ಅಣ್ವಸ್ತ್ರ ಅಟ್ಟಹಾಸಗೈದ ಆ ಕರಾಳ ದಿನ
Team Udayavani, Aug 6, 2018, 3:52 PM IST
ಆಗಸ್ಟ್ ತಿಂಗಳ ಮೊದಲಿನ ದಿನಗಳು ಅಂದರೆ ಆಗಸ್ಟ್ 6 ಮತ್ತು ಆಗಸ್ಟ್ 9 ಬಂತೆಂದರೆ ಪುಟ್ಟ ದೇಶ ಜಪಾನ್ ಪ್ರಜೆಗಳಿಗೆ ಈ ದಿನಗಳ ಕರಾಳ ನೆನಪು ಮರುಕಳಿಸುತ್ತದೆ. ಅದು 1945ರ ಇಸವಿ, ಜಾಗತಿಕ ಮಹಾಸಮರದಲ್ಲಿ ಭಾಗವಹಿಸಿದ ಎಲ್ಲ ದೇಶಗಳು ಯುದ್ಧದ ದುಃಸ್ವಪ್ನ ಮತ್ತು ಪರಿಣಾಮದಿಂದ ಹೊರಬಂದು ಇನ್ನೂ ಚೇತರಿಕೆ ಹಂತದಲ್ಲಿರುವಾಗಲೇ ಒಂದು ದುರ್ಘಟನೆ ನಡೆದೇ ಹೋಗಿತ್ತು. ಅಮೆರಿಕದ ವಿಧ್ವಂಸಕ ಪ್ರವೃತ್ತಿ ಆಗ ಹೆಡೆಯೆತ್ತಿ ಆಗಸ್ಟ್ 6 ಮತ್ತು 9ರಂದು ಜಪಾನ್ ದೇಶದ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣುಬಾಂಬ್ ಸಿಡಿಸಿ ಆ ನಗರಗಳನ್ನು ಅಕ್ಷರಶಃ ಭೂಮಿಯ ಮೇಲಿನ ನರಕ ಮಾಡಿದ ಘಟನೆ ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿತು.
ಅದು 1945ರ ಜುಲೈ 16. ಅಮೆರಿಕದ ಅಣು ವಿಜ್ಞಾನಿ ಒಪೆನ್ ಹೈಮರ್ ನ್ಯೂಮೆಕ್ಸಿಕೊ ಮರುಭೂಮಿಯಲ್ಲಿ ತಾನು ತಯಾರಿ ಸಿದ ಅಣು ಬಾಂಬಿನ ಪ್ರಯೋಗ ಮಾಡಿದಾಗ ಅದರ ಅದ್ಭುತ ಶಕ್ತಿ ನೋಡಿ ತನ್ನ ಸಾಧನೆಗೆ ಹೆಮ್ಮೆ ಪಟ್ಟುಕೊಂಡಿದ್ದ. ಇದಾದ 15-20 ದಿನಗಳ ನಂತರ ಅಂದರೆ ಆಗಸ್ಟ್ 6ರ ಮುಂಜಾನೆ “ಲಿಟ್ಲ ಬಾಯ್’ ಎಂಬ ಹೆಸರಿನ 4030 ಕಿ.ಗ್ರಾಂ. ತೂಕದ ಅಣುಬಾಂಬ್ ಅನ್ನು ತನ್ನ ಒಡಲಲ್ಲಿರಿಸಿಕೊಂಡ ಬಾಂಬರ್ ವಿಮಾನವನ್ನು ಅದರ ಪೈಲೆಟ್ ಪೌಲ್ ದಿ ಟಿಬೆಟ್ಸ್ ಜಪಾನ್ ದೇಶದತ್ತ ಹಾರಿಸಿದ್ದ. ಅವನ ಜತೆ ಅವರ ಸಹ ಪೈಲಟ್‌ಗಳಾಗಿದ್ದ ಕ್ಯಾ| ವಿಲಿಯಂ ಪರ್ಸನ್ ಹಾಗೂ ಲೇ ಮೋರಿಸ್ ಜೆಪ್ಸಿನ್ ಇಬ್ಬರೂ ಬಾಂಬ್ ನ್ಪೋಟಕ್ಕೆ ಕ್ಷಣಗಣನೆ ಮಾಡುತ್ತಿದ್ದಂತೆ ಬೆಳಗ್ಗಿನ ಸುಮಾರು ಎಂಟು ಗಂಟೆಯ ಸಮಯ. ಆಗ ಸಾವಿರ ಅಡಿಗಳಷ್ಟು ಎತ್ತರದಿಂದ ಹಿರೋಶಿಮಾದ ಕೇಂದ್ರ ಭಾಗವನ್ನು ಗುರಿಯಾಗಿಸಿ ಬಾಂಬ್ ಎಸೆಯಲಾಯಿತು.
