ಪ್ರತಿ ನಗರದ ಬೆಳವಣಿಗೆಯಲ್ಲೂ ನಮ್ಮ ಪಾಲೆಷ್ಟು ಗೊತ್ತೇ?


Team Udayavani, Aug 4, 2018, 6:00 AM IST

c-1.jpg

ನಗರಗಳ ಬೆಳವಣಿಗೆಯಲ್ಲಿ ನಾಗರಿಕ ಸಮಿತಿಗಳು, ನಾಗರಿಕರ ಪಾತ್ರ ಬಹಳ ಪ್ರಮುಖವಾದುದು. ಹತ್ತಾರು ಕಾರಣಗಳಿಂದ ನಾವು ಅವುಗಳಿಂದ ದೂರ ಉಳಿದಿದ್ದೇವೆ. ಹಾಗಾಗಿಯೇ ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಮೂಗಿನ ನೇರಕ್ಕೆ ನಗರವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ. ಇದನ್ನು ತಡೆಯಲು ನಮ್ಮ ಸಕ್ರಿಯ ಭಾಗವಹಿಸುವಿಕೆ ಅಗತ್ಯ.

ಯಾವುದೇ ನಗರ ವ್ಯವಸ್ಥಿತವಾಗಿ ಅಭಿವೃದ್ಧಿಗೊಳ್ಳಲಿಕ್ಕೆ ನಮ್ಮ – ನಾಗರಿಕರ ಪಾತ್ರ ಬಹಳ ಪ್ರಮುಖವಾದುದು. ತಮ್ಮಲ್ಲಿರುವ ಆಲೋಚನೆಯ ಅಕ್ಷಯ ಪಾತ್ರೆಯನ್ನು ಸರಕಾರ, ಸ್ಥಳೀಯ ಆಡಳಿತಗಳ ಮುಂದೆ ಬರೀ ತೆರೆದಿಡುವುದಷ್ಟೇ ಅಲ್ಲ, ಅವುಗಳ ಅನುಷ್ಠಾನಕ್ಕೂ ಪ್ರಯತ್ನಿಸಬೇಕು. ಅದಕ್ಕೆ ಪ್ರಭಾವ ಗುಂಪಾಗಿ ನಾವು ಕಾರ್ಯ ನಿರ್ವಹಿಸಬೇಕು. ಏಕೆಂದರೆ, ನಿತ್ಯವೂ ನಗರದ ಕಷ್ಟ ನಷ್ಟಗಳನ್ನು ಅನುಭವಿಸುವವರು ನಾವೇ. 

