ದೌರ್ಜನ್ಯ ತಡೆ ಹೊಸ ಕಾಯ್ದೆಗೆ ಸಂಪುಟ ಅಸ್ತು
Team Udayavani, Aug 2, 2018, 6:00 AM IST
ಹೊಸದಿಲ್ಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ವಿರೋಧಿ ಕಾಯ್ದೆಯನ್ನು ಬಲಪಡಿಸುವ ಸಂಬಂಧ ರೂಪಿಸಲಾಗಿರುವ ಹೊಸ ಮಸೂದೆಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದೆ. ಈ ಮೂಲಕ ದಲಿತ ಸಂಘಟನೆಗಳ ಆಕ್ರೋಶ ತಣಿಸುವ ಕೆಲಸ ಮಾಡಿದೆ. ಆದರೆ ಆ. 9ರ ಭಾರತ ಬಂದ್ ಕರೆ ವಾಪಸ್ ತೆಗೆದುಕೊಳ್ಳಲಾಗುತ್ತದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸುಪ್ರೀಂ ತೀರ್ಪಿನ ಅನಂತರ ಎಸ್‌ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಲ್ಲಿನ ಕೆಲವು ಅಂಶಗಳು ನಿಸ್ಸಾರಗೊಂಡಿದ್ದು, ಇವು ಗಳನ್ನು ಮತ್ತೆ ಕಾಯ್ದೆಯೊಳಗೆ ಸೇರಿಸಲು ಹೊಸ ಮಸೂದೆ ರಚಿಸಲಾಗಿದೆ. ಈ ಮಸೂದೆಯನ್ನು ಸದ್ಯ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲೇ ಮಂಡಿಸಲು ನಿರ್ಧರಿಸಲಾಗಿದೆ. ಇದರಂತೆ ಎಸ್‌ಸಿ/ಎಸ್ಟಿ ದೌರ್ಜನ್ಯ ವಿರೋಧಿ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿರುವವರಿಗೆ “ಯಾವುದೇ ಕೋರ್ಟ್‌ನ ಆದೇಶದ ಹೊರತಾಗಿಯೂ’ ನಿರೀಕ್ಷಣ ಜಾಮೀನು ಅವಕಾಶ ಇರುವುದಿಲ್ಲ. ಅಲ್ಲದೆ ದೌರ್ಜನ್ಯ ಎಸಗಿ ದವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲು ಯಾರ ಒಪ್ಪಿಗೆಯೂ ಬೇಕಾಗಿಲ್ಲ ಮತ್ತು ಪ್ರಾಥಮಿಕ ತನಿಖೆಯೂ ಅಗತ್ಯವಿಲ್ಲ ಎಂಬ ಅಂಶ ಸೇರಿಸಲಾಗಿದೆ.
ಕಳೆದ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾ| ಆದರ್ಶ ಕುಮಾರ್ ಗೋಯಲ್ ಮತ್ತು ನ್ಯಾ| ಯು. ಯು. ಲಲಿತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಎಸ್‌ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಅಧಿಕಾರಿಗಳ ವಿರುದ್ಧ ದೂರು ಬಂದ ಕೂಡಲೇ ಬಂಧಿಸಕೂಡದು ಎಂಬ ತೀರ್ಪು ನೀಡಿತ್ತು. ಇದು ದೇಶಾದ್ಯಂತ ದಲಿತ ಸಂಘಟನೆಗಳ ಆಕ್ರೋಶಕ್ಕೂ ಕಾರಣವಾಗಿ ಪ್ರತಿಭಟನೆ ನಡೆದಿತ್ತು. ಜತೆಗೆ ಹೋರಾಟದ ಸಂದರ್ಭದಲ್ಲಿ ಭಾರೀ ಹಿಂಸಾಚಾರವೂ ನಡೆದು ಉತ್ತರ ಭಾರತದಲ್ಲೇ 9 ಮಂದಿ ಸಾವಿಗೀಡಾಗಿದ್ದರು.