ಇದರ ಪ್ರಬಲ ವಿಕಿರಣ ದೂರದೂರಕ್ಕೂ ವ್ಯಾಪಿಸಿ 42 ಚದರ ಮೈಲಿಗಳಷ್ಟು ಪ್ರದೇಶವನ್ನು ಕ್ಷಣಾರ್ಧದಲ್ಲಿ ನಿಷ್ಕ್ರಿಯವಾಗಿಸಿತು.
ಈ ಘಟನೆಯಲ್ಲಿ ಸಾಕಷ್ಟು ಜನ ಕಾಣೆಯಾದರೆ ಇನ್ನಷ್ಟು ಜನರು ವಿಕಿರಣದ ದುಷ್ಪರಿಣಾಮಕ್ಕೆ ಒಳಗಾದರು. ಎರಡು ದಿನಗಳ ಕಾಲ ನಗರವನ್ನು ಆವರಿಸಿದ ಧೂಮ ಜನರ ಬದುಕನ್ನು ನರಕ ಸದೃಶ ಮಾಡಿತು. ಬಾಂಬ್ ಪ್ರಯೋಗ ಇಷ್ಟಕ್ಕೆ ನಿಲ್ಲಲಿಲ್ಲ. ಅಗಸ್ಟ್ 9ರ ಮುಂಜಾನೆ ಇನ್ನೊಂದು ಬಾಂಬ್ ಅನ್ನು ನಾಗಸಾಕಿ ಮೇಲೆ ಎಸೆಯಲಾಯಿತು. ಈ ಎರಡು ಘಟನೆಗಳಲ್ಲಿ 2 ಲಕ್ಷಕ್ಕೂ ಮಿಕ್ಕಿ ಜನರು ಸಾವಿಗೀಡಾದರು. ಬಾಂಬ್ ಸಿಡಿಸಿದ ಕಾರಣದಿಂದಾಗಿ ಸಂಭವಿಸಿದ ಜೀವ ಹಾನಿ ಹಾಗೂ ಪರಿಸರ ಹಾನಿಗಳ ಕುರಿತು ಚರ್ಚೆ ನಡೆಯುತ್ತಿದ್ದಂತೆ ಈ ಬಾಂಬ್ ತಯಾರಿಕೆ ಯಲ್ಲಿ ಹಗಲು ರಾತ್ರಿ ಶ್ರಮಿಸಿದ ವಿಜ್ಞಾನಿಗಳು ಈ ಘಟನೆಯ ನಂತರ ತಟಸ್ಥರಾದರು. ಬಾಂಬ್ ಪ್ರಯೋಗ ಯಶಸ್ವಿಯಾದುದಕ್ಕೆ ಹೆಮ್ಮೆ ಪಡಬೇಕೆ ಅಥವಾ ಲಕ್ಷಗಟ್ಟಲೆ ಅಮಾಯಕರನ್ನು ಬಲಿ ತೆಗೆದುಕೊಂಡಿದ್ದಕ್ಕೆ ತಲೆ ತಗ್ಗಿಸಬೇಕೆ ಎಂಬ ಜಿಜ್ಞಾಸೆಗೆ ಉತ್ತರ ಸಿಕ್ಕದ ಸ್ಥಿತಿ ಅವರದಾಗಿತ್ತು.
