ದಿನಕರ್ ಜೊತೆ ಸೆಲ್ಫಿ ಮಾತು
Team Udayavani, Aug 20, 2018, 12:42 PM IST
“ಸಾರಥಿ’ ನಂತರ ನಿರ್ದೇಶನದಿಂದ ದೂರವೇ ಇದ್ದ ದಿನಕರ್ ತೂಗುದೀಪ, ಈಗ ತಮ್ಮ ಹೊಸ ಚಿತ್ರ “ಲೈಫ್ ಜೊತೆ ಒಂದ್ ಸೆಲ್ಫಿ’ ಬಿಡುಗಡೆ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ. ತಮ್ಮ ತೂಗುದೀಪ ಸಂಸ್ಥೆ ಮೂಲಕ ಈ ವಾರ ರಾಜ್ಯಾದ್ಯಂತ ಸುಮಾರು 160 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಇಷ್ಟಕ್ಕೂ ದಿನಕರ್ ಈ ಏಳು ವರ್ಷಗಳ ಕಾಲ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಬರಬಹುದು.
“ಸಾರಥಿ’ ಬಳಿಕ “ಬುಲ್ ಬುಲ್’ ಮತ್ತು “ಮದುವೆಯ ಮಮತೆಯ ಕರೆಯೋಲೆ’ ಚಿತ್ರ ನಿರ್ಮಿಸಿದರು. ಆ ಬಳಿಕ “ಚಕ್ರವರ್ತಿ’ ಚಿತ್ರದಲ್ಲಿ ನಟಿಸಿದರು. ಅದರೊಂದಿಗೆ ವಿತರಣೆ ಮಾಡುವ ಮೂಲಕ ಬಿಜಿಯಾಗಿದ್ದರು. ಇದೇ ಸಮಯದಲ್ಲಿ ಅವರ ಪತ್ನಿ ಮಾನಸ ಕಥೆ ಇಷ್ಟವಾಗಿ, ಅದನ್ನು ತೆರೆಯ ಮೇಲೆ ತಂದಿದ್ದಾರೆ. ಈ ಕುರಿತು ಮಾತನಾಡುವ ಅವರು, “ನನ್ನ ಮೊದಲ ಚಿತ್ರ “ಜೊತೆ ಜೊತೆಯಲಿ’ ಲವ್‌ಸ್ಟೋರಿ ಆಗಿತ್ತು.
“ಸಾರಥಿ’ ಪಕ್ಕಾ ಮಾಸ್ ಚಿತ್ರವಾಗಿತ್ತು. “ನವಗ್ರಹ’ ಥ್ರಿಲ್ಲರ್ ಆಗಿತ್ತು. ಮೂರು ಬೇರೆ ರೀತಿಯ ಕಥೆ ಇದ್ದ ಚಿತ್ರಗಳು. ಹಾಗಾಗಿ ಈ ಮೂರು ಕಥೆ ಹೊರತುಪಡಿಸಿ ಬೇರೆ ಕಥೆಗೆ ಹುಡುಕುತ್ತಿದ್ದೆ. ಮಾನಸ ಕಥೆ ಇಷ್ಟವಾಯ್ತು. ಅದಕ್ಕೇ ಈ ಚಿತ್ರ ಮಾಡಿದೆ’ ಎನ್ನುತ್ತಾರೆ ದಿನಕರ್. “ಈ ಚಿತ್ರದಲ್ಲಿ ಮೂರು ಪಾತ್ರಗಳು ಹೈಲೆಟ್. ಪ್ರೇಮ್ ನಕುಲ್ ಎಂಬ ಪಾತ್ರ ಮಾಡಿದ್ದಾರೆ. ಒಂದು ಮಲ್ಟಿನ್ಯಾಷನಲ್ ಕಂಪೆನಿ ಉದ್ಯೋಗಿ ಅವರು.
ಅವರಿಗೊಂದು ಆಸೆ, ತಾನು ನಿರ್ದೇಶಕ ಆಗಬೇಕು ಅನ್ನೋದು. ಇನ್ನು ಪ್ರಜ್ವಲ್, ವಿರಾಟ್ ಎನ್ನುವ ಪಾತ್ರ ಮಾಡಿದ್ದಾರೆ. ಅವರು ಮಲ್ಟಿಮಿಲೇನಿಯರ್. ಲೈಫಲ್ಲಿ ಎಲ್ಲವೂ ಇದೆ. ಆದರೆ ಏನೋ ಒಂದು ಕೊರಗು. ಹರಿಪ್ರಿಯಾ ಅವರದೂ ಒಂದು ಸಮಸ್ಯೆ. ಈ ಮೂವರು ಲೈಫಲ್ಲಿ ಒಂದಲ್ಲ ಒಂದು ಕೊರಗಿನಲ್ಲಿದ್ದವರು. ಒಂದು ಬ್ರೇಕ್ ತೆಗೆದುಕೊಂಡು ದೂರದ ಗೋವಾಗೆ ಹೋಗುತ್ತಾರೆ.
