ಕಾಗೆ ಮುಟ್ಟಿದ ಅಮ್ಮ


Team Udayavani, Aug 1, 2018, 6:00 AM IST

7.jpg

ನಮ್ಮ ಅಮ್ಮಂದಿರ ಮುಟ್ಟಿನ ದಿನಗಳ ತಾರೀಕು ಅಂದಿನ ಅಧ್ಯಾಪಕರಿಗೆ ತಿಳಿಯುತ್ತಿತ್ತು! ಇಂದಿಗೆ ಅದನ್ನು ಊಹಿಸಲೇ ಸಾಧ್ಯವಿಲ್ಲ. ನಾವುಗಳು ತರಗತಿಯ ಬಾಗಿಲಿನಲ್ಲಿ ನಿಂತು ತಡವಾಗಿದ್ದಕ್ಕೆ ಕಾರಣ ಕೊಡುವಾಗ ಸ್ವಲ್ಪವೂ ಸಂಕೋಚವೇ ಆಗುತ್ತಿರಲಿಲ್ಲ. ಇಂದು ನಾನು, ನಾಳೆಗೆ ಮತ್ತೂಬ್ಬ ಹುಡುಗಿಗೆ ತಡ, ಮಾರನೆಯ ದಿನ ಇನ್ನೊಬ್ಬಳ ಅಮ್ಮನ ಮೂರು ದಿನದ ರಜಾ, ಹೀಗೆ ಲಿಸ್ಟ್‌ ಸಿಗದೆ ಇರುತ್ತಾ? ಆದರೆ , ನಮ್ಮ ಉತ್ತರ ಕೇಳಿ ಅದೆಷ್ಟು ಗೌರವದಿಂದ, ಸಣ್ಣಕ್ಕೆ ಕೂಡ ಗದರದೆ ತರಗತಿಗೆ ಸೇರಿಸುತ್ತಿದ್ದರೆಂದು ಈಗ ನೆನಪಾದರೆ ಅವರಲ್ಲಿ ಆದರ, ಗೌರವ ಹುಟ್ಟುತ್ತದೆ…
     
ಪ್ರಾಥಮಿಕ ಶಾಲೆಯ ಪರಮಾಪ್ತ ಸ್ನೇಹಿತೆಯರು ಅನಿರೀಕ್ಷಿತವಾಗಿ ಸಿಕ್ಕಿದ್ದರು. ಮಾತಾಡಿದಷ್ಟು ಮುಗಿಯದು. ಅಂದಿನ ದಿನಗಳನ್ನು ಹೆಕ್ಕಿ ಸವಿಯುತ್ತಿದ್ದಾಗ ಫ‌ಕ್ಕನೆ ನೆನಪಿಗೆ ಬಂದ ವಿಚಾರ- ಪ್ರತಿ ತಿಂಗಳು ತಿಂಗಳು ಮೂರು ದಿನ ಕಡ್ಡಾಯವಾಗಿ ನಾವುಗಳು ಶಾಲೆಗೆ ಬೆಳಗ್ಗೆ ಹತ್ತಕ್ಕೆ ಬದಲಾಗಿ ಹತ್ತೂವರೆಯ ಅಂದಾಜಿಗೆ ಬೆವರಿಳಿಸುತ್ತ ತಲುಪುತ್ತಿದ್ದ ದಿನಗಳು. ತಿಂಗಳಲ್ಲಿ ಮೂರು ದಿನ ಅಂದರೆ ಅಪಾರ್ಥ ಕಲ್ಪಿಸಬೇಡಿ. ನಾವುಗಳು ಆಗ ಒಂಬತ್ತು, ಹತ್ತು ವರ್ಷದ ಆಸುಪಾಸಿನ ಹುಡುಗಿಯರು.

