ಸಚಿವ ಸಂಪುಟ ಸಭೆಯಲ್ಲೂ ಮೈತ್ರಿ ಕುರಿತು ಗೊಂದಲ
Team Udayavani, Aug 3, 2018, 6:00 AM IST
ಬೆಂಗಳೂರು: ನಗರ ಸ್ಥಳೀಯ ಸಂಸ್ಥೆ ಚುನಾವಣೆ, ಚುನಾವಣಾ ಹೊಂದಾಣಿಕೆ ಮತ್ತು ಅಧಿಕಾರಿ, ನೌಕರರ ವರ್ಗಾವಣೆ ಕುರಿತಂತೆ ಮೈತ್ರಿ ಸರ್ಕಾರದಲ್ಲಿರುವ ಗೊಂದಲಗಳು ಸಚಿವ ಸಂಪುಟದಲ್ಲೂ ಪ್ರತಿಧ್ವನಿಸಿದೆ. ಇಂತಹ ವಿಚಾರಗಳಲ್ಲಿ ಮೈತ್ರಿ ಧರ್ಮ ಪಾಲಿಸಿಕೊಂಡು ಹೋಗಬೇಕು ಎಂದು ಸಚಿವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮೂರೂ ವಿಚಾರಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆದಿದೆ. ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಮುನ್ನ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಬೇಕು ಎಂದು ಕಾಂಗ್ರೆಸ್‌ನ ಸಚಿವರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಸುದೀರ್ಘ ಚರ್ಚೆಯ ವೇಳೆ ಕೆಲವು ಸಚಿವರು ಉದ್ರೇಕಗೊಂಡು ಮಾತನಾಡಿದ್ದು, ಪರಸ್ಪರ ಚಕಮಕಿ ಹಂತಕ್ಕೂ ಮಾತುಕತೆ ನಡೆದಿತ್ತು. ಈ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಧ್ಯಪ್ರವೇಶಿಸಿ ಸಚಿವರನ್ನು ಸಮಾಧಾನಪಡಿಸಿದರು ಎನ್ನಲಾಗಿದೆ.
ನಗರ ಸ್ಥಳೀಯ ಸಂಸ್ಥೆ ಚುನಾವಣೆ:
ರಾಜ್ಯ ಚುನಾವಣಾ ಆಯೋಗ ಗುರುವಾರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ ಮಾಡಿರುವ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಶಾಸಕರು ಈಗಷ್ಟೇ ಸುಧಾರಿಸಿಕೊಳ್ಳುತ್ತಿದ್ದಾರೆ. ಹೀಗಿರುವಾರ ಚುನಾವಣಾ ಆಯೋಗದ ಮೇಲೆ ಒತ್ತಡ ತಂದು ಚುನಾವಣೆ ಮುಂದೂಡಬಹುದಿತ್ತು. ಆದರೆ, ಈ ನಿಟ್ಟಿನಲ್ಲಿ ಪ್ರಯತ್ನವನ್ನೇ ಮಾಡಲಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಮಧ್ಯಪ್ರವೇಶಿಸಿ, ಸರ್ಕಾರ ಚುನಾವಣೆ ನಡೆಸಲು ಸಹಕಾರ ನೀಡದಿದ್ದರೆ ಅದನ್ನೇ ನೆಪ ಮಾಡಿಕೊಂಡು ಚುನಾವಣಾ ಆಯೋಗ ಹೈಕೋರ್ಟ್ ಮೊರೆ ಹೋಗುತ್ತದೆ. ಈ ಸಂದರ್ಭದಲ್ಲಿ ಕೋರ್ಟ್ ಮಧ್ಯಪ್ರವೇಶಿಸಿದರೆ ಸರ್ಕಾರ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂದು ಹೇಳಿ ಸಚಿವರನ್ನು ಸುಮ್ಮನಾಗಿಸಿದರು ಎಂದು ತಿಳಿದುಬಂದಿದೆ.
