ಶತಮಾನದ ಬೆಳಗು


Team Udayavani, Jul 29, 2018, 6:00 AM IST

10.jpg

ವರಕವಿ ದ. ರಾ. ಬೇಂದ್ರೆ ಬರೆದ “ಬೆಳಗು’ ಕವಿತೆ ಕನ್ನಡ ಕಾವ್ಯಾಕಾಶದಲ್ಲಿ ಹೊಸ ಬೆಳಗನ್ನು ಮೂಡಿಸಿತ್ತು. ಅದು ಪ್ರಕಟವಾಗಿ ನೂರು ವರ್ಷಗಳಾದವು !  ಉತ್ಕಟವಾದ ಸಂಭ್ರಮದಲ್ಲಿ ಹೇಳುವುದಾದರೆ ಇದು ಹೊಸಗನ್ನಡ ಕಾವ್ಯದ ಶತ-ಮಾನ !

ಮೂಡಲ ಮನೆಯಾ ಮುತ್ತಿನ ನೀರಿನ
ಎರಕವ ಹೊಯ್ದಾ
ನುಣ್ಣ-ನ್ನೆರಕವ ಹೊಯ್ದಾ
ಬಾಗಿಲು ತೆರೆದೂ ಬೆಳಕೂ ಹರಿದೂ
ಜಗವೆಲ್ಲಾ ತೊಯ್ದಾ
ಹೋಯಿತೋ-ಜಗವೆಲ್ಲಾ ತೊಯ್ದಾ

1918ರ ವರ್ಷ, ಪ್ರಭಾತ  ಪತ್ರಿಕೆಯಲ್ಲಿ ಬೆಳಗು ಎಂಬ ಶೀರ್ಷಿಕೆ ಹೊತ್ತ ಈ ಕವಿತೆ ಅಚ್ಚಾಗುವುದರ ಮೂಲಕ ಕನ್ನಡದ ಕಾವ್ಯಾಕಾಶದಲ್ಲಿ ಹೊಸತೊಂದು ಬೆಳಗು ಮೂಡಿತು. ಶುಕ್ರ ಗ್ರಹವನ್ನು ಬೆಳಗಿನ ಬೆಳ್ಳಿ ಎನ್ನುತ್ತಾರೆ. ಅಂಥದೊಂದು ಬೆಳ್ಳಿ ಆ ಬೆಳಗಿನಲ್ಲಿ ಕಾಣಿಸಿಕೊಂಡಿತು. ಆ ಕವಿತೆಯನ್ನು ಬರೆದ ಕವಿಗೆ ಆಗಿನ್ನೂ 22ರ ಹರೆಯ. ಅದಕ್ಕಿಂತ ಮುಂಚೆ ಆತ ಕವಿತೆ ಬರೆದಿದ್ದನೆ, ಬರೆದ ಕವಿತೆ ಅಚ್ಚಾಗಿತ್ತೆ, ಅಚ್ಚಾಗದೆ ಉಳಿದಿತ್ತೆ, ಇವೆಲ್ಲ ಸಂಗತಿಗಳು ಈಗ ಅಸ್ಪಷ್ಟ. ಆದರೆ ಬೇಂದ್ರೆ ಎಂಬ ಕವಿಯ ಕಾವ್ಯಶಕ್ತಿಯ ಬೀಜರೂಪದಂತೆ ಆ ಕವಿತೆ ಅಂದು ಪತ್ರಿಕೆಯಲ್ಲಿ ಕಾಣಿಸಿಕೊಂಡಿತ್ತು. ಅದು ಕೇವಲ ಮೂಡಲ ಮನೆಯಲ್ಲಿ ಮುತ್ತಿನ ನೀರಿನ ಎರಕ ಹೊಯ್ದ ಬೆಳಗಲ್ಲ; ಹೊಸಗನ್ನಡದ ಬೆಳಗು. ಹೊಸ ಕವಿಯ ಬೆಳಗು. ಹೊಸ ಎಚ್ಚರದ ಬೆಳಗು. ಹೊಸ ಸಾಧ್ಯತೆಗಳ ಬೆಳಗು.

ಕನ್ನಡಿಗರಿಗೆ ಬೇಂದ್ರೆಯವರ ಬಗ್ಗೆ ಹೇಳುವುದೆಂದರೆ, ದುಂಬಿಗೆ ಜೇನಿನ ಬಗ್ಗೆ ಪಾಠ ಮಾಡಿದಂತೆ! ಆದರೂ ಬೇಂದ್ರೆ ಬಗ್ಗೆ ಮಾತಾಡಬೇಕು; ವಿಶೇಷಣಗಳಿಲ್ಲದೆ ಮಾತಾಡಬೇಕು ಎಂದೇನಾದರೂ ನಿಯಮ ಹಾಕಿದರೆ ಬರೆಯಹೋದವನು ಕೈಕಟ್ಟಿ ಹಾಕಿದ ಕುಸ್ತಿಪಟುವಿನಂತೆ ಆಗಿಬಿಡುತ್ತಾನೆ. ಯಾಕೆಂದರೆ, ಬೇಂದ್ರೆ ಕವನಗಳ ಬಗ್ಗೆ, ಅವರ ಜೀವನ ವಿಶೇಷಗಳ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ ಒಂದು ಬೆರಗು, ಆಶ್ಚರ್ಯ, ವಿಸ್ಮಯದ ಕೋಲ್ಮಿಂಚಿಲ್ಲದೆ ಮಾತಾಡುವುದು ಕಷ್ಟ; ಬಹುತೇಕ ಅಸಾಧ್ಯ. 

