂತು ಒಮ್ಮೆ ಕಂಪಿಸುವಂತೆ ಮಾಡುತ್ತೆ.
ಇತ್ತೀಚೆಗೆ ತೆರೆಕಂಡ ತೆಲುಗಿನ “ಮಹಾನಟಿ’ ಚಿತ್ರದಲ್ಲೂ ಅಂಥದ್ದೊಂದು ಕಂಪನದ ಸೆಳಕಿತ್ತು. ಆರಂಭದ ದೃಶ್ಯ ಅದು. ಪ್ರಜ್ಞಾಹೀನಳಾದ ತಾಯಿಯನ್ನು ಬೆಂಗಳೂರಿನ ಆಸ್ಪತ್ರೆಯ ಆವರಣದಲ್ಲಿ ಮಲಗಿಸಿರುತ್ತಾರೆ. ಪುಟಾಣಿ ಮಗನ ಅಳು ನಿಂತೇ ಇರೋದಿಲ್ಲ. ಆಕೆ ಪ್ರಾಣ ಬಿಟ್ಟಿರಬಹುದು ಅನ್ನೋದು ವೈದ್ಯರ ನಿರ್ಲಕ್ಷಿತ ಲೆಕ್ಕಾಚಾರ. ಬಿಳಿಕೋಟುಧಾರಿಗಳೆಲ್ಲ ಒಬ್ಬೊಬ್ಬರಾಗಿ, ಅಸಡ್ಡೆ ದೃಷ್ಟಿಬೀರಿ ಹೊರಟಾಗ, ಪುಟಾಣಿ “ಅಮ್ಮಾ… ಅಮ್ಮಾ… ಎದ್ದೇಳಮ್ಮಾ…’ ಅಂತ ಕೊನೆಯ ಬಾರಿ ಅವಲತ್ತುಕೊಳ್ಳುತ್ತೆ. ಕೋಮಾಕ್ಕೆ ಜಾರಿದ ತಾಯಿಯ ಯಾವ ನರಕೋಶ “ಅಮ್ಮಾ’ ಎಂಬ ಪದಕ್ಕೆ ಇನ್ನೂ ತನ್ನೊಳಗೆ ಜೋಲಿ ಕಟ್ಟಿರುತ್ತದೋ ಗೊತ್ತಿಲ್ಲ, ಆ ಮಹಾತಾಯಿ ನಿಧಾನಕ್ಕೆ ಕಾಲೆºರಳನ್ನು ಅಲುಗಾಡಿಸುತ್ತಾಳೆ. ಬಹುಶಃ ಅಮ್ಮನ ಒಳಜೀವವನ್ನು ಹೀಗೆಲ್ಲ ಎಚ್ಚರಿಸಲು, ಆಕೆಯ ಹೆತ್ತ ಕುಡಿಯಿಂದ ಮಾತ್ರವೇ ಸಾಧ್ಯ.
ತರ್ಕಕ್ಕೆ, ವಿಜ್ಞಾನಕ್ಕೆ ನಿಲುಕದ ಇಂಥ ಸನ್ನಿವೇಶಗಳು ಸಿನಿಮಾದಲ್ಲಷ್ಟೇ ಘಟಿಸುವುದಿಲ್ಲ. ನಿಜವಾಗಿಯೂ ನಡೆದು, ಕತೆಗಳಾಗುತ್ತವೆ. ಇತ್ತೀಚೆಗೆ ಕೇರಳದಲ್ಲೂ ಅಂಥದ್ದೊಂದು ಘಟನೆ ನಡೆಯಿತು. ಹೆತ್ತಕುಡಿಯ ಪ್ರೀತಿಗಿರುವ ಶಕ್ತಿಯನ್ನು ಮತ್ತೆ ನಾವೆಲ್ಲರೂ ನಂಬುವಂತೆ ಮಾಡಿತು.
