ಟಗರು ಹೊಸ ಎನರ್ಜಿ ಕೊಟ್ಟಿದೆ
Team Udayavani, Aug 8, 2018, 10:00 PM IST
ಶಿವರಾಜಕುಮಾರ್ ಅಭಿನಯದ “ಟಗರು’ ನಾಳೆ ಯಶಸ್ವಿಯಾಗಿ 25ನೇ ವಾರ ಮುಗಿಸಲಿದೆ. ಮೈಸೂರಿನ ಶಾಂತಲಾ ಚಿತ್ರಮಂದಿರದಲ್ಲಿ ಈ ಚಿತ್ರವು ಯಶಸ್ವಿ 25 ವಾರಗಳ ಪ್ರದರ್ಶನವಾಗಿದ್ದು, ಆ ಚಿತ್ರಮಂದಿರದ ಇತಿಹಾಸದಲ್ಲೇ 25 ವಾರ ಪ್ರದರ್ಶನ ಕಂಡ ಮೊದಲ ಚಿತ್ರ “ಟಗರು’ ಎನ್ನುತ್ತಾರೆ ನಿರ್ಮಾಪಕ ಶ್ರೀಕಾಂತ್. ಈ ಸಂಭ್ರಮವನ್ನು ಶಿವರಾಜಕುಮಾರ್ ಅವರ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಆಚರಿಸುವುದಕ್ಕೆ ಸಜ್ಜಾಗುತ್ತಿದ್ದಾರೆ.
ಇದೇ ಭಾನುವಾರ, ಶಿವಸೈನ್ಯ ವತಿಯಿಂದ ಮೈಸೂರಿನ ಶಕ್ತಿಧಾಮದಲ್ಲಿರುವವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಇನ್ನು ಶಾಂತಲಾ ಚಿತ್ರಮಂದಿರದಲ್ಲಿ ಚಿತ್ರ ನೋಡುವುದಕ್ಕೆ ಬರುವ ಪ್ರೇಕ್ಷಕರಿಗೆ ಸಿಹಿ ಹಂಚಲಾಗುತ್ತಿದೆ. ಅಷ್ಟೇ ಅಲ್ಲ, ಚಾಮರಾಜನಗರದಲ್ಲೂ “ಟಗರು’ 25 ವಾರ ಓಡಿದ ಖುಷಿಗೆ ಸಿಹಿ ಹಂಚಲಾಗುತ್ತಿದೆ. ತಮ್ಮದೊಂದು ಚಿತ್ರ ಹೀಗೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವುದು ಸಹಜವಾಗಿಯೇ ಶಿವರಾಜಕುಮಾರ್ ಅವರಿಗೆ ಖುಷಿ ತಂದಿದೆ.
“ಒಂದು ಚಿತ್ರ ನೂರು ದಿನ ಓಡುವುದೇ ಕಷ್ಟವಾಗಿರುವಾಗ, 25 ವಾರ ಓಡಿದರೆ ಯಾರಿಗೆ ಸಂತೋಷವಾಗುವುದಿಲ್ಲ ಹೇಳಿ. ಈ ಗೆಲುವು ನನಗೊಂದು ಹೊಸ ಎನರ್ಜಿ ಕೊಟ್ಟಿದೆ. ಈ ಕ್ರೆಡಿಟ್ ಸೂರಿ ಮತ್ತು ಚಿತ್ರತಂಡದವರಿಗೆ, ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರ ನೋಡಿ ಗೆಲ್ಲಿಸಿದ ಅಭಿಮಾನಿಗಳಿಗೆ ಹೋಗಬೇಕು. ಟಗರು ಶಿವ ಎನ್ನುವುದು ವಿಭಿನ್ನವಾದ ಪಾತ್ರ. ಜನ ಆ ಪಾತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗೆ ಇತ್ತು.
ಅದಕ್ಕೆ ಸರಿಯಾಗಿ ನನ್ನ ಪಾತ್ರವನ್ನು ಬಹಳ ಇಷ್ಟಪಟ್ಟಿದ್ದಾರೆ. ಬರೀ ನನ್ನ ಪಾತ್ರವಷ್ಟೇ ಅಲ್ಲ, ಡಾಲಿ, ಕಾನ್‌ಸ್ಟೆಬಲ್ ಸರೋಜ, ಕಾಕ್ರೋಚ್, ಮಾನ್ವಿತಾ ಅವರ ಪಾತ್ರಗಳನ್ನು ಸಹ ಇಷ್ಟಪಟ್ಟು ಸ್ವೀಕರಿಸಿದ್ದಾರೆ. ಈ ಯಶಸ್ಸು ಎಲ್ಲರಿಗೂ ಸಲ್ಲಬೇಕು’ ಎನ್ನುತ್ತಾರೆ ಶಿವರಾಜಕುಮಾರ್. “ಟಗರು’ ಬಿಡುಗಡೆಯಾಗುವ ಮುನ್ನ, ಈ ಚಿತ್ರವನ್ನು ಜನ ಹೇಗೆ ಸ್ವೀಕರಿಸಬಹುದು ಎಂದು ಶಿವರಾಜಕುಮಾರ್ ಅವರಿಗೆ ಅಳುಕಿತ್ತಂತೆ. “ಸಿನಿಮಾ ಆಗುವ ಸಂದರ್ಭದಲ್ಲೇ ಜನ ಹೇಗೆ ಸ್ವೀಕರಿಸಬಹುದು ಎಂದು ಚರ್ಚೆಯಾಗಿತ್ತು.
ಆದರೆ, ಜನ ಚಿತ್ರ ನೋಡುವ ರೀತಿ ಬದಲಾಗಿದೆ. ನನ್ನ ಕೆರಿಯರ್‌ನಲ್ಲಿ ಸಾಕಷ್ಟು ಸೋಲು, ಗೆಲುವುಗಳನ್ನು ಕಂಡಿದ್ದೀನಿ. ಆದರೆ, ಇದೊಂದು ವಿಭಿನ್ನವಾದ ಗೆಲುವು. ಹಾಗಾಗಿ ಬಹಳ ಖುಷಿ ಇದೆ’ ಎನ್ನುತ್ತಾರೆ ಶಿವರಾಜಕುಮಾರ್. “ಟಗರು’ ಚಿತ್ರದಲ್ಲಿ ಶಿವರಾಜಕುಮಾರ್ ಜೊತೆಗೆ ಭಾವನಾ ಮೆನನ್, ಮಾನ್ವಿತಾ ಹರೀಶ್, ಧನಂಜಯ್, ವಸಿಷ್ಠ ಸಿಂಹ, ದೇವರಾಜ್ ಮುಂತಾದವರು ನಟಿಸಿದ್ದು, ಚಿತ್ರಕ್ಕೆ ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಮತ್ತು ಚರಣ್ ರಾಜ್ ಅವರ ಸಂಗೀತವಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.