ಜಿಲ್ಲೆಗೆ 4 ಸಾವಿರ ಕೋಟಿ ಬಂಡವಾಳ ಹೂಡಿಕೆ
Team Udayavani, Jul 25, 2018, 12:28 PM IST
ಮೈಸೂರು: ಜಿಲ್ಲೆಯಲ್ಲಿ ಮಹೀಂದ್ರಾ ಎಲೆಕ್ಟ್ರಿಕಲ್ ಕಾರು ತಯಾರಿಕಾ ಘಟಕ ಸೇರಿದಂತೆ 4 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯ ವಿವಿಧ ಕಂಪನಿಗಳ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗಲಿದ್ದು, ಇದರಿಂದ 35 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಮಂಗಳವಾರ ಮೈಸೂರಿನ ವಿವಿಧ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೈಗಾರಿಕಾ ಸಂಘಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಂಗಳೂರಿನ ಬಳಿಕ ರಾಜ್ಯದ 2 ಮತ್ತು 3ನೇ ಸ್ತರದ ನಗರಗಳಿಗೆ ಕೈಗಾರಿಕೆಗಳನ್ನು ಆಕರ್ಷಿಸುವುದು ರಾಜ್ಯಸರ್ಕಾರದ ನೀತಿ ಆಗಿದೆ. ಹಿಂದಿನ ಸರ್ಕಾರದಲ್ಲಿ ಈ ಭಾಗದಲ್ಲಿ ಏಷಿಯನ್ ಪೇಂಟ್ಸ್ ಸೇರಿದಂತೆ ಹಲವು ಬೃಹತ್ ಕೈಗಾರಿಕೆಗಳಿಗೆ ಭೂಮಿ ನೀಡಿದ್ದು, ಕಾರ್ಖಾನೆ ಸ್ಥಾಪನೆ ಪ್ರಗತಿಯಲ್ಲಿದೆ ಎಂದರು.
ಹೊಸ ಬೃಹತ್ ಕೈಗಾರಿಕೆಗಳು: 2500 ಕೋಟಿ ಬಂಡವಾಳ ಹೂಡಿಕೆಯ ಏಷಿಯನ್ ಪೇಂಟ್ಸ್, 130 ಕೋಟಿ ಹೂಡಿಕೆಯ ಕಾಲ್ಸ್‌ಬರ್ಗ್, 150 ಕೋಟಿ ಹೂಡಿಕೆಯ ಪೆಪ್ಸಿಕೋಲಾ, 100 ಕೋಟಿ ಹೂಡಿಕೆಯ ಚೀರ್ ಬ್ರೇವರೀಸ್, 500 ಕೋಟಿ ಹೂಡಿಕೆಯ ಕೆನ್‌ವುಡ್, 200 ಕೋಟಿ ಹೂಡಿಕೆಯ ಕಂಟೇನರ್ ಕಾರ್ಪೋರೇಷನ್ ಆಫ್ ಇಂಡಿಯಾ,
600 ಕೋಟಿ ಹೂಡಿಕೆಯ ಪಾರ್ಲೆ ಇಂಡಸ್ಟ್ರೀಸ್, 137.85 ಕೋಟಿ ಹೂಡಿಕೆಯ ರುಚಾ ಎಂಜಿನಿಯರಿಂಗ್, 16 ಕೋಟಿ ಹೂಡಿಕೆಯ ಮಿಂಡಾಸ್ ಸಾಯಿ, 96.75 ಕೋಟಿ ಹೂಡಿಕೆಯ ಮೆಟಲ್ ಮಾನ್ಯ ಆಟೋ ಪ್ರೈ.ಲಿ.ಗಳ ಜೊತೆಗೆ ಗೆಲ್‌ಬಿ ಇಂಡಿಯಾ, ಕಾಂಟಿನೆಂಟಲ್, ಪ್ರಿಕೋಲ್ ನಂತಹ ಬೃಹತ್ ಕಾರ್ಖಾನೆಗಳ ಸ್ಥಾಪನೆ ಪ್ರಸ್ತಾವನೆ ಇದೆ ಎಂದು ಹೇಳಿದರು.