 ನಮ್ಮ ಶಾಲೆಗೆ ಸುಮಾರು ಒಂದೂವರೆ ಕಿ.ಮೀ. ಕಾಲ್ನಡಿಗೆಯ ಹಾದಿ. ಅದೇ ರೀತಿ ಹೆಚ್ಚಿನವರಿಗೂ ಕೂಡ. ಅಂದಿಗೆ ಮನೆ-ಮನೆಗಳಲ್ಲಿ ಕಡ್ಡಾಯವಾಗಿ ಪಾಲಿಸುತ್ತಿದ್ದ ಮಡಿ, ಮೈಲಿಗೆಯ ಆಚರಣೆಯಿಂದ ನಮ್ಮ ಮೇಲೆ ಆಗುತ್ತಿದ್ದ ನೇರ ಪರಿಣಾಮದ ಫ‌ಲ ಅಂದಿಗೆ ಕಹಿಯಾಗಿದ್ದರೆ; ಇಂದಿಗೆ ನಮ್ಮ ಮುಗ್ಧತ್ವಕ್ಕೆ ನಗು. ದೂರದ ಹೈಸ್ಕೂಲುಗಳಿಗೆ ಹೋಗುವ ನಮ್ಮ ಒಡಹುಟ್ಟಿದವರು ಬೇಗನೆ ಮನೆ ಬಿಡುತ್ತಿದ್ದರು. ನಮ್ಮಿಂದ ಕಿರಿಯರಿಗೆ ಅಮೋಘ ರಿಯಾಯಿತಿ ಇತ್ತು. ಮಧ್ಯೆ ಸಿಕ್ಕಿಹಾಕಿಕೊಳ್ಳುತ್ತಿದ್ದವರು ಪ್ರಾಥಮಿಕ ಶಾಲೆಯ ನಾವುಗಳು. ಸ್ನೇಹಿತೆ ಅಚ್ಚುಕಟ್ಟಾಗಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಳು. 

 ಆಕೆಯ ಮಾತಿನಲ್ಲೇ ಹೇಳುವುದಾದರೆ, ಬೆಳಗ್ಗೆದ್ದು ಇಂದು ನಾ ಒಳಗೆ ಬರುವ ಹಾಗಿಲ್ಲ ಎಂದು ಅಮ್ಮ ಡಿಕ್ಲೇರ್‌ ಮಾಡಿದಾಗ ಎದೆ ಝಲ್ಲೆನ್ನುತ್ತಿತ್ತು. ಕಾರಣವಿಷ್ಟೆ. ಬೆಳಗ್ಗಿನ ತಿಂಡಿಯ ಕೆಲಸ ನೀನು ಮುಂದುವರಿಸು ಅನ್ನುವ ಅರ್ಥ. ಅಡುಗೆ ಮನೆಯ ಒಳಗಡೆ “ಕಾಗೆ ಮುಟ್ಟಿದ ಅಮ್ಮ’ ಬರುವ ಹಾಗಿಲ್ಲ. ಅಡುಗೆಮನೆಯ ಹಿಂದಿನ ಬಾಗಿಲ ಬಳಿ ನಿಂತು ಹೊರಬದಿಯಿಂದ ಸೂಚನೆ ಬರುತ್ತಿತ್ತು. “ತೆಂಗಿನಕಾಯಿ ತುರಿದಿಡು, ಆ ಮೇಲೆ ಒಲೆ ಹೊತ್ತಿಸಿಬಿಡು’ ಈ ಒಲೆ ಎನ್ನುವುದು ಹೊತ್ತಿಸುವ ಕೆಲಸ ಬ್ರಹ್ಮಾಂಡ ಕಷ್ಟದ್ದು.

  ಕಣ್ಣು- ಮೂಗಿನಲ್ಲಿ ನೀರು ಸುರಿಸುತ್ತ ಒಲೆ ಹಚ್ಚಿ ಉಪ್ಪಿಟ್ಟು ತಯಾರಿ ನಮ್ಮದೇ. ಹೊರಗೆ ಮುದುರಿ ನಿಂತೇ ಸೂಚನೆ ಕೊಟ್ಟು ಹಾಗೆ ಮಾಡು, ಹೀಗೆ ಮಾಡು ಎನ್ನುತ್ತ ಮಾಡಿಸುವ ಅಮ್ಮ. ತೆಂಗಿನಕಾಯಿ ತುರಿಯಲು ತಿಳಿಯದೆ ಕೈಗೆ ಗಾಯ. ಅವಲಕ್ಕಿ ಬೆರೆಸಲು ಗೊತ್ತಿಲ್ಲ. ಹೇಳಿದ ಹಾಗೆ ಚಾಚೂತಪ್ಪದೇ ಮಾಡಿದರೂ ತಿನ್ನುವಾಗ ಸ್ವಲ್ಪವೂ ರುಚಿ ಇಲ್ಲದಾಗುತ್ತಿತ್ತು. ಆಗಾಗ ಗಂಟೆ ನೋಡಿ ಶಾಲೆಗೆ ತಡವಾಯ್ತು, ಬೈತಾರೆ, ಕ್ಲಾಸ್‌ ಹೊರಗಡೆ ನಿಲ್ಲಿಸ್ತಾರೆ ಅಂತ ಅಲ್ಲಿ ಅನುಭವಿಸಬೇಕಾದ ಅವಮಾನದ ಸ್ಮರಣೆ.

