ಸೂರ್ಯವಂಶಜರು
Team Udayavani, Jul 29, 2018, 6:00 AM IST
ಏಳ್ರಿ, ಆರು ಹೊಡೀತು”
“”ಆರು ಹೊಡದ್ರೇನಾತು, ಸುಮ್ಮನೆ ಮಲಗು ಇನ್ನೊಂದ್ ತಾಸು”
“”ನಾ ಮಲಗ್ತಿನಿ ಬಿಡ್ರಿ, ನೀವು ವಾಕಿಂಗ್‌ಗೆ ಹೋಗೋದಿಲ್ಲೇನು?”
“”ಆರು ಗಂಟೆಗೆ ವಾಕಿಂಗ್ ಹೋಗ್ಬೇಕು ಅಂತ ನೇಮಿಲ್ಲ. ಸುಮ್ಮನೆ ಮಲಗು” ಇದು ಬಹಳಷ್ಟು ನಿವೃತ್ತ ಜನರ ಮನೆಗಳಲ್ಲಿ ಕೇಳಿಬರುವ ಉದಯರಾಗ ಅಥವಾ ಬೆಳಗಿನ ನಿದ್ದೆಗಣ್ಣಲ್ಲೇ ನಡೆಯುವ ಜುಗಲಬಂದಿ! ಈಗ, ಆರು ಗಂಟೆಗೇನೇ ವಾಕಿಂಗ್ ಹೊರಡಬೇಕು ಅಂತ ನೇಮವಿಲ್ಲ, ಸುಮ್ಮನೆ ಮಲಗು ಎಂದು ಮಡದಿಯನ್ನು ಜಬರಿಸಿಕೊಳ್ಳುವ ಈ ಮಹಾಶಯರು ಬೆಳಗಿನ ಆರು ಗಂಟೆಯ ಮೊದಲೇ ಮುಖಮಾರ್ಜನ ಮಾಡಿ, ಬಟ್ಟೆ ಬದಲಿಸಿ, ಅಂಗಳಕ್ಕಿಳಿಯುವ ಕಾಲವೊಂದಿತ್ತು! ಈಗ ಬೆಳಗಿನ ಆರು ಹೊಡೆದು ಹೋದರೂ ತಾನು ಮಲಗುವುದಲ್ಲದೆ, ಮಡದಿಯೂ ಮಲಗುವಂತೆ ಒತ್ತಾಯಿಸುವ ಈ ಸಜ್ಜನರು ಇಷ್ಟೊತ್ತಿಗಾಗಲೇ ಹತ್ತು-ಹತ್ತು “ಗುಡ್ ಮಾರ್ನಿಂಗ್ ಸಾರ್’ ಎಂಬ ಶುಭಾಶಯಗಳನ್ನು ಸ್ವೀಕರಿಸಿ, ತಾವೂ ಅಷ್ಟೇ ಹುರುಪಿನಿಂದ ಅವರಿಗೆ ಉತ್ತರ ನೀಡಿ, ವೇಗದಿಂದಲೇ ಮುಂದುವರಿಯುತ್ತಿದ್ದ ಆ “ಜಮಾನಾ’ ಎಲ್ಲಿ ಹೋಯ್ತು? ಆ ದಿನಗಳನು ನೆನೆದುಕೊಂಡು ಈ ನಿವೃತ್ತ ಮಹಾಶಯರು ಒಮ್ಮೊಮ್ಮೆ ಮನಸ್ಸಿನಲ್ಲೇ ಮುಗುಳು ನಗುತ್ತಾರೆ. ವಾಕಿಂಗ್ ಮಾಡುವಾಗ ಎದುರಾಗುತ್ತಿದ್ದ ಪರಿಚಿತ ಗಂಡು-ಹೆಣ್ಣು ಚಹರೆಗಳನ್ನು ನೆನಪಿಸಿಕೊಂಡು, ಅವರೊಡನೆ ನಡೆದ ಸಂಭಾಷಣೆಗಳನ್ನು ಪೆಪ್ಪರಮೆಂಟಿನಂತೆ ಮುದದಿಂದಲೇ ಮೆಲುಕು ಹಾಕುತ್ತಾರೆ! ಆದರೆ, ಈಗೀಗ “”ಬೆಳಗಾತು ಏಳ್ರಿ” ಎಂದು ಮಡದಿ ಎಬ್ಬಿಸಿದರೆ ಮಾತ್ರ ಬೇಸರಪಟ್ಟು, ಆಕಾಶವನ್ನೇ ನುಂಗುವ ಹಾಗೆ ದೊಡ್ಡದಾಗಿ ಆಕಳಿಸಿ, ಮಗ್ಗಲು ಬದಲಾಯಿಸಿ, ಮುಖದ ಮೇಲೆ ಮತ್ತಿಷ್ಟು ಚದ್ದರ್ ಎಳೆದುಕೊಳ್ಳುತ್ತಾರೆ!