ನಗರಗಳ ಯೋಜನೆ ವಿನ್ಯಾಸದಲ್ಲಿ ನಾಗರಿಕರ ಪಾತ್ರವನ್ನು ಪರಿಗಣಿಸಬೇಕೆಂಬುದು ಇಂದಿನ ಸಲಹೆಯೇನೂ ಅಲ್ಲ. ಹಲವು ವರ್ಷಗಳ ಹಿಂದಿನದು. ಮಹಾನಗರ ಪಾಲಿಕೆಯಂಥ ವ್ಯವಸ್ಥೆಗಳಲ್ಲಿ ಕೆಲವೊಮ್ಮೆ ಇಂಥ ಸಲಹೆಗಳನ್ನು ಪಾಲಿಸಿದ್ದಿದೆ. ವಾರ್ಡ್‌ ನಾಗರಿಕರ ಸಮಿತಿಗಳನ್ನು ರಚಿಸಿ, ಅವುಗಳ ಮೂಲಕ ಸಂಬಂಧಪಟ್ಟ ಬಡಾವಣೆಯ ಅಭಿವೃದ್ಧಿಗೆ ಮುಂದಾಗುವುದು ಇದರ ಉದ್ದೇಶವಾಗಿತ್ತು. ಆ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳೂ ನಡೆದಿದ್ದವು. ಮೊದಮೊದಲಿಗೆ ಎಲ್ಲವೂ ಸ್ಪಷ್ಟವಾಗಿತ್ತು, ನೇರವಾಗಿತ್ತು. ಕ್ರಮೇಣ ಅದರಲ್ಲೂ ರಾಜಕೀಯ ವಾಸನೆ ಬರತೊಡಗಿತು. ಇದರಿಂದ ನಿಜವಾಗಲೂ ಆಸಕ್ತರಾಗಿದ್ದ ನಾಗರಿಕರೂ ಹಿಂದೆ ಉಳಿಯತೊಡಗಿದರು. ಇಂಥದ್ದೇ ಗೊಂದಲ ಕಳೆದ ವರ್ಷ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು. ಏಕೆಂದರೆ, ಈ ಸಮಿತಿಗಳಿಗೆ ಸ್ಥಳೀಯ ಪಾಲಿಕೆ ಸದಸ್ಯರ ಸಂಬಂಧಿಕರನ್ನೋ, ಆಪ್ತರನ್ನೋ ನಾಮ ನಿರ್ದೇಶನ ಮಾಡಲಾಗುತ್ತಿದೆ. ಇದರಿಂದ ಯಾವುದೇ ರೀತಿಯ ನೈಜ ಭಾಗವಹಿಸುವಿಕೆ ಸಾಧ್ಯವಾಗದು. ಸ್ಥಳೀಯ ಸದಸ್ಯರು ಏಕಪಕ್ಷೀಯವಾಗಿ ಕೈಗೊಳ್ಳುವ ತೀರ್ಮಾನಗಳನ್ನು ಖಂಡಿಸಲಾಗದು-ಇತ್ಯಾದಿ ಅಂಶಗಳು ನಾಗರಿಕರಿಗೂ ಬೇಸರ ತಂದಿತ್ತು. ಈ ಬಗ್ಗೆ ಸರಕಾರವೂ ಬಹಳ ಕಾಳಜಿಯನ್ನೇನೋ ತೆಗೆದುಕೊಂಡಿರಲಿಲ್ಲ. ಒಟ್ಟೂ ವಾರ್ಡ್‌ ಸಮಿತಿಗಳು ಇದ್ದಾವೆ ಎನ್ನುವ ಲೆಕ್ಕಕ್ಕೆ ಇವೆ.

ಅವು ಎಷ್ಟು ಮುಖ್ಯ ಗೊತ್ತೇ?
ಕೇಂದ್ರ ಸರಕಾರದ ಸ್ಮಾರ್ಟ್‌ ಸಿಟಿ ಯೋಜನೆ ಹಲವು ನಗರಗಳಲ್ಲಿ ಜಾರಿಯಲ್ಲಿದೆ. ಅಲ್ಲಿಯೂ ನಾಗರಿಕರ ಸಮಿತಿ, ನಾಗರಿಕರ ಪಾಲ್ಗೊಳ್ಳುವಿಕೆ ತೀರಾ ಅಗತ್ಯ. ಸ್ಮಾರ್ಟ್‌ ಸಿಟಿ ಯೋಜನೆಯೊಳಗೇ ಅದನ್ನು ಸೇರಿಸಲಾಗಿದೆ. ಇಷ್ಟೆಲ್ಲಾ ಪ್ರಾಶಸ್ತ್ಯ ನೀಡುತ್ತಿರುವುದು ನಿತ್ಯವೂ ನಗರವನ್ನು ಅನುಭವಿಸುವುದು ನಾಗರಿಕರೇ ಹೊರತು ಬೇರಾರೂ ಅಲ್ಲ. ಆದ ಕಾರಣ ನಗರಗಳ ಪ್ರತಿ ಅಭಿವೃದ್ಧಿ ಯೋಜನೆಯ ರೂಪಣೆಯಲ್ಲೂ ಅವರ ಪಾತ್ರ, ಸಲಹೆಗಳು ಕಡ್ಡಾಯವಾಗಿ ಬೇಕು ಎಂಬ ಉದ್ದೇಶವಿದೆ. ಸಿಂಗಾಪುರ ಇಂದು ಮುಂಚೂಣಿಯಲ್ಲಿರುವುದು ಇದೇ ನೆಲೆಯಲ್ಲಿ. ಅಲ್ಲಿ ನಗರಗಳ ಯಾವುದೇ ಸಣ್ಣ ಕೆಲಸವಾಗಬೇಕಾದರೂ ನಾಗರಿಕರ ಪಾಲ್ಗೊಳ್ಳುವಿಕೆ ಇರಲೇಬೇಕು. ಇದು ಕೇವಲ ಸಿಂಗಾಪುರದಲ್ಲಷ್ಟೇ ಅಲ್ಲ. ವಿದೇಶದ ಹಲವು ದೇಶಗಳಲ್ಲಿರುವ ಸಹಜ ಸಾವಯವ ಪದ್ಧತಿ. ಅದಕ್ಕೇ ಅಮೆರಿಕದ ಅಧ್ಯಕ್ಷನಿಗೆ ಇರುವಷ್ಟೇ ಮರ್ಯಾದೆ-ಸ್ಥಾನ-ಗೌರವ ಆ ಪ್ರದೇಶದ ಮೇಯರ್‌ಗಳಿಗೂ ಇರುತ್ತದೆ ಎಂದರೆ ನಂಬಲು ತುಸು ಕಷ್ಟವೆನಿಸಬಹುದು.

