ಔಷಧ ಸಿಂಪರಣೆ ಕಾರ್ಮಿಕರಿಗೆ ಭಾರಿ ಬೇಡಿಕೆ
Team Udayavani, Jul 28, 2018, 10:31 AM IST
ಸುಳ್ಯ: ಸುಳ್ಯ ತಾಲೂಕಿನಾದ್ಯಂತ ಸುರಿದ ನಿರಂತರ ಮಳೆಯಿಂದಾಗಿ ಅಡಿಕೆ ಕೃಷಿಕರು ಕಂಗೆಟ್ಟಿದ್ದರು. ತುಸು ಬಿಸಿಲು ಕಾಣಿಸಿಕೊಂಡಿರುವುದು ಸದ್ಯ ಕೃಷಿಕರು ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ನಡುವೆ ಔಷಧ ಸಿಂಪರಣೆ ಕಾರ್ಮಿಕರಿಗೆ ಭಾರಿ ಬೇಡಿಕೆ ಬಂದಿದೆ.
ಜೂನ್‌ನಲ್ಲಿ ಆರಂಭಗೊಂಡ ಮಳೆ ನಿರಂತರವಾಗಿ ಬಂದ ಕಾರಣ ಅಡಿಕೆ ಬೆಳೆಗಾರರಿಗೆ ನಿಯಮಿತ ಅವಧಿಗೆ ಮರಕ್ಕೆ ಔಷಧ ಸಿಂಪಡಿಸಲು ಸಾಧ್ಯವಾಗಿರಲಿಲ್ಲ. ಹವಾಮಾನ ವೈಪರೀತ್ಯವಾಗಿ ಬಹುತೇಕ ಕೃಷಿಕರ ತೋಟಗಳಲ್ಲಿ ಅಡಿಕೆಗೆ ಕೊಳೆ ರೋಗ ಕಾಣಿಸಿಕೊಂಡಿತ್ತು. ಕೃಷಿಕರು ಜೂನ್ ಮೊದಲ ವಾರದಲ್ಲಿ ಅಡಿಕೆ ಮರಕ್ಕೆ ಔಷಧ ಸಿಂಪಡಿಸುವ ಕಾರ್ಯ ಪ್ರಾರಂಭಿಸುತ್ತಾರೆ. ಆದರೆ ಈ ಬಾರಿ ತಡವಾಗಿದೆ. ಈಗ ಔಷಧ ಖರೀದಿ, ಕಾರ್ಮಿಕರ ಹುಡುಕಾಟದತ್ತ ರೈತನ ಚಿತ್ತ ಸಾಗಿದೆ. ಔಷಧ ಸಿಂಪರಣೆಗೆ ಆಧುನಿಕ ಯಂತ್ರೋಪಕರಣಗಳಿದ್ದರೂ, ಕಾರ್ಮಿಕರು ಅತ್ಯವಶ್ಯಕ ವಾಗಿ ಬೇಕು. ಹೀಗಾಗಿ ಅಡಿಕೆ ತೋಟದಲ್ಲಿ ಮದ್ದು ಸಿಂಪರಣೆ ನಡೆಸುವ ಕಾರ್ಮಿಕರಿಗೆ ಭಾರಿ ಬೇಡಿಕೆ. ಅಡಿಕೆ ತೋಟಕ್ಕೆ ಮದ್ದು ಸಿಂಪಡಿಸುವವರ ಮನೆ ಬಾಗಿಲಿಗೆ ಬೆಳೆಗಾರರು ಬೆಳ್ಳಂಬೆಳಗ್ಗೆಯ ತೆರಳುತ್ತಿದ್ದಾರೆ. ಮದ್ದು ಸಿಂಪರಣೆ ಕಾರ್ಮಿಕರ ಮನೆ ಬಾಗಿಲಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಮೊಬೈಲ್ ಸ್ವಿಚ್‌ಆಫ್
ಔಷಧ ಸಿಂಪರಣೆ ನಡೆಸುವ ಕಾರ್ಮಿಕನ ಮನೆ ಮುಂದೆ ಅಡಿಕೆ ತೋಟದ ಮಾಲಕರು ಬರುತ್ತಿದ್ದಾರೆ. ಕಾರ್ಮಿಕರ ಮೊಬೈಲ್‌ಗಳಿಗೆ ನಿರಂತರ ಕರೆ ಬರುತ್ತಿದೆ. ಈ ಕಿರಿಕಿರಿ ತಾಳಲಾರದೆ ಮೊಬೈಲ್ ಸ್ವಿಚ್ ಆಫ್ ಮಾಡಿಡುವ ಪ್ರಸಂಗ ಬಂದಿದೆ ಎಂದು ಔಷಧ ಸಿಂಪರಣೆ ಮಾಡುವ ಕಾರ್ಮಿಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಕಾರ್ಮಿಕರು ಸಿಗುತ್ತಿಲ್ಲ
ನಿರಂತರ ಮಳೆ ಸುರಿದ ಪರಿಣಾಮ ಅಡಿಕೆಗೆ ಔಷಧ ಬಿಡಲಾಗಲಿಲ್ಲ. ಈಗ ಮಳೆ ಸ್ವಲ್ಪ ಕಡಿಮೆಯಾಗುತ್ತಿದೆ. ಔಷಧ ಸಿದ್ಧಪಡಿಸಿಕೊಂಡಿದ್ದೇವೆ. ಆದರೆ ಸಿಂಪರಣೆಗೆ ಕಾರ್ಮಿಕರು ಲಭ್ಯವಾಗದೆ ತೊಂದರೆ ಆಗಿದೆ.
- ದಿನೇಶ್ ಎಂ.,
ಕೃಷಿಕರು, ಕನಕಮಜಲು
ಸರದಿಯಂತೆ ಕಾರ್ಯ
ದಿಢೀರ್ ಬಿಸಿಲು ಬಂದ ಕಾರಣ ಔಷಧ ಸಿಂಪರಣೆಗೆ ಭಾರಿ ಬೇಡಿಕೆಗಳು ಬಂದಿದೆ. ಈಗ ಎಲ್ಲರೂ ಅವಸರ ಮಾಡುತ್ತಿದ್ದಾರೆ. ಒಂದು ಕಡೆ ಮುಗಿಸಿಕೊಂಡು ಮತ್ತೊಂದು ಕಡೆ ಈ ರೀತಿ ಸರದಿಯಂತೆ ಕಾರ್ಯ ಮಾಡುವುದು ಅನಿವಾರ್ಯವಾಗಿದೆ.
– ನಾರಾಯಣ
ಔಷಧ ಸಿಂಪರಣೆ ಕಾರ್ಮಿಕ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.