ಸನ್ಯಾಸಿಯ ಸೈಕಲ್ ಯಾತ್ರೆ
Team Udayavani, Jul 31, 2018, 6:00 AM IST
38 ದಿವಸಗಳು
100+ ಜಾಗಗಳು
3600 ಕಿ.ಮೀ. ದೂರ
50 ಕಿ.ಮೀ. ಪ್ರತಿದಿನ ಕ್ರಮಿಸುತ್ತಿದ್ದಿದ್ದು
ಪ್ರವಾಸ ಹೋಗುವುದು ನನಗೆ ಹೊಸತೇನಲ್ಲ. ಲಂಡನ್‌ನಲ್ಲಿ ಸಾಫ್ಟ್ವೇರ್ ವೃತ್ತಿಯಲ್ಲಿದ್ದಾಗಲೂ ಸುತ್ತಾಟ ನಡೆಸಿದ್ದೇನೆ. ಭಾರತಕ್ಕೆ ಮರಳಿದ ಬಳಿಕ ಬುಲೆಟ್ ಬೈಕ್‌ನಲ್ಲಿ ಲಡಾಕ್‌ಗೆ ಹೋಗಿದ್ದೇನೆ. ಬೆಂಗಳೂರಿನಿಂದ ಸಿಕ್ಕಿಮ್‌ವರೆಗೂ ತಿರುಗಾಟ ನಡೆಸಿದ್ದೇನೆ. ಚಾರಣಗಳನ್ನೂ ಕೈಗೊಂಡಿದ್ದೇನೆ. ಆದರೆ, ಸೈಕಲ್‌ನಲ್ಲೇ ತೀರ್ಥಯಾತ್ರೆ ಮಾಡುತ್ತೇನೆ ಅಂತ ಯಾವತ್ತೂ ಎಣಿಸಿರಲಿಲ್ಲ.
ಐಡಿಯಾ ಬಂದಿದ್ದೂ ದೈವೇಚ್ಚೆ!
ಕಳೆದ ಹದಿನೆಂಟು ವರ್ಷಗಳಿಂದ ಅಯ್ಯಪ್ಪ ಮಾಲೆ ಹಾಕುತ್ತಾ ಬಂದಿದ್ದೆ. ಅಯ್ಯಪ್ಪ ವ್ರತದ ಮೂಲ ಸೂತ್ರ-ಸನ್ಯಾಸಿಯಂತೆ ಎಲ್ಲಾ ಬಂಧನಗಳಿಂದ ಮುಕ್ತರಾಗಿ ಒಂದು ಮಂಡಲ ವ್ರತ ಪಾಲಿಸಬೇಕೆಂಬುದು. ದಿನನಿತ್ಯದ ಜೀವನದ ಭರಾಟೆಯ ನಡುವೆ ನನಗೆ ಅದು ಅಸಾಧ್ಯ ಎನಿಸಿತು. ಪ್ರತಿವರ್ಷ ಎರಡು ಮೂರು ದಿನದ ವ್ರತ ಮಾತ್ರ ಪಾಲಿಸಲು ಸಾಧ್ಯವಾಗುತ್ತಿತ್ತು. 2016 ನನ್ನ ಹದಿನೆಂಟನೇ ವರ್ಷವಾದ್ದರಿಂದ, ಒಂದು ಪೂರ್ಣ ಮಂಡಲ, ಎಂದರೆ 41 ದಿನದ ವ್ರತವನ್ನು ಪಾಲಿಸಬೇಕೆಂದು ಸಂಕಲ್ಪ ಮಾಡಿಕೊಂಡೆ.