ನಾವು ಏನೆಲ್ಲಾ ಮಾಡಬಹುದು?
ಈ ಮಾತು ನಮಗೆಲ್ಲರಿಗೂ ಅನ್ವಯವಾದೀತು. ನಗರವನ್ನು ಚೆನ್ನಾಗಿಟ್ಟುಕೊಳ್ಳುವುದರಿಂದ ಹಿಡಿದು, ಅದರ ಬೆಳವಣಿಗೆಯ ಪ್ರತಿ ಹಂತದಲ್ಲೂ ನಾವು ಪಾಲ್ಗೊಳ್ಳಲು ಅವಕಾಶವಿದೆ. ಅದನ್ನು ಬಳಸಲು ಅವಕಾಶವಿಲ್ಲ ಎಂಬ ಕೊರಗು ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ನಮ್ಮ ಹಿಂಜರಿಕೆಯೂ, ಅನಾಸಕ್ತಿಯೂ ಇದೆ. ನಮ್ಮ ಮಾತನ್ನು ಅವರ್ಯಾರು ಕೇಳ್ಳೋಲ್ಲ, ತಮಗಿಷ್ಟ ಬಂದಂತೆ ಮಾಡಿಕೊಳ್ಳುತ್ತಾರೆ. ನಾವೇಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಸುಮ್ಮನಾಗಿ ಟಿವಿಯೊಳಗೆ ಹೋಗಿ ಬಿಡುವ ಜಾಯಮಾನದವರೇ ಹೆಚ್ಚಿದ್ದಾರೆ. ಇಂಥದೊಂದು ಸಿನಿಕತೆಯೂ ನಗರದ ಆರೋಗ್ಯವನ್ನು ದಿನೇ ದಿನೆ ಹಾಳು ಮಾಡುತ್ತಿದೆ ಎನ್ನುವುದೂ ಸುಳ್ಳಲ್ಲ. ಆದರೆ ಒಬ್ಬ ಸಕ್ರಿಯ ನಾಗರಿಕ ನಗರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವುದಷ್ಟೇ ಅಲ್ಲ, ಸಾಯುವ ನಗರಕ್ಕೆ ಜೀವತುಂಬುವ ಸಾಮರ್ಥಯವೂ ಇರುತ್ತದೆ ಎಂಬುದು ಬರೀ ಕಲ್ಪನೆಯಲ್ಲ.

