ಎಂದಿಗೂ ಮುಗಿಯದ ಮಧುಚಂದ್ರ


Team Udayavani, Aug 1, 2018, 6:00 AM IST

9.jpg

ಕೆಲಸ ತೊರೆದು, ಸಂಪತ್ತನ್ನೆಲ್ಲ ಮಾರಿ, “ನಾನ್‌ಸ್ಟಾಪ್‌ ಹನಿಮೂನ್‌’ಗೆ ಹೊರಟ ಕನ್ನಡಿಗ ದಂಪತಿ ಇವರು. ರುಚಿಕಾ ಮತ್ತು ಅವಿನಾಶ ಶಾಸ್ತ್ರೀ ಅವರ ದಾಂಪತ್ಯ ಬದುಕಿನ ಅಗತ್ಯಗಳೆಲ್ಲ ಎರಡೇ ಎರಡು ಬ್ಯಾಗ್‌ನಲ್ಲಿ ಪ್ಯಾಕ್‌ ಆಗಿದೆ. 2016ರಲ್ಲಿ ಮದುವೆಯಾದ ರುಚಿಕಾ ಶಾಸ್ತ್ರಿ ಜೋಡಿಯ ಮಧುಚಂದ್ರ ಇವತ್ತಿಗೂ ಮುಗಿದೇ ಇಲ್ಲ…

ಮದುವೆಯಾದ ಹೊಸತರಲ್ಲಿ ಎಲ್ಲ ನವದಂಪತಿಯ ಬಾಳಿನಲ್ಲೂ ಮಧುಚಂದ್ರ ಹಾಜರಿ ಹಾಕುವನು. ಆ ಚಂದ್ರನನ್ನು ಹಿಡಿದುಕೊಳ್ಳಲು ಹೊರಡುವುದೇ ಅತ್ಯಂತ ರಸಮಯ ಯಾನ. ಅದಕ್ಕಾಗಿ, ನೆಲೆನಿಂತ ಜಾಗವನ್ನು ಯಾರೂ ಮಧುಚಂದ್ರಕ್ಕೆ ಆರಿಸಿಕೊಳ್ಳುವುದಿಲ್ಲ. ದೂರದ ತಾಣಕ್ಕೋ, ವಿದೇಶಕ್ಕೋ ಸುಂಯ್ಯನೆ ಹಾರಿ, ಅಲ್ಲಿ ಹೂವಾಗಿ, ದುಂಬಿಯಾಗಿ ಸಿಹಿಕ್ಷಣಕ್ಕೆ ಸಾಕ್ಷಿ ಆಗುವುದು ಹನಿಮೂನ್‌ ಫಿಲಾಸಫಿ. ಲೋಕ ಮರೆತು ಮೂರ್‍ನಾಲ್ಕು ದಿನವೋ, ವಾರವೋ, ಹದಿನೈದು ದಿನವೋ ನೆಮ್ಮದಿಯಿಂದ ಕಳೆದು ಮರಳಿ ಗೂಡು ಸೇರುವಾಗ ದಂಪತಿಯ ಮನಸ್ಸು ಇನ್ನೂ ಆ ಜಾಗದಿಂದ ಈಚೆ ಬಂದಿರೋದಿಲ್ಲ. ಶೃಂಗಾರಭರಿತ ಈ ಚುಟುಕು ಅವಧಿಯ ಸಂತೋಷವೇ ಇಡೀ ಬದುಕಿಗೆ ಒಂದು ಕಿಕ್‌ಸ್ಟಾರ್ಟ್‌.