ಆದರೆ, 41 ದಿನ ಮಾಡುವುದೇನು? ಮನೆಯಲ್ಲಿಯೇ ಇದ್ದರೆ ನಿದ್ದೆ ಮಾಡುವುದೇ ಆಗುತ್ತೆ. ಅದರ ಬದಲು ಕರ್ನಾಟಕವನ್ನು ಸುತ್ತುವುದೆಂದು ನಿರ್ಧರಿಸಿದೆ. ಹೇಗೆ ಸುತ್ತುವುದು? ಬಸ್‌ನಲ್ಲಾದರೆ ಮತ್ತೆ ನಿದ್ದೆ ಮಾಡುವ ಸಾಧ್ಯತೆ ಇದೆ ಅನ್ನಿಸಿತು. ಕಾಲ್ನಡಿಗೆಯಲ್ಲಿ ಹೆಚ್ಚು ಸುತ್ತಲಾಗುವುದಿಲ್ಲ. ಹೀಗಾಗಿ, ನನಗಿದ್ದ ಸಮಯದಲ್ಲಿ ಎಲ್ಲಾ ಪುಣ್ಯಕ್ಷೇತ್ರಗಳನ್ನು ನೋಡಲು ಸೈಕಲ್ ಒಂದೇ ದಾರಿ ಎನಿಸಿತು.
ಮನೆಯವರನ್ನು ಒಪ್ಪಿಸಿದ್ದೇ ಸಾಹಸ
ಹಿಂದೆಂದೂ ಇಷ್ಟು ದೀರ್ಘ ಪ್ರವಾಸ ಸೈಕಲ್‌ನಲ್ಲಿ ಮಾಡಿರಲಿಲ್ಲ. ಏನೇನು ತೊಡಕುಗಳು ಬರಬಹುದೋ!? ಒಂದು ವೇಳೆ ಹೊತ್ತಿಲ್ಲದ ಹೊತ್ತಲ್ಲಿ ಪಂಚರ್ ಆದರೆ ಏನು ಗತಿ? ಅದದ್ದಾಗಲಿ ಎಂದು ನಿರ್ಧರಿಸಿಯೇಬಿಟ್ಟೆ. ಹೀರೋ ಸೈಕಲ್‌ನಲ್ಲಿ ಕೆಲ ಜನರು ದೇಶವನ್ನೇ ಸುತ್ತಿರಬೇಕಾದರೆ, ಇದೇನು ಅಸಾಧ್ಯವಲ್ಲ ಎನಿಸಿತು. ಅಲ್ಲದೇ, ಒಂದು ವೇಳೆ ಪಂಕ್ಚರ್ ಆದರೆ ಸೈಕಲ್ಲನ್ನು ತಳ್ಳಿಕೊಂಡು ಹೋಗಬಹುದು, ಇಲ್ಲವೇ ಯಾವುದಾದರೂ ಗಾಡಿಯಲ್ಲಿ ಹಾಕಿಕೊಂಡು ಹೋಗಬಹುದು. ನನ್ನ ನಿರ್ಧಾರ ಸರಿ ಎನಿಸಿತು. ಹೊರಡುವ ಒಂದು ದಿನದ ಮುಂಚೆ, ಮನೆಯಲ್ಲಿ ಎಲ್ಲರಿಗೂ ಹೇಳಿದೆ. ಅವರಿಗೆ ಗಾಬರಿಯಾಯಿತು. ಎಲ್ಲರಿಗೂ ಸಮಾಧಾನ ಹೇಳಿ, ಪ್ರತಿ ಸಾಯಂಕಾಲ ಕರೆ ಮಾಡುವುದಾಗಿ ಭರವಸೆ ನೀಡಿ ಎಲ್ಲರನ್ನೂ ಒಪ್ಪಿಸಿದೆ.