ಇದಷ್ಟೇ ಅಲ್ಲ, ಈ ಕಾಯ್ದೆಯ ಕಠಿನ ಅಂಶಗಳನ್ನು ಪುನಃ ಸೇರಿಸುವಂತೆ ಕೇಂದ್ರ ಸಚಿವರಾದ ರಾಮ್ ವಿಲಾಸ್ ಪಾಸ್ವಾನ್ ಮತ್ತು ರಾಮದಾಸ್ ಅಠಾವಳೆ ಅವರ ಎಲ್‌ಜೆಪಿ, ಆರ್‌ಪಿಐ ಪಕ್ಷಗಳು ಒತ್ತಾಯಿಸಿದ್ದವು. ಜತೆಗೆ ಸ್ವತಃ ಬಿಜೆಪಿಯಲ್ಲಿನ ದಲಿತ ಸಮುದಾಯದ ಸಂಸದರೂ ಈ ಬಗ್ಗೆ ಒತ್ತಡ ತಂದಿದ್ದರು. ಜತೆಗೆ ಆ.9ರಂದು ಭಾರತ್ ಬಂದ್‌ಗೆ ದಲಿತ ಸಂಘಟನೆಗಳು ಕರೆ ನೀಡಿದ್ದವು.
ರಾಜನಾಥ್ ನೇತೃತ್ವದಲ್ಲಿ ಸಮಿತಿ: ದಲಿತ ಸಂಘಟನೆಗಳ ಕೋಪ ಹೆಚ್ಚಾದ ಮತ್ತು ಸರಕಾರದ ಒಳಗೇ ಹೆಚ್ಚಿನ ಒತ್ತಡ ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಚಿವರ ಸಮಿತಿ ನೇಮಕ ಮಾಡಿತ್ತು. ಈ ಸಮಿತಿ ಅಧ್ಯಯನ ನಡೆಸಿ ಈಗ ಹೊಸ ಅಂಶಗಳನ್ನು ಸೇರಿಸಿದೆ.
ಭಾರತ್ ಬಂದ್ ಕಥೆ ಏನು?
ದೇಶದ ಹಲವಾರು ದಲಿತ ಸಂಘ ಟನೆಗಳು ಈ ಕಾಯ್ದೆಯನ್ನು ನಿಸ್ಸಾರ ಗೊಳಿಸಿರುವುದನ್ನು ವಿರೋಧಿಸಿ ಆ.9ಕ್ಕೆ ದೇಶವ್ಯಾಪಿ ಭಾರತ್ ಬಂದ್ ನಡೆಸಲು ಕರೆ ನೀಡಿವೆ. ಈಗ ಕೇಂದ್ರ ಸರಕಾರ ಹೊಸ ಮಸೂದೆ ರೂಪಿಸಿರುವುದರಿಂದ ಪಾಸ್ವಾನ್ ಅವರ ಎಲ್‌ಜೆಪಿ ಕರೆ ನೀಡಿದ್ದ ಬಂದ್ ಸಂಭ್ರಮಾಚರಣೆಯಾಗಿ ಬದಲಾಗಲಿದೆ. ಆದರೆ ಉಳಿದ ದಲಿತ ಸಂಘಟನೆಗಳು ಯಾವ ನಿರ್ಧಾರ ತೆಗೆದುಕೊಳ್ಳಲಿವೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಇದೊಂದು ಐತಿಹಾಸಿಕ ದಿನ. ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹೊಸ ಮಸೂದೆಗೆ ನಿರ್ಧರಿಸಲಾಗಿದೆ. ಪಕ್ಷ ಕರೆ ನೀಡಿದ್ದ ಆ.9ರ ಬಂದ್ ಅನ್ನು ಸಂಭ್ರಮಾಚರಣೆ ದಿನವನ್ನಾಗಿ ಪರಿವರ್ತಿಸುತ್ತೇವೆ. ಅಗತ್ಯಬಿದ್ದರೆ ಈ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಿ ಎಂದೂ ಮೋದಿ ಹೇಳಿದ್ದಾರೆ.
- ರಾಮ್ ವಿಲಾಸ್ ಪಾಸ್ವಾನ್, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.