ಮೇಳ ಏಲಂ ಮಾಡಿ; ಟ್ರಸ್ಟ್ ಮುಟ್ಟುಗೋಲು ಹಾಕಿ
Team Udayavani, Jul 25, 2018, 3:15 AM IST
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆರು ಯಕ್ಷಗಾನ ಮೇಳಗಳನ್ನು ನಡೆಸುವ ಹೊಣೆಯನ್ನು ಧಾರ್ಮಿಕ ದತ್ತಿ ಇಲಾಖೆ ನಿಯಮಾನುಸಾರ ಏಲಂ ಮೂಲಕ ಸೂಕ್ತ ವ್ಯಕ್ತಿಗಳಿಗೆ ವಹಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಸಮಗ್ರ ವರದಿ ಜಿಲ್ಲಾಡಳಿತ ಸಲ್ಲಿಸಿದೆ. ಈ ನಡೆ ಯಕ್ಷಗಾನ ವಲಯದಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಲಿದೆ.
ಕಟೀಲು ದೇಗುಲದ ಆರು ಮೇಳಗಳು ಅತ್ಯಂತ ಪ್ರತಿಷ್ಠಿತ, ಬಹು ಬೇಡಿಕೆಯವು. 330ಕ್ಕೂ ಹೆಚ್ಚು ಕಲಾವಿದರು, ಕಾರ್ಮಿಕರನ್ನು ಒಳಗೊಂಡಿದ್ದು, ದೇವಸ್ಥಾನದ ಮೇಲುಸ್ತುವಾರಿಯಲ್ಲಿ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ನಿರ್ವಹಿಸುತ್ತಿದ್ದಾರೆ. ಮೇಳಗಳ ಪ್ರಮುಖ ಕಲಾವಿದರು ಹಾಗೂ ಭಾಗವತರನ್ನು ವರ್ಷವೂ ಮೇಳದೊಳಗೆ ಬದಲಾಯಿಸಲಾಗುತ್ತಿತ್ತು. ಕಳೆದ ಬಾರಿ ಕೊಂಚ ವಿವಾದವಾಗಿ 8 ಮಂದಿ ಕಲಾವಿದರನ್ನು ಉಚ್ಚಾಟಿಸಿದ ಆರೋಪ ಕೇಳಿಬಂದಿತ್ತು. ಆವರ ಪೈಕಿ ಕೆಲವರು ಧಾರ್ಮಿಕ ದತ್ತಿ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ದೂರು ನೀಡಿ, ತಿರುಗಾಟ ಪಾರದರ್ಶಕವಾಗಿ ನಡೆಸದೆ ಅವ್ಯವಹಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದರು. ಆ ದೂರು, ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಸಹಾಯಕ ಆಯುಕ್ತರ ವರದಿ ಆಧರಿಸಿ, ಈಗ ಜಿಲ್ಲಾಧಿಕಾರಿ 100ಕ್ಕೂ ಹೆಚ್ಚು ಪುಟಗಳ ಪೂರಕ ದಾಖಲೆಯೊಂದಿಗೆ ಒಟ್ಟು 8 ಪುಟಗಳ ವರದಿಯನ್ನು ಇಲಾಖೆ ಆಯುಕ್ತರಿಗೆ ಕಳುಹಿಸಿದ್ದಾರೆ. ಮಂಗಳೂರಿನ ಧಾರ್ಮಿಕ ಇಲಾಖೆಯ ಸಹಾಯಕ ಆಯುಕ್ತರ ವರದಿಯೊಂದಿಗೆ ಕಟೀಲಿನ ಕೆ. ಅನಂತರಾಜ ರಾವ್, ಬಂಟ್ವಾಳದ ಟಿ.ಜಿ. ರಾಜಾರಾಮ ಭಟ್, ಕಟೀಲು ಮೇಳದ ಉಚ್ಚಾಟಿತ ಕಲಾವಿದರಾದ ಡಿ. ಮಾಧವ ಬಂಗೇರ ಮತ್ತು ಇತರ 9 ಮಂದಿ ನೀಡಿದ ದೂರು ಆಧರಿಸಿ ಈ ವರದಿ ನೀಡಲಾಗಿದೆ. ವರದಿಯ ಪ್ರತಿ ಉದಯವಾಣಿಗೆ ಸಿಕ್ಕಿದೆ.