ಚುನಾವಣಾ ಮೈತ್ರಿ:
ರಾಜ್ಯಾಧಿಕಾರಕ್ಕಾಗಿ ಮಾಡಿಕೊಂಡ ಮೈತ್ರಿಯನ್ನು ಲೋಕಸಭೆ ಚುನಾವಣೆಯಲ್ಲೂ ಮುಂದುವರಿಸಲು ತೀರ್ಮಾನಿಸಲಾಗಿದೆ. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬೇಕೇ, ಬೇಡವೇ ಎಂಬ ಬಗ್ಗೆ ಚರ್ಚೆ ನಡೆದಿದೆ. ಲೋಕಸಭೆ ಚುನಾವಣೆ ಮೈತ್ರಿಯಿಂದ ಹೆಚ್ಚು ಸಮಸ್ಯೆಗಳಾಗುವುದಿಲ್ಲ. ಆದರೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ಅವಕಾಶ ಸಿಗದ ಕಾರ್ಯಕರ್ತರು, ಮುಖಂಡರು ಪಕ್ಷ ತೊರೆಯುವ ಸಾಧ್ಯತೆ ಇದೆ. ಹೀಗಾಗಿ ಮೈತ್ರಿ ಬೇಡ ಎಂದು ಕೆಲವರು ಅಭಿಪ್ರಾಯಪಟ್ಟರೆ, ಮೈತ್ರಿ ಮುಂದುವರಿಸದಿದ್ದರೆ ಲೋಕಸಭೆ ಚುನಾವಣೆಗೆ ತೊಂದರೆಯಾಗಬಹುದು. ಆದ್ದರಿಂದ ಸ್ಥಳೀಯ ಸಂಸ್ಥೆಗಳಲ್ಲೂ ಮೈತ್ರಿ ಮುಂದುವರಿಸಬೇಕು ಎಂದು ಇನ್ನು ಕೆಲವರು ವಾದಿಸಿದರು. ಅಂತಿಮವಾಗಿ ಈ ಕುರಿತು ಎರಡೂ ಪಕ್ಷಗಳ ವರಿಷ್ಠರು ಮತ್ತು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ. ಇಲ್ಲಿ ಯಾವುದೇ ನಿರ್ಧಾರ ಅಸಾಧ್ಯ ಎಂದು ಹೇಳಿ ಚರ್ಚೆ ಮುಕ್ತಾಯಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
ನೌಕರರು, ಅಧಿಕಾರಿಗಳ ವರ್ಗಾವಣೆ:
ಸರ್ಕಾರಿ ನೌಕರರು, ಅದರಲ್ಲೂ ಮುಖ್ಯವಾಗಿ ಎಂಜಿನಿಯರ್‌ಗಳು ಮತ್ತು ಕೆಎಎಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದೆ. ಎಂಜಿನಿಯರ್‌ಗಳನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡುತ್ತಿರುವ ಬಗ್ಗೆ ಕೆಲವು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮೌನವಾಗಿದ್ದುದರಿಂದ ಈ ಬಗ್ಗೆ ಹೆಚ್ಚಿನ ಮಾತುಕತೆ ನಡೆದಿಲ್ಲ. ಆದರೆ, ಕೆಎಎಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಚಿವರು ಮುಖ್ಯಮಂತ್ರಿಗಳ ಬಗ್ಗೆಯೇ ಅಸಮಾಧಾನ ಹೊರಹಾಕಿದ್ದು, ಪಟ್ಟಿ ನೀಡಿದರೂ ಏಕೆ ವರ್ಗಾವಣೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಬಂದಿರುವ ಎಲ್ಲಾ ಪಟ್ಟಿಗಳು ನನ್ನ ಬಳಿ ಇದೆ. ಎಲ್ಲರನ್ನೂ ಒಂದೇ ಬಾರಿ ವರ್ಗಾವಣೆ ಮಾಡೋಣ. ಆಗಾಗೆÂ ತೀರ್ಮಾನ ಕೈಗೊಂಡರೆ ಗೊಂದಲವುಂಟಾಗುತ್ತಿದೆ ಎಂಬ ಕಾರಣಕ್ಕೆ ತಡೆಹಿಡಿದಿದ್ದೇನೆಯೇ ಹೊರತು ಬೇರೆ ಉದ್ದೇಶ ಇಲ್ಲ ಎಂದು ಸಚಿವರನ್ನು ಸಮಾಧಾನ ಪಡಿಸಿದರು ಎಂದು ತಿಳಿದುಬಂದಿದೆ.
