ಹಣ ಗಳಿಕೆಯೇ ಪರಮ ಗುರಿ
Team Udayavani, Aug 7, 2018, 12:03 PM IST
ಬೆಂಗಳೂರು: ಯುವಜನತೆ ಹಣ ಗಳಿಸುವ ಏಕೈಕ ಉದ್ದೇಶದಿಂದ ಐಟಿ, ಬಿಟಿ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. ರಾಜ್ಯ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕವು ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಅದರಲ್ಲೂ ಬೆಂಗಳೂರು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಹೀಗಿರುವಾಗ ಯುವಜನತೆಗೆ ಹೆಚ್ಚಾಗಿ ಐಟಿ, ಬಿಟಿ ಕ್ಷೇತ್ರಗಳತ್ತ ಮುಖ ಮಾಡದೆ ಸಂಶೋಧನಾ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳಬೇಕು. ಐಟಿ, ಬಿಟಿ ಕ್ಷೇತ್ರದ ಉದ್ಯೋಗಿಗಳೂ ಸಂಶೋಧನೆ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು. ಇದಕ್ಕೆ ಅಗತ್ಯವಿರುವ ಸಹಕಾರವನ್ನು ಸರ್ಕಾರ ಒದಗಿಸಲಿದೆ ಎಂದು ಹೇಳಿದರು.
ಭಾರತ ನಂ.1 ಆಗಬೇಕು: ಭಾರತ ರತ್ನ ಪ್ರೊ. ಸಿ.ಎನ್.ಆರ್.ರಾವ್ ಮಾತನಾಡಿ, ವಿಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿ ಈಗಾಗಲೇ ಚೀನಾ ಮುಂದಿದ್ದರೂ ಇನ್ನಷ್ಟು ಸಂಶೋಧನೆ ಕೈಗೊಳ್ಳಬೇಕೆಂಬ ಹುಮ್ಮಸ್ಸಿನಲ್ಲಿದೆ. ಅದರಂತೆ ಭಾರತವೂ ವಿಜ್ಞಾನ ಸಂಶೋಧನೆಯಲ್ಲಿ ನಂ.1 ಸ್ಥಾನಕ್ಕೇರಬೇಕು. ವಿಜ್ಞಾನ ಬೆಳೆದರೆ ಉಳಿದ ಕ್ಷೇತ್ರಗಳೂ ಬೆಳೆಯುತ್ತವೆ ಎಂದರು.
74 ವರ್ಷಗಳ ಹಿಂದೆ ಸರ್ ಸಿ.ವಿ.ರಾಮನ್ ಅವರ ಭಾಷಣ ಕೇಳಿದಾಗ ಆದರೆ ವಿಜ್ಞಾನಿಯೇ ಆಗಬೇಕೆಂದು ನಾನು ನಿರ್ಧರಿಸಿದ್ದೆ. ಅವರೂ ಸೇರಿದಂತೆ ಹಲವು ಮಹನೀಯರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಸಾರ್ವಜನಿಕ ಉದ್ದಿಮೆಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅನುದಾನದಡಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಅನುರಾಗ್ ಕುಮಾರ್, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕಾರ್ಯದರ್ಶಿ ಪ್ರೊ.ಎಸ್.ಸುಬ್ರಮಣಿಯನ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯನ್ನು ನಾನೇ ಓದಿಸುತ್ತೇನೆ: ನೀಟ್ ವ್ಯವಸ್ಥೆ ಜಾರಿಯಾದ ಬಳಿಕ ಬಡ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿದ್ದು, ಮ್ಯಾನೇಜ್‌ಮೆಂಟ್ ಕೋಟಾ ಸೀಟು ಪಡೆಯುವುದು ಅನಿವಾರ್ಯವಾಗಿದೆ. ನವಲಗುಂದದ ವಿದ್ಯಾರ್ಥಿನಿಯೊಬ್ಬರು ವೈದ್ಯ ಪದವಿ ಓದುವ ಆಸೆಯಿಂದ ನೆರವು ಕೇಳಿ ನನ್ನ ಬಳಿ ಬಂದಿದ್ದರು.
ನೀಟ್‌ನಲ್ಲಿ ಕಡಿಮೆ ಅಂಕ ಪಡೆದ ಕಾರಣ ಅವರಿಗೆ ಮ್ಯಾನೇಜ್‌ಮೆಂಟ್ ಸೀಟು ಸಿಕ್ಕಿದೆ. ತಂದೆ-ತಾಯಿ ಕಳೆದುಕೊಂಡಿರುವ ಅವರು ತಮ್ಮ ತಾಯಿಗೆ ಕೊಟ್ಟ ಮಾತಿನಂತೆ ವೈದ್ಯರಾಗಲು ಬಯಸಿದ್ದಾರೆ. ಹಾಗಾಗಿ ನಾನೇ 40 ಲಕ್ಷ ರೂ. ಶುಲ್ಕ ಪಾವತಿಸಿ ಓದಿಸಲು ನಿರ್ಧರಿಸಿದ್ದೇನೆ,’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದರು.
