ವೈಫೈ ಪಾಸ್ವರ್ಡ್ಗಾಗಿ ಮನೆಗೆ ಕನ್ನ ಹಾಕಿದ
Team Udayavani, Jul 29, 2018, 5:10 AM IST
ದರೋಡೆ ಎಂದರೆ ಹಣ, ಒಡವೆ ಇನ್ನಾವುದಾದರೂ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದೋಚುವುದು ಎಂಬ ನಂಬಿಕೆ ನಮ್ಮಲ್ಲಿತ್ತು. ಆದರೆ ಈ ಇಂಟರ್ನೆಟ್ ಯುಗದಲ್ಲಿ ದರೋಡೆ ಎಂದರೆ ವೈಫೈ, ಬ್ರಾಡ್ಬ್ಯಾಂಡ್ ಕಳ್ಳತನ ಕೂಡ ಆಗಬಹುದು. ಕ್ಯಾಲಿಫೋರ್ನಿಯಾದಲ್ಲಿ ಹದಿಹರೆಯದ ಬಾಲಕನೊಬ್ಬ ವೈಫೈಗಾಗಿ ವೃದ್ಧ ದಂಪತಿಯ ಮನೆಗೆ ಕನ್ನ ಹಾಕಿದ್ದಾನೆ. 17 ವರ್ಷದ ಬಾಲಕ ಮನೆಯ ಕಿಟಕಿ ಪರದೆ ತುಂಡರಿಸಿ ಒಳಗೆ ನುಗ್ಗಿ, ವೃದ್ಧ ದಂಪತಿಯನ್ನು ನಿದ್ದೆಯಿಂದ ಏಳಿಸಿ ಅವರ ವೈಫೈ ಪಾಸ್ವರ್ಡ್ ಕೇಳಿದ್ದಾನೆ. ಕೂಡಲೇ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಬರುವುದರೊಳಗೆ ಆತ ಪರಾರಿಯಾಗಿದ್ದಾನೆ. ಹುಡುಕಾಟ ನಡೆಸಿದ ಪೊಲೀಸರು ಶಂಕಿತನನ್ನು ಸೆರೆಹಿಡಿದಿದ್ದಾರೆ. ಆತ ಮುಖವನ್ನು ಕಪ್ಪು ಟೀ ಶರ್ಟ್ನಿಂದ ಮುಚ್ಚಿಕೊಂಡು ಮನೆಯೊಳಗೆ ನುಗ್ಗಿರುವುದಾಗಿ ಅವರು ಶಂಕಿಸಿದ್ದಾರೆ. ಇದೇ ದಿನ ಮೊತ್ತೂಬ್ಬ ದಂಪತಿ, ತಮ್ಮ ಮನೆ ಬಳಿ ಬಾಲಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದುದಾಗಿ ಮತ್ತು ವೈಫೈ ಪಾಸ್ವರ್ಡ್ ನೀಡುವಂತೆ ಕೇಳಿಕೊಂಡಿದ್ದಾಗಿ ಪೊಲೀಸರಿಗೆ ತಿಳಿಸಿದೆ.