ಈ ಮಧ್ಯೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದ್ದರಿಂದ ಸಾರ್ವತ್ರಿಕ ವರ್ಗಾವಣೆ ಕುರಿತು ಏನು ಮಾಡುವುದು ಎಂಬ ಬಗ್ಗೆಯೂ ಚರ್ಚೆಯಾಗಿದೆ. ಅಂತಿಮವಾಗಿ ಈ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಆವಿಷ್ಕಾರಗಳಿಗೆ ಪ್ರೋತ್ಸಾಹ
ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆ ಆಧಾರಿತ ನೂತನ ಆವಿಷ್ಕಾರಗಳನ್ನು ಸ್ಟಾರ್ಟಪ್ ಸಂಸ್ಥೆಗಳಿಂದ
ಮಾಡಲು ಪ್ರೋತ್ಸಾಹ ನೀಡುವ ಸಲುವಾಗಿ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ “ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಅಗ್ರಿ ಇನ್ನೋವೇಷನ್’ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕೃಷಿ ಇಲಾಖೆ ಸಹಕಾರದೊಂದಿಗೆ ಜಿಕೆವಿಕೆ ಆವರಣದಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಬಯಾಲಾಜಿಕಲ್ ಸೈನ್ಸಸ್ (ಎನ್‌ಸಿಬಿಎಸ್)ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರದ ಸಹಕಾರದೊಂದಿಗೆ “ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಅಗ್ರಿ ಇನ್ನೋವೇಷನ್’ ಸ್ಥಾಪಿಸಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಎನ್‌ಸಿಬಿಎಸ್‌ಗೆ 15 ಕೋಟಿ ರೂ. ಒದಗಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ
ಕೃಷ್ಣಬೈರೇಗೌಡ, ಈ ಬಗ್ಗೆ ಮಾಹಿತಿ ನೀಡಿದರು.
ಇತರ ತೀರ್ಮಾನಗಳು
– ಆರೋಗ್ಯ ಇಲಾಖೆಯಲ್ಲಿ ನರ್ಸ್‌ಗಳ ನೇಮಕ ಸಂದರ್ಭದಲ್ಲಿ ಕೇವಲ ನರ್ಸಿಂಗ್ ಕೋರ್ಸ್ ಅಂಕ ಆಧರಿಸಿ ರ್‍ಯಾಂಕಿಂಗ್
ನೀಡಲು ನಿಯಮಾವಳಿ ತಿದ್ದುಪಡಿ.
– ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್
ಸಂಸ್ಥೆಯಿಂದ ಶುಚಿತ್ವ ಕಿಟ್‌ಗಳನ್ನು ವಿತರಿಸಲು 18 ಕೋಟಿ ರೂ.ಬಿಡುಗಡೆಗೆ ಆಡಳಿತಾತ್ಮಕ ಒಪ್ಪಿಗೆ.
– ಕರ್ನಾಟಕ ನೀರಾವರಿ ನಿಗಮಕ್ಕೆ 765 ಕೋಟಿ ರೂ.ಸಾಲ ಪಡೆಯಲು ಸರ್ಕಾರದಿಂದ ಬ್ಯಾಂಕ್ ಖಾತರಿ.
– ಮುಜರಾಯಿ ದೇವಾಲಯಗಳ ಟ್ರಸ್ಟ್‌ಗಳ ಮೇಲುಸ್ತುವಾರಿಯಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರ ನೇಮಕಾತಿಗೆ ಹೊಸ ನಿಯಮಾವಳಿ ರೂಪಿಸಲು ಸಮ್ಮತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.