ಪ್ರಶಸ್ತಿಗೆ ಭಾಜನರಾದ ಸಾಧಕರ ವಿವರ: ಧಾರವಾಡದ ಡಾ.ಎಂ.ಐ. ಸವದತ್ತಿ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಪ್ರೊ.ಬಿ.ಜಿ. ಮೂಲಿಮನಿ ಹಾಗೂ ನಬಾರ್ಡ್ ಹಿರಿಯ ಪ್ರಾಧ್ಯಾಪಕ ಪ್ರೊ.ಎಸ್.ಅಯ್ಯಪ್ಪನ್ ಅವರಿಗೆ ಸರ್ ಎಂ.ವಿಶ್ವೇಶ್ವರಯ್ಯ ಹಿರಿಯ ವಿಜ್ಞಾನಿ ಪ್ರಶಸ್ತಿ ವಿತರಿಸಿ 2 ಲಕ್ಷ ರೂ. ನಗದು ಪುರಸ್ಕಾರ ನೀಡಲಾಯಿತು. ನಿಮ್ಹಾನ್ಸ್‌ನ ನರವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಗುರುರಾಜ್ ಹಾಗೂ ಐಐಎಸ್ಸಿ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಎಚ್.ಎ.ರಂಗನಾಥ್ ಅವರಿಗೆ 1.50 ಲಕ್ಷ ರೂ. ನಗದು ಸೇರಿ “ಡಾ. ರಾಜಾ ರಾಮಣ್ಣ ಹಿರಿಯ ವಿಜ್ಞಾನಿ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಮಂಗಳೂರು ವಿವಿ ಪ್ರಾಧ್ಯಾಪಕ ಡಾ.ಎನ್.ಕರುಣಾಕರ, ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ- ಕರ್ನಾಟಕ (ಎನ್‌ಐಟಿ-ಕೆ) ಸಹ ಪ್ರಾಧ್ಯಾಪಕ ಡಾ.ಅರುಣ್ ಮೋಹನ್ ಇಸೂರ್, ನಿಮ್ಹಾನ್ಸ್‌ನ ಪ್ರಾಧ್ಯಾಪಕ ಡಾ.ಜಗದೀಶ ತೀರ್ಥಹಳ್ಳಿ, ಐಐಎಸ್ಸಿ ಪ್ರಾಧ್ಯಾಪಕ ಪ್ರೊ.ಪ್ಯಾಟ್ರಿಕ್ ರೇಮಂಡ್ ಡಿ’ಸಿಲ್ವಾ, ಬೆಂಗಳೂರು ಕೃಷಿ ವಿವಿ ಪ್ರಾಧ್ಯಾಪಕ ಡಾ.ಎನ್.ನಟರಾಜ ಕರಬ ಅವರಿಗೆ ತಲಾ ಒಂದು ಲಕ್ಷ ರೂ. ನಗದು ಸೇರಿದಂತೆ “ಸರ್ ಸಿ.ವಿ.ರಾಮನ್ ಯುವ ವಿಜ್ಞಾನಿ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಐಐಎಸ್ಸಿ ಸಹ ಪ್ರಾಧ್ಯಾಪಕ ಪ್ರೊ.ಪ್ರವೀಣ್ ಸಿ. ರಾಮಮೂರ್ತಿ, ಸುರತ್ಕಲ್‌ನ ಎನ್‌ಐಟಿ-ಕೆ ಸಹ ಪ್ರಾಧ್ಯಾಪಕಿ ಡಾ.ಕೆ.ವಿದ್ಯಾ ಶೆಟ್ಟಿ, ಐಐಎಸ್ಸಿ ಸಹ ಪ್ರಾಧ್ಯಾಪಕ ಚಂದ್ರ ಆರ್. ಮೂರ್ತಿ ಅವರಿಗೆ ಒಂದು ಲಕ್ಷ ರೂ. ನಗದು ಒಳಗೊಂಡ “ಪ್ರೊ.ಸತೀಶ್ ಧವನ್ ಯುವ ಎಂಜಿನಿಯರ್ ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಜವಾಹರ ಲಾಲ್ ನೆಹರೂ ಅನ್ವಯಿಕ ವಿಜ್ಞಾನ ಸಂಶೋಧನಾ ಕೇಂದ್ರದ ಡೀನ್ ಪ್ರೊ. ಮನೀಶಾ ಎಸ್. ಇನಾಂದಾರ್ ಅವರಿಗೆ ಒಂದು ಲಕ್ಷ ರೂ. ನಗದು ಒಳಗೊಂಡ “ಡಾ.ಕಲ್ಪನಾ ಚಾವ್ಲಾ ಯುವ ಮಹಿಳಾ ವಿಜ್ಞಾನಿ ರಾಜ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.