  ಅಡುಗೆ ಮನೆಯ ಹಿಂಬಾಗಿಲಿನ ಬುಡದಲ್ಲಿ ನಿಂತೇ ಹೊತ್ತಿಸಿದ ಒಲೆಯಲ್ಲಿ ಅನ್ನಕ್ಕೆ ನೀರಿಡಲು ಅಪ್ಪಣೆ. ಕಾಗೆ ಮುಟ್ಟಿದ ದಿನಗಳಲ್ಲಿ ಅಮ್ಮ ಮನೆಯ ಕೆಲಸ, ಅಡುಗೆ ಮುಟ್ಟುವ ಹಾಗಿಲ್ಲ. ಅದು ಮೈಲಿಗೆಯಾಗುತ್ತದೆ. ಹಾಗೂ ಹೀಗೂ ಅನ್ನಕ್ಕೆ ನೀರಿಟ್ಟರೆ ನೆಕ್ಸ್ಟ್ ಅಕ್ಕಿ ತೊಳೆದು ಹಾಕುವ ಕಠಿಣ ಕಾರ್ಯ ಆಗಬೇಕು. ತೊಳೆಯುವಾಗ ಅರ್ಧ ಅಕ್ಕಿ ನೆಲದ ಪಾಲಾಗುತ್ತಿದ್ದುದೂ ಇದೆ. ಅಕ್ಕಿ ಹಾಕಿಸಿದ ಅಮ್ಮ ಅದು ಹತ್ತಾರು ಕುದಿ ಬಾರದೆ ಬಿಡುತ್ತಿರಲಿಲ್ಲ. ನಂತರ ಹೇಗೂ ಕೆಂಡವಿದ್ದರೆ ಅನ್ನವಾಗುತ್ತದೆ. ಅದು ಮಧ್ಯಾಹ್ನದ ಮನೆಯವರ ಊಟಕ್ಕೆ. ತರಕಾರಿ, ರಜಾ ತೆಗೆದುಕೊಂಡ ಅಮ್ಮ ಹೆಚ್ಚಿಕೊಡುತ್ತಿದ್ದರು. ದೂರದಲ್ಲಿ ನಿಂತು ನಿರ್ದೇಶಿಸಿದಷ್ಟು ಉಪ್ಪು, ಖಾರ, ಬೆಲ್ಲ ಹಾಕಿ “ಬೋಳ್‌ ಕೊ¨ªೆಲ…’ ನಮ್ಮ ಎಳೆಗೈಯಿಂದ ತಯಾರಾಗಬೇಕು. 

  ಅದಾಗಲೇ ಗಂಟೆ ಹತ್ತಕ್ಕೆ ಬರುತ್ತಿತ್ತು. ತಲೆ ಬಾಚಲು ತಿಳಿಯದು. ದಿನಾ ಎಣ್ಣೆ ಹಾಕಿ ಬಾಚಿ ಬಿಗಿಯಾಗಿ ಜಡೆ ಹೆಣೆದು ಕಳಿಸುವ ಅಮ್ಮ ಮುಟ್ಟುವಂತಿಲ್ಲ. ಅರೆಬರೆ ಬಾಚಣಿಗೆ ಓಡಿಸುವಾ ಅಂದರೆ ತಲೆತುಂಬ ಸಿಕ್ಕು. ಉದ್ದನೆಯ ಬುತ್ತಿಗೆ ಗಂಜಿ ಹಾಕಿ, ಅದರ ನೆತ್ತಿಗೆ ಒಂದು ಕಾಡುಮಾವಿನ ಮಿಡಿ ಉಪ್ಪಿನಕಾಯಿ, ಇಷ್ಟು ಮಜ್ಜಿಗೆ ಸುರಿದು ಅರೆಬರೆ ಓಡುತ್ತೋಡುತ್ತ, ಉಸಿರಿಗಾಗಿ ತೇಕುತ್ತ ಶಾಲೆಯ ಗ್ರೌಂಡ್‌ಗೆ ಕಾಲಿರಿಸಿದ್ದೇ ತಡ, ಎದೆ ಢವ ಢವ. ತರಗತಿ ಶುರುವಾಗಿ ಅರ್ಧ ಗಂಟೆಯೇ ದಾಟಿದ ಹೊತ್ತು. ಖಾಲಿ ಗ್ರೌಂಡ್‌ನ‌ಲ್ಲಿ ನರಪಿಳ್ಳೆಯಿಲ್ಲ. ತರಗತಿಗಳಿಂದ ಇಣುಕಿಹಾಕುವ ಮುಖಗಳು ಬೇರೆ!