ವರದಿ ಏನು ಹೇಳುತ್ತದೆ?
ಕಟೀಲು ದೇಗುಲವು ಪ್ರವರ್ಗ ‘ಎ’ಗೆ ಸೇರಿದ್ದು, 2017-18ನೇ ಸಾಲಿನಲ್ಲಿ 23.91 ಕೋ. ರೂ. ಆದಾಯ ಗಳಿಸಿದೆ. ದೇವಸ್ಥಾನದ ವತಿಯಿಂದ ವಿದ್ಯಾ ಸಂಸ್ಥೆಗಳನ್ನು ನಡೆಸುವ ಜತೆಗೆ ನಿತ್ಯವೂ ಸರಾಸರಿ 5 ಸಾವಿರ ಮಂದಿಗೆ ಅನ್ನದಾನ ಮಾಡಲಾಗುತ್ತಿದೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 2002ರ ನಿಯಮ 33 (3) ಹಾಗೂ ನಿಯಮ (ಬಿ) (12)ರ ಅನ್ವಯ ದೇವಾಲಯದ ಆರ್ಥಿಕ ವ್ಯವಹಾರ ಮತ್ತು ಬ್ಯಾಂಕ್ ಖಾತೆಗಳ ನಿರ್ವಹಣೆಯನ್ನು ಕಾರ್ಯನಿರ್ವಾಹಕ ಅಧಿಕಾರಿ ಮಾಡಬೇಕು. ಇಲ್ಲಿಗೆ ಪೂರ್ಣ ಪ್ರಮಾಣದ ವ್ಯವಸ್ಥಾಪನ ಸಮಿತಿ ರಚಿಸಲು ಅವಕಾಶ ಇಲ್ಲದಿರುವುದರಿಂದ ಕಾರ್ಯನಿರ್ವಹಣಾಧಿಕಾರಿ ಹುದ್ದೆ ಸೃಜಿಸಬೇಕು.
ದೇವಸ್ಥಾನಕ್ಕೆ ಒಟ್ಟು 6 ಮೇಳಗಳಿದ್ದು, ಖಾಸಗಿಯವರಿಗೆ ವಹಿಸಲಾಗಿದೆ. ಒಂದು ಮೇಳಕ್ಕೆ ಭಂಡಾರ ಕಾಣಿಕೆ ನಿಗದಿಪಡಿಸಲಾಗಿರುತ್ತದೆ. ಆದರೆ ಮೇಳಗಳನ್ನು ನಡೆಸುವಲ್ಲಿ ಪಾರದರ್ಶಕತೆ ಇಲ್ಲ. ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಮೇಳದ ಸಂಚಾಲಕರಾಗಿದ್ದು, ಅದಕ್ಕೂ ಹಿಂದೆ ಅವರ ತಂದೆ ಕಲ್ಲಾಡಿ ವಿಠಲ ಶೆಟ್ಟಿ ಇದ್ದರು. ಪ್ರಸ್ತುತ ಖಾಯಂ ಆಟಕ್ಕೆ 3,500 ರೂ. ಮತ್ತು ಇತರ ಆಟಕ್ಕೆ 4,500 ರೂ. ಕಾಣಿಕೆ ಮಾತ್ರ ಭಂಡಾರಕ್ಕೆ ಜಮೆಯಾಗುತ್ತದೆ. ದೂರು ಅರ್ಜಿದಾರರು ಸಲ್ಲಿಸಿರುವ ದಾಖಲೆಗಳ ಪ್ರಕಾರ ಮೇಳದ ವ್ಯವಸ್ಥಾಪಕರು ಆಟ ಆಡಿಸುವವರಿಂದ 68,069 ರೂ. ಪಡೆಯುತ್ತಾರೆ. ಅದರಲ್ಲಿ 38 ಸಾವಿರ ರೂ.ವೀಳ್ಯ (ಮೇಳದ ಸಂಚಾಲಕರಿಗೆ) ಮತ್ತು 16 ಸಾವಿರ ರೂ. ಟ್ರಸ್ಟ್‌ನವರು ಪಡೆಯುತ್ತಾರೆ. ಮೇಳದ ಕಲಾವಿದರ ಸಂಭಾವನೆ ಇತ್ಯಾದಿ ಖರ್ಚನ್ನು ಸಂಚಾಲಕರು ಭರಿಸುತ್ತಾರೆ.