ಈ ಸಿನಿಮಾ ನೋಡಿ 
“ಮಾನ್ಯುಮೆಂಟ್‌ ಟು ಮೈಕೆಲ್‌ ಜಾಕ್ಸನ್‌’ ಒಂದು ಸೆರ್ಬಿಯಾ ದೇಶದ ಸಿನಿಮಾ. ಸುಮಾರು ಒಂದೂವರೆ ಗಂಟೆಯ ಸೆರ್ಬಿಯನ್‌ ಭಾಷೆಯ ಸಿನಿಮಾ. ಡಾರ್ಕೋ ಲಂಗೋಲವ್‌ ಎಂಬಾತ ನಿರ್ದೇಶಿಸಿದ್ದಾನೆ. 2014 ರಲ್ಲಿ ಆಸ್ಕರ್‌ ಪ್ರಶಸ್ತಿಗೆ ನಾಮ ನಿರ್ದೇಶನ ಹೊಂದಿದ್ದ ಚಿತ್ರವದು. ಈ ಸಿನಿಮಾ ಸಂಪೂರ್ಣವಾಗಿ ವಿಡಂಬನೆಯಿಂದ ಕೂಡಿದ್ದು. ವಾಸ್ತವವಾಗಿ ನಾನು ಹೇಳುವ ಸಂಗತಿಗೂ ಈ ಸಿನಿಮಾದ ಒಟ್ಟೂ ಉದ್ದೇಶಕ್ಕೆ ಒಂದಿಷ್ಟು ಸಂಬಂಧವಿದೆಯೇ ಹೊರತು ಉಳಿದಂತೆ ಯಾವ ಸಂಬಂಧವೂ ಇಲ್ಲ. ಅದರ ಸೈದ್ಧಾಂತಿಕ ನೆಲೆಗಾಗಲೀ ನಾನು ಹೇಳುವ ಸಂಗತಿಗೂ ಸಂಬಂಧವಿಲ್ಲ. 