ಬೆಂದಾವ ಬೇಂದ್ರೆ ಆಗತಾನ – ಇದು ಬೇಂದ್ರೆಯವರದ್ದೇ ನುಡಿ. ಆ ಮಾತು ಹೇಳಿದ ಬೇಂದ್ರೆ ನಿಜವಾಗಿಯೂ ಬದುಕಲ್ಲಿ ಎಷ್ಟು ಬೆಂದಿದ್ದರು ಎಂಬುದು ಈಗಿನ ಅನೇಕರಿಗೆ ಗೊತ್ತಿರಲಾರದು. 1896ನೇ ಇಸವಿಯ ಮೊದಲ ತಿಂಗಳ ಕಡೆಯ ದಿನದಂದು – ಅಂದರೆ, ಮನ್ಮಥನಾಮ ಸಂವತ್ಸರದ ಮಾಘಮಾಸದ ಗುರುಪ್ರತಿಪದೆಯಂದು ಧಾರವಾಡದ ಮಂಗಳವಾರಪೇಟೆಯ ಗುಣಾರಿಯವರ ಮನೆಯಲ್ಲಿ ಬೇಂದ್ರೆ ಹುಟ್ಟಿದರು. ಅದು ಬೇಂದ್ರೆಯವರ ಅಜ್ಜಿಮನೆ. ತಂದೆ ರಾಮಚಂದ್ರ ಪಂತರದ್ದು ದೇವಸ್ಥಾನಗಳಲ್ಲಿ ಋಗ್ವೇದದ ಮಂತ್ರಗಳನ್ನು ಪಠಿಸುತ್ತಿದ್ದವರ ಮನೆತನ. ಬೇಂದ್ರೆಯವರ ಅಜ್ಜ, ಮಂತ್ರ-ಶ್ಲೋಕಗಳನ್ನು ಪಠಿಸುತ್ತಿದ್ದುದು ಮಾತ್ರವಲ್ಲದೆ, ದೇವರ ಸ್ತುತಿಗಳನ್ನು ಸಂಸ್ಕೃತದಲ್ಲಿ ಬರೆಯುತ್ತಲೂ ಇದ್ದರಂತೆ. ಹಾಗಿದ್ದಮೇಲೆ ಬೇಂದ್ರೆಯ ಬಾಲ್ಯ ಹೇಗಿತ್ತು, ಯಾವ್ಯಾವ ಪ್ರಭಾವಗಳಾದವು ಎಂಬುದನ್ನು ಸ್ಥೂಲವಾಗಿ ಊಹಿಸಬಹುದು. ಎತ್ತಿನ ಬೆನ್ನಿಗೆ ಕಟ್ಟಿದ ಚಕ್ಕಡಿಗಾಡಿಯಂತೆ ಹದವಾಗಿ ಏರುತ್ತಿಳಿಯುತ್ತ ಹೋಗುತ್ತಿದ್ದ ಬೇಂದ್ರೆಯ ಬದುಕಿನ ಬಂಡಿಯ ಕೀಲು ಹನ್ನೊಂದನೆ ವರ್ಷಕ್ಕೆ ಬರುವಷ್ಟರಲ್ಲಿ ಧುತ್ತನೆ ಮುರಿಯಿತು. ತಂದೆ ರಾಮಚಂದ್ರರು ತೀರಿಕೊಂಡರು. ಚಿಕ್ಕಪ್ಪನ ಆಶ್ರಯದಲ್ಲಿ ಓದಬೇಕಾಯಿತು. ಹಂಗಿನರಮನೆಯಲ್ಲಿ ಬಾಳುತ್ತ ಹದಿನೇಳನೆ ವಯಸ್ಸಿನಲ್ಲಿ ಮೆಟ್ರಿಕ್ಯುಲೇಶನ್‌ ಮುಗಿಸಿದ ಹುಡುಗ ಪುಣೆಯ ಫ‌ರ್ಗ್ಯುಸನ್‌ ಕಾಲೇಜಿನಲ್ಲಿ ಬಿಎ ಓದಿದ. 23ನೆಯ ವಯಸ್ಸಿಗೆಲ್ಲ, ಆಗಿನ ಕಾಲಕ್ಕೆ ಸಹಜವೆನ್ನುವಂತೆ, ಮದುವೆಯಾಯಿತು. ಅದಾಗಿ ಐದು ವರ್ಷಗಳಲ್ಲಿ, ಬೇಂದ್ರೆಯವರು ತೀರ ಹಚ್ಚಿಕೊಂಡಿದ್ದ ಅವರ ತಾಯಿ ಅಂಬವ್ವೆ ತೀರಿಕೊಂಡರು. ನಂತರದ ಇಪ್ಪತ್ತು ವರ್ಷಗಳ ಅವಧಿ ಬೇಂದ್ರೆ ಬದುಕಿನ ಅಗ್ನಿದಿವ್ಯ. ಉದ್ಯೋಗ ಸಿಕ್ಕಿತು, ಬದುಕು ಹಳಿಗೆ ಬಂತು ಎನ್ನುವಷ್ಟರಲ್ಲಿ ಏನೋ ಒಂದು ತಡೆ, ದುಗುಡ, ತೊಂದರೆ, ಪರೀಕ್ಷೆ. ಗದಗ, ಪುಣೆ, ಧಾರವಾಡ, ಸೊÇÉಾಪುರ, ಸೊಂಡೂರು, ಹುಬ್ಬಳ್ಳಿಗಳಲ್ಲಿ ಬದುಕಿನ ವಿವಿಧ ಅಧ್ಯಾಯಗಳು ತೆರೆದವು, ಮುಚ್ಚಿದವು. ಕುವೆಂಪು ಅವರ ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು, ಆಗು ನೀ ಅನಿಕೇತನ ಎನ್ನುವ ಸಾಲುಗಳಿಗೆ ಸ್ಪಷ್ಟ ಉದಾಹರಣೆ ಇವರೇ ಎಂಬಂತೆ ಬೇಂದ್ರೆ ಬದುಕಿದರು. ವೈವಾಹಿಕ ಜೀವನದ ಪ್ರಾರಂಭದ ಇಪ್ಪತ್ತು ವರ್ಷಗಳಲ್ಲಿ ಬೇಂದ್ರೆ ದಂಪತಿ ಕಳೆದುಕೊಂಡದ್ದು ಆರು ಮಕ್ಕಳನ್ನು. ತನ್ನ ಬಾಲ್ಯದಿಂದಲೂ ಪ್ಲೇಗ್‌, ಕಾಲರಾ ಇತ್ಯಾದಿ ಉಪದ್ರವಗಳಿಂದಾಗಿ ಸಂಸಾರದೊಳಗೆ ಸಾವಿನ ಮೆರವಣಿಗೆಯನ್ನೇ ನೋಡುತ್ತ ಬೆಳೆದ ಬೇಂದ್ರೆಯವರಿಗೆ ಸಾವಿನ ಸೂತಕದ ಸಂದರ್ಭಗಳಲ್ಲಿ ಮನೆಯಂಗಳದಲ್ಲಿ ಉರಿದೇಳುತ್ತಿದ್ದ ಹಾಹಾಕಾರಗಳು ಕಿವಿಗಳು ಹಾಗೂ ವ್ಯಕ್ತಿತ್ವದ ಮೇಲೆ ಸತತವಾಗಿ ದಾಳಿ ಮಾಡಿ, ಮನಸ್ಸಿನ ಮೇಲಿನ ಭಯದ ತೆರೆಯನ್ನು ಚಿಂದಿಚಿಂದಿಯಾಗಿ ಹರಿದುಹಾಕಿದವು.   