ಟ್ರಸ್ಟ್ ಅನ್ನು ಇಲಾಖೆಯ ಗಮನಕ್ಕೆ ತಾರದೆ ರಚಿಸಿದ್ದು, ಕೆಲವು ಹೊಣೆಗಳನ್ನು ವಹಿಸಲಾಗಿದೆ. ಈ ರೀತಿ ಟ್ರಸ್ಟ್ ರಚಿಸಿ ದೇವಸ್ಥಾನದ ಹೆಸರಿನಲ್ಲಿ ಹಣ ಸಂಗ್ರಹಿಸಲು ಅಥವಾ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಮೇಳಗಳಿಂದ ವರ್ಷಕ್ಕೆ ಸಾವಿರಕ್ಕೂ ಅಧಿಕ ಆಟಗಳು ನಡೆಯುತ್ತಿದ್ದು, ಒಂದು ಸೇವೆಗೆ ಖಾಯಂ ಸೇವಾದಾರರಿಗೆ 54,150 ರೂ. ಇತರರಿಗೆ 61,400 ರೂ., ತತ್ಕಾಲ ಸೇವಾದಾರರಿಗೆ 69,400 ರೂ. ನಂತೆ ದರ ನಿಗದಿಯಾಗಿ, ಕೋಟ್ಯಂತರ ರೂ. ವ್ಯವಹಾರ ನಡೆಯುತ್ತದೆ. ಮೇಳಗಳ ಸಂಚಾಲಕತ್ವವನ್ನು ಖಾಸಗಿಯವರಿಗೆ ವಹಿಸುವುದರಿಂದ ನಿರ್ವಹಣೆಯಲ್ಲಿ ಪಾರದರ್ಶಕತೆ ತರಲಾಗದು.
ಉಡುಪಿ ಜಿಲ್ಲೆಯ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವೂ 6 ಬಯಲಾಟದ ಮೇಳಗಳನ್ನು ನಡೆಸುತ್ತಿದ್ದು, ಪೂರ್ಣ ಮೊತ್ತ ಭಂಡಾರಕ್ಕೆ ಜಮೆಯಾಗುತ್ತದೆ. ಇಲ್ಲಿ ಯಕ್ಷಗಾನ ನಿರ್ವಹಣೆಗೆ ದೇವಸ್ಥಾನವೇ ಸಿಬಂದಿ ನೇಮಿಸಿದೆ. ಹೀಗಿರುವಾಗ ಆಯುಕ್ತರ ವರದಿಯನ್ವಯ ಶ್ರೀ ಕಟೀಲು ಮೇಳದ ಆರ್ಥಿಕ ದುರ್ವ್ಯವಹಾರಗಳಿಗೆ ಆಸ್ಪದ ನೀಡದಿರಲು ಮತ್ತು ಕಲಾವಿದರು ಹಾಗೂ ದೇಗುಲದ ಹಿತದೃಷ್ಟಿಯಿಂದ ಮೇಳವನ್ನು ದೇಗುಲವೇ ನಡೆಸುವುದು ಸೂಕ್ತ. ಹೈಕೋರ್ಟ್ ಸೂಚಿಸಿದಂತೆ ಕಾನೂನುಬದ್ಧವಾಗಿ ಮೇಳ ನಡೆಸಲು ಇಲಾಖೆ ವತಿಯಿಂದ ಪಾರದರ್ಶಕ ಅಧಿನಿಯಮದಡಿ ವಹಿಸಿ ಕೊಡಬೇಕು. ಈ ಸಂಬಂಧ ದೇವಸ್ಥಾನದ ಆನುವಂಶಿಕ ಮೊಕ್ತೇಸರರಿಗೆ ಕಾರಣ ಕೇಳಿ ನೋಟಿಸ್ ನೀಡಿ, ವಿವರಣೆ ಪಡೆದು ಮೇಳಗಳನ್ನು ಟೆಂಡರ್ ಮೂಲಕ ವಹಿಸಿಕೊಡಲು ಅಥವಾ ಅರ್ಹ ಸಿಬಂದಿ ನೇಮಿಸಿ ದೇವಸ್ಥಾನದಿಂದಲೇ ನಡೆಸಲು ಹಾಗೂ ಯಕ್ಷಧರ್ಮ ಬೋಧಿನಿ ಟ್ರಸ್ಟ್ ಮುಟ್ಟುಗೋಲು ಹಾಕಿ ಆದೇಶ ಹೊರಡಿಸುವಂತೆ ಜಿಲ್ಲಾಧಿಕಾರಿ ವರದಿಯಲ್ಲಿ ಕೋರಿದ್ದಾರೆ.
