ದಳ ಒಗ್ಗೂಡಿಸಲು ಹಳ್ಳಿಹಕ್ಕಿಗೆ ಪ್ರಥಮ ವಿಘ್ನ
Team Udayavani, Aug 9, 2018, 7:00 AM IST
ಬೆಂಗಳೂರು: ಜನತಾ ಪರಿವಾರವನ್ನು ಮತ್ತೆ ಒಗ್ಗೂಡಿಸಲು ಮುಂದಾಗಿರುವ ಜೆಡಿಎಸ್‌ನ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರಿಗೆ ಪಕ್ಷದ ಒಳಗೆ ಮತ್ತು ಹೊರಗೆ ಆರಂಭದಲ್ಲೇ ಕೆಲವು ತೊಡಕು ಎದುರಾಗಿದ್ದು, ಸದ್ಯಕ್ಕೆ ಈ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಕಾಣಿಸಿಕೊಳ್ಳುತ್ತಿಲ್ಲ.
ಜನತಾ ಪರಿವಾರ ತೊರೆದಿರುವ ಅನೇಕ ನಾಯಕರು ಕಾಂಗ್ರೆಸ್‌ನಲ್ಲಿದ್ದಾರೆ. ಇನ್ನೊಂದೆಡೆ ಇತ್ತೀಚಿನ ವರ್ಷಗಳಲ್ಲಿ ತಮ್ಮ ಕುಟುಂಬದ ವಿರುದ್ಧ ಆರೋಪಗಳನ್ನು ಮಾಡಿ ಜೆಡಿಎಸ್ ತೊರೆದಿರುವವರನ್ನು ಪಕ್ಷಕ್ಕೆ ಆಹ್ವಾನಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಸಕ್ತಿ ತೋರುತ್ತಿಲ್ಲ. ಅದಕ್ಕೂ ಮೀರಿ ಕಾಂಗ್ರೆಸ್‌ನಲ್ಲಿರುವವರನ್ನು ಈಗ ಪಕ್ಷಕ್ಕೆ ಸೇರಿಸಿಕೊಂಡರೆ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗಬಹುದು. ಅಲ್ಲದೆ, ಮುಂಬರುವ ಲೋಕಸಭೆ ಚುನಾವಣೆ ಮೈತ್ರಿಗೂ ಸಮಸ್ಯೆ ಎದುರಾಗಬಹುದು.
ಈ ಕಾರಣಕ್ಕಾಗಿ ಜನತಾ ಪರಿವಾರನ್ನು ಒಗ್ಗೂಡಿಸಲು ಮುಂದಾಗಿರುವ ಎಚ್.ವಿಶ್ವನಾಥ್ ಅವರು ತಮ್ಮ ಈ ನಿರ್ಧಾರವನ್ನು ಕೆಲ ತಿಂಗಳ ಮಟ್ಟಿಗೆ ಮುಂದೂಡಲು ತೀರ್ಮಾನಿಸಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಪರಿಸ್ಥಿತಿ ನೋಡಿಕೊಂಡು ಈ ನಿಟ್ಟಿನಲ್ಲಿ ಮುಂದುವರಿಯಲು ತೀರ್ಮಾನಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇಕ್ಕಟ್ಟಿನಲ್ಲಿ ಮಾಜಿ ಶಾಸಕರು:
ದೇವೇಗೌಡರ ಕುಟುಂಬದೊಂದಿಗೆ ಜಗಳವಾಡಿಕೊಂಡು ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕರಾದ ನಾಗಮಂಗಲ ಕ್ಷೇತ್ರದ ಎನ್.ಚೆಲುವರಾಯಸ್ವಾಮಿ, ಮಾಗಡಿಯ ಎಚ್.ಸಿ.ಬಾಲಕೃಷ್ಣ ಮತ್ತು ಶ್ರೀರಂಗಪಟ್ಟಣದ ರಮೇಶ್ ಬಂಡಿಸಿದ್ದೇಗೌಡ ಇದೀಗ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಈ ಮೂವರೂ ಹಳೇ ಮೈಸೂರು ಭಾಗಕ್ಕೆ ಸೇರಿದವರಾಗಿದ್ದು, ಒಕ್ಕಲಿಗ ಸಮುದಾಯದವರಾದರೂ ದೇವೇಗೌಡರ ಕುಟುಂಬವನ್ನು ತಿರಸ್ಕರಿಸಿದರೆ ತಮಗೆ ರಾಜಕೀಯವಾಗಿ ಉಳಿಗಾಲವಿಲ್ಲ ಎಂಬುದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟವಾಗಿದೆ. ಮೂವರೂ ಸೋತು ಮನೆ ಸೇರಿದ್ದಾರೆ.
