ಮಂಜಿನ ನಗರಿಯಲ್ಲಿ ಮಳೆ ಹನಿಯ ನಿನಾದ
Team Udayavani, Jul 26, 2018, 3:12 PM IST
ಮಳೆ ಜೋರಾಗಿತ್ತು. ಮನಸ್ಸು ಮಾತ್ರ ಮಳೆಯ ಜತೆಗೆ ಹಾಯಾಗಿ ಸುತ್ತಾಡುವ ಕನವರಿಕೆ ಮಾಡುತ್ತಿತ್ತು. ಬಿಟ್ಟು ಬಿಟ್ಟು ಬರುವ ಮಳೆ- ಒಮ್ಮೊಮ್ಮೆ ಜೋರು ಮಳೆಯ ಜತೆಗೆ ಜಾಲಿ ರೈಡ್ ಹೋದರೆ ಹೇಗೆ ಎಂಬ ಯೋಚನೆ ಆಯಿತು. ಆಫೀಸಲ್ಲಿ ಕುಳಿತು ಸ್ನೇಹಿತರ ಜತೆಗೆ ಹೀಗೆ ಒಂದು ಮಾತುಕತೆ ಮಾಡುವಾಗಲೇ ಮಳೆ ಹೊರಗಡೆ ಶಬ್ದ ಮಾಡಿದಂತಿತ್ತು. ಖುಷಿ ಹೆಚ್ಚಾಯಿತು. ಇನ್ನು ತಡ ಮಾಡುವುದು ಬೇಡ..ಮಳೆಯ ಮೂಡ್‌ನಲ್ಲಿ ಮಡಿಕೇರಿ ಸುತ್ತಿ ಬರೋಣ ಅಂದುಕೊಂಡು ದಿನ ಕೂಡ ಫಿಕ್ಸ್ ಮಾಡಿದೆವು. ಶನಿವಾರ ರವಿವಾರ ಡ್ನೂಟಿಗೆ ರಜೆ ಇರುವುದರಿಂದ ಟೂರ್ ಡೇಟ್ ಸುಲಭವಾಗಿ ಫಿಕ್ಸ್ ಆಯಿತು. ಒಟ್ಟು 9 ಮಂದಿಯ ತಂಡ ಸೇರಿ ಟೆಂಪೋ ಟ್ರಾವೆಲರ್ ಬುಕ್ ಕೂಡ ಮಾಡಿದೆವು. ನೋಡ ನೋಡುತ್ತಿದ್ದಂತೆ ಪ್ರವಾಸ ದಿನ ಹತ್ತಿರ ಬಂತು.
ಅಂದು ಬೆಳಗ್ಗೆ ಸುಮಾರು 6 ಗಂಟೆಗೆ ಮಂಗಳೂರಿಂದ ಹೊರಟ ನಾವು, ಕಲ್ಲಡ್ಕದಲ್ಲಿ ಕೆ.ಟಿ. ಹೀರಿ, ಮನ ತಣಿಸಿದೆವು. ಅಲ್ಲಿಂದ ಸಂಪಾಜೆ ದಾಟಿ ನಮ್ಮ ವಾಹನ ಮೆಲ್ಲನೆ ಮಳೆಯ ಲಾಲಿತ್ಯವನ್ನು ಆಸ್ವಾಧಿಸಿ ರೊಂಯ್ಯನೆ ಸಾಗುತ್ತಿತ್ತು. ಚಳಿಯ ತಂಗಾಳಿ ಮನಸ್ಸಿಗೆ ಹಿತ ನೀಡುತ್ತಿತ್ತು. ಸ್ವಲ್ಪ ದೂರ ದಾಟುವಾಗಲೇ ಕಾಡಿನ ಮಧ್ಯೆ ಅರ್ಥಾತ್ ರಸ್ತೆ ಬದಿ ನೀರ ಜರಿ ನಮ್ಮನ್ನು ಬರಸೆಳೆಯಿತು.