  ಮಧುಚಂದ್ರ ಮುಗಿಸಿ, ಮನೆಗೆ ಮರಳಿದ ಮೇಲೆ ಆ ದಂಪತಿಗೆ ತಮ್ಮದೇ ಕೆಲಸಗಳು ಕಾದು ಕುಳಿತಿರುತ್ತವೆ. ತಿಂಗಳ ಸಂಬಳ ಎತ್ತಿಕೊಡುವ ಕಚೇರಿಯ ಒತ್ತಾಯದ ಕರೆ ಇರುತ್ತೆ; ಕರೆಂಟ್‌ ಬಿಲ್‌, ಆ ಬಿಲ್‌, ಈ ಬಿಲ್‌ ನೆನಪಾಗುತ್ತೆ; ಸಂಸಾರ ನೆಲೆಯೂರಲು ಸೂರನ್ನು ಸಿಂಗರಿಸಬೇಕಿರುತ್ತೆ; ಅಗತ್ಯಗಳ ಬೆನ್ನೇರಬೇಕಾಗುತ್ತೆ. ಹೊಸ ಪಾತ್ರೆ ಖರೀದಿ, ಪೀಠೊಪಕರಣ ಹೊಂದಿಸುವುದು… ಎಲ್ಲ “ಬೇಕು’ಗಳನ್ನು ಪೂರೈಸುತ್ತಲೇ, ಮನೆಯ ಜಗತ್ತನ್ನು ವಿಸ್ತರಿಸುತ್ತಾ, ಹೊಸ ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆ ಮಾಮೂಲಿ.

  ಲೋಕದ ಎಲ್ಲ ನವದಂಪತಿಗಳ ಬದುಕಿನಲ್ಲಿ ಇದಕ್ಕಿಂತ ವ್ಯತ್ಯಾಸ ಬೇರೇನೂ ಆಗುವುದೇ ಇಲ್ಲ. ಆದರೆ, ಬೆಂಗಳೂರಿನ ರುಚಿಕಾ ಶಂಕರ್‌ ಮತ್ತು ಅವಿನಾಶ ಶಾಸ್ತ್ರೀ ಅವರ ದಾಂಪತ್ಯದಲ್ಲಿ ಇದೆಲ್ಲ ನಡೆಯಲೇ ಇಲ್ಲ. 2016ರಲ್ಲಿ ಮದುವೆಯಾದ ರುಚಿಕಾ ಶಾಸ್ತ್ರಿ ಜೋಡಿಯ ಮಧುಚಂದ್ರ ಇವತ್ತಿಗೂ ಮುಗಿದೇ ಇಲ್ಲ. ಅದು ಎಂದೂ ನಿಲ್ಲದ ಪ್ರವಾಸವಾಗಿ, ದೇಶ- ವಿದೇಶಗಳ ಗಡಿದಾಟುತ್ತಾ, ಸಾಗುತ್ತಲೇ ಇದೆ. ಒಂದು ತಾಣದಲ್ಲಿ ಹದಿನೈದು ದಿನವೋ, ತಿಂಗಳ್ಳೋ ನೆಲೆನಿಂತು, ಅದು ಬೋರ್‌ ಎನಿಸಿದ ಮೇಲೆ, ಅಲ್ಲಿಂದ ಮುಂದಕ್ಕೆ ಸಾಗುತ್ತಾರೆ. ಜಗತ್ತಿನ ಅತ್ಯಂತ ಅದೃಷ್ಟವಂತ ದಂಪತಿ ಬಹುಶಃ ಇವರೇ ಇದ್ದಿರಬೇಕೇನೋ. 

