ಪರ್ಯಾಯ ನಾಯಕರು ಕಾಣಿಸುತ್ತಿಲ್ಲ
Team Udayavani, Aug 9, 2018, 6:00 AM IST
1976ರಿಂದ 1996ರ ತನಕ ಸುಮಾರು ಎರಡು ದಶಕ ಅಧಿಕಾರ ವಂಚಿತರಾಗಿದ್ದರೂ ಪಕ್ಷ ಪ್ರಸ್ತುತತೆಯನ್ನು ಉಳಿಸಿಕೊಳ್ಳುವಲ್ಲಿ ಕರುಣಾನಿಧಿ ಯಶಸ್ವಿಯಾಗಿದ್ದರು. ಇಂಥ ಮುತ್ಸದ್ದಿತನವನ್ನು ಮುಂದಿನ ಪೀಳಿಗೆಯ ನಾಯಕರು ತೋರಿಸಿದರೆ ಮಾತ್ರ ಅವರ ಪಕ್ಷ ಪ್ರಸ್ತುತವಾಗಿರುತ್ತದೆ.
ಮುಖಂಡರು ತೀರಿಕೊಂಡಾಗ ಶೂನ್ಯವೊಂದು ಸೃಷ್ಟಿಯಾಗಿದೆ ಮತ್ತು ಈ ಶೂನ್ಯವನ್ನು ತುಂಬುವುದು ಅಸಾಧ್ಯ ಎನ್ನುವುದು ಗೌರವ ಸಲ್ಲಿಸುವ ಒಂದು ವಾಡಿಕೆಯ ಹೇಳಿಕೆ ಎಂದಷ್ಟೆ ಪರಿಗಣಿಸಲ್ಪಡುತ್ತದೆ. ಆದರೆ ಕರುಣಾನಿಧಿ ವಿಚಾರದಲ್ಲಿ ಮಾತ್ರ ಇದು ಬರೀ ಔಪಚಾರಿಕ ಮಾತಲ್ಲ. ಅವರ ಅಗಲಿಕೆಯಿಂದ ಕನಿಷ್ಠ ತಮಿಳುನಾಡಿನ ರಾಜಕೀಯದಲ್ಲಾದರೂ ದೊಡ್ಡದೊಂದು ಶೂನ್ಯ ನಿರ್ಮಾಣವಾಗಿದ್ದು, ಅದನ್ನು ತುಂಬುವ ನಾಯಕ ಸದ್ಯ ಅಲ್ಲಿ ಕಾಣಿಸುತ್ತಿಲ್ಲ. ಜಯಲಲಿತಾ ಮತ್ತು ಕರುಣಾನಿಧಿ ತಮಿಳುನಾಡಿನ ರಾಜಕೀಯವನ್ನು ಆವರಿಸಿಕೊಂಡ ಪರಿ ಆ ರೀತಿಯಿತ್ತು. ಈಗ ಅವರಿಬ್ಬರೂ ಇಲ್ಲದಿರುವುದರಿಂದ ಅಲ್ಲಿನ ರಾಜಕೀಯ ಹೊಸ ಆಯಾಮದತ್ತ ಹೊರಳುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಎಂ.ಜಿ. ರಾಮಚಂದ್ರನ್ ನಿಧನರಾದಾಗ ಆ ಸ್ಥಾನವನ್ನು ತುಂಬಲು ಕರುಣಾನಿಧಿ ಇದ್ದರು. ಆದರೆ ಜಯಲಲಿತಾ ನಿಧನ ರಾದಾಗ ಅವರ ಪಕ್ಷದಲ್ಲಿ ಆ ಮಟ್ಟದ ಇನ್ನೋರ್ವ ನಾಯಕ ಇರಲಿಲ್ಲ. ಅದೇ ರೀತಿ ಈಗ ಕರುಣಾನಿಧಿ ನಿಧನರಾದಾಗ ಅವರ ಸರಿಸಮಾನ ನಾಯಕ ಇನ್ನೊಬ್ಬರಿಲ್ಲದಂತಾಗಿದೆ. ಮಗ ಸ್ಟಾಲಿನ್ ಉತ್ತರಾಧಿಕಾರಿಯ ಸ್ಥಾನದಲ್ಲಿ ಈಗಾಗಲೇ ಇದ್ದರೂ ಅವರಿಂದ ಕರುಣಾನಿಧಿಯ ರೀತಿಯಲ್ಲಿ ರಾಜಕೀಯ ದಾಳಗಳನ್ನು ಉರುಳಿಸುವ ಸಾಮರ್ಥ್ಯ ಇರುವುದು ಇನ್ನೂ ಸಾಬೀತಾಗಿಲ್ಲ. 2014ರ ಲೋಕಸಭಾ ಚುನಾವಣೆ ಮತ್ತು 2016ರ ವಿಧಾನಸಭೆ ಸ್ಟಾಲಿನ್ ಸಾಮರ್ಥ್ಯ ಪರೀಕ್ಷಿಸುವ ವೇದಿಕೆ ಯಾಗಿತ್ತು. ಇದರಲ್ಲಿ ಅವರು ಹೇಳಿಕೊಳ್ಳುವಂಥ ಯಶಸ್ಸು ಗಳಿಸಿಲ್ಲ. ಜತೆಗೆ ಅಧಿಕಾರಕ್ಕಾಗಿ ಸಹೋದರರೊಳಗೆ ಕಚ್ಚಾಟವೂ ಇರುವುದರಿಂದ ಕರುಣಾನಿಧಿ ಬಳಿಕ ಯಾರು ಎಂಬ ಪ್ರಶ್ನೆ ಈಗಲೇ ಡಿಎಂಕೆಯಲ್ಲಿ ಮೂಡಿದೆ.
