ಸೋರುತ್ತಿದೆ ಚೂರಿಪದವು ಅಂಗನವಾಡಿ
Team Udayavani, Aug 2, 2018, 1:12 PM IST
ನಿಡ್ಪಳ್ಳಿ :ನಿಡ್ಪಳ್ಳಿ ಗ್ರಾಮದ ಚೂರಿಪದವು ಅಂಗನವಾಡಿ ಕೇಂದ್ರದ ಆರ್ ಸಿಸಿ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿದೆ. ಮಕ್ಕಳು ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕಟ್ಟಡದ ಕಾಮಗಾರಿ ಗುಣಮಟ್ಟದ ಬಗ್ಗೆ ಶಂಕೆ ವ್ಯಕ್ತವಾಗಿದೆ. 2004ನೇ ಇಸವಿಯಲ್ಲಿ ಈ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡ ಸ್ವಲ್ಪ ಅಗಲವಾಗಿದ್ದು, ಮಧ್ಯ ಭಾಗ ಬಾಗಿದೆ. ಇದರಿಂದಾಗಿ ಛಾವಣಿಯಲ್ಲಿ ನೀರು ನಿಂತು ಅಂಗನವಾಡಿಯೊಳಗೆ ಬೀಳುತ್ತಲಿದೆ. ಕಟ್ಟಡದ ಸುತ್ತ ಗೋಡೆಯೂ ಬಿರುಕು ಬಿಟ್ಟಿದೆ. ಅಂಗನವಾಡಿಯಲ್ಲಿರುವ ಸುಮಾರು 20 ಮಕ್ಕಳಿಗೆ ಈ ಬಗ್ಗೆ ಅರಿವಿಲ್ಲದಿದ್ದರೂ, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ಆತಂಕಗೊಂಡಿದ್ದಾರೆ.
ದಾಸ್ತಾನು ಕೊಠಡಿಯಲ್ಲೂ ಸಮಸ್ಯೆ
ಅಂಗನವಾಡಿಗೆ ಹೊಂದಿಕೊಂಡು ಆಹಾರ ಪದಾರ್ಥಗಳ ದಾಸ್ತಾನು ಕೊಠಡಿ ಇದೆ. ಈ ಕೊಠಡಿಯಲ್ಲಿ ಇಲಿ, ಹೆಗ್ಗಣಗಳ ಸಮಸ್ಯೆ ಇದೆ. ಮಕ್ಕಳಿಗೆ ತಂದಿಟ್ಟ ಆಹಾರ ಪದಾರ್ಥಗಳನ್ನು ಅವುಗಳು ತಿನ್ನುತ್ತಿವೆ. ಅಂಗನವಾಡಿ ಕೇಂದ್ರದ ಒಳಗಿರಲು ಆತಂಕವಾಗುತ್ತಿದೆ.
ಮಳೆಗಾಲದಲ್ಲಿ ನೀರು ಒಳಗೆ
ಮಳೆ ಬರುವಾಗ ನೀರು ಒಳಗೆ ಬೀಳುವುದರಿಂದ ಮಕ್ಕಳಿಗೆ ಸಮಸ್ಯೆಯಾಗಿದೆ. ವಿಪರೀತ ಮಳೆ ಬರುವಾಗ ಮಕ್ಕಳನ್ನು ಶೀಟ್ ಹಾಕಿದ ದಾಸ್ತಾನು ಕೊಠಡಿಯಲ್ಲಿ ನಿಲ್ಲಿಸುತ್ತಿದ್ದೇವೆ. ಎಲ್ಲ ವ್ಯವಸ್ಥೆಗೂ ಅಡಚಣೆಯಾಗುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ ಹೇಳುತ್ತಾರೆ.
ಅನುದಾನ ನೀಡಿದರೆ ದುರಸ್ತಿ
ಕಟ್ಟಡದ ದುಸ್ಥಿತಿ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗಮನಕ್ಕೆ ತಂದಿದ್ದೇವೆ. ಕಟ್ಟಡವನ್ನು ಉನ್ನತೀಕರಿಸಲು ಇಲಾಖೆಯಿಂದ ಭರವಸೆ ಸಿಕ್ಕಿದೆ. ಅನುದಾನ ನೀಡಿದರೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
- ಸುಮತಿ ಆನಾಜೆ
ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷರು
ದುರಸ್ತಿಗೆ ಅನುದಾನ-ಪ್ರಯತ್ನ
ಅಂಗನವಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸಣ್ಣ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕಟ್ಟಡದ ತುರ್ತು
ದುರಸ್ತಿ ಮಾಡಬೇಕಿದೆ. ನೀರು ಒಳಗೆ ಬೀಳದ ಹಾಗೆ ಕಟ್ಟಡದ ಮೇಲೆ ಶೀಟ್ ಹಾಕಿ ಕೊಡುವ ಕಾಮಗಾರಿ ಮಾಡಲು ತಾ.ಪಂ. ವತಿಯಿಂದ ಅನುದಾನ ನೀಡಲು ಪ್ರಯತ್ನಿಸಲಾಗುವುದು.
- ಹರೀಶ್ ಬಿಜತ್ರೆ,
ತಾ.ಪಂ. ಸದಸ್ಯರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.