ಎಲ್ಲೆಡೆಗಳಿಂದಲೂ ಈ ಕುಕೃತ್ಯಕ್ಕೆ ವಿರೋಧ ವ್ಯಕ್ತವಾಯಿತು.
ಮುಂದೆ ಬಾಂಬ್ ತಯಾರಿಕೆ ನಿಷೇಧಿಸಿ ವಿಶ್ವಶಾಂತಿ ಸಾರಲೆಂದು ಹಿರೋಶಿಮಾದಲ್ಲಿ ಶಾಂತಿವನ ಉದ್ಯಾನದ ಸ್ಥಾಪನೆಯಾಯಿತು. ಶಾಂತಿವನದ ಮೂಲೆಯಲ್ಲಿ ಅಣುಬಾಂಬಿನ ವಿಧ್ವಂಸಕ್ಕೆ ಸಾಕ್ಷಿ ಯಾಗಿ ಹಿರೋಶಿಮಾ ಶಾಂತಿ ಸ್ಮಾರಕ (A BOMB DOME)
ಸ್ಥಾಪಿಸಲಾಯಿತು. ವಿಕಿರಣದಿಂದ ಉಂಟಾದ ರಕ್ತದ ಕ್ಯಾನ್ಸರ್ ನಿಂದ ಸತ್ತ ಬಾಲಕಿ ಸಜಾಕೊ ಸುನಾಕಿಯ ಸ್ಮರಣಾರ್ಥ ಸ್ಥಾಪಿಸಿದ ಮಕ್ಕಳ ಶಾಂತಿವನವೂ ಇಲ್ಲಿದೆ. ಇಲ್ಲಿ ಪ್ರತಿ ವರ್ಷ ಸರಾಕೋ ನೆನಪಿನಲ್ಲಿ ಮಕ್ಕಳು ಕಾಗದದ ಹಕ್ಕಿಗಳನ್ನು ಇರಿಸುತ್ತಾರೆ. 1964ರಲ್ಲಿ ಉದ್ಯಾನದಲ್ಲಿ ಸ್ಥಾಪಿಸಿದ ಶಾಂತಿಜ್ವಾಲೆ ನಿರಂತರವಾಗಿ ಉರಿಯುತ್ತಲಿದೆ. ಉದ್ಯಾನದ ಮಧ್ಯದಲ್ಲಿ ಸ್ಥಾಪಿಸಲಾದ ಗ್ರಾನೈಟ್ ಶಿಲೆಯ ಎತ್ತರದ ಸ್ತೂಪದಲ್ಲಿ ಸ್ಫೋಟದ ಕಾರಣ ಮಡಿದವರ ಹೆಸರುಗಳನ್ನು ಕೆತ್ತಲಾಗಿದ್ದು ಬುಡದಲ್ಲಿ ಅವರೆಲ್ಲರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಇಂಥ ಘಟನೆ ಎಂದಿಗೂ ಮರುಕಳಿಸದಿರಲಿ ಎಂಬ ಆಶಯ ಬರಹವಿದೆ.