ಸಿನೆಮಾ ನಟರಾದ ಕಮಲಹಾಸನ್ ಮತ್ತು ರಜನೀಕಾಂತ್ ಪ್ರವೇಶದ ಬಳಿಕ ತಮಿಳುನಾಡಿನ ರಾಜಕೀಯ ಹೊಸ ಆಯಾಮದತ್ತ ಹೊರಳಿದೆ. ಜತೆಗೆ ಟಿಟಿವಿ ದಿನಕರನ್ ಬಲಾಡ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಎಐಎಡಿಎಂಕೆಯಲ್ಲಿರುವ ಅಸ್ಥಿರತೆಯನ್ನು ಬಳಸಿಕೊಂಡು ತಮಿಳುನಾಡಿನಲ್ಲಿ ನೆಲೆಯೂರಲು ಬಿಜೆಪಿಯೂ ಪ್ರಯತ್ನಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಡಿಎಂಕೆಯನ್ನು ಉಳಿಸಿಕೊಳ್ಳಲು ಯಾವ ತಂತ್ರಗಾರಿಕೆಯನ್ನು ಸ್ಟಾಲಿನ್ ಉಪಯೋಗಿಸುತ್ತಾರೆ ಎನ್ನುವುದರ ಮೇಲೆ ಅವರ ಮತ್ತು ಪಕ್ಷದ ಭವಿಷ್ಯವಿದೆ.
ಕರುಣಾನಿಧಿ ಪ್ರಾದೇಶಿಕ ಪಕ್ಷವೊಂದರ ನಾಯಕರಾಗಿದ್ದರೂ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದರು. ಚೆನ್ನೈಯಲ್ಲಿ ದ್ದುಕೊಂಡೇ ದಿಲ್ಲಿಯ ರಾಜಕೀಯವನ್ನು ನಿರ್ದೇಶಿಸುವ ಕಲೆಯನ್ನು ಅವರು ಸಿದ್ಧಿಸಿಕೊಂಡಿದ್ದರು. ಹಾಗೆ ನೋಡಿದರೆ 1969ರಲ್ಲಿ ಅಣ್ಣಾದೊರೆ ನಿಧನರಾಗಿ ಅಧಿಕಾರದ ಚುಕ್ಕಾಣಿ ಕೈಗೆ ಬಂದಾಗಲೇ ರಾಷ್ಟ್ರ ರಾಜಕಾರಣಕ್ಕೆ ಕರುಣಾನಿಧಿಯವರ ಪ್ರವೇಶವಾಗಿತ್ತು. ಆ ಸಂದರ್ಭದಲ್ಲಿ ವಿ. ವಿ.ಗಿರಿಯನ್ನು ರಾಷ್ಟ್ರಪತಿ ಮಾಡಲು ಇಂದಿರಾ ಗಾಂಧಿಗೆ ಕರುಣಾನಿಧಿ ಬೆಂಬಲ ನೀಡಿದ್ದರು.
1940ರಿಂದ 1960ರ ತನಕ ಹಿಂದಿ ವಿರೋಧಿ ಹೋರಾಟದ ಮುಂಚೂಣಿಯಲ್ಲಿರುವ ಹೊರತಾಗಿಯೂ 1996ರಲ್ಲಿ ಸಂಯುಕ್ತ ರಂಗ, 1999ರಲ್ಲಿ ಎನ್‌ಡಿಎ ಮತ್ತು 2004ರಲ್ಲಿ ಯುಪಿಎ ಮೈತ್ರಿಕೂಟದಲ್ಲಿ ಕರುಣಾನಿಧಿ ಸೇರಿಕೊಂಡಿದ್ದರು. ಹಿಂದಿ ವಿರೋಧಿ ನಿಲುವು ರಾಷ್ಟ್ರ ರಾಜಕಾರಣಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಚಾಕಚಕ್ಯತೆ ಅವರಲ್ಲಿತ್ತು. ಮೈತ್ರಿಕೂಟದಲ್ಲಿ ಸೇರಿಕೊಳ್ಳುವುದು ಮತ್ತು ಅದರಿಂದ ತನ್ನ ರಾಜ್ಯಕ್ಕೆ ಗರಿಷ್ಠ ಪ್ರಯೋಜನವಾಗುವಂತೆ ನೋಡಿಕೊಳ್ಳುವುದರಲ್ಲಿ ಕರುಣಾನಿಧಿ ಯಾವುದೇ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. 1976ರಿಂದ 1996ರ ತನಕ ಸುಮಾರು ಎರಡು ದಶಕ ಅಧಿಕಾರ ವಂಚಿತರಾಗಿದ್ದರೂ ಪಕ್ಷ ಪ್ರಸ್ತುತತೆಯನ್ನು ಉಳಿಸಿಕೊಳ್ಳುವಲ್ಲಿ ಕರುಣಾನಿಧಿ ಯಶಸ್ವಿಯಾಗಿದ್ದರು. ಇಂಥ ಮುತ್ಸದ್ದಿತನವನ್ನು ಮುಂದಿನ ಪೀಳಿಗೆಯ ನಾಯಕರು ತೋರಿಸಿದರೆ ಮಾತ್ರ ಅವರ ಪಕ್ಷ ಪ್ರಸ್ತುತವಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.