ಸುಳ್ಯ ವ್ಯಕ್ತಿಯ ಮೋಸ ಬಯಲು : ಐದು ಮದುವೆಯಾಗಿದ್ದ ಭೂಪ!
Team Udayavani, Aug 3, 2018, 10:40 AM IST
ಸುಳ್ಯ: ಹಣದ ಆಸೆಗೆ ಹಲವು ಮದುವೆಯಾಗಿ ವಂಚಿಸುತ್ತಿದ್ದ ಬಹುಪತ್ನೀ ವಲ್ಲಭನೊಬ್ಬನ ಮೋಸದ ಜಾಲ ಬೆಳಕಿಗೆ ಬರ ತೊಡಗಿವೆ. 22 ವರ್ಷಗಳ ಹಿಂದೆ ಊರು ತೊರೆದು ಕೆಲವು ದಿನಗಳ ಹಿಂದೆ ಪ್ರತ್ಯಕ್ಷನಾಗಿದ್ದ ಸುಳ್ಯದ ನಿವಾಸಿ ದಿನೇಶ್ ಕುರಿತ ಸುದ್ದಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ಸುದ್ದಿ ಮಾಡಿದ್ದು, ವೈರಲ್ ಆಗಿದೆ. ಈತ ಮಂಡೆಕೋಲಿನವನು ಎನ್ನಲಾಗಿದೆ.
ಊರೆಲ್ಲ ಮದುವೆಯಾಗಿದ್ದ
ದಿನೇಶ್‌ಗೆ ಹುಟ್ಟೂರಿನಲ್ಲಿ ಮೊದಲ ಮದುವೆಯಾಗಿತ್ತು. ಬಳಿಕ ಪತ್ನಿ, ಮಗುವನ್ನು ಬಿಟ್ಟು, ತನ್ನ ಜಾಗ ಮಾರಾಟ ಮಾಡಿ ಕೇರಳಕ್ಕೆ ಹೋಗಿ ನೆಲೆಸಿದ್ದ. ಮಂಗಳೂರು, ಬಂಟ್ವಾಳ, ಪುತ್ತೂರು, ಕೇರಳ ಹೀಗೆ ವಿವಿಧೆಡೆ ಮದುವೆಯಾಗಿದ್ದಾಗಿ ಹೇಳಲಾಗಿದೆ.
ಮನೆಯವರಿಗೂ ಗೊತ್ತಿಲ್ಲ?
ಹತ್ತು ವರ್ಷಗಳ ಹಿಂದೆ ಕುಟುಂಬದ ದೈವಸ್ಥಾನವೊಂದರ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ದಿನೇಶ್ ಬಂದಿದ್ದ. ಆಗ ಕಾರಿನಲ್ಲೇ ಓಡಾಡುತ್ತಿದ್ದ. ಕೆಲವೊಮ್ಮೆ ಮಂಡೆಕೋಲಿಗೆ ಬರುತ್ತಿದ್ದ ಎನ್ನಲಾಗಿದೆ. ಈತನ ಹಿಂದಿನ ಕಥೆಗಳು ಮನೆ ಮಂದಿಗೂ ಗೊತ್ತಿರಲಿಲ್ಲ. ಕೆಲವು ತಿಂಗಳ ಹಿಂದೆ ಮಂಗಳೂರಿನಿಂದ ಕೆಲವರು ಹುಡುಕಿಕೊಂಡು ಬಂದಿದ್ದರು. ಆಗ ಅವರಿಂದ ತಪ್ಪಿಸಿಕೊಂಡು ಪರಾರಿಯಾದವ ಮರಳಿ ಬಂದಿಲ್ಲ. ಬಂದವರು ಯಾರು, ಈತ ತಪ್ಪಿಸಿಕೊಂಡದ್ದು ಏಕೆ ಎಂಬುದು ಮನೆ ಮಂದಿಗೂ ತಿಳಿದಿಲ್ಲ ಎನ್ನಲಾಗಿದೆ.