ಸಣ್ಣದೊಂದು ಹಳ್ಳಿಯಂತಿರುವ ಪಟ್ಟಣದಲ್ಲಿ ಜನರೆಲ್ಲಾ ದೂರದ ಮಾಸ್ಕೋಗೆ ಹೋಗಿ ಭವಿಷ್ಯ ಕಂಡುಕೊಳ್ಳಲು ಲೆಕ್ಕ ಹಾಕುತ್ತಿರುತ್ತಾರೆ. ಆದರೆ ಆ ಊರಿನಲ್ಲಿದ್ದ ಒಬ್ಬ ಕ್ಷೌರಿಕ ಮತ್ತು ಸೈನ್ಯದ ಮಾಜಿ ಅಧಿಕಾರಿಯೊಬ್ಬನಿಗೆ ಹೇಗಾದರೂ ಮಹಾನಗರಗಳಿಗೆ ವಲಸೆ ಹೋಗುವ ಜನರನ್ನು ತಡೆಯಬೇಕು ಹಾಗೂ ತಮ್ಮೂರಿನಲ್ಲೇ ಭವಿಷ್ಯವನ್ನು ಕಟ್ಟಿಕೊಳ್ಳುವಂತಾಗಬೇಕೆಂಬ ಕನಸು. ಅದಕ್ಕಾಗಿ ಏನೆಲ್ಲಾ ಸರ್ಕಸ್‌ ಮಾಡುತ್ತಿರುತ್ತಾರೆ. ಪ್ರತಿ ತಿಂಗಳೂ ನಡೆಯುವ ನಾಗರಿಕರ ಸಮಿತಿ ಸಭೆಯಲ್ಲಿ ಮೇಯರ್‌ಗೆ ಭಿನ್ನವಿಭಿನ್ನ ಆಲೋಚನೆಗಳನ್ನು ಕೊಡುತ್ತಿರುತ್ತಾರೆ. ಅಂಥದ್ದರಲ್ಲಿ ಒಂದು ಸಭೆಯಲ್ಲಿ ಕ್ಷೌರಿಕ, ಹೇಗಾದರೂ ಮಾಡಿ ನಮ್ಮೂರು ಪಾಳುಬಿದ್ದ ಬಾವಿಯಂತಾಗಲು ಬಿಡಬಾರದು. ಅದಕ್ಕೆ ನಾವು ಮೈಕೆಲ್‌ ಜಾಕ್ಸನ್‌ ಪ್ರತಿಮೆಯನ್ನು ಸ್ಥಾಪಿಸಿದರೆ, ನಮ್ಮೂರು ಪ್ರವಾಸಿ ತಾಣವಾಗಬಹುದು. ಬೇರೆಲ್ಲೂ ಮೈಕೆಲ್‌ ಜಾಕ್ಸನ್‌ ಪ್ರತಿಮೆ ಇಲ್ಲ. ಇದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾದರೆ ಮತ್ತೆ ಪಟ್ಟಣದಲ್ಲಿ ಉದ್ಯೋಗಾವಕಾಶ ಹೆಚ್ಚಾಗಿ ವಲಸೆ ಹೋಗುವುದು ತಪ್ಪುತ್ತದೆ ಎಂದು ಮೇಯರ್‌ಗೆ ಸಲಹೆ ನೀಡುತ್ತಾನೆ. ಅದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರೂ, ಇನ್ನು ಕೆಲವರು ಆಗಬಹುದೆಂದು ಸಲಹೆ ಕೊಡುತ್ತಾರೆ. ಬಳಿಕ ಮೈಕೆಲ್‌ ಜಾಕ್ಸನ್‌ ಪ್ರತಿಮೆಯನ್ನು ಪಟ್ಟಣದ ಮಧ್ಯ ಭಾಗದಲ್ಲಿ ನಿಲ್ಲಿಸುವುದೆಂದು ಪ್ರಚಾರ ಮಾಡಲಾಗುತ್ತದೆ. ಬಳಿಕ ಎಲ್ಲ ಸಿನಿಮಾಗಳಂತೆ ಒಂದಿಷ್ಟು ಮಂದಿ ಪ್ರತಿಭಟನೆ ನಡೆಸಿ, ಗದ್ದಲವೆಬ್ಬಿಸಿ ಪ್ರತಿಮೆ ಬಾರದಂತೆ ತಡೆಯಲು ಪ್ರಯತ್ನಿಸುತ್ತಾರೆ. ಕೊನೆಗೆ ವಿವಿಧ ಕಾರಣಗಳಿಂದ ಕ್ಷೌರಿಕ ಸತ್ತು, ಅವನ ಪ್ರತಿಮೆ ಸ್ಥಾಪಿಸಲಾಗುತ್ತದೆ. ಆ ಮೂಲಕ ಅವನು ಅಮರನಾಗಿ, ಊರು ಪ್ರವಾಸಿ ತಾಣವಾಗಿ ಮಾರ್ಪಡುತ್ತದೆ.  ಇಡೀ ಚಿತ್ರದಲ್ಲಿ ಕ್ಷೌರಿಕನ ಪಾತ್ರದಲ್ಲಿ ಕಾಣಬರುವ ನೈಜ ಕಾಳಜಿಯೇ ನಮ್ಮನ್ನು ಹಿಡಿದಿಡುತ್ತದೆ. ಹೇಗಾದರೂ ಮಾಡಿ ನಗರವನ್ನು ಪುನರುಜ್ಜೀವನಗೊಳಿಸಬೇಕೆಂದು ಶ್ರಮಿಸುವ ಬಗೆ, ತಲೆಕೆಡಿಸಿಕೊಳ್ಳುವ ರೀತಿ ಎಲ್ಲವೂ ಒಬ್ಬ ಪ್ರಜಾವಂತ ನಾಗರಿಕನ ಜವಾಬ್ದಾರಿಯನ್ನು ನೆನಪಿಸುತ್ತದೆ. 