ಕಾವ್ಯದಾಸರೆ
ಹೀಗಿದ್ದ ಬೇಂದ್ರೆ ತಮ್ಮ ಇಹದ ನರಕದಿಂದ ಮುಕ್ತಿ ಪಡೆಯಲು ಕಲ್ಪನಾವಿಲಾಸದ ರೆಕ್ಕೆಗಳನ್ನಂಟಿಸಿಕೊಂಡು ಕಾವ್ಯವೆಂಬ ನಾಕವನ್ನು ಸೇರಿಕೊಳ್ಳತೊಡಗಿದರು. ಅಥವಾ ರೆಕ್ಕೆ ಅಂಟಿಸಿಕೊಳ್ಳುವ ಅಗತ್ಯವೂ ಇರಲಿಲ್ಲ ಎನ್ನಬಹುದೇನೋ! ಯಾಕೆಂದರೆ, ಕವಿ ಬೇಂದ್ರೆಯದ್ದು ಸಹಜಪ್ರಾಸ, ಪ್ರಾಕೃತಿಕ ರೆಕ್ಕೆ! ಪ್ರಾಸಗಳಿಗಾಗಿ ತ್ರಾಸ ಪಡುವ ಪ್ರಮೇಯವೇ ಅವರಿಗಿರಲಿಲ್ಲ. ಬರೆಯುತ್ತ ಹೋದಂತೆ ಪದಗಳೇ ಸರಸ್ವತಿಯ ಅಪ್ಪಣೆ ಪಡೆದು ಬಂದಂತೆ ಸಾಲಾಗಿ ಬಂದು ಹಾಳೆಯಲ್ಲಿ ತಂತಮ್ಮ ಸ್ಥಾನಗಳಲ್ಲಿ ಕೂರುತ್ತಿದ್ದವು. 

ಏನು ಏನು? ಜೇನು ಜೇನು? ಎದೆ ಗುಂಗುಂಗಾನಾ
ಓಂಕಾರದ ಶಂಖನಾದಕಿಂತ ಕಿಂಚಿದೂನಾ
ಕವಿಯ ಏಕತಾನ ಕವನದಂತೆ ನಾದಲೀನಾ
ಎಂಬಲ್ಲಿರಬಹುದು;
ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕೀತೆಂದರೆ ಇದ್ದು ಬಿಡಾಂವಾ
ಹಿಡಿ ಹಿಡೀಲೆ ರೊಕ್ಕಾ ತೆಗದು ಹಿಡಿ ಹಿಡಿ ಅನ್ನಾಂವಾ
ಖರೆ ಅಂತ ಕೈ ಮಾಡಿದರ ಹಿಡದ ಬಿಡಾಂವಾ

ಎಂಬಲ್ಲಿರಬಹುದು, ಅಲ್ಲೆಲ್ಲ ಲಯ, ತಾಳ, ಪ್ರಾಸಗಳನ್ನು ಪದ್ಯದೊಳಗೆ ಕೂರಿಸುವುದು ಬೇಂದ್ರೆಯವರಿಗೆ ಗಿಡ ಹೂವರಳಿಸಿದಷ್ಟೆ ಸಹಜಕ್ರಿಯೆ. ದಂತಗೋಪುರದಲ್ಲಿ ಕೂತು ಉಪದೇಶ ಮಾಡುವಂತೆ ಬೇಂದ್ರೆ ಕವಿತೆಗಳನ್ನು ಬರೆಯಲಿಲ್ಲ. ಜನಸಾಮಾನ್ಯರು ಹಾಡುವಂತೆ, ಗುನುಗುನಿಸುವಂತೆ ಬರೆದರು. ಚಪ್ಪಲಿ ರಿಪೇರಿಯವರು, ಕೋಲೆಬಸವನ ಹಿಂದೆ ವಾಲಗ ಊದುವವರು, ಬುಡುಬುಡಿಕೆಯವರು, ಕ್ಷೌರಿಕರು, ಟಾಂಗಾ ಗಾಡಿ ಓಡಿಸುವವರು – ಹೀಗೆ ಸಾಹಿತ್ಯದ ವಲಯಕ್ಕೆ ಮೈಲಿದೂರ ಇದ್ದವರ ಬಳಿಯೂ ಬೇಂದ್ರೆ ಸುಖಕಷ್ಟ ಮಾತಾಡಬಲ್ಲವರಾಗಿದ್ದರು. ಅವರಿಗೆ ಜ್ಞಾನಪೀಠ ಬಂದಾಗ ಬಸ್ಸಿನ ಕಂಡಕ್ಟರನೊಬ್ಬನ ಅಪೇಕ್ಷೆಯ ಮೇರೆಗೆ, ತಾನು ಹತ್ತಿದ್ದ ಬಸ್ಸಿನೊಳಗೇ ಭಾಷಣ ಮಾಡಿದ್ದ ವಿಶಿಷ್ಟ ವ್ಯಕ್ತಿತ್ವ ಅವರದ್ದು! “ನಿಮ್ಮ ಕಾವ್ಯ ಅದ್ಭುತ. ನಿಮ್ಮ ಕಾವ್ಯ ಸೃಷ್ಟಿಯಾಗುವ ಸ್ಥಳ ನೋಡಬೇಕು’ ಎಂದು ಒಬ್ಬರು ಅಪೇಕ್ಷೆ ಪಟ್ಟು ಸಾಧನಕೇರಿಗೆ ಬಂದು ಬೇಂದ್ರೆಯವರನ್ನು ಕಂಡಾಗ, ಬೇಂದ್ರೆ ತನ್ನ ಮನೆಯ ಹಜಾರ, ಒಳಮನೆ, ಅಡುಗೆಮನೆ, ಹಿತ್ತಿಲು, ಅಟ್ಟ, ಅಂಗಳ ಎಲ್ಲ ತೋರಿಸಿದರಂತೆ. “ಇದೆಲ್ಲ ಸರಿ, ಆದರೆ ನಿಮ್ಮ ಕಾವ್ಯ ಹುಟ್ಟುವ ಸ್ಥಳ ಯಾವುದು?’ ಎಂದು ಬಂದವರು ಮತ್ತೆ ಕೇಳಿದಾಗ ಬೇಂದ್ರೆ, “ಇವೆಲ್ಲ ಸ್ಥಳಗಳು ಕಾವ್ಯ ಹುಟ್ಟುವುದಕ್ಕೆ ಅಯೋಗ್ಯ ಅನ್ನಿಸತಾವೇನು?’ ಎಂದು ಮರುಪ್ರಶ್ನೆ ಹಾಕಿದರಂತೆ. ಎಲ್ಲೆಂದರಲ್ಲಿ, ಹುಕಿ ಎಲ್ಲಿ ಬಂತೋ ಅಲ್ಲೇ, ಸಿಕ್ಕಿದ ಕಾಗದಗಳಲ್ಲಿ ಕವಿತೆ ಬರೆಯುತ್ತಿದ್ದ ಬೇಂದ್ರೆಯವರಿಂದಾಗಿ ದೊಡ್ಡ ಸಮಸ್ಯೆ ಎದುರಿಸಬೇಕಿದ್ದುದು ಮನೆಯವರು. ಮನೆಯಲ್ಲಿ ರಾಶಿಯಾದ ಪತ್ರಿಕೆಗಳನ್ನು ರದ್ದಿಗೆ ಹಾಕುವುದಕ್ಕೆ ಮೊದಲು ಆ ಎಲ್ಲ ಪತ್ರಿಕೆಗಳ ಹಾಳೆಹಾಳೆಗಳನ್ನೂ ಮನೆಯವರು ಪರಿಶೀಲಿಸಬೇಕಾಗುತ್ತಿತ್ತು. ಯಾಕೆಂದರೆ, ಅಲ್ಲೆಲ್ಲಾದರೂ ಖಾಲಿ ಜಾಗ ಇದ್ದರೆ ಬೇಂದ್ರೆ ಕವಿತೆ ಬರೆದಿರುತ್ತಿದ್ದ ಸಾಧ್ಯತೆಗಳು ಹೆಚ್ಚಿದ್ದುವು!