ಈ ಬಗ್ಗೆ ‘ಉದಯವಾಣಿ’ಗೆ ಪ್ರತಿಕ್ರಿಯಿಸಿದ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ಶೈಲಜಾ, ಜಿಲ್ಲಾಧಿಕಾರಿಯವರ ವರದಿಯನ್ವಯ ದೇವಸ್ಥಾನದ ಆನುವಂಶಿಕ ಮೊಕ್ತೇಸರ ರಿಗೆ ನೋಟಿಸ್ ನೀಡಲಾಗಿದೆ. ಉತ್ತರ ಬಂದ ಬಳಿಕ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ, ಅಭಿಪ್ರಾಯ ಪಡೆದು ಅಂತಿಮ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
ಆಯುಕ್ತರ ನೋಟಿಸ್ ಗೆ ಉತ್ತರಿಸುತ್ತೇವೆ
ವಿವರಣೆ ಕೇಳಿ ನೋಟಿಸ್ ಬಂದಿದೆ. ಆದರೆ ಜಿಲ್ಲಾಧಿಕಾರಿಗಳು ಸುಮಾರು 222 ಪುಟಗಳ ದಾಖಲೆಗಳೊಂದಿಗೆ ವರದಿ ನೀಡಿದ್ದಾರೆ ಎಂದಿದ್ದಾರೆ. ಅದರಲ್ಲಿ ಉಲ್ಲೇಖಿತ ವಿಷಯಕ್ಕೆ ಏನು ದಾಖಲೆ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಹೀಗಾಗಿ ದಾಖಲೆಗಳನ್ನು ಕೋರಿ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ನಮ್ಮ ಮೇಲಿನ ಆರೋಪಗಳ ಬಗ್ಗೆ ತನಿಖೆ ಮಾಡದೆ ಜಿಲ್ಲಾಧಿಕಾರಿಗಳು ಹೇಗೆ ವರದಿ ಕೊಟ್ಟಿದ್ದಾರೋ ತಿಳಿಯದು. ಈ ಹಿಂದೆಯೂ ಆರು ಬಾರಿ ಕಟೀಲು ಮೇಳಗಳನ್ನು ಏಲಂ ಮಾಡುವ ಬಗ್ಗೆ ಪ್ರಸ್ತಾವವಾಗಿತ್ತು. ಆಯುಕ್ತರಿಂದ ಪೂರ್ಣ ದಾಖಲೆಗಳು ಬಂದ ಬಳಿಕ ಉತ್ತರಿಸುವೆ.
– ಹರಿನಾರಾಯಣದಾಸ ಅಸ್ರಣ್ಣ, ಶ್ರೀ ಕಟೀಲು ದೇಗುಲದ ಆನುವಂಶಿಕ ಅರ್ಚಕರು
— ಸುರೇಶ್ ಪುದುವೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.