  ಏದುಸಿರು ಬಿಡುತ್ತಾ ತರಗತಿಯ ಬಾಗಿಲಿಗೆ ಹೋಗಿ ನಿಲ್ಲುವಾಗ ಕಣ್ಣಂಚಿನಲ್ಲಿ ಧುಮುಕಲು ಸಿದ್ಧವಾದ ಕಣ್ಣೀರು. ನಮ್ಮನ್ನು ಕಂಡರೂ ಕಾಣದ ಹಾಗೆ ಸ್ವಲ್ಪ ಹೊತ್ತು ಬಾಗಿಲು ಕಾಯಿಸಿ ನಂತರ ಹುಬ್ಬುಗಂಟಿಕ್ಕಿ ಕೈಲಿದ್ದ ಸ್ಕೇಲು ಝಳಪಿಸುತ್ತ ಪ್ರಶ್ನಿಸುತ್ತಿದ್ದರು. 

“ಯಾಕೆ ಇಷ್ಟು ಬೇಗ ಬಂದಿದ್ದು?’ ಎದ್ದು ಬಿದ್ದು ನಗುವ ಸಹಪಾಠಿಗಳು. ಅವಮಾನದಿಂದ ಕೆಂಚುಗಟ್ಟಿದ ಮೋರೆ ನಮ್ಮದು. ಒಮ್ಮೆ ಕೇಳಿದಾಗ ಉತ್ತರಿಸಲು ನಾಲಗೆಯಲ್ಲಿ ಪಟ್ಟ ಪಸೆಯಿಲ್ಲ. ಮತ್ತೂಮ್ಮೆ ಕೇಳುತ್ತ ಸ್ಕೇಲು ಹಿಡಿದು ಸಮೀಪ ಬಂದಾಗ ಧೈರ್ಯವೆಲ್ಲ ಒಗ್ಗೂಡಿಸಿ ಉತ್ತರ ಬರುತ್ತಿತ್ತು- “ತಾಯಿ ಮುಟ್ಟು’ ಗಂಟಿಕ್ಕಿದ ಹುಬ್ಬಿನ ಅಧ್ಯಾಪಕರಿಗೆ ತಕ್ಷಣ ಅರ್ಥವಾಗುತ್ತಿತ್ತು. ಬಹುಶಃ ತಮ್ಮ ಮನೆಯಲ್ಲೂ ಅಂಥ ವಿಷಮ ದಿನಗಳಲ್ಲಿ ತಮ್ಮ ಎಳೆಯ ಹೆಣ್ಣುಮಕ್ಕಳು ಅನುಭವಿಸುವ ಕಷ್ಟ ನೆನಪಾಗಿ ಬಿಗಿದ ಮುಖ ಸಡಿಲಾಗುತ್ತಿತ್ತು. ದೇವರಾಣೆ. ಆಮೇಲೆ ಒಂದಕ್ಷರ ಬಯ್ಯುತ್ತಿರಲಿಲ್ಲ. “ಸರಿ, ಒಳಗೆ ಬಾ’ ಎನ್ನುವ ಅಪ್ಪಣೆ ಕೇಳಿದಾಗ ಹೋದ ಉಸಿರು ಬಂದ ಅನುಭವ. ಗೃಹಕೃತ್ಯ ಮುಗಿಸಿ ಬಂದ ಎಳೆಯ ಬಾಲೆಯರಿಗೆ ಅವರು ಮರ್ಯಾದೆಯಿಂದಲೇ ನಡೆಸಿಕೊಂಡವರು. ಅವರಿಗೂ ಗೊತ್ತು, ಇನ್ನೂ ಎರಡು ದಿನ ಲೇಟಾಗಿ ಇವರುಗಳು ಶಾಲೆ ತಲುಪುತ್ತಾರೆ ಎಂಬುದು. ಮಾರನೆಯ ದಿನ “ಯಾಕೆ ಲೇಟು?’ ಎಂದು ವಿಚಾರಿಸುತ್ತಿರಲೇ ಇಲ್ಲ. ಗದರಿಸದೆ ಹನ್ನೊಂದು ಗಂಟೆಗೆ ಬಂದರೂ ಒಳಕ್ಕೆ ಬಿಡುತ್ತಿದ್ದರು.