ಬೇಂದ್ರೆಯವರು ತಮ್ಮ ಜೀವನವನ್ನು ವೃತ್ತಿ, ಪ್ರವೃತ್ತಿ, ಆಸಕ್ತಿ ಎಂದೆಲ್ಲ ಕತ್ತರಿಸಿಕೊಂಡು ಬದುಕಲಿಲ್ಲ. ತನ್ನ ಅನುಭವಪ್ರಪಂಚದೊಳಗೆ ಬರುವ ಯಾವ ಸಂಗತಿಯೂ ಅವರಿಗೆ ವಜ್ಯìವಾಗಿರಲೇ ಇಲ್ಲ. ಪಾಣಿನಿ, ಜೈಮಿನಿ, ಅರವಿಂದರು, ರವೀಂದ್ರ ಟಾಗೋರರು, ರಾಮಾಯಣ-ಮಹಾಭಾರತ ಮಹಾಕಾವ್ಯಗಳು, ಖಲೀಲ್‌ ಗಿಬ್ರಾನ್‌, ಕಾಳಿದಾಸ, ಸಮರ್ಥ ರಾಮದಾಸರು, ಸುಡುಗಾಡು ಸಿದ್ಧರು, ಗಣಿತ, ಉಪನಿಷತ್ತು- ಹೀಗೆ ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾಣುವ ಎಲ್ಲವನ್ನೂ ಅರೆದು ಕುಡಿದು ಅರಗಿಸಿಕೊಳ್ಳುವುದು ಬೇಂದ್ರೆಯವರಿಗೆ ಗೊತ್ತಿತ್ತು. ಪಂಢರಾಪುರದ ವಿಠ್ಠಲನ ಮೇಲೆ ಅವರು ಮರಾಠಿಯಲ್ಲಿ ಎರಡು ಪುಸ್ತಕ ಬರೆದಿದ್ದರೆ, ಸಾಹಿತ್ಯ, ಗಣಿತ ಮತ್ತು ಸತ್ಯ ಎಂಬ ಹೆಸರಲ್ಲಿ ಇಂಗ್ಲಿಶ್‌ನಲ್ಲಿ ಕೃತಿಯೊಂದನ್ನು ಬರೆದಿ¨ªಾರೆ! ಮಹಾರಾಷ್ಟ್ರದಿಂದ ಹೊರಡುತ್ತಿದ್ದ ಸನ್ಮತಿ ಎಂಬ ಮರಾಠಿ ಭಾಷೆಯ ಜೈನ ಧಾರ್ಮಿಕ ಪತ್ರಿಕೆಯಲ್ಲಿ ಬೇಂದ್ರೆ ಜೈನ-ಹಿಂದೂ ಧರ್ಮಗಳ ನಡುವಿನ ಕೊಡುಕೊಳ್ಳುವಿಕೆಗಳ ಮೇಲೆ ದೀರ್ಘ‌ ಲೇಖನ ಬರೆಯುತ್ತಿದ್ದದ್ದೂ ಉಂಟು. ಸಂಖ್ಯೆಗಳ ಮೇಲಿನ ಅವರ ಸಂಶೋಧನೆಗಳು ಕನ್ನಡದ ಬಾಲವಿಜ್ಞಾನದಲ್ಲಿ ಪ್ರಕಟವಾದದ್ದೂ ಉಂಟು! “ಪಾತರಗಿತ್ತಿ ಪಕ್ಕ’ ಎಂಬ- ಪುಟ್ಟ ಪಾದಗಳ ಚಿಕಣಿಚಿತ್ರದಂತಿರುವ ಕವಿತೆಯಲ್ಲಿ ಬೇಂದ್ರೆ ಸೂರೇಪಾನ, ತುರುಬಿ, ತುಂಬೆ, ಕಳ್ಳಿ, ನಾಯಿ ಛತ್ತರಗಿ, ರುದ್ರಗಂಟಿ, ವಿಷ್ಣುಗಂಟಿ, ಹೇಸಿಗೆ ಹೂವು, ಮದಗುಣಕಿ, ಸೀಗಿಬಳ್ಳಿ, ಗೊರಟಿಗೆ, ಮಾಲಿಂಗನ ಬಳ್ಳಿ, ಗುಲಬಾಕ್ಷಿ, ಅಡವಿ ಮಲ್ಲಿಗಿ, ಅಂಚಿಗಂಟಿಯಂತಹ ಹತ್ತಾರು ಸಸ್ಯಗಳ ಹೆಸರನ್ನು ಎಳೆದುತಂದಿದ್ದಾರೆ. ಈಗಿನ ಕಾಲದ ಬಾಟನಿಷ್ಟುಗಳಿಗಾದರೂ ಇಷ್ಟು ಗಿಡಗಳ ಪರಿಚಯ ಇದೆಯೋ ಇಲ್ಲವೋ! ಇದೇ ವ್ಯಕ್ತಿ ಮರುಕ್ಷಣದಲ್ಲೇ ಅರವಿಂದರ ಸಾವಿತ್ರಿ ಕೃತಿಯ ಮೇಲೊಂದು ಉದೊ½àದಕ ಉಪನ್ಯಾಸ ನೀಡಬೇಕೆಂಬ ಕೋರಿಕೆ ಬಂದರೆ ಅದಕ್ಕೂ ನಿಂತುಬಿಡುತ್ತಿದ್ದರು! ಕವಿತೆಯನ್ನೇ ಉಂಡು ಉಸಿರಾಡಿ ಹೊದ್ದು ಮಲಗುವ ವ್ಯಕ್ತಿಯಾಗಿದ್ದ ಅದೇ ಬೇಂದ್ರೆ ಯಾರಿಗೆ ಬೇಕಾಗೇತಿ ನಿನ್ನ ಕವಿತಾ? ಬ್ರೆಡ್‌ ತಾ, ಬೆಣ್ಣಿ ತಾ ಎಂಬಂಥ ಸಾಲುಗಳನ್ನೂ ಬರೆಯಬಲ್ಲವರಾಗಿದ್ದರು. ಕವಿತೆಯಷ್ಟೇ ಇಷ್ಟಪಟ್ಟು ಅವರು ಮಾಡುತ್ತಿದ್ದ ಇನ್ನೊಂದು ಕೆಲಸ ಎಂದರೆ ಮಾತು. ಬೇಂದ್ರೆಯವರನ್ನು ಓದಿಕೊಂಡಿದ್ದ ಮತ್ತು ಇಷ್ಟಪಟ್ಟಿದ್ದ ವಿಮರ್ಶಕ ಕಿ. ರಂ. ನಾಗರಾಜ ಅವರು ಮೊದಲ ಬಾರಿಗೆ ಬೇಂದ್ರೆಯನ್ನು ನೋಡಲೆಂದು ಧಾರವಾಡಕ್ಕೆ ಹೋದಾಗ, ಅಂಥದೊಂದು ಅನಿರೀಕ್ಷಿತ ಭೇಟಿಯಿಂದ ಯಾವ ಮುಜುಗರಕ್ಕೂ ಒಳಗಾಗದೆ, ನೀನು ಯಾರು? ಏನು? ಎತ್ತ? ಎಂಬ ಯಾವ ಪ್ರಶ್ನೆಯನ್ನೂ ಕೇಳದೆ, ಕಿ. ರಂ. ಕೂರುತ್ತಿದ್ದಂತೆಯೇ ಬೇಂದ್ರೆ ಭಾಷಣ ಶುರುಮಾಡಿಬಿಟ್ಟರಂತೆ! ನಾಲ್ಕು ತಾಸು ಬಿಟ್ಟೂಬಿಡದೆ ಮಾತಾಡಿ ಮಾತಿನ ಅಭಿಷೇಕದಲ್ಲಿ ಕಿ. ರಂ. ಅವರನ್ನು ನೆನೆಹಾಕಿಬಿಟ್ಟರಂತೆ! ಬೇಂದ್ರೆಯವರನ್ನು ಅರ್ಥಮಾಡಿಕೊಳ್ಳುವುದು ಎಂದರೆ ಬೊಗಸೆಯಲ್ಲಿ ಉಪ್ಪುನೀರೆತ್ತಿ ಸಮುದ್ರವನ್ನು ಅರ್ಥೈಸಿಕೊಂಡಂತೆ. 