ಹೊರಟಿತು ಸವಾರಿ
ಒಂದೆರಡು ಜೊತೆ ಪಂಚೆ, ಬಟ್ಟೆ, ಸ್ಲಿಪಿಂಗ್ ಬ್ಯಾಗ್, ಪಂಕ್ಚರ್ ಕಿಟ್, ಮಾತ್ರೆ, ಔಷಧಿ ಇತ್ಯಾದಿಗಳೊಂದಿಗೆ, ಜೇಬಿನಲ್ಲಿ 9,000 ರೂ.ಗಳನ್ನು ಇಟ್ಟುಕೊಂಡು ಮನೆಯಿಂದ ಹೊರಟೆ. ಮೆಜೆಸ್ಟಿಕ್ ತಲುಪಿದವನೇ, ಚಿಕ್ಕಮಗಳೂರಿನ ಬಸ್ ಹತ್ತಿದೆ. ಸೈಕಲನ್ನು ಬಸ್‌ನಲ್ಲಿ ಹಾಕಲು ಅನುಮತಿ ನೀಡಿದರು. ಚಿಕ್ಕಮಗಳೂರಿನಲ್ಲಿ ಇಳಿದವನೇ ಸೈಕಲ್ ತೀರ್ಥಯಾತ್ರೆ ಪ್ರಾರಂಭಿಸಿದೆ. ಧರ್ಮಸ್ಥಳ, ಕುಕ್ಕೆ, ಕಟೀಲು, ಮೂಡಬಿದಿರೆ, ಹೀಗೆಯೇ ಮುಂದುವರಿಯುತ್ತಾ ಸಾಗಿತು ಪಯಣ. ಒಂದು ದೇವಸ್ಥಾನಕ್ಕೆ ಹೋದರೆ, ಅಲ್ಲಿರುವವರನ್ನು ಮಾತನಾಡಿಸಿ, ಕೇಳಿಕೊಂಡು ಮುಂದಿನ ಪುಣ್ಯಕ್ಷೇತ್ರಕ್ಕೆ ಹೋಗುತ್ತಿದ್ದೆ. ಹೀಗೆ ಕರ್ನಾಟಕವನ್ನು ಸುತ್ತುವುದರೊಳಗೆ 38 ದಿನಗಳು ಕಳೆದವು.
ದೇವಸ್ಥಾನಗಳಲ್ಲದೆ, ಪ್ರವಾಸಿ ತಾಣಗಳಾದ ಕುದುರೆಮುಖ, ಯಾಣ ಮುಂತಾದ ಜಾಗಗಳನ್ನೂ ಸುತ್ತಿದೆ. ಅಯ್ಯಪ್ಪ ಮಾಲೆ ಹಾಕುವ ಒಂದು ಉದ್ದೇಶ ಏನೆಂದರೆ ವ್ರತದ ಸಮಯ, ಸನ್ಯಾಸಿಯ ಜೀವನವನ್ನು ಬದುಕಬೇಕೆಂಬುದು. ನನ್ನ ಶಕ್ತಿಮೀರಿ, ಬರಿಗಾಲಿನಲ್ಲಿ ಸೈಕಲ್ ತುಳಿಯುತ್ತಾ, ಪ್ರವಾಸದುದ್ದಕ್ಕೂ ಹೆಚ್ಚಿನ ಸಮಯ ದೇವಸ್ಥಾನಗಳಲ್ಲಿಯೇ ಉಳಿದುಕೊಂಡು, ಪ್ರಸಾದವಾಗಿ ಸಿಕ್ಕಿದ ಹಣ್ಣುಗಳನ್ನೇ ಸೇವಿಸಿ ಮುಂದುವರಿದೆ.
ಕೇಳಿದ್ದು ಪ್ರಸಾದ, ಸಿಕ್ಕಿದ್ದು?