ಕೇರಳದ ಕೊಟ್ಟಾಯಂನ ಬೆಟಿನಾಗೆ ತಾಯ್ತನವನ್ನು ಜೀವಿಸುವ ಅವಕಾಶವನ್ನು ವಿಧಿ ನೀಡಲಿಲ್ಲ. ಮಗುವಿನ ಮೊದಲ ಅಳುವಿಗೂ ಆಕೆ ಸ್ಪಂದಿಸುವ ಸ್ಥಿತಿಯಲ್ಲಿರಲಿಲ್ಲ. ಮೂರು ತಿಂಗಳ ಗರ್ಭಿಣಿಯಾಗಿದ್ದಾಗಲೇ ಆಕೆಯ ಮೆದುಳಿಗೆ ಹಾನಿಯುಂಟಾಯಿತು. ನಂತರ ಉಸಿರಾಟದ ತೊಂದರೆಗೆ ತುತ್ತಾದ ಆಕೆ, ಕಳೆದ ಜನವರಿಯಲ್ಲಿ ಕೋಮಾಕ್ಕೆ ಜಾರಿದ್ದರು. “ಅನ್‌ರೆಸ್ಪಾನ್ಸಿವ್ ಸ್ಟೇಟ್’ ಎಂದ ವೈದ್ಯರು, ಈ ಅಪರೂಪದ ಕೇಸಿನ ಬಗ್ಗೆ ಹೆಚ್ಚಿನ ನಿಗಾವಹಿಸಿ, ಎರಡು ತಿಂಗಳು ವೆಂಟಿಲೇಟರ್‌ನಲ್ಲಿಟ್ಟು, ನಂತರ ಐಸಿಯುಗೆ ವರ್ಗಾಯಿಸಿದರು. ಆದರೆ, ವೈದ್ಯರ ಪ್ರಯತ್ನಗಳಾವುವೂ ಆಕೆಯನ್ನು ಕೋಮಾದಿಂದ ಹೊರತರಲಿಲ್ಲ.
ಗರ್ಭಿಣಿ ಸೇವಿಸುವ ಆಹಾರದಿಂದಲೇ ಮಗು ಹೊಟ್ಟೆಯಲ್ಲಿ ಬೆಳೆಯುತ್ತದೆ. ತಾಯಿ ಕೋಮಾದಲ್ಲಿದ್ದರೂ, ಆಹಾರ ಪೂರೈಕೆ ಸರಿಯಾಗಿದ್ದರೆ ಮಗುವಿನ ಬೆಳವಣಿಗೆಯಲ್ಲಿ ವ್ಯತ್ಯಯವಾಗುವುದಿಲ್ಲ. ಟ್ಯೂಬ್ ಮೂಲಕ ಆಹಾರ ಸೇವಿಸುತ್ತಾ, ವೈದ್ಯಕೀಯ ಮಷೀನುಗಳ ಮಧ್ಯೆ, ಆಸ್ಪತ್ರೆಯ ಹಾಸಿಗೆ ಮೇಲೆ ಪ್ರಜ್ಞೆಯಿಲ್ಲದೆ ಮಲಗಿದ್ದರೇನಾಯ್ತು? ಮಗುವಿಗೆ ಬೇಕಾಗಿದ್ದನ್ನೆಲ್ಲವನ್ನು ಬೆಟಿನಾ ಪೂರೈಸುತ್ತಲೇ ಇದ್ದಳು. ಆಕೆ ಸೇವಿಸುತ್ತಿದ್ದ ದ್ರವರೂಪದ ಆಹಾರವೇ ಹೊಟ್ಟೆಯಲ್ಲಿದ್ದ ಕೂಸಿಗೆ ಜೀವದ್ರವ್ಯ. ಒಂಬತ್ತು ತಿಂಗಳು ತುಂಬುತ್ತಿದ್ದಂತೆ ಆಕೆಯ ಕುಟುಂಬದಲ್ಲಿ ಆತಂಕ ಹೆಚ್ಚಿತು. ತಾಯಿಯೇ ಈ ಸ್ಥಿತಿಯಲ್ಲಿರುವಾಗ ಮಗು ಉಳಿಯುತ್ತದೆಯೇ? ಮಗುವಿಗೆ ಏನಾದರೂ ಆಗಿಬಿಟ್ಟರೆ? ತಾಯಿ-ಮಗೂ ಇಬ್ಬರೂ… ಎಂದೆಲ್ಲಾ ಭಯಪಟ್ಟರು. ವೈದ್ಯರಿಗೂ ಇದು ಡಬಲ್ ರಿಸ್ಕ್ನ ಕೆಲಸ. ಆದರೆ, ಮಗುವಿನ ಬೆಳವಣಿಗೆ ಚೆನ್ನಾಗಿಯೇ ಇದೆ ಎಂಬುದು ವೈದ್ಯರಿಗೆ ಭರವಸೆ ನೀಡಿತ್ತು. ದೇವರದಯೆ! ಕೊನೆಗೂ ಸಿಸೇರಿಯನ್ ಮೂಲಕ ಮಗುವನ್ನು ವೈದ್ಯರು ಹೊರತೆಗೆದರು.
