ದಕ್ಷಿಣ ಕನ್ನಡ, ಉಡುಪಿ: ಮಳೆಗೆ 21 ಮಂದಿ ಬಲಿ, 2,485 ಮನೆಗಳಿಗೆ ಹಾನಿ
Team Udayavani, Aug 20, 2018, 12:27 PM IST
ಮಂಗಳೂರು: ಅವಿಭಜಿತ ದ.ಕನ್ನಡ ಜಿಲ್ಲೆಯಲ್ಲಿ ಎ.1ರಿಂದ ಆ. 19ರ ವರೆಗೆ ಮಳೆ ಹಾಗೂ ನೆರೆಯಿಂದ ಒಟ್ಟು 21 ಮಂದಿ ಮೃತಪಟ್ಟಿದ್ದು ಒಟ್ಟು 2,485 ಮನೆಗಳಿಗೆ ಹಾನಿಯಾಗಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಸಕೀìಟ್ ಹೌಸ್‌ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಳೆಹಾನಿ ವಿವರ ನೀಡಿದ ಅವರು, ಪರಿಹಾರ ಕಾರ್ಯದ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ದ.ಕ. ಜಿಲ್ಲೆಯಲ್ಲಿ ಮಳೆಯಿಂದ 12 ಮಂದಿ ಮೃತಪಟ್ಟಿದ್ದು, 11 ಮಂದಿಗೆ ತಲಾ 5 ಲಕ್ಷ ಪರಿಹಾರ ವಿತರಿಸಲಾಗಿದೆ. ಒಬ್ಬರಿಗೆ ಪರಿಹಾರ ನೀಡಲು ಬಾಕಿ ಇದೆ. ಒಟ್ಟು 1,326 ಮನೆಗಳಿಗೆ ಹಾನಿಯಾಗಿದೆ. 289 ಮನೆಗಳು ಪೂರ್ಣ ಹಾನಿಗೊಂಡಿವೆ. 1.41 ಕೋ.ರೂ. ಪರಿಹಾರ ವಿತರಿಸಲಾಗಿದೆ.
12 ಜಾನುವಾರು ಮೃತಪಟ್ಟಿದ್ದು 2.96 ಲಕ್ಷ ರೂ. ಪರಿಹಾರ ನೀಡಲಾಗಿದೆ. ಕೃಷಿ ನಾಶದ ಬಗ್ಗೆ ಅಂದಾಜಿಸಲಾಗುತ್ತಿದೆ. ಏಳು ಕಡೆ ಪರಿಹಾರ ಕೇಂದ್ರ ತೆರೆಯಲಾಗಿದೆ ಎಂದರು.
ಉಡುಪಿ: 9 ಸಾವು
ಉಡುಪಿ ಜಿಲ್ಲೆಯಲ್ಲಿ 9 ಮಂದಿ ಮೃತಪಟ್ಟಿದ್ದು 45 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 40 ಮನೆಗಳು ಪೂರ್ಣವಾಗಿ, 1,119 ಮನೆಗಳು ಭಾಗಶಃ ಹಾನಿಯಾಗಿವೆ. 16 ಜಾನುವಾರು ಮೃತಪಟ್ಟಿದ್ದು, ಪರಿಹಾರ ನೀಡಲಾಗಿದೆ ಎಂದರು.
5 ಕೋ.ರೂ.
ತುರ್ತು ಪರಿಹಾರ ಕೈಗೊಳ್ಳಲು ಪ್ರತಿ ಜಿಲ್ಲಾಧಿಕಾರಿಗೆ 5 ಕೋ.ರೂ. ನೀಡಲಾಗಿದೆ. ಉಡುಪಿ ಜಿಲ್ಲಾಧಿ ಕಾರಿ ಹೆಚ್ಚುವರಿ 4 ಕೋ.ರೂ. ಕೇಳಿದ್ದು, ಸೋಮವಾರ ಬಿಡುಗಡೆ ಮಾಡಲಾಗುವುದು. ಮಳೆ ಪೀಡಿತ ದ.ಕ., ಉಡುಪಿ, ಚಿಕ್ಕಮಗಳೂರು ಜಿಲ್ಲೆಗೆ ಮೂಲ ಸೌಲಭ್ಯ ಕಲ್ಪಿಸಲು ತಲಾ 50 ಕೋ.ರೂ. ಹಾಗೂ ಕೊಡಗಿಗೆ 100 ಕೋ.ರೂ. ಬಿಡುಗಡೆ ಮಾಡಲಾಗಿದೆ ಎಂದರು.
ಅಂದಾಜುಪಟ್ಟಿ ಸಿದ್ಧಪಡಿಸಿ
ಪ್ರಾಕೃತಿಕ ವಿಕೋಪಗಳಿಂದ ರಸ್ತೆ, ಸೇತುವೆಗಳಿಗೆ ಆಗಿ ರುವ ಹಾನಿಯ ಸಮೀಕ್ಷೆ ನಡೆಸಿ ಅಂದಾಜು ಪಟ್ಟಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸಿಆರ್‌ಎಫ್ ನಿಧಿಯಲ್ಲಿ ಶಾಲೆಗಳು, ಸರಕಾರಿ ಕಟ್ಟಡಗಳಿಗೆ ಹಾನಿಯಾಗಿದ್ದರೆ ಅಂದಾಜು ಪಟ್ಟಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಸಂಪುಟ ಸಭೆಯಲ್ಲಿ ಮಂಡಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವುದು ಎಂದರು.