  ಈ ಕನ್ನಡಿಗ ದಂಪತಿಯ ಬದುಕಿನ ಅಗತ್ಯಗಳೆಲ್ಲ ಎರಡೇ ಎರಡು ಬ್ಯಾಗ್‌ನಲ್ಲಿ ಪ್ಯಾಕ್‌ ಆಗಿದೆ. 2016ರ ನವೆಂಬರ್‌ನಲ್ಲಿ ಥೈವಾನ್‌ಗೆ ಮಧುಚಂದ್ರಕ್ಕೆ ಹೋಗಿದ್ದ ಇವರು, ನಸುನಗುತ್ತಲೇ ತಮ್ಮ ಅಪಾರ್ಟ್‌ಮೆಂಟಿಗೆ ಕಾಲಿಟ್ಟರು. ಆದರೆ, ಗಂಡ ಆಫೀಸಿಗೆ ಹೋಗಲಿಲ್ಲ; ಪತ್ನಿ ಮನೆಕೆಲಸದಲ್ಲೂ ಮುಳುಗಲಿಲ್ಲ. ಇವರು ಮಾಡಿದ ಮೊದಲ ಕೆಲಸವೇ ಪ್ಯಾಕ್‌ಅಪ್‌! ಮನೆಯ ಪಾತ್ರೆಪಗಡಿ, ಫ್ರಿಡ್ಜ್, ಪೀಠೊಪಕರಣ ಎಲ್ಲವನ್ನೂ ಮಾರಿಬಿಟ್ಟರು. ತಾವು ವಾಸಿಸುತ್ತಿದ್ದ ಅಪಾರ್ಟ್‌ಮೆಂಟನ್ನೂ ಕೊಟ್ಟರು. ವಕೀಲೆಯಾಗಿದ್ದ ರುಚಿಕಾ ತಮ್ಮ ಹುದ್ದೆಗೆ ರಾಜೀನಾಮೆ ಇತ್ತರು. ಪತಿ ಅವಿನಾಶ ಶಾಸ್ತ್ರಿ, ಸಾಫ್ಟ್ವೇರ್‌ ಪ್ರೋಗ್ರಾಮರ್‌. ಜಗತ್ತಿನಲ್ಲಿ ಯಾವ ಮೂಲೆಯಲ್ಲಿದ್ದರೂ, ತಾನು ದುಡಿಯಬಲ್ಲೆ ಎನ್ನುವ ಆತ್ಮವಿಶ್ವಾಸ ಅವರಲ್ಲಿತ್ತು. ಬೆಂಗಳೂರಿನಲ್ಲಿನ ಎಲ್ಲ ಸ್ವತ್ತುಗಳನ್ನೂ ಮಾರಿ, ಇವರಿಬ್ಬರೂ ಹನಿಮೂನ್‌ ಮುಂದುವರಿಸುತ್ತಾ, ದೇಶದೇಶಗಳನ್ನೂ ದಾಟುತ್ತಲೇ ಸಾಗುತ್ತಿದ್ದಾರೆ. ಯಾವಾಗ ಈ ಹನಿಮೂನ್‌ ಮುಗಿಯುತ್ತೆ? ತಮ್ಮ ಸಂಸಾರ ಎಲ್ಲಿ ನೆಲೆಯೂರುತ್ತೆ? ಎಂಬುದು ಇವರಿಗೂ ಸ್ವತಃ ಗೊತ್ತಿಲ್ಲ. 

  ಮೈಸೂರಿನ ಹುಡುಗನ ಕೈಹಿಡಿದ, ದೆಹಲಿ ಮೂಲದ ರುಚಿಕಾ ಏಕೆ ಇಂಥ ನಿರ್ಧಾರ ಕೈಗೊಂಡರು? ಅವರ ಮಾತಲ್ಲೇ ಕೇಳಿಬಿಡಿ…
ಇಬ್ಬರಿಗೂ ಪ್ರವಾಸದ ಹುಚ್ಚು…