ಬೆಚ್ಚಗಿನ ಗೂಡಿನಿಂದ ಅಳುತ್ತಾಳುತ್ತಾ ಹೊರಬಂದ ಗಂಡುಮಗು ಎಲ್ವಿನ್‌ನನ್ನು, ಅಮ್ಮ ಅಪ್ಪಿ ಮುದ್ದಾಡಲಿಲ್ಲ. ಮುದ್ದು ಕಂದನನ್ನು ಕಂಡು ಅಪ್ಪನ ಕಣ್ಣಲ್ಲಿ ಖುಷಿ ಮೂಡಿತಾದರೂ, ಹೆಪ್ಪುಗಟ್ಟಿದ್ದ ನೋವು ಕರಗಲಿಲ್ಲ. ದಾದಿಯರ ಸಹಾಯದಿಂದಲೇ ತಿಂಗಳ ನಂತರ ಆ ಮಗು ಎದೆಹಾಲು ಕುಡಿಯಿತು. ಪವಾಡ ನಡೆದಿದ್ದೇ ಆಗ. ಮಗು ಎದೆಹಾಲನ್ನು ಚಪ್ಪರಿಸಿದಾಗಲೇ ಬೆಟಿನಾಳ ಮೊಗದಲ್ಲಿ ಜೀವಂತಿಕೆ ಗೋಚರವಾಯಿತು! ಮಗುವಿನ ಸ್ಪರ್ಶದಿಂದ ಬೆಟಿನಾ ಮುಖದಲ್ಲಾದ ಹಠಾತ್ ಬದಲಾವಣೆಯನ್ನು ಗಮನಿಸಿದ ಆಕೆಯ ಪತಿಗೆ, ಇಲ್ಲೇನೋ ಜಾದೂ ನಡೆಯಲಿದೆ ಅನ್ನಿಸಿತು. ಹಾಗೆಯೇ ನಡೆಯಿತು ಕೂಡ. ಆಕೆಯಲ್ಲಿ ಜೀವಸೆಲೆ ಮತ್ತೂಮ್ಮೆ ಸಂಚರಿಸಲು ಶುರುಮಾಡಿತ್ತು.