ಹೀಗೆ, ಬೆಳಗಾದರೂ ಕಣ್ಣು ಬಿಡದ ಸೂರ್ಯವಂಶಜರು ಕೇವಲ ಪಿಂಚಣಿದಾರರೇ ಎಂದು ಭಾವಿಸಬೇಕಾಗಿಲ್ಲ. ತಡಮಾಡಿ ಎದ್ದು , ತಾನು ತಡವಾಗಿ ಎದ್ದುದಕ್ಕೆ ಇತರರ ಮೇಲೆಯೇ ತಪ್ಪು ಹೊರಿಸುವ ಬುದ್ಧಿವಂತರಿಗೇನು ಕಡಿಮೆಯಿಲ್ಲ. ಬದುಕಿನಲ್ಲಿ ಉತ್ಸಾಹವೇ ಇಲ್ಲದ ಆಲಸಿಗಳ ವರ್ಗವೇ ಉಂಟು. ಬೆಳಿಗ್ಗೆ ಏಳುವುದರಲ್ಲಿ ಮಾತ್ರವಲ್ಲ , ಎದ್ದ ನಂತರದ ಪ್ರತಿಯೊಂದು ಕೆಲಸ-ಕಾರ್ಯದಲ್ಲೂ ಅವರು ನಿಧಾನ. ಮಾಡುವ ಕೆಲಸದಲ್ಲಿ ತನ್ಮಯತೆಯಿಲ್ಲದೆ, ಕೆಲಸದ ಗುಣಮಟ್ಟದ ಬಗ್ಗೆ ಗಮನವಿಲ್ಲದೆ, ಅಂತಿಮ ಪರಿಣಾಮದ ಬಗ್ಗೆ ಕಾಳಜಿಯಿಲ್ಲದೆ, ಕೀಲಿ ಕೊಟ್ಟೊಡನೆ ಕೆಲಸಕ್ಕೆ ತೊಡಗುವ ಯಂತ್ರದಂತೆ ದುಡಿದು ಮನೆ ಸೇರುವ ಜನರ ಖಾನೇಸುಮಾರಿಯನ್ನು ಯಾರೂ ಮಾಡಿಲ್ಲ, ಮಾಡುವುದು ಸಾಧ್ಯವೂ ಇಲ್ಲ. ಯಾಕೆಂದರೆ, ಹಾಗೆ ಆಲಸಿಗಳ ಖಾನೇಸುಮಾರಿ ಮಾಡಬೇಕಾದವರೇ ಆಲಸಿಗಳಾಗಿದ್ದರೆ ಅವರ ಪರಿಶ್ರಮದ ಪರಿಣಾಮ ಹೊರಬೀಳುವುದು ಯಾವ ಜನ್ಮದಲ್ಲಿಯೋ!