ಚಳಿಗಾಳಿಯ ನಡುವೆಯೂ ನೀರಲ್ಲಿ ಮಿಂದು ನೆಲ್ಲಿಕಾಯಿ ಬಾಯಲ್ಲಿಟ್ಟು ಗಾಡಿ ಹತ್ತಿದೆವು. ಅದೇ ಸ್ಪೀಡಲ್ಲಿ ವಾಹನ ದುಬಾರೆ ತಲುಪಿದಾಗ ಬೆಳಗ್ಗೆ ಸುಮಾರು 10 ಗಂಟೆ. ನೀರಿಗೆ ಇಳಿದು ಆಡೋಣ ಎಂಬ ಮನಸ್ಸಾದರು ಮಳೆ ನೀರು ವಿಪರೀತ ಇರುವುದರಿಂದ ‘ಯಾರೂ ನೀರಿಗೆ ಇಳಿಯಬೇಡಿ’ ಎಂಬ ಸೂಚನೆ ಕೇಳಿ ಸುಮ್ಮನಾದೆವು. ಅಲ್ಲೇ ಒಂದಿಷ್ಟು ಫೋಟೋ ಸೆಷನ್ ಮುಗಿಸಿ, ಹತ್ತಿರದಲ್ಲೇ ಇರುವ ಚಿಕ್ಲಿಹೊಳೆ ಡ್ಯಾಂ ನೋಡಲು ಹೊರಟೆವು. ನೀರರಾಶಿ ಕಣ್ತುಂಬಿಸಿ, ಗೋಲ್ಡನ್ ಟೆಂಪಲ್‌ಗೆ ಬಂದು ಅಲ್ಲೊಂದಿಷ್ಟು ಸಮಯ ಕಳೆದೆವು.
ಮಳೆ ಚಳಿಯ ನಡುವೆ ಮಾವಿನಕಾಯಿ ರುಚಿ ನೋಡಿದೆವು. ಅಲ್ಲಿಂದ ಮತ್ತೆ ನಮ್ಮ ವಾಹನ ಹಾರಂಗಿ ಡ್ಯಾಂನತ್ತ ಹೊರಟಿತು. ಅಲ್ಲಿಯೂ ಜಲರಾಶಿ ಕಂಡು ಮೂಕವಿಸ್ಮಿತ ಭಾವನೆ. ಹತ್ತಿರದಲ್ಲೇ ಇದ್ದ ಪಾರ್ಕ್‌ನ ಜೋಕಾಲಿಯಲ್ಲೆಲ್ಲ ಮಕ್ಕಳಂತೆ ಆಡಿ ಕುಣಿದಾಡಿದೆವು.
ಕುಶಾಲನಗರಕ್ಕೆ ತಲುಪುವಾಗ ಹಸಿವಿನಿಂದ ಹೊಟ್ಟೆ ಜುರುಗುಟ್ಟಲಾರಂಬಿಸಿತು. ಎಲ್ಲರೂ ಒಂದು ಹೊಟೇಲ್‌ನಲ್ಲಿ ಭರ್ಜರಿ ಊಟ ಮುಗಿಸಿ ಮತ್ತೆ ಕಾವೇರಿ ನಿಸರ್ಗಧಾಮಕ್ಕೆ ಪ್ರಯಾಣ ಆರಂಭ. ಮರದ ಮೇಲಿನ ಮನೆಯ ಕಂಡು ಅಲ್ಲೊಂದಿಷ್ಟು ಫೋಟೊ ತೆಗೆಸಿ, ಅಲ್ಲೇ ಓಡಾಡುತ್ತಿದ್ದ ಜಿಂಕೆಗಳನ್ನು ಕಂಡು ಖುಷಿಪಟ್ಟೆವು. ಅಲ್ಲಿಂದ ಸಂಜೆ ವೇಳೆ ರಾಜಾಶೀಟ್‌ಗೆ ಬಂದಾಗ ಮುಂಗಾರು ಮಳೆಯ ನರ್ತನ ಮನಸ್ಸಿಗೆ ಮುದ ನೀಡಿದರೂ ಸೂರ್ಯಾಸ್ತಮಾನ ಕಾಣಲಾಗದೆ ನಿರಾಶೆಯಾಯಿತು.
ಬಳಿಕ ಅಲ್ಲೇ ಹತ್ತಿರದಲ್ಲಿ ಹೋಮ್ ಸ್ಟೇಗೆ ಹೋಗಿ ಒಂದಷ್ಟು ಕುಣಿತ, ಪಾರ್ಟಿ ನಡೆಸಿ ರಾತ್ರಿ ಉಳಿದು ಮರುದಿನ ಬೆಳಗ್ಗೆ ಅಲ್ಲೇ ಒಂದಿಷ್ಟು ಕಡೆ ಸುತ್ತಾಡಿದೆವು. ರಾಜಾಟೋಂಬ್‌ಗ ಹೋಗಿ ಅಲ್ಲಿ ರಾಜರ ಕಾಲದ ವಿಷಯ ತಿಳಿದು, ಮಡಿಕೇರಿಯ ಮೈನ್ ಪಾಯಿಂಟ್ ಅಬ್ಬಿ ಫಾಲ್ಸ್‌ಗೆ ಬಂದಾಗ ಸುಮಾರು 11 ಗಂಟೆಯಾಗಿತ್ತು. ಜನಜಾತ್ರೆಯಲ್ಲಿ ಮಿಂದಿದ್ದ ಅಬ್ಬಿ ಮಳೆಯ ಲಾಲಿತ್ಯದೊಂದಿಗೆ ಬಿಳಿಯ ನೊರೆಯ ಹಾಲನ್ನು ಚೆಲ್ಲುತ್ತಾ ಬಿತ್ತರಿಸಿದ ಸೊಬಗು ರೋಮಾಂಚನಗೊಳಿಸಿತು. ಈ ಆಹ್ಲಾದಕತೆಗೆ ಚಳಿ ಗೊತ್ತೇ ಆಗಿಲ್ಲ. ಮತ್ತೆ ನಮ್ಮ ವಾಹನ ಸಾಗಿದ್ದು ಚೇಳಾವರ ಫಾಲ್ಸ್ ಗೆ. ಅದೂ ಕೂಡ ನೀರಿನ ವೈಯ್ನಾರ ಪ್ರತಿಧ್ವನಿಸುತ್ತಿತ್ತು. ಅಲ್ಲಿಂದ ಭಾಗಮಂಡಲಕ್ಕೆ ಬಂದು ಊಟ ಮುಗಿಸಿ ತಲಕಾವೇರಿಗೆ ಬಂದೆವು. ಮಂಜು ಮುಸುಕಿದ ಅಲ್ಲಿನ ಚೆಲುವು ವರ್ಣಿಸಲು ಅಸಾಧ್ಯ.
ವಾಹನ ಹೀಗೆ ಹೋದಲ್ಲೆಲ್ಲ ಮಳೆಯ ರಾಗ ಕೇಳುತ್ತಲೇ ಇತ್ತು. ಚಟ ಪಟ ಸದ್ದು ಕಿವಿ ತಣಿಸುತ್ತಿತ್ತು. ಚಳಿಯು ಮನದ ಭಾವನೆಗೆ ಹೊಸ ರೂಪ ನೀಡುತ್ತಿತ್ತು. ಹನಿಹನಿ ಇಬ್ಬನಿಗೆ ತೊಯ್ದ ಮನವು ಮಡಿಕೇರಿಯನ್ನೇ ಬಯಸುತ್ತಿತ್ತು. ಆದರೆ, ನಮ್ಮ ವಾಹನ ನಾವು ಬಂದ ರಸ್ತೆಯಲ್ಲೇ ವಾಪಾಸು ಬರುತ್ತಿತ್ತು. ನೂರಾರು ನೆನಪುಗಳನ್ನು ಕಟ್ಟಿಕೊಂಡು ಬಂದಾಗ ಮೆಲ್ಲನೆ ವಾಹ ನದ ಕಿಟಕಿಯ ಮೂಲಕ ಹೊರಗೆ ದೃಷ್ಟಿ ಹಾಯಿಸಿದರೆ ಸಂಪಾಜೆ ಬಂದಾಗಿತ್ತು.
ರೂಟ್ ಮ್ಯಾಪ್
· ಮಂಗಳೂರಿನಿಂದ ಮಡಿಕೇರಿಗೆ 138 ಕಿ.ಮೀ. ದೂರ.
· ಬಸ್, ಖಾಸಗಿ ವಾಹನ ಸೌಲಭ್ಯಗಳಿವೆ.
· ಕುಶಾಲನಗರ, ಮಡಿಕೇರಿಯಲ್ಲಿ ಹಲವು ಪ್ರವಾಸಿ ತಾಣಗಳಿವೆ.
· ಮೊದಲೇ ಬುಕ್ಕಿಂಗ್ ಮಾಡಿದರೆ ಊಟ, ವಸತಿ ವ್ಯವಸ್ಥೆಗೆ ಸಮಸ್ಯೆಯಿಲ್ಲ.
· ಸ್ಥಳೀಯವಾಗಿಸುತ್ತಾಡಲು ಖಾಸಗಿ ವಾಹನ ಸೌಲಭ್ಯಗಳು ಸಾಕಷ್ಟಿವೆ.
ಸ್ಟಾಲನ್ ಫಿಡಲ್ ಡಿ’ಸೋಜಾ,
ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.