ಆಗತಾನೆ ಅವಿನಾಶ, ನೇಪಾಳದಿಂದ ವಾಪಸಾಗಿದ್ದರು. ಅವರು ಕೆಲಸದ ನಿಮಿತ್ತ ನಾನಾ ದೇಶಗಳಿಗೆ ತಿರುಗುತ್ತಿದ್ದರು. ನಾನು ಆಗ ಮಲೇಷ್ಯಾ ಪ್ರವಾಸಕ್ಕೆ ಸಜ್ಜಾಗಿದ್ದೆ. ಏರ್‌ಪೋರ್ಟ್‌ನಲ್ಲಿ ಭೇಟಿಯಾದೆವು. ಇಬ್ಬರ ಅಭಿರುಚಿ ಒಂದೇ ಎನ್ನುವುದು ಮೊದಲ ಮಾತುಕತೆಯಲ್ಲೇ ಖಾತ್ರಿ ಆಯಿತು. ಇಬ್ಬರ ನಡುವೆ ಪ್ರೀತಿಯಾಗಿ, ಮದುವೆಗೂ ಮುನ್ನವೇ ಒಂದು ಯೋಜನೆ ರೂಪಿಸಿದೆವು. ಆದಷ್ಟು ಹಣವನ್ನು ಉಳಿಸಿ, ಜಗತ್ತು ಸುತ್ತೋಣ ಅಂತ. ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿದ್ದ ಅವಿನಾಶ, ತುಂಬಾ ಸರಳವಾಗಿ ಬದುಕಲು ನಿರ್ಧರಿಸಿದ್ದರು. ಪಾತ್ರೆ, ಟೇಬಲ್ಲು, ಫ್ರಿಡ್ಜ್, ಸ್ಟೌ, ಮತ್ತೂಂದು ಚಾಪೆ ಇಟ್ಟುಕೊಂಡು ದಿನಕಳೆದರು. ನಾನೂ ದುಡಿದಿದ್ದರಲ್ಲಿ ಅಲ್ಪಸ್ವಲ್ಪ ಹಣವನ್ನು ಉಳಿಸುತ್ತಾ ಹೋದೆ. ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಳ್ಳದೇ, ಕೆಲವೇ ಕೆಲವು ಗೆಳೆಯರಿಗಷ್ಟೇ ಹೇಳಿ, ರಿಜಿಸ್ಟಾರ್‌ ಆಫೀಸಿನಲ್ಲಿ ಹಾರ ಬದಲಿಸಿಕೊಂಡೆವು.

ಎರಡೇ ಎರಡು ಬ್ಯಾಗು..!
ಮನೆಯ ಅಷ್ಟೂ ಸರಕುಗಳನ್ನು ಮಾರಿದ ಮೇಲೆ, ಎರಡೇ ಎರಡು ಬ್ಯಾಗ್‌ನಲ್ಲಿ ಅತ್ಯಗತ್ಯ ವಸ್ತುಗಳನ್ನು ತುಂಬಿದೆವು. ಮನುಷ್ಯನ ಅಗತ್ಯಗಳನ್ನು ಹೀಗೆ ಸೀಮಿತಗೊಳಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಹೆಣ್ಣಿಗೆ ಆಸೆ ಹೆಚ್ಚು ಅಂತಾರೆ. ನೋಡಿದ್ದೆಲ್ಲ ಬೇಕೆನ್ನುವ ಹಪಾಹಪಿ ಆಕೆಗೆ. ಬಟ್ಟೆ ಮೇಲೆ ಅವಳಿಗೆ ಮೋಹ ಜಾಸ್ತಿ ಇರುತ್ತೆ. ಆದರೆ, ನಾನು ಆ ರೀತಿ ಯೋಚಿಸಲು ಹೋಗಲಿಲ್ಲ. ನಮ್ಮಿಬ್ಬರ ನಡುವೆ ಒಂದು ಅಲಿಖಿತ ಒಪ್ಪಂದವೂ ಏರ್ಪಟ್ಟಿತು. ಇಬ್ಬರಲ್ಲಿ ಯಾರೂ, ಯಾವ ವಸ್ತುವನ್ನೂ ಖರೀದಿಸುವಂತಿಲ್ಲ. ಹಾಗೇನಾದರೂ ಖರೀದಿಸಿದರೆ, ಬ್ಯಾಗ್‌ನಲ್ಲಿರುವ ಒಂದು ವಸ್ತುವನ್ನು ನಿರ್ದಾಕ್ಷಿಣ್ಯವಾಗಿ ಆಚೆ ಎಸೆಯಬೇಕು ಅಂತ. ಬಹುಶಃ ಈ ಎರಡು ವರ್ಷದ ನಮ್ಮ ಯಾನದಲ್ಲಿ ನಾಲ್ಕೋ, ಐದೋ ವಸ್ತುಗಳನ್ನಷ್ಟೇ ನಾವು ಖರೀದಿಸಿದ್ದೆವು.