ಬೇಂದ್ರೆಯವರು ತಮ್ಮ ಜೀವನದುದ್ದಕ್ಕೂ ಕಾವ್ಯವನ್ನು ಉಸಿರಾಡಿದರು. ಅವರು ಬರೆದದ್ದು 1500ಕ್ಕೂ ಹೆಚ್ಚಿನ ಕವಿತೆಗಳು. ಬರೆದದ್ದು ಮಾತ್ರವಲ್ಲ, ಅವನ್ನು ಭಾವಪೂರ್ಣವಾಗಿ ಅಭಿನಯಪೂರ್ವಕ ವಾಚಿಸುವುದು ಕೂಡ ಅವರಿಗೆ ಒಲಿದಿದ್ದ ಕಲೆ. ತನ್ನ ಹೆಚ್ಚಿನ ಎಲ್ಲ ಭಾಷಣಗಳನ್ನು ಅವರು ಮುಗಿಸುತ್ತಿದ್ದದ್ದು ಕವಿತಾವಾಚನಗಳ ಮೂಲಕ. ಮತ್ತವು ಸಣ್ಣ ಕವನಗಳೇನಲ್ಲ; ಮೂರ್ನಾಲ್ಕು ಪುಟಗಳ ದೀರ್ಘ‌ವಾದ ಸಂಕೀರ್ಣ ಕವಿತೆಗಳನ್ನು ಕೂಡ ಬೇಂದ್ರೆ ಯಾವ ಆಲಸ್ಯ-ಸುಸ್ತುಗಳಿಲ್ಲದೆ ಉತ್ಸಾಹದಿಂದ ವಾಚಿಸುತ್ತಿದ್ದರು (1972ರ ಫೆಬ್ರವರಿಯಲ್ಲಿ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಮಾಡಿದ ಒಂದು ಭಾಷಣದ ಕೊನೆಗೆ ಅವರು ವಾಚಿಸಿದ್ದು ವೇದ-ದೇವ? ಮತ್ತು ಇದು ನಭೋವಾಣಿ ಎಂಬ ಎರಡು ದೀರ್ಘ‌ ಕವಿತೆಗಳನ್ನು). 1916ರವರೆಗೆ ಅವರು ಹೆಚ್ಚಾಗಿ ಬರೆಯುತ್ತಿದ್ದದ್ದು ಪ್ರೀತಿಯ ಮೇಲಿನ ಹಾಡುಗಬ್ಬಗಳನ್ನು. ಆಗಿನ್ನೂ ಅವರಿಗೆ ಮೀಸೆ ಮೂಡುವ ಕಾಲವಷ್ಟೆ? ಮರಾಠಿ ಮನೆಮಾತಾಗಿದ್ದುದರಿಂದ ಆ ಭಾಷೆಯಲ್ಲೂ ಲೀಲಾಜಾಲವಾಗಿ ಪದ್ಯಗಳನ್ನು ಹೊಸೆಯುತ್ತಿದ್ದರು. ಮೊದಲ ಹೆಚ್ಚಿನವು ಮರಾಠಿ ಪದ್ಯಗಳೇ ಆಗಿದ್ದವು. 