ಅದೊಮ್ಮೆ ಹಸಿದ ಹೊಟ್ಟೆಯಲ್ಲೇ ಸೈಕಲ್ ತುಳಿದು ಬರುತ್ತಿದ್ದೆ. ತುಂಬಾ ದಣಿದಿದ್ದೆ. ದಾರಿಯಲ್ಲಿ ದೇವಸ್ಥಾನ ಸಿಕ್ಕಿತ್ತು. ನೆರಳಿಗಾಗಿ ಪರಿತಪಿಸುತ್ತಿದ್ದವನಿಗೆ ಆಲದ ಮರ ಸಿಕ್ಕಂತಾಯಿತು. ದೇವಸ್ಥಾನದೊಳಗೆ ಹೋದೆ. ನನ್ನ ಪುಣ್ಯಕ್ಕೆ ಅಷ್ಟೋ ಇಷ್ಟೋ ಪ್ರಸಾದ ಮಿಕ್ಕಿದ್ದರೆ ಅದರಿಂದಲೇ ಹೊಟ್ಟೆ ತುಂಬಿಸಿಕೊಳ್ಳೋಣ ಅನ್ನೋದು ನನ್ನ ಯೋಚನೆ. ಅಲ್ಲಿ ಆಗಿದ್ದೇ ಬೇರೆ. ತಾನೊಂದು ಬಗೆದರೆ ದೈವ ಬೇರೇನೋ ಬಗೆಯುತ್ತೆ ಅನ್ನೋದು ಮತ್ತೂಮ್ಮೆ ನನ್ನ ಅನುಭವಕ್ಕೆ ಬಂತು. ನಾನು ಹೋದ ಸಮಯಕ್ಕೆ ಸರಿಯಾಗಿ ಪೂಜೆ ನಡೆಯುತ್ತಿತ್ತು. ಒಂದೇ ಕುಟುಂಬ ಒಂದಷ್ಟು ಮಂದಿ ಅಲ್ಲಿ ಹಾಜರಿದ್ದರು. ಪೂಜೆ ಬೇಗನೆ ಮುಗಿದುಹೋಯಿತು. ನಾನು ಕೇಳುವ ಮುಂಚೆಯೇ ನನ್ನನ್ನು ಕರೆದುಕೊಂಡು ಹೋಗಿ ಕೂರಿಸಿ ಊಟ ಬಡಿಸಿಯೇ ಬಿಟ್ಟರು. ಪ್ರಸಾದ ಉಳಿದಿದ್ದರೆ ಹೊಟ್ಟೆ ತುಂಬಿಸಿಕೊಳ್ಳುವ ಯೋಚನೆಯಲ್ಲಿದ್ದ ನನಗೆ ಮೃಷ್ಟಾನ್ನ ಭೋಜನ ಬಡಿಸಿದರು. ಕಡೆಯಲ್ಲಿ, ಬೇಡ ಎಂದರೂ ಕೇಳದೆ 3 ಬಾರಿ ಒಬ್ಬಟ್ಟು ಹಾಕಿದರು.
ಇದೊಂದು ಜೀವನ ಪಾಠ
ಈ ಪ್ರವಾಸ ನನಗೆ ಸಾಕಷ್ಟು ಕಲಿಸಿದೆ. ಸಂಕಲ್ಪ ಮಾಡಿದ ಮೇಲೆ ಏನೇ ಅಡ್ಡಿಗಳು ಬಂದರೂ ಮುನ್ನುಗ್ಗುತ್ತಿರಬೇಕು ಎನ್ನುವ ದೊಡ್ಡ ಪಾಠ ಕಲಿತೆ. ಬದುಕನ್ನು ಧನಾತ್ಮಕವಾಗಿ ನೋಡಬೇಕೆನ್ನುವುದು ನಾನು ಕಲಿತ ಇನ್ನೊಂದು ಪಾಠ. ಬೇರೆ ಜಾಗಗಳಲ್ಲಿ ಅಲ್ಲಿನ ಜನರು ನನ್ನನ್ನು ಅದೆಷ್ಟು ಪ್ರೀತಿ ವಾತ್ಸಲ್ಯದಿಂದ ಕಂಡರೆಂದರೆ, ಬದುಕಿನ ಸಾರ್ಥಕತೆಯ ಬಗ್ಗೆ ನನಗೆ ವಿಶ್ವಾಸ ಮೂಡಿತು. ನಮ್ಮ ನಿರೀಕ್ಷೆಗಿಂತ ಹೆಚ್ಚು ಒಳಿತು ಈ ಜಗತ್ತಿನಲ್ಲಿದೆಯೆಂಬ ನಂಬಿಕೆ ಬಲವಾಯಿತು.
12 ಕೆ.ಜಿ. ಖರ್ಚಾಯಿತು!