  ತರಗತಿಯಲ್ಲಿದ್ದ ಹತ್ತಿಪ್ಪತ್ತು ಹುಡುಗಿಯರಿಗೆ ಅವರವರ ಸರದಿಯಂತೆ ಅಮ್ಮ ತಿಂಗಳ ರಜೆ ತೆಗೆದುಕೊಂಡ ದಿನಗಳು ಅತಿ ಕಠಿಣಾವಸ್ಥೆಯ ಕಾಲ. ಅಜಾಗರೂಕತೆಯಿಂದ ಬಿಸಿ ಪಾತ್ರೆ ತಗುಲಿ ಕೆಂಪಾಗುವ ಕೈಗಳು, ಕಾಲಮೇಲೆ ಚೆಲ್ಲಿಕೊಂಡ ಗಂಜಿ, ಸೌದೆ ಒಲೆಯ ಬುಡದಲ್ಲಿನ ಕೆಂಡ ನೋಡದೆ ಮೆಟ್ಟಿ ಎದ್ದ ಗುಳ್ಳೆಯ ಯಾತನೆ, ಕೈ ಮೈ, ಹಾಕಿದ ಡ್ರೆಸ್‌ ಎಲ್ಲ ಕಡೆ ಮಸಿ ಗುರುತು, ಕಣ್ಣು, ಮೂಗು ಒರೆಸಿಕೊಳ್ಳುತ್ತಾ, ದುಸುಮುಸು ಮಾಡುತ್ತಾ, ಅರೆಬೆಂದ ಅತ್ತ ಅಕ್ಕಿಯಲ್ಲ; ಇತ್ತ ಅನ್ನವೂ ಅಲ್ಲದ ಅನ್ನ ಉಣ್ಣುತ್ತ ಮೂರು ದಿನ ತಳ್ಳಿದಾಗ ಅಂದು ಅಮ್ಮನ ಮೀಯುವ ದಿನ ಎಂಬ ಹರ್ಷ. 

  ಬೆಳಗ್ಗೆದ್ದು ತಣ್ಣೀರಿನಲ್ಲಿ ಮಿಂದು ಅಮ್ಮ ಒಳಹೊಕ್ಕು ಅಡುಗೆ ಕೋಣೆಯ ಚಾರ್ಜ್‌ ತೆಗೆದುಕೊಂಡಲ್ಲಿಗೆ ಆ ತಿಂಗಳ “ತಲೆಬಿಸಿ’ಗೆ ಫ‌ುಲ…ಸ್ಟಾಪ್‌. ಎಳೆಹಕ್ಕಿಯಂತೆ ಬೇಕಾದ ಹೊತ್ತಿಗೆದ್ದು, ಅಮ್ಮ ತಯಾರಿಸಿ ಕೊಟ್ಟ ತಿಂಡಿಯೋ, ಗಂಜಿಯೂಟವೋ ಮುಗಿಸಿ ಹೊರಟರೆ ಹಾದಿಯ ಇಕ್ಕೆಲದ ಅಂಬಟೆ, ಪುನರ್ಪುಳಿ, ಕುಂಟಾಲ, ಕಿಸ್ಕಾರ, ಮುಳ್ಳಹಣ್ಣುಗಳಿಗೆ ನಾವೇ ಹಕ್ಕುದಾರರು. ಒಂಬತ್ತೂವರೆಗೇ ಶಾಲೆ ತಲುಪಿ ಕಬಡ್ಡಿ ಆಡಲೂ ಸಮಯ ಇತ್ತು, ಲಗೋರಿ, ಕುಂಟಾಬಿಲ್ಲೆ, ಹುಲಿ, ದನ ಆಡಲು ಟೈಮ… ಸಿಗುತ್ತಿತ್ತು. ಹತ್ತು ದಿನ ಆ ಸ್ವಾತಂತ್ರ್ಯ ಅನುಭವಿಸಿದಾಗ ಪುನಃ ಯಾವ ದಿನ ಅಮ್ಮ ತಾನು ಒಳಬರುವಂತಿಲ್ಲ ಎಂದು ಘೋಷಣೆ ಮಾಡ್ತಾರೋ ಎಂಬ ಭೀತಿಯಲ್ಲಿ ನಿದ್ದೆ ಬರುತ್ತಿರಲಿಲ್ಲ. ಬೆಳಗಾದ ಒಡನೆ ಅರೆಗಣ್ಣಿನಲ್ಲಿ ಅಮ್ಮ ಅಡುಗೆ ಮನೆಯಲ್ಲಿದ್ದಾರೆ ಎಂದು ಖಚಿತವಾದರೆ ಹಿಗ್ಗು. ಹಿತ್ತಲ ಜಗುಲಿಯಲ್ಲಿ ನಿಂತು, “ನಾ ಮುಟ್ಟುವ ಹಾಗಿಲ್ಲ’ ಎಂದು ಘೋಷಿಸಿದರೆ ಮನದೊಳಗೆ ಚಳಿ ಕೂರುತ್ತಿತ್ತು. ಮತ್ತದೇ ಚಕ್ರ ಸುತ್ತುತ್ತಿತ್ತು. ನೀರುಳ್ಳಿ ಹೆಚ್ಚಲು ತಿಳಿಯದು; ಒಗ್ಗರಣೆ ಹಾಕಲು ಗೊತ್ತಿಲ್ಲ. ಪ್ರತಿಯೊಂದನ್ನೂ ಹೇಳಿ ಹೇಳಿ ಮಾಡಿಸುವ ಹೊತ್ತಿಗೆ ಅಮ್ಮನ ಗಂಟಲ ಪಸೆ ಆರುತ್ತಿತ್ತು. 