ಪುಣೆಯಲ್ಲಿ ಕಾಲೇಜು ಓದುತ್ತಿದ್ದಾಗ ತಮ್ಮ ಅಂಥ ಅನೇಕ ಪ್ರೀತಿಕವಿತೆಗಳನ್ನು ಆತ್ಮೀಯ ಗೆಳೆಯರಾಗಿದ್ದ ಶ್ರೀಧರ ಖಾನೋಳ್ಕರ ಎಂಬವರಿಗೆ ಓದಿತೋರಿಸಲು ಹೋದರಂತೆ ಬೇಂದ್ರೆ. ಕವಿತೆಗಳನ್ನು ಓದಿ, ಅವುಗಳ ಮೇಲೆ ಬಹಳ ಹೊತ್ತು ಚರ್ಚಿಸಿ, ಆ ಯೌವನದ ಹುರುಪಿನಲ್ಲಿ ಬೀಡುಬೀಸಾಗಿ ತನ್ನ ಖೋಲಿಗೆ ವಾಪಸಾಗುತ್ತಿದ್ದಾಗ, ಬೇಂದ್ರೆಯವರ ದುರದೃಷ್ಟಕ್ಕೆ ಆ ಕವನಗಳ ಕಟ್ಟು ಕೈ ಜಾರಿ ಮುಳಾಮುಠ ನದಿಗೆ ಜಾರಿಬಿತ್ತಂತೆ! ಅದರ ಬೆನ್ನಿಗೇ ಬೇಂದ್ರೆಯವರ ಕಣ್ಣೀರ ಎರಡು ಹನಿಯೂ ಅದೇ ನದಿಯಲ್ಲಿ ಚೆಲ್ಲಿರಬೇಕು. ಕವಿತೆಗಳ ಕುರಿತ ಅವರ ಪ್ರೀತಿ ಮತ್ತೂಮ್ಮೆ ಅಭಿವ್ಯಕ್ತವಾಗುವುದು ಗಿರೀಶ ಕಾರ್ನಾಡರು ನಿರ್ದೇಶಿಸಿದ ಒಂದು ಡಾಕ್ಯುಮೆಂಟರಿಯಲ್ಲಿ. ಅದರಲ್ಲಿ ಬಂದುಹೋಗುವ ಒಂದು ಚಿತ್ರ ಕಣ್ಣಿಗೆ ಕಟ್ಟುವಂತಿದೆ. ಬೇಂದ್ರೆ ಪದ್ಯ ಓದುತ್ತಿ¨ªಾರೆ. ಅವರ ಅಕ್ಕಪಕ್ಕಗಳಲ್ಲಿ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಮತ್ತು ಮನೋಹರ ಗ್ರಂಥಮಾಲೆಯ ಜಿ.ಬಿ. ಜೋಶಿ ನಿಂತಿದ್ದಾರೆ. ಹೊರಗೆ ಧಾರಾಕಾರ ಮಳೆ. ಮಾವಿನ ತೋಪಿನ ಎದುರು ನಿಂತಿರುವ ಈ ಮೂವರೂ ಕಾವ್ಯವರ್ಷದಲ್ಲಿ ಮಿಂದೇಳುತ್ತಿದ್ದಾರೆ. ತನ್ನ ಎಂದಿನ ಭಾವಾಭಿನಯ ಸಹಿತ ವಾಚನದಲ್ಲಿ ಬೇಂದ್ರೆ ಮಗ್ನ. ಅವರ ವಾಚನವನ್ನು ಆಸ್ವಾದಿಸುತ್ತ ಉಳಿದಿಬ್ಬರು ಚಿತ್ರಾರ್ಪಿತ. ಕೊಡೆಯ ಅಂಚಿಂದ ಇಳಿದ ನೀರು ಬೇಂದ್ರೆಯವರ ಕರಿಕೋಟಿನ ಮೇಲೆ ಧಾರೆಯಾಗಿ ಸುರಿಯುತ್ತಿದೆ; ಆದರೆ ಕವಿತೆಯೊಳಗೆ ಇಳಿದುಹೋಗಿರುವ ಅವರಿಗೂ ಅವರನ್ನೇ ನೋಡುತ್ತ ಕಳೆದುಹೋಗಿರುವ ಉಳಿದಿಬ್ಬರಿಗೂ ಅದರ ಪರಿವೆಯೇ ಇಲ್ಲ!