ನಮ್ಮ ಪಾತ್ರವೂ ಅದೇ
ನಮ್ಮ ನಗರಗಳು ಉಳಿಯಬೇಕಾದರೆ, ಉಸಿರಾಡಬೇಕಾದರೆ ನಮ್ಮ ನೈಜ ಕಾಳಜಿಯೂ ತೀರಾ ಅವಶ್ಯ. ನಗರಗಳ ವಾರ್ಡ್‌ಗಳಲ್ಲಿ ಸಣ್ಣದೊಂದು ಮರದ ಕೊಂಬೆ ಅಲುಗಾಡಿದರೂ ನಮಗೆ ಗೊತ್ತಿರುವಂತಿರಬೇಕು. ಒಂದು ಸಕ್ರಿಯ ಹಾಗೂ ಹೊಣೆಗಾರಿಕೆಯ ನಾಗರಿಕ ಸಮಿತಿ ಸ್ಥಳೀಯ ಆಡಳಿತವನ್ನೂ ಅಲುಗಾಡಿಸಬಲ್ಲದು. ಅವೆಲ್ಲವೂ ಸಾಧ್ಯವಾದರೆ ಖಂಡಿತಾ ನಮ್ಮ ನಗರಗಳು ಈಗ ಬೆಳೆದಿರುವಂತೆ ಅಡ್ಡಾದಿಡ್ಡಿಯಾಗಿ ಬೆಳೆಯುವುದಿಲ್ಲ, ರಾಜಾರೋಷವಾಗಿ ನಿಯಮ ಉಲ್ಲಂಘನೆಯಾಗುವುದಿಲ್ಲ, ತ್ಯಾಜ್ಯ ಗುಂಡಿಯಾಗಿ ಪರಿವರ್ತಿತವಾಗುವುದಿಲ್ಲ, ಲಭ್ಯವಿರುವ ಸೀಮಿತ ಸಂಪನ್ಮೂಲಗಳು ದುರ್ಬಳಕೆಯಾಗುವುದಿಲ್ಲ. ಅಷ್ಟೇ ಏಕೆ? ನಾವು ಕಟ್ಟುವ ತೆರಿಗೆಯ ಪ್ರತಿ ಪೈಸೆಯ ಲೆಕ್ಕವೂ ತಪ್ಪಿ ಹೋಗುವುದಿಲ್ಲ. ವಾರ್ಡ್‌ ಅಭಿವೃದ್ಧಿಗೆ ಹಾಕಿದ ಹಣವೆಷ್ಟು, ಕಂಡವರ ಕಿಸೆಯ ಪಾಲಾದದ್ದೆಷ್ಟು ಎಂಬುದೆಲ್ಲಾ ಖಚಿತವಾಗಿ ಲೆಕ್ಕಕ್ಕೆ ಸಿಗಬಲ್ಲದು. ಸ್ಥಳೀಯ ಸದಸ್ಯನಿಂದ ಹಿಡಿದು ಪ್ರತಿಯೊಬ್ಬರೂ ನಾಗರಿಕರಿಗೆ, ನಾಗರಿಕ ಸಮಿತಿಗಳಿಗೆ ಜವಾಬ್ದಾರಿಯುಳ್ಳವರಾಗಿರುತ್ತಾರೆ. ನಿಜವಾದ ಉತ್ತರದಾಯಿತ್ವವೆಂದರೆ ಅದೇ ತಾನೇ. ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ನಗರಗಳಲ್ಲಿ ನಾವು ಇನ್ನಾದರೂ ಸಕ್ರಿಯರಾಗಬೇಕು. ಇಲ್ಲವಾದರೆ ನಂತರ ದೂರಿದರೂ ಪ್ರಯೋಜನವಿಲ್ಲ.

ಟಾಪ್ ನ್ಯೂಸ್

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.