ಹೋದಲ್ಲೇ ಊಟ…
ನಾನು ತುಂಬಾ ಫ‌ುಡ್ಡೀ. ನಾನ್‌ ವೆಜ್‌ಪ್ರಿಯೆ. ಆದರೆ, ನನ್ನ ಗಂಡ ಸಸ್ಯಾಹಾರಿ. ಮೊಟ್ಟೆಯನ್ನಷ್ಟೇ ತಿಂತಾರೆ. ಅವರಿಗೆ ಬೇಕೆನಿಸಿದ ಆಹಾರ ಎಲ್ಲ ಕಡೆ ಸಿಗುವುದಿಲ್ಲ. ಯಾವ ತಾಣಕ್ಕೆ ಹೋಗುತ್ತೇವೋ, ಅಲ್ಲಿನ ಸ್ಥಳೀಯ ಆಹಾರಗಳನ್ನೇ ಸೇವಿಸುತ್ತೇವೆ. ಇಲ್ಲಿಯ ತನಕ ನಮಗೆ ಅಂಥ ಆಹಾರದ ಸಮಸ್ಯೆಯೇನೂ ಆಗಲಿಲ್ಲ. ನಾವು ಈವರೆಗೆ ಸುತ್ತಿದ್ದು, ಥೈವಾನ್‌, ಫಿಲಿಪ್ಪೀನ್ಸ್‌, ಸಿಂಗಾಪುರ, ವಿಯೆಟ್ನಾಂ, ಥಾಯ್ಲೆಂಡ್‌, ಕಾಂಬೋಡಿಯಾ, ಇಂಡೋನೇಷ್ಯಾ, ಮಲೇಷ್ಯಾದಂಥ ದಕ್ಷಿಣ ಏಷ್ಯಾದ ದೇಶಗಳನ್ನಷ್ಟೇ. ಇಲ್ಲೆಲ್ಲ ಹೆಚ್ಚು ಹಬ್ಬಿರುವುದು ಬೌದ್ಧ ಸಂಸ್ಕೃತಿ. ಸಸ್ಯಾಹಾರಕ್ಕೆ ಕೊರತೆ ಬಿದ್ದಿರಲಿಲ್ಲ. ಮುಂದಿನ ದಿನಗಳಲ್ಲಿ ಬೇರೆ ದೇಶಗಳಿಗೆ ಹೋದಾಗ, ಮೊಟ್ಟೆ, ಬ್ರೆಡ್‌ ಅಂತೂ ಸಿಕ್ಕೇ ಸಿಗುತ್ತೆ ಎನ್ನುವ ವಿಶ್ವಾಸ ನನ್ನ ಗಂಡನಿಗಿದೆ. ವಿಯೆಟ್ನಾಂನಲ್ಲಿ ಮೂನ್‌ ಫೆಸ್ಟಿವಲ್‌ ಅಂತ ಆಗುತ್ತೆ. ಹುಣ್ಣಿಮೆ ದಿನ ನಡೆಯೋದು. ಅವತ್ತು ತಯಾರಿಸುವ ಮೂನ್‌ ಕೇಕ್‌ ಅಲ್ಲಿ ಹೆಚ್ಚು ಜನಪ್ರಿಯ. ನಾವೂ ತಿಂದೆವು. ಆದರೆ, ಇಷ್ಟ ಆಗಲಿಲ್ಲ.