ಇಷ್ಟೆಲ್ಲಾ ಆದರೂ ಅಣ್ವಸ್ತ್ರ ತಯಾರಿಕೆ ಮಾತ್ರ ನಿಂತಿಲ್ಲ. ಅಣ್ವಸ್ತ್ರ ಹೊಂದಿರುವುದು ಮುಂದುವರಿದ ರಾಷ್ಟ್ರಗಳ ಶಕ್ತಿ ಸಾಮರ್ಥ್ಯ ಗಳ ಸಂಕೇತವೆನಿಸಿಕೊಂಡಿದೆ. ದಶಕಗಳ ಹಿಂದೆ ರಷ್ಯಾ ಪರೀಕ್ಷಾರ್ಥ ತಯಾರಿಸಿದ ಬಾಂಬ್ ಹಿರೋಶಿಮಾದ ಮೇಲೆ ಹಾಕಿದ ಬಾಂಬಿಗಿಂತ 4840 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿತ್ತು. ಬಹುತೇಕ ದೇಶಗಳು ಈಗ ಅಣ್ವಸ್ತ್ರಗಳನ್ನು ಹೊಂದಿವೆ. ಭಾರತವೂ ಹಿಂದೆ ಬಿದ್ದಿಲ್ಲ.
ಅಣ್ವಸ್ತ್ರ ಪರೀಕ್ಷೆಗೆ ಅನೇಕ ಜಾಗತಿಕ ನಿರ್ಬಂಧಗಳಿದ್ದರೂ ಬಂಡುಕೋರರ ರಾಷ್ಟ್ರವಾಗಿರುವ ಉತ್ತರ ಕೊರಿಯಾ ತಾನು ಹೈಡ್ರೋಜನ್ ಬಾಂಬ್ ಅನ್ನು ಪರೀಕ್ಷಾರ್ಥ ಸಿಡಿಸಿದ್ದಾಗಿ ಹೇಳಿರುವುದು ವಿಶ್ವದ ಹಲವು ರಾಷ್ಟ್ರಗಳನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಈ ಎಲ್ಲ ದೇಶಗಳೂ ಇದನ್ನು ತೀವ್ರವಾಗಿ ಖಂಡಿಸಿವೆ. ದಕ್ಷಿಣ ಕೊರಿಯಾದ ಪ್ರತಿಭಟನಾಕಾರರು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಪ್ರತಿಕೃತಿಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಶತ್ರು’ ರಾಷ್ಟ್ರಗಳಿಂದ ತನ್ನ ದೇಶಕ್ಕೆ ರಕ್ಷಣೆ ಒದಗಿಸಲು ಹೈಡ್ರೋಜನ್ ಪರೀಕ್ಷೆ ಅನಿವಾರ್ಯವಾಗಿತ್ತು. ಎಂದು ಕಿಮ್ ಜಾಂಗ್ ಉನ್ ಹೇಳಿದ್ದು ಎಲ್ಲ ರಾಷ್ಟ್ರಗಳ ಆತಂಕಕ್ಕೆ ಕಾರಣವಾಗಿದೆ. ಆದರೆ ತೀರ ಇತ್ತೀಚೆಗೆ ತಾನು ಶಾಂತಿ ಬಯಸುತ್ತೇ ನೆಂದು ಹೇಳಿಕೊಂಡ ಕಿಮ್ ಜಾಂಗ್ ಉನ್ ಬದ್ಧ ವೈರಿಗಳಾದ ದಕ್ಷಿಣ ಕೊರಿಯಾ ಮತ್ತು ಅಮೆರಿಕದತ್ತ ಸ್ನೇಹ ಹಸ್ತ ಚಾಚಿದ್ದಾರೆ.