ಹೆರಿಗೆಯ ನಂತರದ ಒಂದು ತಿಂಗಳಲ್ಲಿ ಬೆಟಿನಾ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದೆ. ಹಸುಗೂಸಿನ ಸ್ಪರ್ಶ, ಪ್ರೀತಿಯೇ ತಾಯಿಗೆ ಸಂಜೀವಿನಿಯಾಗಿದೆ. ಆಕೆಯ ಪಕ್ಕದಲ್ಲೇ ಮಗುವನ್ನು ಮಲಗಿಸುತ್ತಿದ್ದು, ಅವನ ಚಲನೆಗಳಿಗೆ ಬೆಟಿನಾ ಪ್ರತಿಕ್ರಿಯೆ ನೀಡಲು ಶುರುಮಾಡಿದ್ದಾರೆ. ಎಲ್ವಿನ್ ಅತ್ತಾಗ, ಆತನ ಕಡೆಗೆ ಮುಖ ತಿರುಗಿಸಲು ಪ್ರಯತ್ನಿಸುತ್ತಿದ್ದು, ಆಗ ಆಕೆಯ ಕಣ್ಣಲ್ಲೂ ನೀರು ಜಿನುಗುತ್ತದೆ. ಮಗು ಮುಗ್ಧವಾಗಿ ಮಲಗಿ, ಎದೆಹಾಲನ್ನು ಲೊಚಗುಟ್ಟುತ್ತಿದೆ. ಅಮ್ಮನಿಗೆ ಸಿಹಿನೋವಾಗಿ ಎದ್ದೇಳಲಿಯೆಂದೇ, ಅದು ತನ್ನ ಪುಟಾಣಿ ಕಾಲ್ಗಳಿಂದ ಒದೆಯುತ್ತಿದೆ. ಈ ನನ್ನ ತುಂಟ ನಗು, ಅಳುವಿನಿಂದಲೇ ಒಂದಲ್ಲಾ ಒಂದು ದಿನ ಅಮ್ಮನನ್ನು ಮೇಲೇಳಿಸುವೆನೆಂಬ ಭರವಸೆಯ ಮಿಂಚೊಂದು ಕಂದನ ಕಂಗಳಲ್ಲಿ ಕಾಣುತ್ತಿದೆ. ಅಂಥದ್ದೊಂದು ಪವಾಡಕ್ಕಾಗಿ ದೇವರನಾಡು ಕಾತರಿಸುತಿದೆ. ಅದು ಸಾಕಾರಗೊಳ್ಳಲಿ ಅನ್ನುವುದೇ ಈ ಹೊತ್ತಿನ ಹಾರೈಕೆ.
ತಾಯಿ- ಮಗು ನಡುವಿನ ಇಂಥ ಪವಾಡಗಳು ಜಗತ್ತಿನಲ್ಲಿ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅಮೆರಿಕದಲ್ಲಿ ಮೊಟ್ಟ ಮೊದಲ ಬಾರಿಗೆ ಇಂಥದ್ದೊಂದು ಘಟನೆ ದಾಖಲಾಗಿದ್ದು, 90ರ ದಶಕದಲ್ಲಿ. ಅದನ್ನು “ನ್ಯೂಯಾರ್ಕ್ ಟೈಮ್ಸ್’ ಆಪ್ತವಾಗಿ ಚಿತ್ರಿಸಿತ್ತು. ರೋಮನ್ ಕ್ಯಾಥೋಲಿಕ್ ಹೈಸ್ಕೂಲ್‌ನ ವಿದ್ಯಾರ್ಥಿನಿ ಅವಳು. ಆಕೆಯ ಕಾರು ಮರಕ್ಕೆ ಡಿಕ್ಕಿಯಾಗಿ, ಕೋಮಾಕ್ಕೆ ಜಾರಿದ್ದಳು. ಆಸ್ಪತ್ರೆಯ ಕೃತಕ ಯಂತ್ರಗಳು ಅವಳ ದೇಹಕ್ಕೆ ಆಮ್ಲಜನಕ ಉಣಿಸುತ್ತಿದ್ದವು. ಪೈಪುಗಳ ಮೂಲಕ ದ್ರವಾಹಾರ ಉದರ ತಲುಪುತ್ತಿತ್ತು. ಹಾಸಿಗೆಯ ಮೇಲೆ ಜೀವತ್ಛವವಾಗಿ ಮಲಗಿದ್ದ ಆಕೆ ದಿನಗಳು ಕಳೆದಂತೆಲ್ಲಾ ದಪ್ಪಗಾಗುತ್ತಿದ್ದಳು. ಹೊಟ್ಟೆಯ ಭಾಗ ಉಬ್ಬುತ್ತಾ ಹೋಗಿತ್ತು. ಸೇವಿಸಿದ ಆಹಾರ ಹೊಟ್ಟೆಯೊಳಗೆ ಬ್ಲಾಕ್ ಆಗುತ್ತಿದೆಯೇನೋ ಅಂತ ವೈದ್ಯರು ಆರಂಭದಲ್ಲಿ ಅನುಮಾನಿಸಿದರು. ಕೊನೆಗೆ ಆಕೆಯ ರಕ್ತದ ಮಾದರಿ ತೆಗೆದು, ಪರೀಕ್ಷೆಗೆ ಒಳಪಡಿಸಿದಾಗಲೇ ಗೊತ್ತಾಗಿದ್ದು, ಅವಳು ಪ್ರಗ್ನೆಂಟ್ ಎಂದು. ಆಕೆ ಅತ್ಯಾಚಾರಕ್ಕೊಳಗಾಗಿದ್ದಳೆಂಬ ಸುದ್ದಿಯೂ ಆಮೇಲೆಯೇ ಗೊತ್ತಾಗಿದ್ದು. ಗರ್ಭಿಣಿಯಾಗಿದ್ದ ಮಗಳನ್ನು ಉಪಚರಿಸಲು ಕ್ಯಾಥೋಲಿಕ್ ಮಡಿವಂತಿಕೆಯ ತಂದೆ- ತಾಯಿಗಳು ನಿರಾಕರಿಸಿದಾಗ, ನರ್ಸ್‌ಗಳೇ ಅಪ್ಪ- ಅಮ್ಮನಂತೆ ನಟಿಸಿ, ಪ್ರೀತಿ ತೋರಿದ್ದರು. ಕೊನೆಗೆ ಆಕೆ ಮಗುವಿನ ಸ್ಪರ್ಶದಿಂದಲೇ ಎಚ್ಚರಗೊಂಡಳೆಂದು ಹೇಳುತ್ತಾರಾದರೂ, ಅದು ಜಾಸ್ತಿ ಸುದ್ದಿಯಾಗದೇ ಹೋಯಿತು.
ಇನ್ನು ಸರ್ಬಿಯಾದ ಕತೆ ತುಸು ಭಿನ್ನ. 17 ವರ್ಷದ ಡ್ಯಾನಿಜೆಲಾ ಕೋವೆಸ್ಟಿಕ್ ಎಂಬಾಕೆ 2009ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗು ಹುಟ್ಟಿದ ಸ್ವಲ್ಪ ಸಮಯಕ್ಕೆಲ್ಲ ಆಕೆಗೆ ಮತ್ತೂಮ್ಮೆ ಹೊಟ್ಟೆಯಲ್ಲಿ ನೋವು ಕಾಣಿಸಿತು. ವೈದ್ಯರು ಅದನ್ನು, ಸಾಮಾನ್ಯ ನೋವು ಎಂದು ನಿರ್ಲಕ್ಷಿಸಿಬಿಟ್ಟರು. ಆದರೆ, ಒಂದು ಸಣ್ಣ ನಿರ್ಲಕ್ಷ್ಯ ಆಕೆಯ ಬದುಕನ್ನೇ ಕತ್ತಲೆಗೆ ನೂಕಿಬಿಟ್ಟಿತು. ನೋವಿನಿಂದ ಕೋಮಾಕ್ಕೆ ಜಾರಿದ ಡ್ಯಾನಿಜೆಲಾ, ಬರೋಬ್ಬರಿ 7 ವರ್ಷ ಕೋಮಾದಲ್ಲಿದ್ದಳು.
