ಪ್ರತಿ ಶಾಲೆಗೆ ರಂಗ ಶಿಕ್ಷಕರ ನೇಮಕ
Team Udayavani, Aug 3, 2018, 11:51 AM IST
ಬೆಂಗಳೂರು: ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಿಸುವ ಉದ್ದೇಶದಿಂದ ಪ್ರತಿ ಶಾಲೆಗೆ ಒಬ್ಬರು ರಂಗ ಶಿಕ್ಷಕರನ್ನು ನೇಮಿಸಿಕೊಳ್ಳುವ ಕುರಿತು ಪರಿಶೀಲಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಭರವಸೆ ನೀಡಿದರು.
ನಗರದ ತರಳಬಾಳು ಕೇಂದ್ರದಲ್ಲಿ ಗುರುವಾರ ಕರ್ನಾಟಕ ರಂಗ ಶಿಕ್ಷಣ ಪದವೀಧರರ ಸಂಘ ಆಯೋಜಿಸಿದ್ದ “ರಾಜ್ಯ ಮಟ್ಟದ ರಂಗಶಿಕ್ಷಣ ಪದವೀಧರರ ಸಮಾವೇಶ’ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ರಂಗ ಶಿಕ್ಷಣ ತರಬೇತಿ ಪೂರೈಸಿರುವ 1200 ಮಂದಿ ಪದವೀಧರರಿದ್ದಾರೆ. ಆದರೆ, 44 ಮಂದಿ ರಂಗ ಶಿಕ್ಷಕರು ಮಾತ್ರ ವಿವಿಧ ಸರ್ಕಾರಿ ಶಾಲೆಗಳಲ್ಲಿ ಬೋಧನೆಯಲ್ಲಿ ತೊಡಗಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರತಿ ಶಾಲೆಗೆ ಒಬ್ಬರು ರಂಗ ಶಿಕ್ಷಕರನ್ನು ನೇಮಿಸಿಕೊಳ್ಳುವ ಕುರಿತು ಶಾಸನ ಬದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ರಂಗ ಶಿಕ್ಷಕರು ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಶಾಲೆಗಳಲ್ಲಿ ಮಕ್ಕಳಿಗೆ ಕಲಿಯಲು ಮುಕ್ತ ಹಾಗೂ ಸ್ವತಂತ್ರ ವಾತಾವರಣವಿರಬೇಕೆಂಬುದು ರಂಗ ಕಲೆ ತಿಳಿದವರಿಗೆ ಮಾತ್ರ ಗೊತ್ತಿರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರದುರ್ಗದ ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದ ಕನ್ನಡ ಶಾಲೆಗಳು ಮುಚ್ಚಲು ಶಿಕ್ಷಕರ ನೀರಸ ಬೋಧನೆಯೇ ಪ್ರಮುಖ ಕಾರಣವಾಗಿದೆ. ಪ್ರತಿಯೊಂದು ಶಾಲೆಯಲ್ಲಿ ರಂಗ ಶಿಕ್ಷಕರಿದ್ದರೆ ವಿದ್ಯಾರ್ಥಿಗಳಿಗೆ ಹೆಚ್ಚು ಲವಲವಿಕೆಯಿಂದ ಪಠ್ಯ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಸಾಮಾನ್ಯ ಶಿಕ್ಷಕರು ಹಾಗೂ ರಂಗ ಶಿಕ್ಷಕರ ಬೋಧನೆಯಲ್ಲಿ ವ್ಯತ್ಯಾಸವಿದ್ದು, ರಂಗ ಶಿಕ್ಷಕರ ಧ್ವನಿಯಲ್ಲಿನ ಏರಿಳಿತಗಳು ಮಕ್ಕಳ ಮನಮುಟ್ಟುವಂತಿರುತ್ತವೆ ಎಂದು ಹೇಳಿದರು.
ಕನ್ನಡ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಪ್ರಾಥಮಿಕ ಮಟ್ಟದಿಂದಲೇ ಆಂಗ್ಲ ಮಾಧ್ಯಮ ಮಾಡಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ಇದರಿಂದಾಗಿ ಕನ್ನಡ ಭಾಷೆ ಬೆಳವಣಿಗೆಗೆ ತೊಂದರೆಯಾಗಲಿದ್ದು, ಕನ್ನಡದ ಅಸ್ಮಿತೆಗೆ ಆತಂಕ ಎದುರಾಗುತ್ತದೆ.
ಹೀಗಾಗಿ ಆಂಗ್ಲ ಭಾಷೆಯನ್ನು ಒಂದು ವಿಷಯವಾಗಿ ಮಾತ್ರ ಉಳಿಸಿಕೊಳ್ಳಬೇಕು ಎಂದು ಹೇಳಿದರು. ಮಾಜಿ ಸಚಿವ ಎಚ್.ಆಂಜನೇಯ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್, ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ ಸೇರಿದಂತೆ ಪ್ರಮುಖರು ಹಾಜರಿದ್ದರು.
ಇಸ್ಪೀಟು ಆಟದಲ್ಲಿ ಜೋಕರ್ ಎಲೆಯನ್ನು ಯಾವುದಕ್ಕೆ ಬೇಕಾದರೂ ಬಳಸಿಕೊಳ್ಳಬಹುದಾಗಿದ್ದು, ರಂಗ ಶಿಕ್ಷಕರು ಸಹ ಇಸ್ಪೀಟು ಆಟದ ಜೋಕರ್ ಎಲೆ ಇದ್ದಂತೆ ಅವರನ್ನು ಶಾಲೆಯಲ್ಲಿ ಎಲ್ಲದಕ್ಕೂ ಬಳಸಿಕೊಳ್ಳಬಹುದಾಗಿದೆ. ಹೀಗಾಗಿ ಪ್ರತಿ ಶಾಲೆಗೆ ಒಬ್ಬರು ರಂಗ ಶಿಕ್ಷಕರನ್ನು ನೇಮಿಸಿಕೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.
-ಎನ್.ಮಹೇಶ್, ಶಿಕ್ಷಣ ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.