ಸೋಮಾರಿ ಗಂಡ, ಸೂಪರ್‌ ಹೆಂಡ್ತಿ
ನನಗೆ ಹೆಚ್ಚು ಖುಷಿ ಕೊಟ್ಟ, ಸ್ಫೂರ್ತಿ ತುಂಬಿದ ದೇಶ ವಿಯೆಟ್ನಾಂ. ಅಲ್ಲಿ ಮೂರು ತಿಂಗಳು ಒಬ್ಬರ ಮನೆಯಲ್ಲೇ ಉಳಿದಿದ್ದೆವು. ಆ ದೇಶ ಬಹಳ ವಿಶಿಷ್ಟ. ಅಲ್ಲಿ ಎಲ್ಲ ವ್ಯವಹಾರಗಳನ್ನೂ ನೋಡಿಕೊಳ್ಳೋದು ಹೆಂಗಸರೇ. ಹಾಗಾದರೆ, ಗಂಡಸರು ಏನ್ಮಾಡ್ತಾರೆ ಅಂತ ನೀವು ಕೇಳಬಹುದು. ಅವರು ಶುದ್ಧ ಸೋಮಾರಿಗಳು. ದಿನಾಪೂರಾ ಬಿಯರ್‌ ಕುಡಿಯುತ್ತಾ, ಹರಟೆ ಹೊಡೀತಾರೆ. ಅಲ್ಲಿ ಸಂಸಾರದ ನಿರ್ಧಾರಗಳನ್ನು ತೆಗೆದುಕೊಳ್ಳೋದೂ ಹೆಂಗಸರೇ. ಒಂದು ಕಡೆ ಬೋಟಿಂಗ್‌ಗೆ ಹೋಗಿದ್ದೆವು. ಒಬ್ಬ ಗಂಡಸು ನಮ್ಮನ್ನು ದೋಣಿ ಬಳಿ ಕರಕೊಂಡು ಹೋದ. ಬಹುಶಃ ಅವನೇ ದೋಣಿ ನಡೆಸ್ತಾನೆ ಅಂತ ಅಂದ್ಕೊಡಿದ್ದೆವು. ಆದರೆ, ಅವನು ಬಿಯರ್‌ ಹೀರುತ್ತಾ, ದೋಣಿಯಲ್ಲಿ ಕುಳಿತ. ಅಲ್ಲಿದ್ದ ಹೆಂಗಸರು ಹುಟ್ಟನ್ನು ಹಾಕಿದರು!

ನಾವೂ ಜಗಳ ಆಡ್ತೀವಿ, ಆದರೆ…
ದಾಂಪತ್ಯ ಅಂದಮೇಲೆ ಸಣ್ಣಪುಟ್ಟ ಮುನಿಸು, ಮನಃಸ್ತಾಪಗಳು ಇದ್ದಿದ್ದೇ. ನಾನೂ ಕೆಲವೊಮ್ಮೆ ಸಿಟ್ಟಾಗ್ತಿನಿ. ಆದರೇನು ಪ್ರಯೋಜನ? ಮನೆಯಲ್ಲಾದರೆ, ಮುಖ ಊದಿಸಿಕೊಂಡು ರೂಮ್‌ನಲ್ಲಿ ಕೂತ್ಕೊಬಹುದು. ಬೇಸರ ಆದಾಗ ತವರಿಗೆ ಹೋಗಬಹುದಿತ್ತು. ಇಲ್ಲಿ ಅಂಥ ಅವಕಾಶ ಇರೋದಿಲ್ಲ! ನಮಗೆ ನಾವೇ ಆಸರೆ. ಹೆಚ್ಚೆಂದರೆ, ನಾನು ಲಗ್ಗೇಜನ್ನು ಹೊರದೇ, ಮುನಿಸಿಕೊಂಡು, ಮುಂದೆ ಹೋಗಬಹುದು. ಪಾಪ, ಗಂಡ ಎರಡೂ ಬ್ಯಾಗ್‌ ಅನ್ನು ಹೊತ್ಕೊಂಡು, ನನ್ನ ಹಿಂದೆಯೇ ಬರುತ್ತಾನೆ. ಇದೆಲ್ಲವೂ ಮಾಮೂಲಿ. 