ಬೇಂದ್ರೆಯ ಜೀವನ ಗಂಗೆಯಂತೆ. ತನಗೆದುರಾಗುವ ಎಡರುತೊಡರುಗಳ ಲಕ್ಷ್ಯ ಹೇಗೆ ಆಕೆಗೆ ಇಲ್ಲವೋ ಹಾಗೆ ಬದುಕಿನ ದೊಡ್ಡ ದೊಡ್ಡ ಸ್ಥಿತ್ಯಂತರಗಳಿಗೂ ಬೇಂದ್ರೆ ತಲೆಕೆಡಿಸಿಕೊಳ್ಳಲಿಲ್ಲ. ಅವರ ನರಬಲಿ ಕವಿತೆ ಪರಂಗಿಗಳ ಕಣ್ಣು ಕೆಂಪಾಗಿಸಿತು. ಸರಕಾರದ ವಿರುದ್ಧ ಮೊಳಗಿಸಿದ ಬಂಡಾಯದ ಕಹಳೆ ಅದು ಎಂಬ ಕಾರಣಕ್ಕೆ ಬ್ರಿಟಿಷ್‌ ಸರಕಾರ ಬೇಂದ್ರೆಯನ್ನು ಹಿಂಡಲಗಾ ಜೈಲಿನಲ್ಲಿ ಮೂರು ತಿಂಗಳು ಕೂರಿಸಿತು. 1929ರ ಇಸವಿಯಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಕೇವಲ 33 ವರ್ಷ ವಯಸ್ಸಿನ ಬೇಂದ್ರೆ, ತನ್ನ ಕಂಚಿನ ಕಂಠದಲ್ಲಿ “ಹಕ್ಕಿ ಹಾರುತಿದೆ ನೋಡಿದಿರಾ?’ ಕವಿತೆಯನ್ನು ವಾಚಿಸುತ್ತ,

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?

-ಎಂಬ ಸಾಲುಗಳನ್ನು ಹೇಳಿದಾಗ ಅಲ್ಲೇ ಕೂತಿದ್ದ ಬಿ.ಎಂ.ಶ್ರೀ.ಯವರು ಭಯದಿಂದ ತತ್ತರಿಸಿದ್ದರಂತೆ! ಆದರೆ ಬೇಂದ್ರೆ ಸರಕಾರದ ಕಟ್ಟುಪಾಡುಗಳಿಗೆ ಬೆದರಲಿಲ್ಲ. ವಿಧಿಯನ್ನೇ ಅಣಕಿಸುವಂತೆ ಬದುಕಿದವರಿಗೆ ಸರಕಾರದ ಭಯವೇ! ಸರಕಾರದ ವಿರುದ್ಧ ಬರೆಯುವವನು ಎಂಬ ಕಾರಣಕ್ಕೆ ಬೇಂದ್ರೆಯವರಿಗೆ ಎರಡು ದಶಕಗಳ ಕಾಲ ಎಲ್ಲೂ ಸರಿಯಾದ ಉದ್ಯೋಗ ಸಿಗದಂತೆ ನೋಡಿಕೊಂಡು ಬ್ರಿಟಿಶರು ಸತಾಯಿಸಿದರು. 1835ರಿಂದ 40ರವರೆಗಿನ ಐದು ವರ್ಷಗಳಲ್ಲಿ ಬೇಂದ್ರೆ ನಿರುದ್ಯೋಗಿಯಾಗಿದ್ದರು. ಭದ್ರತೆ ಕೊಡುವ ಯಾವ ನೌಕರಿಯೂ ಇರಲಿಲ್ಲ. ಅವರನ್ನು ಸರಕಾರೀ ದಫ‌¤ರಗಳಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಬೇಂದ್ರೆಯವರ ಕಷ್ಟಪರಂಪರೆಯನ್ನು ನೋಡಲಾಗದೆ ಮಾಸ್ತಿಯವರು ಅವರಿಗೆ ಜೀವನ ಪತ್ರಿಕೆಯ ಸಂಪಾದಕತ್ವದ ಜವಾಬ್ದಾರಿ ಕೊಟ್ಟು ವೇತನ ನಡೆಯುವಂತೆ ನೋಡಿಕೊಂಡರು. ತನ್ನ ಜೀವನದ ಅತ್ಯಂತ ಕಷ್ಟದ ಕಾಲದಲ್ಲಿ ಒದಗಿಬಂದ ಮಾಸ್ತಿಯನ್ನು ಬೇಂದ್ರೆ ಹಿರಿಯಣ್ಣ ಎಂದೇ ಭಾವಿಸಿದ್ದರು. ಮುಂದೆ ಈ ಸ್ನೇಹ, ಅವರಿಬ್ಬರೂ ಸೇರಿ ಕುಮಾರವ್ಯಾಸನ ಭಾರತವನ್ನು ಸರಕಾರಕ್ಕಾಗಿ ಸಂಪಾದಿಸಿಕೊಡುವಂಥ ಕೆಲಸ ಮಾಡಲು ಬುನಾದಿಯಾಯಿತು. 