826 ಮಂದಿ ತೆರವು
ಭಾರೀ ಮಳೆ ಹಾಗೂ ಭೂಕುಸಿತ ದಿಂದ ನಲುಗಿರುವ ಜೋಡು ಪಾಲ, ಮದೆನಾಡು, ಮೊಣ್ಣಂಗೇರಿ ಪ್ರದೇಶಗಳಿಂದ 826 ಮಂದಿಯನ್ನು ತೆರವುಗೊಳಿಸಲಾಗಿದ್ದು, ಸಂಪಾಜೆ, ಕಲ್ಲುಗುಂಡಿ ಶಾಲೆ, ಅರಂತೋಡು ತೆಕ್ಕಿಲ್ ಹಾಲ್‌ನಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಸಚಿವ ಆರ್.ವಿ. ದೇಶಪಾಂಡೆ ವಿವರಿಸಿದರು.
ಅಲ್ಲಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆ ಇದ್ದು, ಕಾರ್ಯಾಚರಣೆ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಸ್ಥಳೀಯ ಶಾಲೆಗಳಲ್ಲಿ ಶಿಕ್ಷಣ ಮುಂದುವರಿಸಲು ತಾತ್ಕಾಲಿಕ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಎನ್‌ಡಿಆರ್‌ಎಫ್, ಕಂದಾಯ ಇಲಾಖೆ, ಪೊಲೀಸರು, ಗೃಹರಕ್ಷಕ ದಳ, ಸ್ವಯಂಸೇವಾ ಸಂಸ್ಥೆಗಳ ಸದಸ್ಯರು ರಕ್ಷಣೆ, ಪರಿಹಾರದಲ್ಲಿ ತೊಡಗಿದ್ದಾರೆ. ಪರಿಹಾರ ನಿಧಿ, ಸಾಮಗ್ರಿಗಳನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ರಶೀದಿ ಪಡೆಯಬೇಕು. ಆನ್‌ಲೈನ್‌ನಲ್ಲೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೆರವು ನೀಡುವ ಕುರಿತು ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಪರ್ಯಾಯ ಮಾರ್ಗ ಸಮೀಕ್ಷೆ
ಮಡಿಕೇರಿ ರಸ್ತೆ 13 ಕಿ.ಮೀ. ರಸ್ತೆ ಕುಸಿತವಾಗಿದ್ದು, ಕೆಸರು, ಮಣ್ಣು ತುಂಬಿದೆ. ಸಂಚಾರಕ್ಕೆ ಅನುವು ಮಾಡಿಕೊಡಲು 4 ತಿಂಗಳಾದರೂ ಬೇಕು. ಭಾಗಮಂಡಲ-ತರೀಕೆರೆ ರಸ್ತೆಯಲ್ಲಿ ಪರ್ಯಾಯ ಸಂಚಾರ ವ್ಯವಸ್ಥೆ ಬಗ್ಗೆ ಪರಿಶೀಲಿಸಲಾಗುತ್ತಿದೆ. ಶಿರಾಡಿ ಘಾಟಿ ಸಂಚಾರ ಶುರುವಾಗಲೂ ಒಂದು ತಿಂಗಳು ಬೇಕಾದೀತು ಎಂದು ಸಚಿವ ಯು.ಟಿ. ಖಾದರ್ ವಿವರಿಸಿದರು.
ಮಳೆ ಸಂತ್ರಸ್ತರಿಗೆ ನೆರವು ನೀಡಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಅವರು ತನ್ನ ಮಾಸಿಕ ಪಿಂಚಣಿ 49,000 ರೂ. ಮೊತ್ತದ ಚೆಕ್‌ನ್ನು ದೇಶಪಾಂಡೆ ಅವರಿಗೆ ಅರ್ಪಿಸಿದರು.
ಮಾಜಿ ಸಚಿವ ಬಿ. ರಮಾನಾಥ ರೈ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.
ತಜ್ಞರಿಂದ ಅಧ್ಯಯನ
ಮಡಿಕೇರಿ, ದ.ಕ. ಜಿಲ್ಲೆಯ ಪ್ರಾಕೃತಿಕ ವಿಕೋಪ, ಭೂಕುಸಿತಕ್ಕೆ ಕಾರಣ ತಿಳಿಯಲು ತಜ್ಞರ ಮೂಲಕ ಅಧ್ಯಯನ ನಡೆಸುವಂತೆ ಮುಖ್ಯ ಮಂತ್ರಿಯವರನ್ನು ಕೋರುತ್ತೇನೆ ಎಂದ ಸಚಿವ ದೇಶಪಾಂಡೆ. ಎತಿನಹೊಳೆ ಯೋಜನೆ ಕಾರಣವಿದ್ದೀತೇ ಎಂಬ ಪ್ರಶ್ನೆಗೆ, ನಾನು ತಜ್ಞನಲ್ಲ. ಸಮಗ್ರ ಅಧ್ಯಯನ ನಡೆಸಲಾಗುವುದು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.