  ಇಷ್ಟೆಲ್ಲ ಸುತ್ತಿದ ಮೇಲೆ ನಾವು ಕೆಲವು ಸತ್ಯ ಕಂಡುಕೊಂಡೆವು. ಜಗತ್ತಿನ ಜನ ಒಂದೇ ಕಾರಣಕ್ಕಾಗಿ ಖುಷಿಪಡ್ತಾರೆ, ಒಂದೇ ಕಾರಣಕ್ಕಾಗಿ ದುಃಖಿಸುತ್ತಾರೆ. ಅದು ಸಂಬಂಧ, ನಂಬಿಕೆಯ ವಿಚಾರಕ್ಕಷ್ಟೇ. ಪ್ರವಾಸಕ್ಕೆ ಹೋದ ತಾಣಗಳಲ್ಲಿ ಅಲ್ಲಿನವರನ್ನು ಕನಿಷ್ಠರೆಂದು ಭಾವಿಸಿದರೆ, ಅವರು ಜಾಸ್ತಿ ತೆರೆದುಕೊಳ್ಳುವುದೇ ಇಲ್ಲ. ಅವರನ್ನೂ ನಮ್ಮ ಬಂಧುಗಳಂತೆ ನೋಡಿಬಿಟ್ಟರೆ, ಅವರ ಸಂಸ್ಕೃತಿಯನ್ನು ಸ್ವೀಕರಿಸಿದರೆ, ಬೇಗನೆ ಹೊಂದಿಕೊಳ್ಳುತ್ತಾರೆ. ಎಷ್ಟೋ ಜಾಗದಲ್ಲಿ ನಮಗೆ ಕೆಲವರು ಆಪ್ತರಾಗುತ್ತಾರೆ. ಇನ್ನೇನು ಸ್ನೇಹ ಗಟ್ಟಿ ಆಯ್ತು ಎನ್ನುವಾಗ ಅಲ್ಲಿಂದ ಹೊರಡುತ್ತೇವೆ. ಆಗ ಬಹಳ ದುಃಖವಾಗುತ್ತೆ. ಮುಂದಿನ ಜಗತ್ತನ್ನು, ನಾನಾ ಸಂಸ್ಕೃತಿಗಳನ್ನು ನೋಡಬೇಕಿರುವುದರಿಂದ, ಅವರ ಸ್ನೇಹಬಂಧದಿಂದ ಕಳಚಿಕೊಂಡು, ಮುನ್ನಡೆಯುವುದು ಅನಿವಾರ್ಯ.

ಸ್ತ್ರೀಯರಿಗೆಲ್ಲ ಸೀರಿಯಲ್ಲೇ ಪ್ರಾಣ
ರಾತ್ರಿ 8 ಗಂಟೆ ಆಯ್ತಾ? ಎಲ್ಲ ಹೆಣ್ಮಕ್ಕಳೂ ಟಿವಿ ಮುಂದೆ ಕುಳಿತು ಧಾರಾವಾಹಿ ನೋಡ್ತಾರೆ. ಇದು ನಾವು ನೋಡಿದ ಎಲ್ಲ ದೇಶಗಳ ಕತೆ. ಅದರಲ್ಲೂ ವಿಯೆಟ್ನಾಂನಲ್ಲಿ “ಬಾಲಿಕಾ ವಧು’ ಧಾರಾವಾಹಿಗಾಗಿ ಕಾದು ಕುಳಿತಿರುತ್ತಿದ್ದರು. ಬಾಲಿಕಾವಧುವನ್ನು ವಿಯೆಟ್ನಾಮೀಸ್‌ ಭಾಷೆಗೆ ಡಬ್‌ ಮಾಡಲಾಗಿತ್ತು. ಅಲ್ಲಿ ಕೆಲವರು ನನಗೇ “ಬಾಲಿಕಾವಧು’ ಎಂದು ಅಡ್ಡಹೆಸರು ಹಿಡಿದು ಕರೆಯುತ್ತಿದ್ದರು. 
  