ಇವರಿಗೆ ಬಿಜೆಪಿಯಿಂದ ಆಹ್ವಾನ ಇದೆಯಾದರೂ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ. ದೇವೇಗೌಡರ ಕುಟುಂಬವನ್ನು ಎದುರು ಹಾಕಿಕೊಂಡು ಕಾಂಗ್ರೆಸ್‌ನಲ್ಲೇ ಗೆಲ್ಲಲು ಸಾಧ್ಯವಾಗಿಲ್ಲ ಎಂದಾದರೆ ಬಿಜೆಪಿಯಲ್ಲಿ ಅದು ಸಾಧ್ಯವೇ ಎಂಬ ಆತಂಕ ಕಾಣಿಸಿಕೊಂಡಿದೆ. ಮತ್ತೆ ತಾವಾಗಿಯೇ ಜೆಡಿಎಸ್ ಸೇರಲು ಮನಸ್ಸು ಒಪ್ಪುತ್ತಿಲ್ಲ. ಆ ಪಕ್ಷದಿಂದ ಆಹ್ವಾನ ಬಂದರೆ ನೋಡೋಣ ಎಂಬ ಯೋಚನೆಯಲ್ಲಿದ್ದಾರೆ. ಆದರೆ, ಬರುವುದಾದರೆ ಅವರಾಗಿಯೇ ಬರಲಿ, ಪಕ್ಷದಿಂದ ಆಹ್ವಾನ ನೀಡುವುದು ಬೇಡ ಎಂಬ ಸೂಚನೆಯನ್ನು ಎಚ್.ವಿಶ್ವನಾಥ್ ಅವರಿಗೆ ದೇವೇಗೌಡರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇವರಲ್ಲದೆ, ಪುಲಿಕೇಶಿನಗರದ ಅಖಂಡ ಶ್ರೀನಿವಾಸಮೂರ್ತಿ ಮತ್ತು ಹಗರಿಬೊಮ್ಮನಹಳ್ಳಿಯ ಭೀಮಾ ನಾಯಕ್ ಕಾಂಗ್ರೆಸ್‌ನಿಂದ ಗೆದ್ದಿದ್ದು, ಅವರು ಜೆಡಿಎಸ್‌ಗೆ ಬರುವ ಸಾಧ್ಯತೆ ಇಲ್ಲ. ಕಳೆದ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಜೆಡಿಎಸ್ ಪಕ್ಷವನ್ನು ಬೆಂಬಲಿಸದ ಕಾರಣ ಇಕ್ಬಾಲ್ ಅನ್ಸಾರಿಯನ್ನು ಸೇರಿಸಿಕೊಳ್ಳಲು ದೇವೇಗೌಡರು ಆಸಕ್ತಿ ತೋರುತ್ತಿಲ್ಲ.
ಸರ್ಕಾರಕ್ಕೆ ತೊಡಕಾಗಬಹುದೆಂಬ ಆತಂಕ
ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಪ್ರಮುಖರ ಪೈಕಿ ಡಾ.ಎಚ್.ಸಿ.ಮಹದೇವಪ್ಪ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ತಣ್ಣಗಾಗಿದ್ದಾರೆ.
ಎಚ್.ಎಸ್.ಮಹಾದೇವಪ್ರಸಾದ್ ಪತ್ನಿ ಗೀತಾ ಮಹದೇವ ಪ್ರಸಾದ್ ಕೂಡ ಸೋತಿದ್ದು, ಇವರನ್ನು ಮತ್ತೆ ಜೆಡಿಎಸ್‌ಗೆ ಅಹ್ವಾನಿಸಿ ಹಳೇ ಮೈಸೂರು ಭಾಗದಲ್ಲಿ ದಲಿತ ಮತ್ತು ಲಿಂಗಾಯತ ಮತಗಳನ್ನು ಹೆಚ್ಚಿಸಿಕೊಳ್ಳಲು ಯೋಚಿಸಿದ್ದರು. ಆದರೆ, ಅವರಿಬ್ಬರೂ ಮಿತ್ರಪಕ್ಷ ಕಾಂಗ್ರೆಸ್‌ನಲ್ಲಿರುವುದರಿಂದ ಜೆಡಿಎಸ್‌ಗೆ ಸೇರಿಸಿಕೊಂಡರೆ ಸಮ್ಮಿಶ್ರ ಸರ್ಕಾರಕ್ಕೆ ತೊಡಕಾಗಬಹುದು ಎಂಬ ಆತಂಕ ಕಾಣಿಸಿಕೊಂಡಿದೆ.
ವಜ್ಜಲ್, ಖೂಬಾ ಸೆಳೆಯಲು ಯೋಚನೆ
ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಲಿಂಗಸ್ಗೂರಿನ ಮಾನಪ್ಪ ವಜ್ಜಲ್, ರಾಯಚೂರಿನ ಡಾ.ಶಿವರಾಜ್ ಪಾಟೀಲ್ ಮತ್ತು ಬಸವ ಕಲ್ಯಾಣದ ಮಲ್ಲಿಕಾರ್ಜುನ ಖೂಬಾ ಪೈಕಿ ಶಿವರಾಜ್ ಪಾಟೀಲ್ ಮಾತ್ರ ಗೆದ್ದಿದ್ದಾರೆ. ಹೀಗಾಗಿ ಮಾನಪ್ಪ ವಜ್ಜಲ್ ಮತ್ತು ಮಲ್ಲಿಕಾರ್ಜುನ ಖೂಬಾ ಅವರನ್ನು ಜೆಡಿಎಸ್‌ಗೆ ಕರೆಸಿಕೊಳ್ಳುವ ಬಗ್ಗೆ ಯೋಚಿಸಿರುವ ವಿಶ್ವನಾಥ್, ದೇವೇಗೌಡರು ಏನು ನಿಲುವು ಕೈಗೊಳ್ಳುತ್ತಾರೆ ಎಂಬುದನ್ನು ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್
Congress; ಸುರ್ಜೇವಾಲ ವಿರುದ್ಧ ಸಚಿವರಿಂದಲೇ ದೂರು?: ಸತೀಶ್ ಜಾರಕಿಹೊಳಿ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.