ಆದರೆ ಈ ನಡೆಯನ್ನು ನಂಬಿ ನಿರಾಳವಾಗಿರಲು ಸಾಧ್ಯವಿಲ್ಲ ಎಂಬುದಾಗಿ ಈ ಸರ್ವಾಧಿಕಾರಿ ಈ ಹಿಂದೆ ನಡೆಸಿದ ಕೆಲವು ವಿಲಕ್ಷಣ ಕೃತ್ಯಗಳಿಂದ ತಿಳಿಯಬಹುದು. ತಂದೆ ಕಿಮ್ ಜಾಂಗ್ ಇಲ್ ಸತ್ತಾಗ ಕಂಬನಿ ಮಿಡಿಯದ ಕೆಲವು ಸೇನಾಧಿಕಾರಿ ಗಳನ್ನು ಹಸಿದ ಬೇಟೆ ನಾಯಿಗಳಿಗೆ ಆಹಾರವಾಗುವಂತೆ ಮಾಡಿದ್ದು ಒಂದಾದರೆ, ತನ್ನನ್ನು ಹತ್ಯೆ ಮಾಡಲು ಸಂಚು ಮಾಡಿದ್ದ ಎಂಬ ಆರೋಪದ ಮೇಲೆ ಸ್ವಂತ ಮಾವನನ್ನೇ
ನಗ್ನಗೊಳಿಸಿ ನಾಲ್ಕು ದಿನಗಳ ಕಾಲ ಉಪವಾಸ ಕೆಡವಿ ಅನಂತರ ಬೇಟೆ ನಾಯಿಗಳಿಗೆ ಎಸೆದಿದ್ದ. ಸಭೆಯಲ್ಲಿ ನಿದ್ದೆ ಮಾಡಿದ್ದಕ್ಕೆ ರಕ್ಷಣಾ ಸಚಿವನನ್ನು ಗುಂಡಿಕ್ಕಿ ಕೊಂದಿದ್ದ. ಸೇನಾಧಿಕಾರಿ ಹಾಗೂ ಸರಕಾರಿ ಅಧಿಕಾರಿಗಳ ಹೊರತು ಇತರರು ಕಾರು ಹೊಂದಲು ಅವಕಾಶ ನೀಡದಿದ್ದದ್ದು ಹಾಗೂ ಯಾರೂ ಬೈಬಲ್ ಓದಬಾರದೆಂಬ ಆಜ್ಞೆ ಜಾರಿ ಮಾಡಿದ್ದು ಈತನ ಅಧಿಕಾರದ ಕೆಲವು ವಿಲಕ್ಷಣ ಉದಾಹರಣೆಗಳು.
ಈ ಎಲ್ಲಾ ಹಿನ್ನೆಲೆಯಲ್ಲಿ ನಮ್ಮ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಹಿಂದೊಮ್ಮೆ ವ್ಯಕ್ತ ಪಡಿಸಿದ ಅಭಿಪ್ರಾಯವನ್ನು ಇಲ್ಲಿ ಹೇಳಬೇಕು. ಒಂದು ಖಂಡಾಂತರ ಅಣು ಕ್ಷಿಪಣಿ ತಯಾರಿಸಲು ತಗಲುವ ವೆಚ್ಚದಲ್ಲಿ 20 ಕೋಟಿ ವೃಕ್ಷ ಗಳನ್ನು ಬೆಳೆಸಬಹುದು ಅಥವಾ 10 ಲಕ್ಷ ಜೈವಿಕ ಅನಿಲ ಯಂತ್ರಗಳನ್ನು ಕೊಳ್ಳಬಹುದು, ಇಲ್ಲವೇ 65 ಸಾವಿರ ಆರೋಗ್ಯ ಸೇವಾ ಕೇಂದ್ರಗಳನ್ನು ಅಥವಾ 3,40,000 ಶಾಲೆಗಳನ್ನು ತೆರೆಯ ಬಹುದು ಎಂದು ಹೇಳಿದ ಅವರ ಮಾತುಗಳು ಎಂದೆಂದಿಗೂ ಪ್ರಸ್ತುತ. ಬಾಂಬ್ ಸಿಡಿಸಿ ಜನರ ಬದುಕನ್ನು ನರಕಕ್ಕೆ ತಳ್ಳುವುದರ ಬದಲು ಮೇಲೆ ಹೇಳಿದ ಉಪಕ್ರಮ ಅನುಸರಿಸಿದರೆ ಅದು ಜನರ ಬದುಕಿಗೆ ಬೆಳಕಾಗಬಹುದು ಎಂಬುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ.
*ಕೆ.ಶಾರದಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.