ಮನುಷ್ಯನೆಂದು ಇನ್ನಾವ ಪ್ರಾಣಿಗಳಿಗೂ ಇಲ್ಲದ ಬುದ್ಧಿವಂತಿಕೆಯ ವರದಾನ ಕೊಡುವಾಗ ಆ ಪರಮಾತ್ಮನೇನಾದರೂ ಪಾಶಾìಲಿಟಿ ಮಾಡಿರಬಹುದೇ ಎಂದು ಒಮ್ಮೊಮ್ಮೆ ಸಂದೇಹ ಬರಬಹುದು! ಯಾಕೆಂದರೆ, ಕೆಲವರು ಜನ್ಮತಃ ಚಾಲಾಕು ನಡೆ-ನುಡಿಗಳನ್ನರಿತ ಮೇಧಾವಿಗಳಿದ್ದರೆ, ಮತ್ತೆ ಕೆಲವರು ತಮ್ಮ ಬದುಕು ಬಲು ದೀರ್ಘ ಕಾಲದ್ದಿರುವಾಗ ಯಾವ ಕೆಲಸಕ್ಕೂ ಅವಸರ ಮಾಡಬಾರದು-ಎಂಬ ತಾತ್ವಿಕ ಸಿದ್ಧಾಂತದ ಆರಾಧಕರಾಗಿರುತ್ತಾರೆ! ಒಂದೇ ಮಾನವಕುಲದಲ್ಲಿ ಈ ತಾರತಮ್ಯವೇಕೆ? ಕೆಲವು ಅತಿಜಾಣರ “ಲಾಬಿ’ಗೆ ಮಣಿದು ದೇವರೇ ಈ ತಾರತಮ್ಯಗೈದಿರಲೂಬಹುದು. ಅಥವಾ, ಸರ್ವಶಕ್ತನಾದ ಆ ಭಗವಂತನ ಕೈ ಸೋತಾಗ “ಈ ಮಾನವಕುಲದ ಕೆಲವರು ತಮ್ಮ ಆಲಸ್ಯತನದಲ್ಲೇ ಪರಮಾವಧಿ ಸುಖ ಅನುಭವಿಸುವಂತಾಗಲಿ’ ಎಂಬ ವರದಾನ ನೀಡಿರಲೂಬಹುದೇನೋ! ದೇವರ ಈ ತರದ ಕೈಚಳಕದ ಕುರಿತು ಸಂಶೋಧಕರಾರೂ ಸಂಶೋಧನೆ ನಡೆಸಿದ ಮಾಹಿತಿಯಂತೂ ಇಲ್ಲ. ಆದರೆ, ಈ ತಾರತಮ್ಯವನ್ನು ಕಡಿಮೆಗೊಳಿಸಬೇಕೆಂದು ಹಲವೊಂದು ಸಾಧು-ಸಂತರು ಪ್ರಯತ್ನಿಸಿ ಸೋತು ಹೋದರೂ ಮನುಷ್ಯಕೋಟಿಯಲ್ಲಿ ಬೇರು ಬಿಟ್ಟಿರುವ ಆಲಸ್ಯತನವೆಂಬ ಶಾಪ ಕರಗಿ ಹೋಗಿಯೇ ಇಲ್ಲ. ಅವರ ಇಂಥ ಸೋಲೂ ನಮ್ಮ ಆಲಸಿ ಮಿತ್ರಮಂಡಲಿಯ ಸಂತೋಷ ಇಮ್ಮಡಿಗೊಳ್ಳಲು ಕಾರಣವಾದರೂ ಅಚ್ಚರಿಯೇನಲ್ಲ! ಈ ಆಲಸ್ಯತನ ಅಥವಾ ಕೆಲಸಕಾರ್ಯಗಳಲ್ಲಿ ಮಂದಗತಿಯೆಂಬುದು ನಮ್ಮ ಬದುಕಿನ ಮೂಲೆಮೂಲೆಯನ್ನೂ ಗಾಢವಾಗಿ ಆವರಿಸಿಕೊಂಡು ಬಿಟ್ಟಿರುವುದು ನಮ್ಮ ನಿತ್ಯದ ಚಿಕ್ಕ-ದೊಡ್ಡ ಚಟುವಟಿಕೆಗಳಲ್ಲಿ ಕಂಡುಬರುತ್ತಲೇ ಇರುತ್ತದೆ. ಅದರ ನಿರೀಕ್ಷಣೆಗಾಗಿ ಬಲು ಗಂಭೀರವಾದ ಸಂಶೋಧನೆ ಮಾಡುವ ಅಗತ್ಯವೇನೂ ಇಲ್ಲ. ಪ್ರತಿಯೊಬ್ಬ ವ್ಯಕ್ತಿ ಬೆಳಿಗ್ಗೆ ಏಳುವಾಗ “ಆ’ಕಳಿಸುವುದೆಂದರೆ ಅವನ ಆಲಸ್ಯತನದ ನಾಟಕದ “ನಾಂದಿ’ಯೆಂದೇ ತಿಳಿಯಬೇಕು, ಅಷ್ಟೆ . ಅಂಥವರು ತಾವು ಮಾಡುವ ಯಾವ ಕೆಲಸದಲ್ಲಿಯೂ ತಮ್ಮ ಮನಸ್ಸು ತೊಡಗಿರದಂತೆ ನೋಡಿಕೊಳ್ಳುತ್ತಾರಂತೆ!