500 ಎಕರೆ ಭೂಮಿ ಸ್ವಾಧೀನ: ನಂಜನಗೂಡು ತಾಲೂಕು ಸಿಂಧುವಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಮೆಗಾ ಟಿವಿಎಸ್ ಕಂಪನಿ ಕೋರಿಕೆ ಮೇರೆಗೆ 500 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಟಿವಿಎಸ್ ಕಂಪನಿಯು ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಕೋರಿದ್ದರಿಂದ ಸಿಂಧುವಳ್ಳಿ ಗ್ರಾಮದ 500 ಎಕರೆ ಪ್ರದೇಶವನ್ನು ಕೈಗಾರಿಕಾ ಅಭಿವೃದ್ಧಿಗೆ ಕಾದಿರಿಸಬೇಕಿದೆ ಎಂದರು.
ಕೋಚನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸದ 50 ಎಕರೆ ಭೂಮಿಯಲ್ಲಿ ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಮಂಜೂರಾತಿ ನೀಡಬೇಕಾಗಿದೆ. ಎಚ್.ಡಿ.ಕೋಟೆ ರಸ್ತೆ ಜಯಪುರ ಬಳಿ 100 ಎಕರೆ ಕೈಗಾರಿಕಾ ಪ್ರದೇಶ ಸ್ಥಾಪನೆ, ಗದ್ದಿಗೆ ರಸ್ತೆಯಲ್ಲಿ 100 ಎಕರೆ ಕೈಗಾರಿಕಾ ಪ್ರದೇಶ ಸ್ಥಾಪನೆ, ಕೆ.ಆರ್.ನಗರದಲ್ಲಿ 50 ಎಕರೆ ಕೈಗಾರಿಕಾ ಪ್ರದೇಶ ಸ್ಥಾಪನೆ, ತಿ.ನರಸೀಪುರ ತಾಲೂಕು ಬನ್ನೂರು ಬಳಿ 100 ಎಕರೆ ಕೈಗಾರಿಕಾ ವಸಾಹತು ಸ್ಥಾಪನೆಯಾಗಲಿದೆ ಎಂದು ತಿಳಿಸಿದರು.
ನೀರು ಪೂರೈಕೆ ಸಾಮರ್ಥ್ಯ ಮೇಲ್ದರ್ಜೆಗೆ: ನಂಜನಗೂಡು, ಅಡಕನಹಳ್ಳಿ, ತಾಂಡ್ಯ, ಕಡಕೊಳ ಕೈಗಾರಿಕಾ ಪ್ರದೇಶಗಳಿಗೆ ಪ್ರಸ್ತುತ ಇರುವ ನೀರು ಪೂರೈಕೆ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸಲು 10 ಕೋಟಿ ಅನುದಾನ ಮಂಜೂರಾಗಬೇಕಿದೆ. ಕೈಗಾರಿಕಾ ಪ್ರದೇಶಗಳ ಮಧ್ಯಭಾಗದಲ್ಲಿ ಸರ್ಕಾರಿ ಭೂಮಿಯನ್ನು ಸಕಾಲದಲ್ಲಿ ಕೆಐಎಡಿಬಿಗೆ ಹಸ್ತಾಂತರಿಸದ ಕಾರಣ ರಸ್ತೆ,
ಚರಂಡಿ, ನೀರು ಮತ್ತು ವಿದ್ಯುತ್ ಪೂರೈಕೆ ಮುಂತಾದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದೆ ನಿವೇಶನ ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡಲು ತೊಡಕಾಗಿದೆ. ಇದರಿಂದ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಅನುಮೋದನೆಗೊಂಡ ಘಟಕಗಳಿಗೆ ಭೂಮಿ ನೀಡಲು ಸಾಧ್ಯವಿಲ್ಲದ ಕಾರಣ ಸರ್ಕಾರಿ ಭೂಮಿಯನ್ನು ಕೂಡಲೇ ಮಂಡಳಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.
