ಅವಕಾಶವೇ ಬೀಳಲಿ ಮೇಲೆ…
Team Udayavani, Aug 7, 2018, 6:00 AM IST
ಪ್ರತಿಯೊಬ್ಬ ಎಂಜಿನಿಯರ್ ವಿದ್ಯಾರ್ಥಿಯ ಕನಸು, ಕ್ಯಾಂಪಸ್ ಸೆಲೆಕ್ಷನ್ ಆಗೋದು. ಈ ಕನಸು ವಿದ್ಯಾರ್ಥಿಯದು ಮಾತ್ರವೇ ಆಗಿರುವುದಿಲ್ಲ, ವಿದ್ಯಾರ್ಥಿಯ ಪಾಲಕರದೂ ಆಗಿರುತ್ತದೆ. ಹಿಂದೆಲ್ಲಾ ಕ್ಯಾಂಪಸ್ ಸೆಲೆಕ್ಷನ್ ಆಗದಿದ್ದರೆ ಎಂಜಿನಿಯರಿಂಗ್ ವಿದ್ಯಾರ್ಥಿಯ ಜೀವನವೇ ಮುಗಿದು ಹೋಯ್ತು ಎಂಬಂಥ ವಾತಾವರಣವಿತ್ತು. ಆದರೆ, ಈಗ ಹಾಗಿಲ್ಲ. ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಭಾಗವಹಿಸದೆಯೂ ಉದ್ಯೋಗ ಭದ್ರತೆ ಹೊಂದಲು ಮಾರ್ಗವಿದೆ…
ಎಂಜಿನಿಯರ್ ಪದವಿ ಯಶಸ್ವಿಯಾಗಿ ಮುಗಿಸುವ ಮೊದಲೇ ಕೆಲಸ ಪಡೆದುಕೊಳ್ಳಲು ಯಾರಿಗೆ ತಾನೇ ಆಸಕ್ತಿ ಇರೋದಿಲ್ಲ ಹೇಳಿ? ಕ್ಯಾಂಪಸ್ ಸೆಲೆಕ್ಷನ್ ಎನ್ನುವುದು ಒಂದು ರೀತಿಯಲ್ಲಿ ಉದ್ಯೋಗ ಭದ್ರತೆ. ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಆಯ್ಕೆಯಾಗದವರು ಓದು ಮುಗಿಸಿ ಎಲ್ಲೆಲ್ಲಿ ಇಂಟರ್‌ವ್ಯೂ ಕರೆದಿದ್ದಾರೆ ಎಂಬುದನ್ನು ಪರಿಚಿತರ ಮುಖಾಂತರ ಅಥವಾ ದಿನಪತ್ರಿಕೆ, ಇಂಟರ್‌ನೆಟ್ ಮುಖಾಂತರ ತಿಳಿದುಕೊಂಡು, ಇಂಟರ್‌ವ್ಯೂ ಹಾಜರಾಗುತ್ತಿರಬೇಕು. ಕೆಲಸ ಸಿಗುವವರೆಗೂ ಹೀಗೆ ಮುಂದುವರಿಯುತ್ತಿರಬೇಕಾಗುತ್ತದೆ. ಇವೆಲ್ಲಾ ತಾಪತ್ರಯಗಳಿಂದ ಪಾರಾಗಲು ಇರುವ ಒಂದೇ ದಾರಿ “ಕ್ಯಾಂಪಸ್ ಸೆಲೆಕ್ಷನ್’. ಈ ವರ್ಷ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಆಯ್ಕೆಯಾಗಿದ್ದು ಶೇ. 42ರಷ್ಟು ಮಂದಿ. ಕಳೆದ 5 ವರ್ಷಗಳಲ್ಲೇ ಇದು ದಾಖಲೆಯ ಪ್ರಮಾಣ. ಕಳೆದ ವರ್ಷ ಈ ಪ್ರಮಾಣ ಶೇ. 38ರಷ್ಟಿತ್ತು.
ಏರಿಕೆಗೆ ಕಾರಣವಿದೆ
ಕ್ಯಾಂಪಸ್ ಸೆಲೆಕ್ಷನ್‌ಗೆ ಬಂದ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಆರಿಸಿಕೊಂಡಿದ್ದು ಪ್ರಮುಖ ಕಾರಣ. ಅದರ ಜೊತೆಗೆ ಎಂಜಿನಿಯರಿಂಗ್ ಕಾಲೇಜುಗಳು ಮುಚ್ಚುತ್ತಿರುವುದು ಮತ್ತು ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿರುವುದು ಇತರೆ ಕಾರಣಗಳು. ಅಖೀಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯ ಪ್ರಕಾರ, 2015ರಲ್ಲಿ ಭಾರತದಾದ್ಯಂತ ಒಟ್ಟು 3400 ಎಂಜಿನಿಯರಿಂಗ್ ಕಾಲೇಜುಗಳಿದ್ದವು. ಈ ವರ್ಷ ಅದರ ಸಂಖ್ಯೆ 3225ಕ್ಕೆ ಇಳಿದಿದೆ. ಐಐಟಿ ಉಪನ್ಯಾಸಕರೊಬ್ಬರು ಅಭಿಪ್ರಾಯ ಪಡುವಂತೆ, ಇಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಗುಣಮಟ್ಟದ ಕಾಲೇಜುಗಳು ಮಾತ್ರವೇ ಉಳಿದುಕೊಳ್ಳುತ್ತವೆ. ಮುಚ್ಚುವಿಕೆಯಿಂದ ತಪ್ಪಿಸಿಕೊಳ್ಳಬೇಕೆಂದರೆ ಕಳಪೆ ಕಾಲೇಜುಗಳು ಅಗತ್ಯ ಸೌಲಭ್ಯ ಮತ್ತು ಗುಣಮಟ್ಟದ ಶಿಕ್ಷಣ ನೀಡಲೇಬೇಕಾಗುತ್ತದೆ.