  ಇಂದಿನ ಮಕ್ಕಳು ನಮಗಿಂತ ಹೆಚ್ಚು ಸುಖೀಗಳು. ಅವರಮ್ಮಂದಿರು ನಮ್ಮಮ್ಮಂದಿರ ಥರ ನಾ ಇಂದು ಒಳಬರುವ ಹಾಗಿಲ್ಲ ಎನ್ನುವುದೇ ಇಲ್ಲ. ಅಸಲು ಅವರಿಗೆ ತನ್ನಮ್ಮನಿಗೆ ಹಾಗೆ ಮೂರು ದಿನಗಳ ತಿಂಗಳ ರಜಾ ಇದೆ ಎಂದೇ ತಿಳಿದಿಲ್ಲ. ಮಕ್ಕಳು ಸಮೀಪ ಬಂದಾಗ ಮುಟ್ಟಬಾರದು ಎಂದು ದೂರ ಸರಿಯುವ ತಾಯಿಯಲ್ಲಿ “ಏನಾಯ್ತು ನಿನಗೆ’ ಎಂದು ಕಾಡಿಬೇಡುವ ಎಳೆಯರಿಗೆ “ಕಾಗೆ ಮುಟ್ಟಿದೆ ಬೆಳ್ಳಂಬೆಳಗ್ಗೆ’ ಎಂದು ಹಸಿ ಸುಳ್ಳು ಹೇಳುವ ಅಗತ್ಯವೇ ಇಲ್ಲ. 