ಹುಡುಕುತ್ತಾ ಬಂದಿದ್ದ ಮಹಿಳೆ
ಆರೋಪಿ ದಿನೇಶ್ ಮಂಡೆಕೋಲಿನ ಮನೆಯೊಂದಕ್ಕೆ ಬರುತ್ತಿದ್ದ ಮಾಹಿತಿ ಪಡೆದ ಬೆನ್ನಲ್ಲೇ ವಂಚನೆಗೊಳಗಾಗಿದ್ದಾರೆನ್ನಲಾದ ಮಹಿಳೆ ಮತ್ತು ಆಕೆಯ ಬಳಗದವರು ಆತ ಬಂದಿದ್ದ ಮನೆಗೆ 10 ದಿನಗಳ ಹಿಂದೆ ಆಗಮಿಸಿದ್ದಾರೆ, ಜತೆಗೆ ಆತ ಮದುವೆಯಾಗಿ ವಂಚಿಸಿದ ಬಗ್ಗೆ ಹೇಳಿಕೊಂಡಿದ್ದಾಳೆ. ಮನೆಯವರ ಜತೆ ಜಗಳವಾಡಿದ್ದಾಳೆ. ಮನೆಮಂದಿಗೆ ಮತ್ತು ದಿನೇಶ್ ಗೆ ಯಾವುದೇ ಸಂಪರ್ಕ ಸಂಬಂಧ ಇಲ್ಲ ಎಂದು ಊರವರು ಹೇಳಿದ್ದರೂ ಮಾತಿನ ಚಕಮಕಿ ನಡೆದಿತ್ತು. ಕೊನೆಗೆ ಊರವರು ಅವರನ್ನು ಸಮಾಧಾನಪಡಿಸಿ ಕಳುಹಿಸಿದ್ದರು ಎನ್ನಲಾಗಿದೆ.
ಬಡವರು, ವಿಧವೆಯರೇ ಟಾರ್ಗೆಟ್
ದಿನೇಶ್ ಹಣದ ಆಸೆಗಾಗಿಯೇ ಹಲವರನ್ನು ಮದುವೆಯಾಗುತ್ತಿದ್ದುದಾಗಿ ಹೇಳಲಾಗಿದೆ. ಇದಕ್ಕಾಗಿ ಆತ ಬಡ ಯುವತಿಯರು ಮತ್ತು ವಿಧವೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ವಿಧವೆಯರಿಗೆ ಆಸರೆಯಾಗುವ ಆಮಿಷವೊಡ್ಡಿ ಅವರನ್ನು ವಂಚಿಸುತ್ತಿದ್ದ. ಈತನಲ್ಲಿ ಹಲವು ದೂರವಾಣಿ ಸಂಖ್ಯೆಗಳಿದ್ದು, ಬೇರೆ-ಬೇರೆಯವರೊಂದಿಗೆ ವ್ಯವಹರಿಸುತ್ತಿದ್ದ. ತನ್ನ ಮಾತಿನ ಚಾತುರ್ಯ ಮತ್ತು ಸೌಂದರ್ಯದ ಮೂಲಕ ಮಹಿಳೆಯರನ್ನು ಖೆಡ್ಡಾಕ್ಕೆ ಬೀಳಿಸಿ, ವಿವಾಹದ ನಾಟಕವಾಡಿ ಕೊನೆಗೆ ಅವರ ಆಸ್ತಿ, ಚಿನ್ನಾಭರಣ ಲಪಟಾಯಿಸುತ್ತಿದ್ದ. ಪುತ್ತೂರಿನ ಮಹಿಳೆಗೆ 7 ಲಕ್ಷ ರೂ. ವಂಚಿಸಿದ್ದ ಎಂಬ ಮಾಹಿತಿ ಹಬ್ಬಿದೆ.
ತನ್ನ ಹೆಂಡತಿಯನ್ನೇ ಮಾರಲು ಯತ್ನಿಸಿದ್ದ!
ಆರೋಪಿ ದಿನೇಶ್ ತನ್ನ ಹೆಂಡತಿಯ ಮಾರಾಟಕ್ಕೆ ಯತ್ನಿಸಿದ್ದ. ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ, ಆಕೆ ಬಟ್ಟೆ ಬದಲಾಯಿಸುತ್ತಿದ್ದ ವೇಳೆ ಲಾಡ್ಜ್ ಕೋಣೆಯ ಬಾಗಿಲು ಹಾಕಿ ಖರೀದಿದಾರರನ್ನು ಕರೆತರಲು ಹೋಗಿದ್ದ. ಆಕೆ ಅದು ಹೇಗೋ ಆ ವಿಷವರ್ತುಲದಿಂದ ತಪ್ಪಿಸಿಕೊಂಡಿದ್ದಳು ಎನ್ನಲಾಗಿದೆ. ಒಟ್ಟು ಪ್ರಕರಣ ಸಂಬಂಧ ದೂರು ಕೊಟ್ಟರೆ ಸ್ವೀಕರಿಸಿ ತನಿಖೆ ಮಾಡುವುದಾಗಿ ಎಸ್ಪಿ ರವಿಕಾಂತೇಗೌಡ ಹಾಗೂ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ‘ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.