ಒಮ್ಮೆ ನಮ್ಮ ದೇಶದ ರಾಜಧಾನಿಯಲ್ಲಿ ತುಂಬ ದೊಡ್ಡವರೆನಿಸಿದ್ದ ನೇತಾರರೊಬ್ಬರ ನಿಧನವಾದಾಗ, ಅವರ ಅಂತಿಮ ಯಾತ್ರೆಯಲ್ಲಿ ಸಾವಿರಾರು ಅನುಯಾಯಿಗಳೂ ಭಕ್ತರೂ ಸೇರಿ ಅವರ ಹೆಸರಿನ ಜಯಜಯಕಾರ ಮಾಡುತ್ತಿದ್ದರಂತೆ! ಆಗ ಮೆರವಣಿಗೆಯ ಮುಂಚೂಣಿಯಲ್ಲಿದ್ದ ಕಾರ್ಯಕರ್ತರೊಬ್ಬರು, “ಒಂದಿಷ್ಟು ಜೋರಿನಿಂದ ಘೋಷಣೆ ಮಾಡಿರಪ್ಪಾ’ ಎಂದು ಯುವಕರ ಗುಂಪಿಗೆ ಮೆಲ್ಲನೆ ಸೂಚಿಸಿದಾಗ ಆ ಯುವಕರು, “ಏನ್ ಸಾರ್, ನಮಗೆ ಕೊಡೋದು ಇಪ್ಪತ್ತು ರೂಪಾಯಿ! ನಾವು ಇನ್ನೆಷ್ಟು ಜೋರಿನಿಂದ ಕೂಗಬೇಕು?’ ಎಂದು ಮರುಬಾಣ ಬಿಟ್ಟರಂತೆ! ಈ ಮಾತಿನಲ್ಲಿ ನಾವು ಕಂಡುಕೊಳ್ಳುವುದೇನು? ಆ ನೇತಾರರ ಕುರಿತಾದ ಭಕ್ತಿಯೇ? ದೇಶಾಭಿಮಾನವೆ? ಅಥವಾ ಮಾಡುವ ಕೆಲಸದಲ್ಲಿ ಸ್ವಾಭಾವಿಕವಾಗಿ ಇರಬೇಕಾದ ಉತ್ಸಾಹವೆ? ತೀರಿಹೋದವರ ಯಾವೊಂದು ಪರಿಚಯವೇ ಇಲ್ಲದೆ ಬರಿಯ “ಕೂಲಿಗಾಗಿ ಕೂಗಿಕೊಳ್ಳುವ’ ದಂಧೆ ಮಾಡುವವರಿಂದ ಇದನ್ನೆಲ್ಲ ನಿರೀಕ್ಷಿಸುವುದೂ ತಪ್ಪು . ಆದರೆ ಇನ್ನುಳಿದ ಕೆಲಸಕಾರ್ಯಗಳಲ್ಲಿ ಸ್ವ-ಖುಷಿಯಿಂದ ತೊಡಗಿಕೊಳ್ಳುವ ಪ್ರವೃತ್ತಿ ಕಾಣದಿರುವುದೇ ವಿಶೇಷ ನಿರಾಸೆಯ ಸಂಗತಿಯಾಗಿದೆ.