ನಾನು ಸೈಕಲ್ ಯಾತ್ರೆಗೆ ಹೆಚ್ಚಿನ ತಯಾರಿಯೇನೂ ಮಾಡಿಕೊಂಡಿರಲಿಲ್ಲ ಎಂದರೆ ಅನೇಕರಿಗೆ ಆಶ್ಚರ್ಯವಾಗಬಹುದು. ತೊಡಲು ಬಟ್ಟೆ, ತುರ್ತಿನ ಸಂದರ್ಭಕ್ಕೆ ಬೇಕಾಗುತ್ತೆ ಅಂತ ಔಷಧಿ, ಇಷ್ಟು ಬಿಟ್ಟರೆ ಬೇರಾವ ಸಿದ್ಧತೆಗಳೂ ಇರಲಿಲ್ಲ. ಅಲ್ಲದೇ, ಸನ್ಯಾಸಿಯಂತೆ ಇರಬೇಕು ಎಂದು ಮೊದಲೇ ನಿರ್ಧರಿಸಿದ್ದರಿಂದ ಹೆಚ್ಚಿನ ಖರ್ಚೂ ಆಗಲಿಲ್ಲ. ದಾರಿ ಮಧ್ಯ ನನ್ನ ಸೈಕಲ್ ಟಯರ್ ಬದಲಾಯಿಸಿದ್ದಕ್ಕೆ 3 ಸಾವಿರ ಖರ್ಚಾಗಿದ್ದು ಬಿಟ್ಟರೆ, ಊಟ ಮತ್ತಿತರ ಸಣ್ಣ ಖರ್ಚುಗಳಿಗೆ ಕೇವಲ 3- 4 ಸಾವಿರ ಖರ್ಚಾಯಿತು. ದುಡ್ಡು ಕಳೆದುಕೊಂಡದ್ದಕ್ಕಿಂತ ಹೆಚ್ಚಾಗಿ 12 ಕೆ.ಜಿ. ತೂಕ ಕಳೆದುಕೊಂಡಿದ್ದು ಖುಷಿಯ ಸಂಗತಿ.
ಟೈಮ್ ಅನ್ನು ಓವರ್‌ಟೇಕ್ ಮಾಡಿದ್ದ ಸೈಕಲ್
ಗಜೇಂದ್ರಗಡದಿಂದ ಗದಗದತ್ತ ಹೋಗಬೇಕಿತ್ತು. ಆ ದಿನದ ಗುರಿ ಮುಟ್ಟಲು ಸುಮಾರು 60 ಕಿ.ಮೀ. ದೂರವಿತ್ತು. ಆದರೆ, ಒಂದೇ ಷರತ್ತೆಂದರೆ ಕತ್ತಲಾಗುವ ಮುನ್ನ ತಲುಪಬೇಕಿತ್ತು. ಹೊರಟಾಗ ಸಮಯ ಮಧ್ಯಾಹ್ನ 3.15. ಸುಮಾರು 20 ಕಿ.ಮೀ. ದೂರವನ್ನು ನಿಧಾನವಾಗಿ ಸೈಕಲ್ ತುಳಿದು ಕ್ರಮಿಸಿದೆ. ಹೀಗೇ ಹೋದರೆ ಕತ್ತಲಾಗುತ್ತೆ ಅನ್ನೋದು ತಿಳಿಯಿತು. ಅಲ್ಲಿಂದ ವೇಗ ಹೆಚ್ಚಿಸಿಕೊಂಡೆ. ಸಂಜೆ 6.15 ಆಗುವಷ್ಟರಲ್ಲಿ ಗದಗದ ಪಂಚಾಕ್ಷರಿ ಮಠ ತಲುಪಿದ್ದೆ. 3 ಗಂಟೆಯಲ್ಲಿ 60 ಕಿ.ಮೀ. ಕ್ರಮಿಸುವುದು ಕಡಿಮೆ ಸಾಧನೆಯೇನಲ್ಲ!
ಸಂತೋಷ್ ಜಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.