ಮೂವರೂ ಅಲ್ಲಿ ಫ್ರೆಂಡ್ ಆಗ್ತಾರೆ. ಒಬ್ಬೊಬ್ಬರ ಕಥೆ ಅಲ್ಲಿ ಬಿಚ್ಚಿಕೊಳ್ಳುತ್ತವೆ. ಬೇರೆ ಕಡೆಯಿಂದ ಬಂದ ಮೂವರು ಗೋವಾದಲ್ಲಿ ಭೇಟಿಯಾಗುತ್ತಾರೆ. ಒಂದೇ ಕಾಮನ್ ವಿಷಯ ಅಂದರೆ, ಮೂವರು ಕನ್ನಡಿಗರು ಅನ್ನೋದು. ಅಲ್ಲಿಂದ ಗೆಳೆತನ ಹೆಚ್ಚಾಗುತ್ತೆ. ಮೊದಲರ್ಧ ಸಮಸ್ಯೆ ಹಂಚಿಕೊಂಡರೆ, ದ್ವಿತಿಯಾರ್ಧ ಅದಕ್ಕೆ ಪರಿಹಾರ ಸಿಗುತ್ತೆ. ಅದು ಏನು ಅನ್ನೋದೇ ಕಥೆ’ ಎಂಬುದು ದಿನಕರ್ ಮಾತು.
“ಪ್ರಜ್ವಲ್ ಅವರ “ಸಿಕ್ಸರ್’ ನೋಡಿದಾಗಿನಿಂದಲೂ ಅವನ ಜೊತೆ ಚಿತ್ರ ಮಾಡಬೇಕು ಎಂಬ ಯೋಚನೆ ಇತ್ತು. ಅದು ಈಗ ಈಡೇರಿದೆ. ಇನ್ನು, ಪ್ರೇಮ್ ಜೊತೆ “ಜೊತೆ ಜೊತೆಯಲಿ’ ಮಾಡಿದ ನಂತರ ಇಬ್ಬರೂ ಒಂದು ಸಿನಿಮಾ ಮಾಡಬೇಕು ಅಂತ ಮಾತಾಡಿದ್ದೆವು. ಆಗಿರಲಿಲ್ಲ. ಹರಿಪ್ರಿಯಾ ಒಳ್ಳೇ ಕಲಾವಿದೆ ಅನ್ನೋದು ಅವರ ಹಿಂದಿನ “ಉಗ್ರಂ’, “ನೀರ್‌ದೋಸೆ’ ನೋಡಿ ಗೊತ್ತಾಯ್ತು. ಆ ಹುಡುಗಿಯಲ್ಲಿ ಮೆಚೂರಿಟಿ ಇದೆ.
ಮೂವರು ಪಾತ್ರಕ್ಕೆ ಸರಿಯಾದ ಆಯ್ಕೆ ಎನಿಸಿ ಸಿನಿಮಾ ಮಾಡಿದೆ. ಮೊದಲು ನಾನು ಹೊಸಬರ ಜೊತೆ ಮಾಡಬೇಕು ಅಂದುಕೊಂಡಿದ್ದೆ. ಆದರೆ, ನಿರ್ಮಾಪಕ ಸಮೃದ್ಧಿ ಮಂಜುನಾಥ್ ಅವರು, ಮೊದಲ ಚಿತ್ರ, ಸ್ಟಾರ್ ಇದ್ದರೆ ಚೆನ್ನಾಗಿರುತ್ತೆ ಅಂದರು. ಒಂದೇ ದಿನದಲ್ಲಿ ಈ ಮೂವರು ಫಿಕ್ಸ್ ಆಗಿಬಿಟ್ಟರು. ಒಟ್ಟು 55 ದಿನಗಳ ಕಾಲ ಗೋವಾ, ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣವಾಗಿದೆ’ ಎಂದು ಮಾಹಿತಿ ಕೊಡುತ್ತಾರೆ ದಿನಕರ್.
“ಮದುವೆ ಆಗಿ ಇಷ್ಟು ವರ್ಷ ಆಯ್ತು, ಏಳೆಂಟು ಸಲ ಜಗಳ ಆಡಿರಬಹುದಷ್ಟೇ. ಆದರೆ, ಈ ಸಿನಿಮಾ ಮಾಡುವಾಗ, ಸುಮಾರು 150 ಸಲ ಜಗಳ ಆಡಿದ್ದೇನೆ. ಕಾರಣ, ಕಥೆಗಾಗಿ. ಕಥೆ ಹೀಗೆ ಇರಬೇಕು, ಹೀಗೇ ಬರಬೇಕು ಎಂಬ ಆದೇಶ ಅವರದು. ನಾನು ನಿರ್ದೇಶಕ, ನನಗೂ ಗೊತ್ತಿದೆ, ಮಾಡಿ ತೋರಿಸ್ತೀನಿ ಅಂತ ಜಗಳ ಆಡಿದ್ದುಂಟು. ಪ್ರತಿ ಪಾತ್ರವನ್ನೂ ಡೀಟೆಲ್ ಆಗಿ ಡಿಸೈನ್ ಮಾಡಿದ್ದರು.
ಅದು ಇಷ್ಟ ಆಯ್ತು. ಎಡಿಟ್ ಮಾಡಿ ಸಿನಿಮಾ ತೋರಿಸಿದಾಗ ಮಾನಸ ಖುಷಿಯಾದರು. ಒಳ್ಳೆಯ ತಂಡ ಜೊತೆ ಚಿತ್ರ ಮಾಡಿದ್ದಕ್ಕೆ ನನಗೂ ಹೆಮ್ಮೆ ಇದೆ ಎಂಬುದು ದಿನಕರ್ ಮಾತು. ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದರೆ, ನಿರಂಜನ್‌ಬಾಬು ಛಾಯಾಗ್ರಹಣ ಮಾಡಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.