ನಗರಾಭಿವೃದ್ಧಿ ಅನುಮತಿ: ಹೆಬ್ಟಾಳು, ಮೇಟಗಳ್ಳಿ, ಕೂರ್ಗಳ್ಳಿ, ಬೆಳವಾಡಿ ಕೈಗಾರಿಕಾ ಪ್ರದೇಶವನ್ನು ಒಳಗೊಂಡ ಕೈಗಾರಿಕಾ ನಗರ ಪ್ರಾಧಿಕಾರ ರಚನೆಗೆ ಪ್ರಸ್ತಾವನೆ ಸಲ್ಲಿಸಿದ್ದು, ನಗರಾಭಿವೃದ್ಧಿ ಇಲಾಖೆ ಅನುಮತಿ ನೀಡಬೇಕಿದೆ. ಮೈಸೂರಿನ ಕೂರ್ಗಳ್ಳಿ, ಮೇಟಗಳ್ಳಿ, ಹೆಬ್ಟಾಳು ಕೈಗಾರಿಕಾ ಪ್ರದೇಶಗಳ ವ್ಯಾಪ್ತಿಯಲ್ಲಿ ಟ್ರಕ್ ಟರ್ಮಿನಲ್ ಸ್ಥಾಪಿಸುವಂತೆ ಬೇಡಿಕೆ ಇದೆ. ಆದರೆ, ಈ ಪ್ರದೇಶದಲ್ಲಿ 10 ಎಕರೆ ಸಮತಟ್ಟಾದ ನಿವೇಶನ ಲಭ್ಯವಿಲ್ಲದೇ ಇರುವುದರಿಂದ ಖಾಸಗಿ ಭೂಮಿಯನ್ನು ಗುರುತಿಸುವಂತೆ ಹಿಂದಿನ ಏಕಗವಾಕ್ಷಿ ಸಭೆಯಲ್ಲಿ ಕೆಐಎಡಿಬಿಗೆ ಸೂಚಿಸಲಾಗಿದೆ.
ನಿರ್ವಹಣೆಗೆ 3.6 ಕೋಟಿ ಅವಶ್ಯ: ನಂಜನಗೂಡು,ಅಡಕನಹಳ್ಳಿ, ತಾಂಡ್ಯ, ಹೆಬ್ಟಾಳು ಮತ್ತು ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ, ದೀಪ, ಒಳಚರಂಡಿ ಅಭಿವೃದ್ಧಿ ಮತ್ತು ನಿರ್ವಹಣೆಗೆ 3.6 ಕೋಟಿ ಅವಶ್ಯವಿರುತ್ತದೆ. ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಿನ ಕೈಗಾರಿಕೆಗಳು ಬರುತ್ತಿದ್ದು, ಹಾಲಿ ಇರುವ ವಿದ್ಯುತ್ ಉಪ ಕೇಂದ್ರವನ್ನು 220/66/11ಕೆವಿ-50 ಮೆಗಾ ವಿ.ಎ ಗೆ ಸಾಮರ್ಥ್ಯವನ್ನು ಹೆಚ್ಚಿಸಿ ಮೇಲ್ದರ್ಜೆಗೇರಿಸಲು 50 ಕೋಟಿ ಅನುದಾನದ ಅವಶ್ಯಕತೆ ಇದೆ. ಜವಳಿ ಪಾರ್ಕ್‌ಗೆ ಮೆಲ್ಲಹಳ್ಳಿ ಬಳಿ 25 ಎಕರೆ ಭೂಮಿ ನೀಡಿಕೆ, ಮಹಿಳಾ ಪಾರ್ಕ್ ಸ್ಥಾಪನೆಗೆ 50 ಎಕರೆ ಭೂಮಿ ನೀಡುವುದಾಗಿ ಸಚಿವ ಜಾರ್ಜ್ ತಿಳಿಸಿದರು.
ಸಭೆಯಲ್ಲಿ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಶಾಸಕರಾದ ತನ್ವೀರ್ , ನಾಗೇಂದ್ರ, ಹರ್ಷವರ್ಧನ್, ಡಾ.ಯತೀಂದ್ರ, ಕಾರ್ಮಿಕ ಮುಖಂಡ ಶೇಷಾದ್ರಿ, ಫಾಲ್ಕನ್ ಟೈರ್ ನೌಕರರ ಸಂಘದ ಅಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ಶಿವಣ್ಣಗೌಡ, ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಾಸು, ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮೊದಲಾದವರಿದ್ದರು.
24 ಜಾರ್ಜ್ ಮೀಟಿಂಗ್: ಮೈಸೂರಿನ ವಿವಿಧ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೈಗಾರಿಕಾ ಸಂಘಗಳ ಪ್ರತಿನಿಧಿಗಳ ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.