ವಾಪಸು ಬಂದೆವು….
ನಮ್ಮ ಪ್ರವಾಸ ಈಗ ಇದ್ದಿದ್ದು ಮಲೇಷ್ಯಾದಲ್ಲಿ. ಅಲ್ಲಿ ನಮ್ಮಿಬ್ಬರ ಪರ್ಸ್‌ ಕಳೆದುಹೋಯ್ತು. ಅದರಲ್ಲಿ ಬ್ಯಾಂಕ್‌ ಕಾರ್ಡ್ಸ್ಗಳೆಲ್ಲ ಇದ್ದವು. ಅಲ್ಲಿನ ಕೆಫೆಯ ಮಾಲೀಕ ನಮಗೆ ನೆರವಾದ. ಪೊಲೀಸರಿಗೆ ಕಂಪ್ಲೇಂಟ್‌ ಕೊಟ್ಟು, ಸಿಸಿಟಿವಿ ಫ‌ೂಟೇಜ್‌ ನೋಡಿ, ಸಾಕಷ್ಟು ತನಿಖೆ ಮಾಡಿದರೂ, ಕದ್ದ ವ್ಯಕ್ತಿಯ ಸುಳಿವು ಸಿಗಲಿಲ್ಲ. ಕೊನೆಗೆ ಅವಿನಾಶ್‌, ಅಮೆರಿಕದಲ್ಲಿದ್ದ ಗೆಳೆಯನಿಗೆ ಸ್ವಲ್ಪ ಹಣ ಕಳಿಸಲು ಹೇಳಿ, ಈಗ ಭಾರತಕ್ಕೆ ವಾಪಸು ಬಂದು, ಮೈಸೂರಿನಲ್ಲಿದ್ದೇವೆ. ಮತ್ತೆ ಎಲ್ಲ ಕಾರ್ಡ್‌ಗಳನ್ನು ಮಾಡಿಸಿಕೊಂಡು ಮಧುಚಂದ್ರ ಪ್ರವಾಸ ಮುಂದುವರಿಸುತ್ತೇವೆ. 

ಇವರ ಬದುಕು ನಡೆಯೋದು ಹೇಗೆ?
– ರುಚಿಕಾ ಟೂರಿಸಂ, ಫ‌ುಡ್‌ ಬ್ಲಾಗ್‌ಗಳಿಗೆ ಫ್ರೀಲ್ಯಾನ್ಸರ್‌ ಆಗಿ ಕೆಲಸ ಮಾಡ್ತಾರೆ. ಭೇಟಿ ನೀಡಿದ ತಾಣಗಳ ಬಗ್ಗೆ ವಿಡಿಯೋ, ಲೇಖನಗಳನ್ನು ಕಳಿಸಿ, ದುಡಿಯುತ್ತಾರೆ.
– ಪತಿ ಅವಿನಾಶ ಶಾಸ್ತ್ರಿ, ಸಾಫ್ಟ್ವೇರ್‌ ಪ್ರೋಗ್ರಾಮರ್‌. ಆನ್‌ಲೈನ್‌ ಸಂಪರ್ಕವಿದ್ದರೆ, ಎಲ್ಲೇ ಇದ್ದರೂ ದುಡಿಯಬಲ್ಲರು.

ಮಧುಚಂದ್ರದ ಹಾದಿ…
ತೈವಾನ್‌, ಫಿಲಿಪ್ಪೀನ್ಸ್‌, ಸಿಂಗಾಪುರ, ವಿಯೆಟ್ನಾಂ, ಥಾಯ್ಲೆಂಡ್‌, ಕಾಂಬೋಡಿಯಾ, ಇಂಡೋನೇಷ್ಯಾ, ಮಲೇಷ್ಯಾ… 

2016ರಲ್ಲಿ ಹನಿಮೂನ್‌ಗೆ ಹೊರಟೆವು. ನಮ್ಮ ಮಧುಚಂದ್ರ ಪ್ರವಾಸ ಯಾವಾಗ ಮುಗಿಯುತ್ತೆ? ಎಲ್ಲಿ ನಮ್ಮ ಸಂಸಾರ ನೆಲೆ ನಿಲ್ಲುತ್ತೆ? ಈ ಪ್ರಶ್ನೆಗೆ ನಮ್ಮ ಬಳಿಯೇ ಉತ್ತರವಿಲ್ಲ. ನಾವು ಹೀಗೆ ಜೋಡಿಹಕ್ಕಿಯಂತೆ ಸಾಗುತ್ತಲೇ ಇರುತ್ತೇವೆ.
– ರುಚಿಕಾ ಅವಿನಾಶ್‌

ಕೀರ್ತಿ ಕೊಲ್ಗಾರ್

ಟಾಪ್ ನ್ಯೂಸ್

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

1-tata

ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್‌ ಇವಿ ಸೇರ್ಪಡೆ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Ullala–Encroch

Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.