  ಎಳೆಬಾಲೆಯರು ಮೈಕೈ ಮಸಿ ಮಾಡಿ, ಒಲೆಯ ಹೊಗೆ ಕಣ್ಣುಮೂಗಿಗೆ ತುಂಬಿ ಕೆಮ್ಮುವ, ಕೆಂಡ ಮುಟ್ಟಿ, ಮೆಟ್ಟಿ ಕಣ್ಣೀರಿಳಿಸಿ ಶೋಕ ಗೀತೆ ಹಾಡುವ ಸಂಕಟ ಅವರಿಗೆ ಇಲ್ಲವೇ ಇಲ್ಲ. ಇಂದಿಗೆ ಅದ್ಯಾವ ಮನೆಯ ಅಮ್ಮಂದಿರನ್ನೂ ಬೆಳ್ಳಂಬೆಳಗ್ಗೆ ಕಾಗೆ ಮುಟ್ಟುವುದೇ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅಮ್ಮಂದಿರ ಮುಟ್ಟಿನ ದಿನಗಳ ತಾರೀಕು ಅಂದಿನ ಅಧ್ಯಾಪಕರಿಗೆ ತಿಳಿಯುತ್ತಿತ್ತು. ಇಂದಿಗೆ ಅದನ್ನು ಊಹಿಸಲೇ ಸಾಧ್ಯವಿಲ್ಲ. ನಾವುಗಳು ತರಗತಿಯ ಬಾಗಿಲಿನಲ್ಲಿ ನಿಂತು ತಡವಾಗಿದ್ದಕ್ಕೆ ಕಾರಣ ಕೊಡುವಾಗ ಸ್ವಲ್ಪವೂ ಸಂಕೋಚವೇ ಆಗುತ್ತಿರಲಿಲ್ಲ. ಇಂದು ನಾನು, ನಾಳೆಗೆ ಮತ್ತೂಬ್ಬ ಹುಡುಗಿಗೆ ತಡ, ಮಾರನೇ ದಿನ ಇನ್ನೊಬ್ಬಳ ಅಮ್ಮನ ಮೂರು ದಿನದ ರಜೆ, ಹೀಗೆ ಲಿಸ್ಟ್‌ ಸಿಗದೇ ಇರುತ್ತಾ? ಆದರೆ, ನಮ್ಮ ಉತ್ತರ ಕೇಳಿ ಅದೆಷ್ಟು ಗೌರವದಿಂದ, ಸಣ್ಣಕ್ಕೆ ಕೂಡಾ ಗದರದೆ ತರಗತಿಗೆ ಸೇರಿಸುತ್ತಿದ್ದರೆಂದು ಈಗ ನೆನಪಾದರೆ ಅವರಲ್ಲಿ ಆದರ, ಗೌರವ ಹುಟ್ಟುತ್ತದೆ.

   ಅಂದು ನಾವುಗಳು ಅನುಭವಿಸಿದ್ದ ಕಷ್ಟ ಇಂದಿನವರಿಗಿಲ್ಲ. ಬೆಳಗ್ಗೆದ್ದು “ನನ್ನ ಕಾಗೆ ಮುಟ್ಟಿಬಿಡು¤; ನೀನು ಎದ್ದು ಬಂದು ಉಪ್ಪಿಟ್ಟು, ಅವಲಕ್ಕಿ ಮಾಡು ಬಾ’ ಎಂದರೆ, “ಪರವಾಗಿಲ್ಲಮ್ಮ, ಕಾಗೆಯನ್ನು ಅತ್ತ ಓಡಿಸಿ ನೀನೇ ಮಾಡಿಬಿಡು’ ಅನ್ನುವ ಉತ್ತರ ಸಿಗಬಹುದು ಅಥವಾ ನಗರ, ಹಳ್ಳಿ ಎಂಬ ವ್ಯತ್ಯಾಸವಿಲ್ಲದೆ ಅಮ್ಮಂದಿರು ತಿಂಗಳಿಗೊಮ್ಮೆ ರಜಾ ಡಿಕ್ಲೇರ್‌ ಮಾಡುವುದಿಲ್ಲ. ಮೂರು ದಿನ ಮನೆಯೊಳಗೆ ಬಾರದೆ ಹೊರಗಡೆ ಇದ್ದು, ನಾನು ಮೈಲಿಗೆ ಎಂದು ಸಾರ್ವಜನಿಕವಾಗಿ ಘೋಷಿಸುವ ದಿನಗಳು ಇಂದಿಗಿಲ್ಲ. ತಮ್ಮದೇ ಮನೆಯಲ್ಲಿ, ತಮ್ಮದೇ ಪತಿಗೆ ತಗುಲದಂತೆ, ತನ್ನೊಡಲಿನಿಂದ ಜನಿಸಿದ ಮಕ್ಕಳನ್ನು ಮುಟ್ಟಿಸಿಕೊಳ್ಳದೆ ಮೈಮುದುರಿ ಅಡ್ಡಾಡುವ ಅವಶ್ಯಕತೆಯೂ ಇಲ್ಲ. ನಾವು ಚಿಕ್ಕವರಿ¨ªಾಗಲೇ ಕಾಲ ಬದಲಾಗಬೇಕಿತ್ತು. ಅದೆಷ್ಟು ಕಷ್ಟಪಟ್ಟಿದ್ದೇವೆ ಅಲ್ವಾ ಎಂದರೆ ನಿಜ ಅನ್ನಿಸಿತ್ತು.

ಕೃಷ್ಣವೇಣಿ ಕಿದೂರು

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.