ಸೆಲೆಕ್ಷನ್ ಆಗದಿದ್ರೆ ಚಿಂತೆ ಬೇಡ
ಇಂದಿನ ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್ ಒಂದನ್ನೇ ನೆಚ್ಚಿಕೊಂಡಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಭವಿಷ್ಯವನ್ನು ಕಂಡುಕೊಳ್ಳಲು ಇಂಟರ್ನ್ಶಿಪ್ ದಾರಿಯೊಂದನ್ನೂ ಹುಡುಕಿಕೊಂಡಿದ್ದಾರೆ. ಸರ್ಕಾರ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಕಡ್ಡಾಯ ಮಾಡಿದ ಮೇಲೆ ವಿದ್ಯಾರ್ಥಿಗಳು ನಾನಾ ಕ್ಷೇತ್ರದ ಕಂಪನಿಗಳಲ್ಲಿ ನಿಗದಿತ ಕಾಲ ಕೆಲಸ ಮಾಡಿ ವೃತ್ತಿಪರ ಅನುಭವವನ್ನು ಪಡೆಯುವುದು ಸಾಧ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳು ವೃತ್ತಿಪರ ಕೌಶಲ್ಯವನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಪಡೆಯುತ್ತಿದ್ದಾರೆ. ಇದರಿಂದಾಗಿ ಯಶಸ್ವಿಯಾಗಿ ಇಂಟರ್ನ್ಶಿಪ್ ಪೂರೈಸಿದ ವಿದ್ಯಾರ್ಥಿಗಳನ್ನು ಕಂಪನಿಗಳೇ ಕರೆದು ನೌಕರಿ ನೀಡುತ್ತಿವೆ. ಹೀಗಾಗಿ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಆಯ್ಕೆಯಾಗುತ್ತಿದ್ದವರಲ್ಲಿ ಅನೇಕರು ಇಂಟರ್ನ್ಶಿಪ್ ಮೂಲಕ ನೌಕರಿ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೇ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿರುವುದು.
3.8 ಲಕ್ಷ ಇಂಟರ್ನ್ಶಿಪ್ ವಿದ್ಯಾರ್ಥಿಗಳು
ಈ ವರ್ಷ ಇಂಟರ್ನ್ಶಿಪ್ ಮಾಡಿರುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 3.8 ಲಕ್ಷ. ಹೀಗಾಗಿ ಕ್ಯಾಂಪಸ್ ಸೆಲೆಕ್ಷನ್ ಹೊರತಾಗಿ ಈ ಬಾರಿ ಅತಿ ಹೆಚ್ಚು ವಿದ್ಯಾರ್ಥಿಗಳು ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ.
ಇಂಟರ್‌ನೆಟ್ ಎಂಬ ಗುರು
ಉತ್ತಮ ಬೋಧಕ ವರ್ಗ, ಸವಲತ್ತುಗಳು ಇಲ್ಲದೆಯೂ ವಿದ್ಯಾರ್ಥಿಗಳು ಕಲಿಯುವ ಮಾರ್ಗಗಳು ಇಂದಿನ ಯುಗದಲ್ಲಿ ಹಲವಾರಿವೆ. ತರಗತಿಯಲ್ಲಿ ಮಾಡಿದ ಪಾಠ ಸರಿಯಾಗಿರಲಿಲ್ಲ ಎಂದು ತೋರಿದರೆ ವಿದ್ಯಾರ್ಥಿ ಇಂಟರ್‌ನೆಟ್ ಮೂಲಕ ತನಗೆ ಬೇಕಾದ ವಿಷಯದ ಕುರಿತು ತಿಳಿದುಕೊಳ್ಳಬಹುದು. ಇಂಟರ್‌ನೆಟ್ ಶಿಕ್ಷಣದ ಹಲವಾರು ಸಾಧ್ಯತೆಗಳನ್ನು ತೋರಿಸಿಕೊಟ್ಟಿದೆ. ಇವೆಲ್ಲದರಿಂದಾಗಿ ವಿದ್ಯಾರ್ಥಿಗಳು ಓದುತ್ತಿರುವಾಗಲೇ ವೃತ್ತಿಪರ ಜ್ಞಾನವನ್ನು ಸಂಪಾದಿಸಿಕೊಳ್ಳಬಹುದು. ಅಭ್ಯರ್ಥಿಗೆ ಪಠ್ಯದಿಂದ ಹೊರಗೆ ಎಷ್ಟು ತಿಳಿದಿದೆ ಎಂದು ಕಂಪನಿಗಳು ನೋಡುವುದರಿಂದ ಅಂಕಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ವೃತ್ತಿಪರ ಕೌಶಲ್ಯ ಪಡೆದಿದೆ.
ಕ್ಯಾಂಪಸ್ ಸೆಲೆಕ್ಷನ್ ಆದ ವಿದ್ಯಾರ್ಥಿಗಳ ಅಂಕಿ ಅಂಶ
ಇಸವಿ ಒಟ್ಟು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು
2012-13 9,50,438 2,73,631 (28.7%)
2013-14 9,24,898 2,95,505 (31.95%)
2014-15 10,24,989 3,34,659 (32.65%)
2015-16 9,67,835 3,61,201 (37.32%)
2016-17 9,44,391 3,62,571 (38.39%)
2017-18 8,75,234 3,65,342 (41.74%)
ವಿದ್ಯಾ ಶಂಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.