ಹಿಂದೆ ಕವಿ ಬಿಳಿಗಿರಿಯವರ ಕವಿತೆಯೊಂದನ್ನು ಓದಿದ್ದು ಮಸಕು-ಮಸಕಾಗಿ ನನ್ನ ನೆನಪಿನಲ್ಲಿ ಉಳಿದಿದೆ. ಸೋಮಾರಿಗಳ ಜೀವನಗಾಥೆಯಂತಿದ್ದ ಆ ಕವಿತೆಯ ಕೊನೆಯ ಸಾಲು ಹೀಗಿತ್ತು:
ಮಾನವನ ಬದುಕನ್ನು ತೀರ ಹಗುರಾಗಿ ಭಾವಿಸಿಕೊಂಡವರ ಕುರಿತಾಗಿಯೇ ನಾನೆಂದೋ ಒಂದು ಕವಿತೆ ಬರೆದದ್ದು ಇಲ್ಲಿ ಪ್ರಸ್ತುತವೆನಿಸುತ್ತದೆ. ಅದರ ಆರಂಭದ ಸಾಲುಗಳು ಹೀಗಿವೆ:
“ಆದೇಶ ಬಂದೊಡನೆ “ಆ’ ಎಂದು ಆಕಳಿಸಿ
ಜೈ ಎಂದು ಮೆರವಣಿಗೆ ಹೊರಡುವವರು
ಯಾ ದೇಶದುದ್ಧಾರ ಮಾಡುವವರು?
ಗಡಿಯಾರ ಹೊಡೆಯದೆಯೆ ಗಂಟೆ ಏಳೆಂದು
ರವಿಯುದಯ ಕಣ್ಣಾರೆ ಕಂಡರೂ ಮಲಗುವರು
ಎದ್ದ ಮೇಲೇನು ಮಹಾ ಸಾಧಿಸುವರು?
ಪ್ರಕೃತಿಯಂಗಳದಲ್ಲಿ ಮಧುಮಾಸ ರಂಗವಲಿ
ಹಾಕಿದರೂ ಕೆಲೆಂಡರದಂಕಿ ಎಣಿಸುವವರು
ಆದೇಶ ಬಂದೊಡನೆ “ಆ’ ಎಂದು ಆಕಳಿಸಿ
ಜೈ ಎಂದು ಮೆರವಣಿಗೆ ಹೊರಡುವವರು
ಯಾ ದೇಶದುದ್ಧಾರ ಮಾಡುವವರು?”
ಸ್ವಯಂಪ್ರೇರಣೆ, ಸ್ವಯಂ ಕಾರ್ಯೋತ್ಸಾಹ ಹಾಗೂ ಸ್ವಯಂ ಸಂಕಲ್ಪವಿಲ್ಲದೆ ನಮ್ಮ ಯಾವ ಕೆಲಸವೂ ಸಿದ್ಧಿಸಲಾರದು. ಯಾರೋ ಹೇಳಿದ್ದೆಂದು, ಹೇಗಾದರೂ ಮಾಡಿ ಮುಗಿಸುವ ಯಾವ ಕಾರ್ಯವೂ ಸಫಲವೆನಿಸಲಾರದು. ಮುಖ್ಯವಾಗಿ, ಮನುಷ್ಯ ತನ್ನ ಶಾರೀರಿಕ ಮತ್ತು ಮಾನಸಿಕ ಆಲಸ್ಯತನವನ್ನು ತೊಡೆದು ಹಾಕದೆ ಅವನಲ್ಲಿ ತನ್ನ ಕಾರ್ಯ-ಚಟುವಟಿಕೆಗಳ ಕುರಿತು ಲವಲವಿಕೆ ಹುಟ್ಟುವುದೇ ಸಾಧ್ಯವಿಲ್ಲ! ಆತ ಸಾಧ್ಯವಿದ್ದಲ್ಲೆಲ್ಲ ಆಲಸ್ಯತನ ಅಥವಾ ಸೋಮಾರಿತನವನ್ನೇ ಹಾಸಿ ಹೊದ್ದು ಬೆಚ್ಚಗೆ ಮಲಗುವುದೇ “ಸುಖದ ಗುಟ್ಟು’ ಎಂದು ಭಾವಿಸುತ್ತಾನೆ!
ಬಿ. ಎ. ಸನದಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.