ಹುಟ್ಟಿದ ಮರುಕ್ಷಣವೇ, ಇದ್ದರೂ ಇಲ್ಲದಂತಾದ ಅಮ್ಮನಿಗಾಗಿ, ಮಗಳು ಮರಿಝಾ ಏಳು ವರ್ಷ ಕಾದಿದ್ದಳು. ಅಜ್ಜಿಯ ಆರೈಕೆಯಲ್ಲಿ ಬೆಳೆದ ಮರಿಝಾ, ಸಾಧ್ಯವಾದಷ್ಟು ಸಮಯವನ್ನು ಅಮ್ಮನ ಪಕ್ಕದಲ್ಲೇ ಕಳೆಯುತ್ತಿದ್ದಳು. ಅಮ್ಮ, ಇಂದಲ್ಲ ನಾಳೆ ಎದ್ದು ಬಂದು ತನ್ನನ್ನು ಬಾಚಿ ತಬ್ಬಿಕೊಳ್ಳುತ್ತಾಳೆ ಎನ್ನುವುದು ಆಕೆಯ ನಂಬಿಕೆ. ಪ್ರತಿದಿನ ಶಾಲೆ ಮುಗಿಸಿ ಓಡಿಬರುವ ಮಗಳಿಗಾಗಿ ತಾಯಿಯ ಹೃದಯವೂ ಕಾಯುತ್ತಿತ್ತು. ಅಮ್ಮನನ್ನು ನಗಿಸುತ್ತಾ, ಮನಸ್ಸಿಗೆ ತೋಚಿದಂತೆ ಆರೈಕೆ ಮಾಡುತ್ತಿದ್ದ ಮರಿಝಾಳ ಮುಗ್ಧ ಪ್ರೀತಿಗೆ ವಿಧಿಯೂ ತನ್ನ ನಿರ್ಧಾರವನ್ನು ಬದಲಿಸಿತ್ತು. ವೈದ್ಯರ ಚಿಕಿತ್ಸೆಗೆ, ಮಗಳ ಸ್ಪರ್ಶಕ್ಕೆ ನಿಧಾನವಾಗಿ ಸ್ಪಂದಿಸತೊಡಗಿದ ಡ್ಯಾನಿಜೆಲಾ, ಕಡೆಗೂ ಒಂದು ದಿನ ಹಾಸಿಗೆ ಬಿಟ್ಟು ಎದ್ದು ನಿಂತಳು. ಅಶಕ್ತ ಬಾಹುಗಳನ್ನು ಚಾಚಿ, ಅಮ್ಮನಂಥ ಮಗಳನ್ನು ಬಾಚಿ ತಬ್ಬಿ ಕಣ್ಣೀರಾದಳು.
ಇದೇ ಅಲ್ಲವೇ ಮಗು- ತಾಯಿಯ ಪ್ರೀತಿಬಂಧ. ಕೋಮಾದಂಥ ಸಾವಿನಂಚಿನ ಕೋಲ್ಮಿಂಚನ್ನೂ ಆರಿಸಿ, ತಣಿಸುವ ಮಹಾನ್ ಶಕ್ತಿ ಪುಟ್ಟಮಗುವಿನ ಕಿರುಬೆರಳಿನಲ್ಲಿದೆ; ಆ ತುಂಟ ನಗುವಿನಲ್ಲಿದೆ; ರಚ್ಚೆಯಲ್ಲಿದೆ; ಪುಟ್ಟ ಕಾಲ್ಗಳ ಒದೆತದಲ್ಲಿದೆ. ಮತ್ತೆ ಮತ್ತೆ ಈ ಜಗತ್ತು ಅದನ್ನು ಕಾಣುತ್ತಲೇ ಹೋಗುತ್ತದೆ.
ಗರ್ಭಿಣಿ ಕೋಮಾದಲ್ಲಿದ್ದಾಗ, ಮೆದುಳೊಂದನ್ನು ಬಿಟ್ಟು ಉಳಿದ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಮಗು ಬೆಳೆಯಲು ಯಾವುದೇ
ತೊಂದರೆಯಿಲ್ಲ. ಮಗುವಿಗೆ ಆಮ್ಲಜನಕ, ರಕ್ತ ಹಾಗೂ ಪೋಷಕಾಂಶಗಳ ಪೂರೈಕೆ ಸರಿಯಾಗಿರಬೇಕು. ಕೆಲವೊಮ್ಮೆ ಗರ್ಭಧಾರಣೆಯ ಕಾರಣದಿಂದ
ಮಹಿಳೆ ಕೋಮಾಕ್ಕೆ ಜಾರುತ್ತಾಳೆ. ಅಂಥ ಸಂದರ್ಭದಲ್ಲಿ ಹೆರಿಗೆಯ ನಂತರದಲ್ಲಿ ಆಕೆ ಕೋಮಾದಿಂದ ಹೊರಬರುವ ಸಾಧ್ಯತೆ ಇರುತ್ತೆ.
● ಡಾ. ಚೇತನಾ ಅರವಿಂದ್, ಸ್ತ್ರೀರೋಗ ತಜ್ಞೆ
ಪ್ರಿಯಾಂಕಾ ಎನ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.