ಕಷ್ಟಗಳ ಬೆಂಕಿಯಲ್ಲಿ ಸದಾ ಬೇಯಬೇಕಾಗಿ ಬಂದರೂ ಬೇಂದ್ರೆ ಒಂದು ಬಗೆಯಲ್ಲಿ ಅದೃಷ್ಟದೇವತೆ ಕೂಡ ಹೌದು. ಅವರಿಗೆ ಐವತ್ತು ವರ್ಷಗಳಾದಾಗ ಧಾರವಾಡದಲ್ಲಿ ಗೆಳೆಯರೆಲ್ಲ ಸೇರಿ ದೊಡ್ಡ ಅಭಿನಂದನ ಕಾರ್ಯಕ್ರಮ ಹಮ್ಮಿಕೊಂಡರು. ಆ ಸಂದರ್ಭದಲ್ಲಿ ಅಭಿನಂದನಾ ಗ್ರಂಥ ಪ್ರಕಟವಾಯಿತು. ಕರ್ನಾಟಕದ ಉದ್ದಗಲಕ್ಕೂ ಸಾರ್ವಜನಿಕರಿಂದ ಸನ್ಮಾನ ಕಾರ್ಯಕ್ರಮಗಳು ನಡೆದವು. ಕನ್ನಡದ ಕವಿಯೊಬ್ಬನಿಗೆ, ಐವತ್ತರ ಹರೆಯದÇÉೇ ಅಂಥ ವೈಭವಪೂರ್ಣವಾದ ಅಭಿನಂದನೆ, ಸನ್ಮಾನಗಳು ನಡೆದದ್ದು ತೀರ ವಿರಳ. 60ರ ಹುಟ್ಟುಹಬ್ಬವನ್ನಂತೂ ಕರ್ನಾಟಕ, ಮಹಾರಾಷ್ಟ್ರ ಎರಡೂ ರಾಜ್ಯಗಳು ಪೈಪೋಟಿಗೆ ಬಿದ್ದಂತೆ ಆಚರಿಸಿ ಬೇಂದ್ರೆಯವರನ್ನು ಖುಷಿಪಡಿಸಿದವು. ಕನ್ನಡದಂತೆಯೇ ಮರಾಠಿಯಲ್ಲಿ ಪ್ರಗಲ½ ಸಾಹಿತಿಯಾಗಿದ್ದ ಬೇಂದ್ರೆ, ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ಕವಿಸಮ್ಮೇಳನಗಳ ಅಧ್ಯಕ್ಷತೆ ವಹಿಸುವಷ್ಟು ಅಲ್ಲಿ ಪ್ರಸಿದ್ಧರಾಗಿದ್ದರು. 70ನೆಯ ವಸಂತಕ್ಕೆ ಬೇಂದ್ರೆಯವರು ಕಾಲಿಟ್ಟಾಗ ಅವರ ಪೂರ್ವಿಕರ ಊರಾದ ಶಿರಹಟ್ಟಿಯಲ್ಲಿ ಕರ್ನಾಟಕ ಸರಕಾರವೇ ಮುಂದೆ ನಿಂತು ದೊಡ್ಡ ಕಾರ್ಯಕ್ರಮ ಆಯೋಜಿಸಿತು. ಆಗಿನ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಅದೇ ವರ್ಷ ಬೇಂದ್ರೆಯವರಿಗೆ ಹಿಂದೀ ಪ್ರಚಾರ ಸಭಾದವರು “ಸಾಹಿತ್ಯಾಚಾರ್ಯ’ ಎಂಬ ಪ್ರಶಸ್ತಿ ಕೊಟ್ಟರು. ಕರ್ನಾಟಕ ಸರಕಾರ ಬೇಂದ್ರೆಯವರಿಗೆ ಆಜನ್ಮ ವಿಶ್ರಾಂತಿ ವೇತನದ ವ್ಯವಸ್ಥೆ ಕಲ್ಪಿಸಿತು. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದದ್ದೂ ಅದೇ ವರ್ಷವೇ. ಅದಾಗಿ ಎರಡು ವರ್ಷಗಳಲ್ಲಿ ಬೇಂದ್ರೆಯವರಿಗೆ ಪದ್ಮಶ್ರೀ ಗೌರವ ಸಂದಾಯವಾಯಿತು. ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್‌ ಗೌರವ ಬಂತು. 1972ರಲ್ಲಿ ಅವರಿಗೆ ಉಡುಪಿಯ ಶ್ರೀಕೃಷ್ಣಮಠ ಕರ್ನಾಟಕ ಕವಿಕುಲತಿಲಕ ಎಂಬ ಬಿರುದು ಕೊಟ್ಟು ಸನ್ಮಾನಿಸಿತು. ಎಪ್ಪತ್ತೆçದು ತುಂಬಿದ ಬೇಂದ್ರೆಗೆ ಅವರ ಕರ್ಮಭೂಮಿಯಾಗಿದ್ದ ಸೊಲ್ಹಾಪುರದ ಮರಾಠಿ ಅಭಿಮಾನಿಗಳು ಅಮೃತ ಮಹೋತ್ಸವದ ಕಾರ್ಯಕ್ರಮ ಹಮ್ಮಿಕೊಂಡರು. 1974ರಲ್ಲಿ ಬೇಂದ್ರೆಯವರಿಗೆ ಸಿಕ್ಕಿದ್ದು ಜ್ಞಾನಪೀಠ ಪ್ರಶಸ್ತಿ. ಕನ್ನಡದ ನಾಕುತಂತಿಯ ಸ್ವರ ದೇಶದ ಕಿವಿಯನ್ನು ತುಂಬಿತು. 

ಕನ್ನಡದಲ್ಲಿ ಅತ್ಯಂತ ಹೆಚ್ಚು ಸಫ‌ಲ ಕವಿತೆಗಳನ್ನು ಕೊಟ್ಟವರು ಯಾರು ಎಂದಾಗ ತಟ್ಟನೆ ನೆನಪಿಗೆ ಬರುವುದು ಬೇಂದ್ರೆ ಮತ್ತು ಅಡಿಗ ಎಂಬ ಎರಡು ಹೆಸರುಗಳು. ಕನ್ನಡದಲ್ಲಿ ನವ್ಯಕಾವ್ಯ ಪ್ರವರ್ತಕ ಎಂದು ಕರೆಸಿಕೊಂಡ ಗೋಪಾಲಕೃಷ್ಣ ಅಡಿಗರ ಮೊದಲ ಕವನಸಂಕಲನಕ್ಕೆ ಮುನ್ನುಡಿ ಬರೆದು ಹಾರೈಸಿದವರು ಬೇಂದ್ರೆಯವರೇ. ಬೇಂದ್ರೆ ತನ್ನ ಕಾವ್ಯಗುರು ಎಂದು ಅಡಿಗರು ಭಾವಿಸಿದ್ದರು. ಪಂಡಿತಪ್ರಪಂಚಕ್ಕೆ ಆಚಾರ್ಯ ಸ್ವರೂಪರಾಗಿದ್ದ ಬೇಂದ್ರೆ ಧಾರವಾಡದ ಸಾಧನಕೇರಿಯ ಎಲ್ಲರಿಗೂ ಅಜ್ಜ ಆಗಿದ್ದವರು. ಅವರು ತೀರಿಕೊಂಡ ವಿಷಯ ತಿಳಿದಾಗ, ಅವರ ಮನೆಗೆ ಆಗಾಗ ಬಂದುಹೋಗುತ್ತಿದ್ದ ಭಿಕ್ಷುಕ ಕೂಡ, ಮನೆಯವರು ಕೊಟ್ಟ ದುಡ್ಡು ತೆಗೆದುಕೊಳ್ಳದೆ ಬೇಂದ್ರೆಯವರಿಗಾಗಿ ಜೋರಾಗಿ ಅತ್ತುಬಿಟ್ಟಿದ್ದನಂತೆ. 
ಬೇಂದ್ರೆ ಕಾವ್ಯಕನ್ನಡ ಜಗತ್ತನ್ನು ನೂರಾರು ವರ್ಷಗಳ ಕಾಲ ಬೆಳಗುತ್ತಿರಲಿ.

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.